ಭಾನುವಾರ, ಮಾರ್ಚ್ 7, 2021
22 °C

ಪ್ರಶ್ನೋತ್ತರ

ಯು.ಪಿ.ಪುರಾಣಿಕ್ . Updated:

ಅಕ್ಷರ ಗಾತ್ರ : | |

ಪ್ರಶ್ನೋತ್ತರ

ಸುಪ್ರೀತ್‌, ಶಿವಮೊಗ್ಗ

* 12–6–2009 ರಂದು ಮನೆ ಕಟ್ಟಲು ಕೆನರಾ ಬ್ಯಾಂಕಿನಿಂದ ₹ 7 ಲಕ್ಷ ಗೃಹ ಸಾಲ ಪಡೆದಿದ್ದೆ. ಸ್ಥಿರ ಬಡ್ಡಿ (Fixed Rate) ದರ ಹಾಕುವಂತೆ ತಿಳಿಸಿದ್ದೆ. ಆಗ ಸಾಲದ ಬಡ್ಡಿ ದರ ಶೇ 9.25 ಇದ್ದು ಈಗ ಶೇ 9.65 ರಂತೆ ಬಡ್ಡಿ ಹಾಕುತ್ತಿದ್ದಾರೆ. ನಾನು ಕೇಳಿದಾಗ ಸ್ಥಿರ ಬಡ್ಡಿ ದರ ಬರೇ 4 ವರ್ಷಗಳಿಗೆ ಸೀಮಿತ ಎನ್ನುತ್ತಾರೆ. ಈಗ ನಾನೇನು ಮಾಡಬೇಕು ತಿಳಿಸಿರಿ.

ಉತ್ತರ: ಆಸ್ತಿ ಅಡಮಾನ ಮಾಡಿ ಗೃಹ ಸಾಲ ಪಡೆಯುವಾಗ ಸ್ಥಿರ (Fixed) ಹಾಗೂ ಬದಲಾಗುವ (F*oating) ಬಡ್ಡಿ ದರಗಳ ಪೈಕಿ ಒಂದನ್ನು ಪ್ರಾರಂಭದಲ್ಲಿಯೇ ಸಾಲಗಾರರು ಆರಿಸಿಕೊಳ್ಳಬೇಕು. ಹೆಚ್ಚಿನ ಬ್ಯಾಂಕುಗಳು ಸ್ಥಿರ ಬಡ್ಡಿ ದರಕ್ಕೆ ಒಪ್ಪುವುದಿಲ್ಲ. ನಿಮ್ಮ ಪ್ರಶ್ನೆಯಲ್ಲಿ 4 ವರ್ಷಗಳ ಕಾಲ ಸ್ಥಿರ ಬಡ್ಡಿ ದರವಿದ್ದು ಈಗ ಬದಲಾಗಿದೆ ಎಂಬುದಾಗಿ ತಿಳಿಸಿದ್ದೀರಿ. ಕೆಲವು ವರ್ಷಗಳಿಗೆ ಕಡಿಮೆ ಬಡ್ಡಿ ದರ ವಿಧಿಸುವುದುಂಟು. ಈ ಎಲ್ಲಾ ವಿಚಾರ ನೀವು ಬ್ಯಾಂಕಿಗೆ ಬರೆದು ಕೊಡುವ ಅಗ್ರಿಮೆಂಟ್‌ನಲ್ಲಿ ನಮೂದಿಸಲಾಗುತ್ತದೆ. ಪ್ರಾಯಶಃ 4 ವರ್ಷಗಳಲ್ಲಿ ಸ್ಥಿರ ಬಡ್ಡಿ ವಿಚಾರ ನೀವು ಬರೆದುಕೊಟ್ಟ ಅಗ್ರಿಮೆಂಟ್‌ನಲ್ಲಿ ಇರಬಹುದು. ಇದನ್ನು ಬ್ಯಾಂಕಿನಲ್ಲಿ ವಿಚಾರಿಸಿರಿ. ರಿಸರ್ವ್‌ ಬ್ಯಾಂಕ್‌ ರೆಪೊ ರೇಟ್‌ ಕಡಿಮೆ ಮಾಡುತ್ತಿರುವುದರಿಂದ ಪ್ಲೋಟಿಂಗ್‌ ರೇಟ್‌ನಿಂದ ಮುಂದೆ ನಿಮಗೆ ಅನುಕೂಲವಾಗಬಹುದು. ಮುಂದೆ ಬರುವ ದಿವಸಗಳಲ್ಲಿ ಸಾಲದ ಬಡ್ಡಿ ದರ ಇನ್ನೂ ಬಹಳ ಕಡಿಮೆ ಆಗುವ ಸಂದರ್ಭವಿದೆ.

ಅಪರ್ಣ, ಬೆಂಗಳೂರು

* ಖಾಸಗಿ ಕೋ– ಆಪರೇಟಿವ್‌ ಸೊಸೈಟಿಯಲ್ಲಿ ಕಳೆದ 7  ತಿಂಗಳಿಂದ ಕೆಲಸ ಮಾಡುತ್ತಿದ್ದೆನೆ. ನನ್ನ ವಯಸ್ಸು 22. ತಿಂಗಳ ಸಂಬಳ ₹ 10,000. ನನ್ನ ಮದುವೆಗೆ ಹೊಂದಿಸಲು ಹಣ ಬೇಕಾಗಿರುವುದರಿಂದ, ಉತ್ತಮ ಉಳಿತಾಯದ ಮಾರ್ಗ ತಿಳಿಸಿರಿ.   ಹಣಕಾಸಿನ ವಿಚಾರದಲ್ಲಿ  ಮಾರ್ಗದರ್ಶನ ಮಾಡಿ.


ಉತ್ತರ: ನೀವು ತಂದೆ ತಾಯಿಯೊಂದಿಗೆ ವಾಸವಾಗಿರಬೇಕು. ನಿಮ್ಮ ಸ್ವಂತ ಖರ್ಚಿಗೆ  ₹ 3000 ಇರಿಸಿ, ₹ 7000, 3 ವರ್ಷಗಳ ಅವಧಿಗೆ , ನೀವು ಕೆಲಸ ಮಾಡುವ ಕೋ ಆಪರೇಟಿವ್‌ ಸೊಸೈಟಿಯಲ್ಲಿಯೇ ಆರ್‌.ಡಿ. ಮಾಡಿರಿ. ಶೇ 10 ಬಡ್ಡಿ ದರದಲ್ಲಿ ನೀವು ಹೀಗೆ ಕೂಡಿಡುವ ಹಣ ಮೂರು ವರ್ಷದಲ್ಲಿ ₹ 2.95 ಲಕ್ಷ ಆಗಿ ನಿಮ್ಮ ಕೈ ಸೇರುತ್ತದೆ.ಅಷ್ಟರಲ್ಲಿ ನಿಮಗೆ ಮದುವೆ ಆಗಬಹುದು. ನಿಮ್ಮ ಕೋಆಪರೇಟಿವ್‌ ಸೊಸೈಟಿಯ ಭದ್ರತೆಯ ವಿಚಾರದಲ್ಲಿ ನನಗೆ ತಿಳಿದಿಲ್ಲ. ನೀವು ಅಲ್ಲೇ ಕೆಲಸ ಮಾಡುವುದರಿಂದ ಏನೂ ತೊಂದರೆ ಆಗಲಾರದು. ಒಂದು ವೇಳೆ ಇದು ಬೇಡವಾದರೆ ನಿಮ್ಮ ಮನೆಗೆ ಸಮೀಪದ ಉತ್ತಮ ಕೋಆಪರೇಟಿವ್‌ ಬ್ಯಾಂಕಿನಲ್ಲಿ ಆರ್‌.ಡಿ. ಮಾಡಿ.

ಬಿ. ಎಸ್‌. ಪಾಟೀಲ, ಧಾರವಾಡ

* ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಅಧ್ಯಾಪಕ, ನನ್ನ ತಿಂಗಳ ಸಂಬಳ ₹ 41,000. ನನಗೆ 49 ಎಕರೆ ಒಣ ಬೇಸಾಯದ ಜಮೀನು ನನ್ನ ಹುಟ್ಟೂರು ಬಾಗೇವಾಡಿ ತಾಲ್ಲೂಕಿನಲ್ಲಿದೆ. ಅದರ ಪೈಕಿ 30  ಎಕರೆ ವೈಯಕ್ತಿಕ ಕಾರಣಗಳಿಂದ ಮಾರಾಟ ಮಾಡಬೇಕೆಂದಿದ್ದೇನೆ. ಇದರಿಂದ ತೆರಿಗೆ ಬರುತ್ತದೆಯೇ ತಿಳಿಸಿರಿ.


ಉತ್ತರ: ಸ್ಥಿರ ಆಸ್ತಿ ಯಾವಾಗಲೂ ಸ್ಥಿರವಾಗಿರುತ್ತದೆ. ನಿಮಗೆ 49 ಎಕರೆ ಜಮೀನು ಪಿತ್ರಾರ್ಜಿತವಾಗಿ ಬಂದಿರಬೇಕು. ಇದರಿಂದ ನಿಮಗೆ ಹೆಚ್ಚಿನ ಉತ್ಪತ್ತಿ ಅಥವಾ ಆದಾಯ ಸದ್ಯಕ್ಕೆ ಇಲ್ಲದಿರಬಹುದು. ಆದರೆ ಇಂತಹ ದೊಡ್ಡ ಆಸ್ತಿ ಮುಂದೆ ಕೊಂಡುಕೊಳ್ಳುವುದು ಅಸಾಧ್ಯವಾದ ಕೆಲಸ. ಇದೇ ವೇಳೆ 30 ಎಕರೆ ಮಾರಾಟ ಮಾಡಿ ಧಾರವಾಡದಲ್ಲಿ ‘40’X60’ ನಿವೇಶನಕೊಳ್ಳಬಹುದು. ಮಾರಾಟ ಮಾಡುವಾಗ ನಿಮ್ಮ ಹೆಂಡತಿ ಮಕ್ಕಳನ್ನು ವಿಚಾರಿಸಿಿ.  ಕ್ಯಾಪಿಟಲ್‌ ಗೇನ್‌ ಸೆಕ್ಷನ್‌ 48ರ ಆಧಾರದ ಮೇಲೆ, ಗ್ರಾಮಾಂತರ ಪ್ರದೇಶದ ಕೃಷಿ ಜಮೀನು (Rura* Agricu*ture *and) ಮಾರಾಟ ಮಾಡಿದಾಗ, ತೆರಿಗೆ ಬರುವುದಿಲ್ಲ.

ಸುರೇಖಾ. ಎನ್‌., ಕೋಣಂದೂರು

* ಪ್ರೌಢ ಶಾಲಾ ಶಿಕ್ಷಕಿ. ವಾರ್ಷಿಕ ಸಂಬಳ

₹ 50,565. ಪತಿ ಎಲ್‌.ಐ.ಸಿ. ಏಜೆಂಟರು. ಪತಿ ಹೆಸರಿನಲ್ಲಿ ನಿವೇಶನ ಇರುವುದರಿಂದ  ಗೃಹ ಸಾಲ ಪಡೆದು ಅದೇ ನಿವೇಶನದಲ್ಲಿ ಮನೆ ಕಟ್ಟಿಸಿದ್ದೇನೆ. ತೆರಿಗೆ ಉಳಿಸಲು ಒಂದು ವರ್ಷದ ಹಿಂದೆ ಜಂಟಿ ಖಾತೆ ತೆರೆದು ಶೇ 50 ಬಡ್ಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯುತ್ತಿದ್ದೇವೆ. ನಿವೇಶನ ನನ್ನ ಹೆಸರಿಗೆ ಬದಲಾಯಿಸಲು ಮಾರ್ಗಗಳಿವೆಯೇ, ಇದರಿಂದ ತೆರಿಗೆ ಕಡಿಮೆ ಮಾಡಿಕೊಳ್ಳಬಹುದೇ ತಿಳಿಸಿ.


ಉತ್ತರ: ಮುಖ್ಯವಾಗಿ ನಿವೇಶನ ಇರುವವರ ಹೆಸರಿನಲ್ಲಿ ಮಾತ್ರ ಗೃಹ ಸಾಲ ದೊರೆಯುತ್ತದೆ, ಹಾಗೂ ಅಂತಹ ವ್ಯಕ್ತಿಗಳು, ಮಾತ್ರ ಗೃಹ ಸಾಲದ ಮೇಲಿನ ವಿನಾಯತಿ ಪಡೆಯಬಹುದು. ನೀವು ಸೆಕ್ಷನ್‌ 80 ಸಿ ಆಧಾರದ ಮೇಲೆ ಗೃಹ ಸಾಲದ ಕಂತು ಹಾಗೂ ಸೆಕ್ಷನ್‌ 24 (ಬಿ) ಆಧಾರದ ಮೇಲೆ ಗೃಹ ಸಾಲದ ಬಡ್ಡಿ ರಿಯಾಯತಿ ಪಡೆಯಲು, ನಿಮ್ಮ ಪತಿಯಿಂದ ನಿವೇಶನ ಹಾಗೂ ಅಲ್ಲಿ ಕಟ್ಟಿದ ಮನೆ, ದಾನ ಪತ್ರ ಮಾಡಿ (By Giftdeed) ಪಡೆಯಿರಿ. ನಿಮ್ಮ ಹೆಸರಿಗೆ ಕ್ರಯಪತ್ರ ಮಾಡುವುದಕ್ಕಿಂತ ದಾನಪತ್ರ ಸುಲಭದ ವಿಚಾರ. ದಾನಪತ್ರ ನೋಂದಾಯಿಸ ಬೇಕಾಗುತ್ತದೆ. ಹೀಗೆ ಮಾಡಿದಲ್ಲಿ ಸಂಪೂರ್ಣ ರಿಯಾಯಿತಿ ನೀವೇ ಪಡೆಯಬಹುದು. ಗಂಡ ಹೆಂಡತಿಗೆ ಇನಾಮು (Gift) ಅಥವಾ ದಾನ ಕೊಟ್ಟರೆ, ಕೊಟ್ಟವರಿಗೂ ದಾನ ಪಡೆದವರಿಗೂ ಗಿಫ್ಟ್ ಟ್ಯಾಕ್ಸ್ ಬರುವುದಿಲ್ಲ.

ಮಹೇಶ್‌ ಕುಮಾರ್‌, ಮಂಡಿಪೇಟೆ, ತುಮಕೂರು

* ನಿವೃತ್ತ ಶಿಕ್ಷಕ. ನನ್ನೊಡನೆ 60X40 ನಿವೇಶನವಿದೆ. ಇದನ್ನು ₹ 1 ಕೋಟಿಗೆ ಮಾರಾಟ ಮಾಡಬೇಕೆಂದಿದ್ದೇನೆ. ನನಗೆ ವಾಸಕ್ಕೆ ಮನೆ ಇದೆ. ₹ 1 ಲಕ್ಷ ಕೆನರಾ ಬ್ಯಾಂಕಿನಲ್ಲಿ ಠೇವಣಿ ಇದೆ. ಪಿಂಚಣಿ ₹ 9000. ನಿವೇಶನ ಮಾರಾಟ ಮಾಡಿ ನಗದು ರಹಿತ ಹಣ ಪಡೆಯುವ ಮಾರ್ಗ ತಿಳಿಸಿರಿ. ಈ ಮಾರಾಟದಿಂದ ಬರುವ ಹಣದಿಂದ ಇಬ್ಬರು ಮಕ್ಕಳಿಗೆ ಮನೆ ಮಾಡುವ ಜವಾಬ್ದಾರಿ ಇದೆ.  ತೆರಿಗೆ ಉಳಿಸಲು ಕೂಡಾ ಸಲಹೆ ನೀಡಿರಿ.

ಉತ್ತರ:
ನಿವೇಶನ ಮಾರಾಟ ಮಾಡಿ ಬರುವ ಹಣವನ್ನು  ‘ಡಿ. ಡಿ’ ಅಥವಾ ‘ಪೇ ಆರ್ಡರ್ ಪಡೆದಲ್ಲಿ ಇದು ನಗದು ರಹಿತ ಹಣ ಪಡೆದಂತಾಗುತ್ತದೆ. ಚೆಕ್‌ ಮುಖಾಂತರವೂ ಪಡೆಯಬಹುದು. ಆದರೆ ಈ ಮಾರ್ಗದಲ್ಲಿ ಕಂಟಕ (Risk) ಇರುವುದರಿಂದ ಚೆಕ್‌ ಮುಖಾಂತರ ಎಂದಿಗೂ ಪಡೆಯಬೇಡಿ. ಕ್ಯಾಪಿಟಲ್‌ ಗೇನ್‌ ಸೆಕ್ಷನ್‌ 54 ಆಧಾರದ ಮೇಲೆ ಚರ ಆಸ್ತಿ ಮಾರಾಟ ಮಾಡಿದ ಮೂರು ವರ್ಷಗಳಲ್ಲಿ  ನಿವೇಶನಕೊಂಡು ಮನೆ ಕಟ್ಟಿಸುವಲ್ಲಿ  ತೆರಿಗೆ ಬರುವುದಿಲ್ಲ. ಅಲ್ಲಿ ತನಕ ಹಣವನ್ನು ಕ್ಯಾಪಿಟಲ್‌ ಗೇನ್‌  1988 ಯೋಜನೆಯಲ್ಲಿ ಬ್ಯಾಂಕಿನಲ್ಲಿ ಇರಿಸಬೇಕು. ನೀವು ತಿಳಿಸಿದಂತೆ ನಿಮ್ಮ ಇಬ್ಬರೂ ಮಕ್ಕಳಿಗೂ ಮನೆ ಮಾಡಿ ಕೊಡಿ. ಇದು ಸಾಧ್ಯವಾಗದಿರುವಲ್ಲಿ ಎನ್‌.ಎಚ್‌.ಎ.ಐ. ಅಥವಾ ಆರ್‌.ಇ.ಸಿ. ಬಾಂಡುಗಳಲ್ಲಿ ತೊಡಗಿಸಿ ತೆರಿಗೆ ವಿನಾಯಿತಿ ಸೆಕ್ಷನ್‌ 54 ಇಸಿ ಆಧಾರದ ಮೇಲೆ ಪಡೆಯಬಹುದು. ಇಲ್ಲಿ ವಿನಾಯಿತಿ ಪಡೆಯಲು ₹ 50 ಲಕ್ಷ ಮಾತ್ರ. ಇದೇ ವೇಳೆ ನೀವು ನಿವೇಶನ ಸೆಪ್ಟೆಂಬರ್‌ನಲ್ಲಿ ಮಾರಾಟ ಮಾಡಿ ₹ 50 ಲಕ್ಷ ಈ ಬ್ಯಾಂಕುಗಳಲ್ಲಿ ಹೂಡಿ, ನಂತರ ಮಾರಾಟ ಮಾಡಿದ ಆರು ತಿಂಗಳೊಳಗೆ ಅಂದರೆ ಆರ್ಥಿಕ ವರ್ಷದಲ್ಲಿ ಇನ್ನುಳಿದ ₹ 50 ಲಕ್ಷ ಇದೇ ಬ್ಯಾಂಕಿನಲ್ಲಿ ಹೂಡಿದರೆ, ಗರಿಷ್ಠ ₹ 1 ಕೋಟಿ ತನಕ ತೆರಿಗೆ ವಿನಾಯಿತಿ ಪಡೆಯಬಹುದು.

ಕೆ. ಆರ್‌. ಪನದರಿ, ಹುಬ್ಬಳ್ಳಿ

* ₹ 10 ಲಕ್ಷ ಕಿಸಾನ್‌ ವಿಕಾಸ್‌ ಪತ್ರದಲ್ಲಿ ಹೂಡಬೇಕೆಂದಿದ್ದೇನೆ. ಈ ಠೇವಣಿ ತೆರಿಗೆ ಮುಕ್ತವಾಗಿದೆ ಎಂದು ಕೇಳಿದ್ದೇನೆ. ನಾನು ನಿವೇಶನ ಮಾರಾಟ ಮಾಡಿ ಬರುವ  ₹ 20 ಲಕ್ಷ ಎನ್‌ಎಚ್‌ಎಐ ಅಥವಾ ಆರ್‌ಇಸಿ ಯಲ್ಲಿ ಠೇವಣಿ ಇರಿಸಬೇಕೆಂದಿದ್ದೇನೆ. ಎಲ್ಲಿ ಈ ಹೂಡಿಕೆ ಅರ್ಜಿ ದೊರೆಯುತ್ತದೆ. ಕೆ.ವಿ.ಪಿ. 100 ತಿಂಗಳಲ್ಲಿ ದ್ವಿಗುಣವಾಗುತ್ತದೆ. ಇದರಲ್ಲಿ ಮಕ್ಕಳ ಮದುವೆ, ವಿದ್ಯಾಭ್ಯಾಸಕ್ಕೆ  ಉಪಯುಕ್ತವಾಗುತ್ತದೆ. ನಿಮ್ಮ ಅಭಿಪ್ರಾಯ ತಿಳಿಸಿ.

ಉತ್ತರ:
ಕೆ.ವಿ.ಪಿ. ಬಡ್ಡಿ ದರ ಹಿಂದೆ ಶೇ 8.7 ಇದ್ದು ಏಪ್ರಿಲ್‌ ಒಂದರಿಂದ ಶೇ 8.1 ಆಗಿರುತ್ತದೆ. ಹಾಗೂ 111 ತಿಂಗಳಲ್ಲಿ ದ್ವಿಗುಣವಾಗುತ್ತದೆ. (ಹಿಂದೆ 100 ತಿಂಗಳಲ್ಲಿ ದ್ವಿಗುಣವಾಗುತ್ತಿತ್ತು).  ಕೇಂದ್ರ ಸರ್ಕಾರದ  ಉತ್ತಮ ಠೇವಣಿ ಇದಾಗಿರುತ್ತದೆ. ಎನ್‌ಎಚ್‌ಎಐ ಅಥವಾ ಆರ್‌ಇಸಿ, ಕೆಲವು ಖಾಸಗಿ ಕಂಪೆನಿಗಳು ಹಣ ಹೂಡಲು ಸಹಾಯ ಮಾಡುತ್ತವೆ. ಇಂದು ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿ ದರ ಗಮನಿಸಿದಾಗ ಕಿಸಾನ್‌ ಪತ್ರದಲ್ಲಿ ಹೂಡುವುದೇ ಲೇಸು ಎಂದೆನಿಸುತ್ತದೆ. ಆದರೆ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್ ಉಳಿಸಲು ಎನ್‌ಎಚ್‌ಎಐ ಅಥವಾ ಆರ್‌ಇಸಿ ಮೊರೆ ಹೋಗಲೇಬೇಕು.ಜಗದೀಶ, ಬೆಂಗಳೂರು

* ನನ್ನ ಸಹೋದರಿಯ ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಖಾತೆ ತೆರೆಯಬೇಕೆಂದಿದ್ದೇನೆ. ದಯಮಡಿ ಖಾತೆ ಹೇಗೆ ಹಾಗೂ ಎಲ್ಲಿ ತೆರೆಯಬೇಕು ಮತ್ತು ಈ ಖಾತೆಯ ವಿಶೇಷತೆ ಏನು ಎಂದು ತಿಳಿಸಿ.

ಉತ್ತರ:
ಸಕನ್ಯಾ ಸಮೃದ್ಧಿ ಯೋಜನೆ ಹತ್ತು ವರ್ಷದ ಒಳಗಿರುವ ಹೆಣ್ಣು ಮಕ್ಕಳ ಹೆಸರಿನಲ್ಲಿ ಅವರ ಪೋಷಕರು ಮಾಡಬಹುದು. ನೀವು ಖಾತೆಗೆ ಹಣ ತುಂಬಬಹುದಾದರೂ, ಪ್ರಾರಂಭದಲ್ಲಿ ಖಾತೆ ಪ್ರಾರಂಭಿಸಿದ ಕಾಗದ ಪತ್ರಗಳಿಗೆ ತಂದೆ ತಾಯಿ (ಒಬ್ಬರಲ್ಲಿ ಯಾರಾದರೂ ಆಗಬಹುದು) ಸಹಿ ಹಾಕಬೇಕು. ಈ ಖಾತೆ ಅಂಚೆ ಕಚೇರಿಯಲ್ಲಿಯೇ ಪ್ರಾರಂಭಿಸಬೇಕು. ಈ ಖಾತೆಗೆ ಹೆಣ್ಣು ಮಕ್ಕಳ ಜನನ ಪತ್ರ ವಿಳಾಸ ಗುರುತಿನ ದಾಖಲೆ ಪತ್ರ ಒದಗಿಸಬೇಕು. ಆರಂಭಿಕ ಠೇವಣಿ ₹ 1000 ಪ್ರತೀ ವರ್ಷ  ಕನಿಷ್ಠ ₹ 100 ಗರಿಷ್ಠ ₹ 1.50 ಲಕ್ಷ ಜಮಾ ಮಾಡಬಹುದು. ಈ ಹಣ ಆದಾಯ ತೆರಿಗೆ ಸೆಕ್ಷನ್‌ 80 ಸಿ ಇಂದ ವಿನಾಯಿತಿ ಹೊಂದಿದೆ. ಠೇವಣಿ ಮೊತ್ತದ ಶೇ 50ನ್ನು ಹೆಣ್ಣು ಮಗಳಿಗೆ 18 ವರ್ಷ  ತುಂಬಿದಾಗ ಮದುವೆ ಅಥವಾ ವಿದ್ಯಾಭ್ಯಾಸ ಸಲುವಾಗಿ ಹಿಂಪಡೆಯಬಹುದು. ಖಾತೆಯ ಸಂಪೂರ್ಣ ಅವಧಿಯು ಖಾತೆ ಪ್ರಾರಂಭಗೊಂಡ 21 ವರ್ಷಗಳವರೆಗೆ ಇರುತ್ತದೆ. ನಿಮ್ಮ  ಪ್ರಶ್ನೆಯಿಂದ ಹಲವರಿಗೆ ಉತ್ತರ ಸಿಕ್ಕಿದ ಹಾಗಾಗಿದೆ.

ಮೋಹನ್‌ ಕುಮಾರ್‌. ವಿ. ಎಸ್‌., ತುಮಕೂರು

* ಪ್ರಶ್ನೆ: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಎಂದರೇನು, ಸಣ್ಣ ವ್ಯಾಪಾರ ಮಾಡುವ ವ್ಯಕ್ತಿ ಈ ಯೋಜನೆಯಲ್ಲಿ ₹ 50,000 ಸಾಲ ಪಡೆಯಬಹುದೇ, ಬಡ್ಡಿ ದರ ಎಷ್ಟು, ಬ್ಯಾಂಕಿಗೆ ಏನು ಪುರಾವೆ ಒದಗಿಸಬೇಕು. ಈ ಸಾಲ ಎಲ್ಲಿ ದೊರೆಯುತ್ತದೆ ಹಾಗೂ ಅರ್ಜಿ ಎಲ್ಲಿ ಸಿಗುತ್ತದೆ. ದಯಮಾಡಿ ತಿಳಿಸಿರಿ.

ಉತ್ತರ:
ಮುದ್ರಾ ಎಂದರೆ Micro units Deve*opment Refinance Agency. ಈ ಸಂಸ್ಥೆಯಿಂದ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ವಿತರಿಸುವಾಗ, ವಿತರಿಸಿದ ಹಣ Refinance ರೂಪದಲ್ಲಿ ಬ್ಯಾಂಕುಗಳು ಪಡೆಯಬಹುದು. ಈ ಯೋಜನೆ ತಾ. 8–4–2015 ರಿಂದ  ಕಾರ್ಯರೂಪಗೊಂಡಿದೆ.  ಈಗಲೂ ಚಾಲ್ತಿಯಲ್ಲಿದೆ. ಈ ಯೋಜನೆಯಲ್ಲಿ ‘ಶಿಶು’ ₹ 50,000 ತನಕ, ‘ಕಿಶೋರ್‌’ ₹ 50000 ರಿಂದ 5 ಲಕ್ಷತನಕ, ತರುಣ್‌ ₹ 5 ಲಕ್ಷದಿಂದ ₹ 10 ಲಕ್ಷದತನಕ, ಹೀಗೆ ಮೂರು ಸಾಲದ ಯೋಜನೆಗಳಿವೆ.₹ 50000 ತನಕ ಮಾರ್ಜಿನ್‌ ಹಣ ಬೇಕಿಲ್ಲ. ಹಾಗೂ ₹ 10 ಲಕ್ಷಗಳ ತನಕ ಬೇರೆ  ಆಸ್ತಿ  ಜವಾಬ್ದಾರಿ  (Co**atera*) ಕೊಡಬೇಕಾಗಿಲ್ಲ. ಗರಿಷ್ಠ ಬಡ್ಡಿ ದರ ಶೇ 12. ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳಲ್ಲಿಯೂ ಈ ಸೌಲಭ್ಯ ಪಡೆಯಬಹುದು. ಸಣ್ಣ  ವ್ಯಾಪಾರಿಗಳು ₹ 50,000 ‘ಶಿಶು ಯೋಜನೆಯಲ್ಲಿ ಸಾಲ ಪಡೆಯಬಹುದು. ಸಾಲ ಪಡೆಯಲು ಅರ್ಜಿ ಬ್ಯಾಂಕಿನಲ್ಲಿ ದೊರೆಯುತ್ತದೆ. ಜೊತೆಗೆ ಅರ್ಜಿದಾರ ಖಾತೆ ಹೊಂದಿದ್ದು ಮಾಡುವ ವ್ಯಾಪಾರ ವ್ಯವಹಾರಗಳು ಪುರಾವೆ ಒದಗಿಸಬೇಕು. ಬ್ಯಾಂಕುಗಳು ಸಾಲ ನೀಡುವಾಗ ಅರ್ಜಿದಾರರ ಅರ್ಜಿಯಲ್ಲಿ ನಮೂದಾದ ಉದ್ದೇಶ ಸರಿ ಇದೆಯೇ ಎಂದು ಖಚಿತಪಡಿಸಿ ಕೊಳ್ಳುತ್ತಾರೆ. ಸಾಲ ನಗದಾಗಿ ನೀಡದೆ ಉದ್ದೇಶಿತ ವಿಚಾರಕ್ಕೆ ಸಂಬಂಧಿಸಿದ ಕಚ್ಚಾ ವಸ್ತು (Raw Materia*) ಅಥವಾ ಇನ್ನಿತರ ಯಂತ್ರೋಪಕರಣ ಕೊಳ್ಳಲು ನೇರವಾಗಿ ಇಂತಹ ಸಾಮಗ್ರಿಗಳ ವಿತರಕರಿಗೆ ಡಿ. ಡಿ. ಕೊಡತ್ತಾರೆ. ಒಟ್ಟಿನಲ್ಲಿ ಸಾಲ ಸದುಪಯೋಗ ಆಗಿ ಸಮಯದಲ್ಲಿ ಹಿಂತಿರುಗಿಸಬೇಕು ಎನ್ನುವುದೇ ಈ ಯೋಜನೆಯ ಮುಖ್ಯ ಗುರಿ.

ವಿಜಯ್, ಹುಬ್ಬಳ್ಳಿ

* ತಾಯಿಗೆ ತವರುಮನೆ ಆಸ್ತಿಯಲ್ಲಿ ₹ 15 ಲಕ್ಷ ಬಂದಿದೆ. ಈ ಹಣ ನಾವು ಸಹಕಾರಿ ಬ್ಯಾಂಕಿನಲ್ಲಿ ಎಫ್‌.ಡಿ. ಮಾಡಿದ್ದು, ಬರುವ ಬಡ್ಡಿಯಲ್ಲಿ ಜೀವನ ನಡೆಸುತ್ತಿದ್ದೇವೆ ಭದ್ರತೆಯ ಸಲುವಾಗಿ ಎಸ್‌.ಬಿ.ಐ. ನಲ್ಲಿ ಎಫ್‌.ಡಿ. ಮಾಡಬೇಕೆಂದಿದ್ದೇನೆ. ಇದರಲ್ಲಿ ನನ್ನ ತಂಗಿ ಮದುವೆ ಕೂಡಾ ಆಗಬೇಕಾಗಿದೆ. ಹೀಗೆ ಮಾಡಿದಲ್ಲಿ ಎಸ್‌.ಬಿ.ಐ. ನಲ್ಲಿ ತೆರಿಗೆ ಎಷ್ಟು ಮುರಿಯುತ್ತಾರೆ.

ಉತ್ತರ:
ತಾಯಿ ಹಿರಿಯ ನಾಗರಿಕರಾದ್ದರಿಂದ ಎಸ್‌.ಬಿ.ಐ. ದಲ್ಲಿ ಉಳಿದವರಿಗಿಂತ ಶೇ 0.50 ಬಡ್ಡಿ ಹೆಚ್ಚಿಗೆ ದೊರೆಯುತ್ತದೆ. ₹ 15 ಲಕ್ಷ ವಿಂಗಡಿಸಿ,₹ 5 ಲಕ್ಷದ ಮೂರು ಠೇವಣಿ ಮಾಡಿರಿ. ನಿಮ್ಮ ತಂಗಿ ಮದುವೆ ನಿಶ್ಚಯವಾದಲ್ಲಿ ಯಾವುದಾದರೂ ಒಂದು ಠೇವಣಿ ಅವಧಿಗೆ ಮುನ್ನ ಮುರಿಸಿ ಮದುವೆಗೆ ಉಪಯೋಗಿಸಿಕೊಳ್ಳಿ. ಠೇವಣಿ ಮೇಲಿನ ಬಡ್ಡಿ 3 ತಿಂಗಳಿಗೊಮ್ಮೆ ಪಡೆಯಿರಿ.  ಪ್ರತೀ ತಿಂಗಳು ಪಡೆದಲ್ಲಿ ಬಡ್ಡಿ ದರದಲ್ಲಿ ಸ್ವಲ್ಪ ಕಡಿಮೆ ಮಾಡುತ್ತಾರೆ. ಪ್ರಥಮ ಮೂರು ತಿಂಗಳು ಬಡ್ಡಿ ಬಾರದಿದ್ದರೂ, ಮುಂದೆ ಮೂರು ತಿಂಗಳಿಗೊಮ್ಮೆ ಬರುವ ಬಡ್ಡಿ ಉಳಿತಾಯ ಖಾತೆಯಲ್ಲಿ ಇರಿಸಿ, ಪ್ರತೀ ತಿಂಗಳೂ ಪಡೆಯಬಹುದು. ನಿಮಗೊಂದು ಕಿವಿಮಾತು. ತಂಗಿ ಲಗ್ನಕ್ಕೆ ಆದಷ್ಟು ಕಡಿಮೆ ಖರ್ಚ ಮಾಡಿ.ಹೆಚ್ಚಿನ ಖರ್ಚಿನಿಂದ ನಿಮ್ಮ ಠೇವಣಿ ಕರಗುತ್ತದೆ. ಜೊತೆಗೆ ಮಾಸಿಕ ಆದಾಯ ಕುಂದುತ್ತದೆ. ಉಳಿತಾಯ ಎಸ್‌.ಬಿ.ಐ.ಗೆ 15ಜಿ/15 ಎಚ್‌ ನಮೂನೆ ಫಾರಂ ಸಲ್ಲಿಸಿದಲ್ಲಿ ತೆರಿಗೆ ಮುರಿಯುವುದಿಲ್ಲ.

ಪ್ರಸಾದ್‌ ಕುಮಾರ್‌, ಬಿಜ್ಜಲ

*ಒಟ್ಟು ಸಂಬಳ ₹60,000. ರಜೆ ನಗದೀಕರಿಸಿದರೆ, ₹ 28,000 ದೊರೆಯುತ್ತದೆ. ಈ ಮೊತ್ತ ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ  ಕೊಡಬೇಕಾಗುತ್ತದೆಯೇ. ನನ್ನ ಗೊಂದಲ ಪರಿಹರಿಸಿ.

ಉತ್ತರ:
ಯಾವುದೇ ನೌಕರ ತಾನು ಸೇವೆ ಸಲ್ಲಿಸುತ್ತಿರುವಾಗ, ಆತನಿಗೆ ಇರುವ ರಜೆ ನಗದೀಕರಿಸಿದಲ್ಲಿ ಹಾಗೆ ಬರುವ ಒಟ್ಟು ಆದಾಯಕ್ಕೆ ಸೇರಿಸಿ ಆದಾಯ ತೆರಿಗೆ ಸಲ್ಲಿಸಬೇಕು. ಯಾವುದೇ ನೌಕರ ನಿವೃತ್ತಿಹೊಂದುವಾಗ ಗಳಿಸಿ ಉಳಿಸಿದ ನಗದೀಕರಿಸುವಲ್ಲಿ ಆದಾಯ ತೆರಿಗೆ ಸೆಕ್ಷನ್‌ 10 (10 ಎಎ) ಆಧಾರದ ಮೇಲೆ ಗರಿಷ್ಠ ₹ 3 ಲಕ್ಷ ತನಕ ತೆರಿಗೆ ವಿನಾಯಿತಿ ಪಡೆಯಬಹುದು. ಒಟ್ಟಿನಲ್ಲಿ ಸೇವಾವಧಿಯಲ್ಲಿ ನಗದೀಕರಿಸುವ ರಜಾ ಸಂಬಳಕ್ಕೆ ಆದಾಯ ತೆರಿಗೆ ವಿನಾಯಿತಿ ಇರುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.