ವಾಣಿಜ್ಯ, ವ್ಯವಸ್ಥಾಪನ; ಪ್ರತ್ಯೇಕ ವಿವಿ ಬೇಡ

7

ವಾಣಿಜ್ಯ, ವ್ಯವಸ್ಥಾಪನ; ಪ್ರತ್ಯೇಕ ವಿವಿ ಬೇಡ

Published:
Updated:

ಮೈಸೂರು: `ವಾಣಿಜ್ಯ ಮತ್ತು ವ್ಯವಸ್ಥಾಪನ ವಿಷಯಗಳಿಗೆ ಪ್ರತ್ಯೇಕ ವಿಶ್ವವಿದ್ಯಾನಿಲಯದ ಬೇಡಿಕೆ ಸಲ್ಲದು. ಸಾಂಪ್ರದಾಯಿಕ ವಿವಿಗಳ ಭಾಗವಾಗಿ ಉಳಿದು ಯೋಜನೆಗಳ ಸಂಶೋಧನೆ ಯಲ್ಲಿ ತೊಡಗಿಕೊಳ್ಳಬೇಕು~ ಎಂದು ಬೆಂಗಳೂರಿನ ನ್ಯಾಕ್ ನಿರ್ದೇಶಕ ಪ್ರೊ.ಎಚ್.ಎ.ರಂಗನಾಥ್ ಹೇಳಿದರು.ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ವಾಣಿಜ್ಯ ಮತ್ತು ವ್ಯವಸ್ಥಾಪನ ಅಧ್ಯಾಪಕರ 9ನೇ ಸಮ್ಮೇಳನದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ `ವ್ಯವಹಾರ ಶಿಕ್ಷಣದಿಂದ ಸಂಘಟನಾತ್ಮಕ ಪ್ರಾವಿಣ್ಯತೆ ಸಾಧನೆ- ಸಮಸ್ಯೆ ಮತ್ತು ಸವಾಲುಗಳು~ ಕುರಿತ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಮಾತನಾಡಿದರು.`ಭಾರತದಲ್ಲಿ 600 ವಿಶ್ವವಿದ್ಯಾ ನಿಲಯಗಳಿದ್ದು, ಅದರಲ್ಲಿ 300 ರಾಜ್ಯಮಟ್ಟದ ವಿವಿಗಳಿವೆ. 30 ಸಾವಿರ ಕಾಲೇಜುಗಳು ಈ ವಿವಿಗಳ ಸಂಯೋ ಜನೆಗೆ ಒಳಪಟ್ಟಿವೆ. ರಾಜ್ಯದ 10 ವಿಶ್ವ ವಿದ್ಯಾನಿಲಯಗಳಲ್ಲಿ 60 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡು ತ್ತಿದ್ದಾರೆ. ಈ ಪೈಕಿ ವಾಣಿಜ್ಯ ಮತ್ತು ವ್ಯವಸ್ಥಾಪನ ವಿಭಾಗದಲ್ಲಿ ಶೇ 42, ಮಾನವಿಕ ಹಾಗೂ ವಿಜ್ಞಾನದ 40 ವಿಭಾಗಗಳಲ್ಲಿ ಶೇ 70ರಷ್ಟು ವಿದ್ಯಾರ್ಥಿ ಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ವ್ಯವಸ್ಥಾಪನ ವಿಷಯಕ್ಕೆ ಪ್ರತ್ಯೇಕ ವಿವಿ ಬೇಡಿಕೆಯನ್ನು ಇಡಬಾರದು~ ಎಂದು ಅಭಿಪ್ರಾಯಪಟ್ಟರು.`ಹಲವಾರು ವಿವಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಕೆಲವು ವಿಶ್ವವಿದ್ಯಾನಿಲಯಗಳ ಸ್ನಾತ ಕೋತ್ತರ ಕೇಂದ್ರಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿ ಇರುವ ಉದಾಹರಣೆಗಳೂ ಇವೆ. ಹೀಗಿರುವಾಗ ಎಲ್ಲ ವಿಷಯ ಗಳಿಗೂ ಪ್ರತ್ಯೇಕ ವಿವಿ ಸ್ಥಾನಮಾನ ಪಡೆಯಲು ಮುಂದಾಗುವುದು ತಪ್ಪು. ವಿದ್ಯಾರ್ಥಿಗಳೇ ಇಲ್ಲ ಎಂದ ಮೇಲೆ ವಿವಿಗಳು ಏಕೆ ಬೇಕು?~ ಎಂದು ಪ್ರಶ್ನಿಸಿದರು.`ಇತ್ತೀಚೆಗೆ ಪ್ರಕಟವಾದ ಜಾಗತಿಕ ವ್ಯವಸ್ಥಾಪನ ಶಾಲೆಗಳ ರ‌್ಯಾಂಕಿಂಗ್‌ನಲ್ಲಿ ಬೆಂಗಳೂರಿನ ಹಾಗೂ ಅಲಹಾಬಾದ್‌ನ ಐಐಎಂ ಕಾಲೇಜುಗಳಿಗೆ ಮಾತ್ರ ರ‌್ಯಾಂಕ್ ಬಂದಿವೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ವ್ಯವಸ್ಥಾಪನ ಕಾಲೇಜುಗಳಲ್ಲಿ ಏನು ನಡೆಯುತ್ತಿದೆ? ಎಂಬುದನ್ನು ಅರಿಯಬೇಕು. ಎಲ್ಲ ಕಾಲೇಜುಗಳೂ ರ‌್ಯಾಂಕ್ ಪಡೆಯುವತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು~ ಎಂದು ಹೇಳಿದರು.`ಡೀಮ್ಡ ವಿವಿ, ಸೆಂಟ್ರಲ್ ವಿವಿ ಮತ್ತು ಐಎಸ್‌ಐಆರ್ ಸಂಸ್ಥೆಗಳಿಗೆ ಆರ್ಥಿಕ ಮತ್ತು ಶೈಕ್ಷಣಿಕ ಪ್ರೋತ್ಸಾಹ ದೊರಕುತ್ತಿದೆ. ಆದರೆ, ರಾಜ್ಯದ ಬೆನ್ನೆಲುಬುಗಳಾದ 10 ವಿವಿಗಳಿಗೆ ಇದೇ ಮಾತು ಅನ್ವಯಿಸುತ್ತಿಲ್ಲ. ಕೇಂದ್ರೀಯ ಮತ್ತು ರಾಜ್ಯ ವಿವಿಗಳ ನಡುವೆ ಸಾಕಷ್ಟು ಅಂತರವಿದೆ. ಆದ್ದರಿಂದ ರಾಜ್ಯ ವಿವಿಗಳಿಗೂ ಆರ್ಥಿಕ ಚೈತನ್ಯ ತುಂಬಬೇಕು. ಆದರೆ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಯಿಂದಾಗಿ 21ನೇ ಶತಮಾನದಲ್ಲೂ ಉನ್ನತ ಶಿಕ್ಷಣಕ್ಕೆ ಸಹಾಯ ದೊರಕುತ್ತಿಲ್ಲ~ ಎಂದು ವಿಷಾದ ವ್ಯಕ್ತಪಡಿಸಿದರು.ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲ ಯದ ಕುಲಪತಿ ಪ್ರೊ.ಬಿ.ಆರ್. ಅನಂತನ್ ಮಾತನಾಡಿ, `ವಾಣಿಜ್ಯ ಮತ್ತು ವ್ಯವಸ್ಥಾಪನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ ವಾದರೆ ಸಾಲದು.  ಈ ಹಿಂದೆ ವಾಣಿಜ್ಯ ವಿಷಯಗಳ ಪಠ್ಯಕ್ರಮ ವನ್ನು ಇತರೆ ಸ್ನಾತಕೋತ್ತರ ಕೇಂದ್ರಗಳ ಅಧ್ಯಾಪಕರು ರಚಿಸುತ್ತಿದ್ದರು. ವಾಣಿಜ್ಯ ಮತ್ತು ವ್ಯವಸ್ಥಾಪನ ಕೇಂದ್ರ ಆರಂಭ ವಾದ ಬಳಿಕ ಸಂಘದಿಂದಲೇ ಪಠ್ಯಕ್ರಮ ಸಿದ್ಧಗೊಳ್ಳುತ್ತಿದೆ~ ಎಂದರು.`ಈ ಹಿಂದೆ ಮೈಸೂರು, ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ವಾಣಿಜ್ಯ ಕಾಲೇಜುಗಳು ಇದ್ದವು. ಇಂದು ರಾಜ್ಯದ ಮೂಲೆ ಮೂಲೆಗಳ ಗ್ರಾಮೀಣ ಪ್ರದೇಶಗಳಲ್ಲೂ ಕಾಲೇಜುಗಳು ಸ್ಥಾಪನೆಯಾಗಿವೆ. ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಫಲಿತಾಂಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ~ ಎಂದು ಸಂತಸ ವ್ಯಕ್ತಪಡಿಸಿದರು.ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ವಿವಿ ಕುಲಪತಿ ಪ್ರೊ.ವಿ.ಜಿ.ತಳವಾರ್, ಬೆಂಗಳೂರು ವಿವಿ ವಾಣಿಜ್ಯ ಅಧ್ಯಾಪಕ ಪ್ರೊ.ಕೆ. ಈರೇಶಿ, ಮೈಸೂರು ವಿವಿ ವಾಣಿಜ್ಯ ವಿಭಾಗದ ಡೀನ್ ಪ್ರೊ.ಬಿ.ಶಿವರಾಜ, ಸಮ್ಮೇಳನದ ಮುಖ್ಯಸ್ಥ ಪ್ರೊ.ಆರ್.ಎಂ.ಚಿಂತಾಮಣಿ, ಬೆಂಗಳೂರಿನ ಐಎಸ್‌ಬಿಆರ್ ಬಿಸಿನೆಸ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಮನೀಷ್ ಕೊಠಾರಿ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry