ಶನಿವಾರ, ಡಿಸೆಂಬರ್ 7, 2019
16 °C

ವಾದ್ಯಗಳಿಲ್ಲದ ಸಂಗೀತ ಸಂಜೆ

Published:
Updated:
ವಾದ್ಯಗಳಿಲ್ಲದ ಸಂಗೀತ ಸಂಜೆ

ಆ ಸುಂದರ ಸಂಜೆಗೆ ಮತ್ತಷ್ಟು ಆಕರ್ಷಣೆ ತುಂಬಲು ಅಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಗೆಂದು ತಯಾರಾದ ಸುಸಜ್ಜಿತ ವೇದಿಕೆಯನ್ನು ನೋಡಿದರೆ ಅಲ್ಲಿ ಯಾವುದೇ ಸಂಗೀತದ ಪರಿಕರಗಳಿರಲಿಲ್ಲ! ಕೈಯಲ್ಲಿ ಮೊಬೈಲು ಹಿಡಿದು ವೇದಿಕೆ ಹತ್ತಿದ ಹಾಡುಗಾರ್ತಿ ಬಾಲಿವುಡ್ ಹಾಡು ಗುನುಗುತ್ತಿದ್ದರೆ ಅದೇ ಲಯದಲ್ಲಿ ಪಕ್ಕವಾದ್ಯಗಳು ದನಿಗೂಡಿಸಿದವು.ಅಂಗೈ ಅಗಲದ ಯಂತ್ರದಲ್ಲಿ ನಾದಗಳೆಲ್ಲಾ ಮೂಡಿಬರುತ್ತಿದ್ದರೆ ಪ್ರೇಕ್ಷಕರ ಕಂಗಳಲ್ಲಿ ಆಶ್ಚರ್ಯ ಚಿಹ್ನೆ. ಹೌದು, `ರೆವಲ್ಯೂಷನ್~ ಸಂಗೀತ ತಂಡ ಆ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಾವುದೇ ಸಂಗೀತ ಪರಿಕರಗಳಿರಲಿಲ್ಲ. ಕಲಾವಿದರೆಲ್ಲರೂ ಮೈಕ್ರೋಫೋನ್, ಐಫೋನ್, ಐಪಾಡ್ ಬಳಸಿ ಹಾಡಿಗೆ ರಂಗುತುಂಬುತ್ತಿದ್ದರೆ ವೀಕ್ಷಕರಲ್ಲಿ ನೂರಾರು ಪ್ರಶ್ನೆ. ಏಷ್ಯಾದ ಮೊತ್ತಮೊದಲ ರೇವ್ ಐಬಾಂಡ್ ತಂಡ ಇಂದಿರಾನಗರದಲ್ಲಿ ಈ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರವಾಯಿತು.ಸತತ 20 ನಿಮಿಷಗಳ ಕಾಲ ಐಪಾಡ್‌ನಲ್ಲಿ ಪಿಯಾನೊ ಗಿಟಾರ್ ನುಡಿಸಿದ ಚರಣ್‌ರಾಜ್‌ಗೆ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರಿಂದ ಕರತಾಡನ. ಒಂದೇ ಕೈಯಲ್ಲಿ ಎರಡು ಮೈಕ್ರೋಫೋನ್ ಹಿಡಿದು ವೇದಿಕೆ ಏರಿದ ರಿಚಾ ಒಂದನ್ನು ಮೈಕ್‌ನಂತೆ, ಮತ್ತೊಂದನ್ನು ಪುಸ್ತಕದಂತೆ ಬಳಸಿ ಹಾಡುತ್ತಿದ್ದರೆ ರೋಮಾಂಚನದ ಅನುಭವ. ಜೆಡೀ, ವ್ಯಾನಿಲ್ ವೇಗಸ್  ಸ್ಯಾಂಪ್ಲರ್ ಹಾಗೂ ಇತರ ವಾದ್ಯಗಳನ್ನು ಅದೇ ಐಪಾಡ್ ಮೂಲಕ ಬಾರಿಸಿ ಮತ್ತಷ್ಟು ಸಂಚಲನ ಮೂಡಿಸಿದರು.ಈ ನಾಲ್ವರ ಸಾಂಘಿಕ ಪ್ರಯತ್ನವಾಗಿ ವಿಶಿಷ್ಟ ರಾಗ ಸಂಯೋಜನೆಯೊಂದಿಗೆ ಮೂಡಿ ಬಂದ `ಶೀಲಾ ಕಿ ಜವಾನಿ~ ಹಾಡು ಅದ್ಭುತವಾಗಿತ್ತು.`ನಮ್ಮ ದೇಶದಲ್ಲಿ ಇದಿನ್ನೂ ಹೊಸದು. ತಂತ್ರಜ್ಞಾನದ ಮುಂದುವರಿಕೆಯನ್ನು ಜನಸಾಮಾನ್ಯರಿಗೆ ತಿಳಿಸುವಂತೆ ಮಾಡುವ ಪ್ರಯತ್ನ ನಮ್ಮದು. ಐಫೋನ್, ಐಪಾಡ್‌ಗಳು ಬಂದ ಬಳಿಕವಂತೂ ಸಂಗೀತ ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಒಂದಾಗಿದೆ. ನಾವು ಮೊಬೈಲ್-ಕಂಪ್ಯೂಟರ್ ಬಳಸುವಂತೆ ವಾದ್ಯಗಳನ್ನೂ ಉಪಯೋಗಿಸಿಕೊಳ್ಳಬಹುದು. ಇದರಿಂದ ಇಷ್ಟವಾದಾಗ ಇಷ್ಟವಾದ ಸ್ಥಳದಲ್ಲಿ ಅಭ್ಯಾಸವನ್ನೂ ನಡೆಸಬಹುದು ಎಂದು ಐಬ್ಯಾಂಡ್ ವಿವರ ನೀಡುತ್ತಾರೆ ರಿಕಿ.`ಒಂದು ರೂಪಾಯಿಯಲ್ಲಿ ಎರಡು ಪ್ರೀತಿ~ ಚಿತ್ರದ ಸಂಗೀತ ಸಂಯೋಜನೆಯ ಜವಾಬ್ದಾರಿ ಹೊತ್ತಿರುವ ಅವರು ಇನ್ನೂ ಹೆಸರಿಡದ ತೆಲುಗು ಚಿತ್ರವೊಂದರಲ್ಲಿ ಬ್ಯುಸಿ. ಅದರೊಂದಿಗೆ `ರಂಗ್ ದೊ~ ವರ್ಲ್ಡ್ ಫ್ಯೂಶನ್ ಇತ್ತೀಚೆಗಷ್ಟೇ ಮುಗಿಸಿ ತನ್ನದೇ ಆದ `ರೆವಲ್ಯೂಷನ್~ ತಂಡವನ್ನು ಬೆಳೆಸುತ್ತಿರುವ ರಿಕಿ ಹೊಸ ವರ್ಷದ ಮೊದಲ ತಿಂಗಳ ಅಂತ್ಯವನ್ನು ತಮ್ಮದೇ ಬ್ಯಾಂಡ್‌ನಲ್ಲಿ ವಿಶಿಷ್ಟವಾಗಿ ಆಚರಿಸಿಕೊಂಡಿದ್ದು ಹೀಗೆ.ಬಳಿಕ ಅದೇ ಕಲಾವಿದರಿಂದ ಹಾಲಿವುಡ್‌ನ `ಗ್ಲಾಡಿಯೇಟರ್~, `ಟೈಟಾನಿಕ್~, `ಕಿಲ್ ಬಿಲ್~, `ಶಿಕಾಗೊ~, `ಟಾಪ್‌ಗನ್~, `ಘೋಸ್ಟ್~, `ಫ್ರೆಂಚ್ ಕಿಸ್~, `ಲಾರ್ಡ್ ಆಫ್ ದಿ ರಿಂಗ್ಸ್~ ಚಿತ್ರದ ಆಯ್ದ ಗೀತೆಗಳ ಗಾಯನವೂ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಅವಿನಾಶ್ ಛೆಬ್ಬಿ `ಸ್ಲಮ್ ಡಾಗ್ ಮಿಲಿಯನೇರ್~ ಚಿತ್ರದ `ಜೈ ಹೋ~ ಹಾಡನ್ನು ಹಾಡಿದಾಗ ನೆರೆದಿದ್ದವರೂ ದನಿಗೂಡಿಸಿದರು. ಪ್ರೇಕ್ಷಕರ ಮಧ್ಯದಿಂದ ಹಾಡು ಹೇಳುತ್ತಾ ಬಂದ ಛೆಬ್ಬಿ ಅಲ್ಲೇ ಖುರ್ಚಿ ಏರಿ `ಜೈ ಹೋ~ ಅಂದಾಗ ರೋಮಾಂಚನ.ಅದಕ್ಕೂ ಮುನ್ನ `ಸ್ಟ್ಯಾಂಡ್ ಅಪ್ ಕಾಮಿಡಿ~ ಕಾರ್ಯಕ್ರಮದ ಮೂಲಕ ನಗೆ ಉಕ್ಕಿಸಲು ಬಂದಿದ್ದ ಅಶ್ವಿನ್ ಮಾಥ್ಯೂ ಸಭ್ಯತೆಯ ಗೆರೆ ಮೀರಿ ಜೋಕ್ ಹಾರಿಸುತ್ತಿದ್ದರೂ ನೆರೆದಿದ್ದ ಪ್ರೇಕ್ಷಕರು ನಗೆಯ ಅಲೆ ಮೇಲೆ ತೇಲುತ್ತಿದ್ದರು. ಆರಂಭದಲ್ಲಿ ತನ್ನ ಊರುಭಾಷೆ ಮಲೆಯಾಳಂ ಎನ್ನುತ್ತಾ ಆ ಜನರ ಬಗ್ಗೆ ಜೋಕ್ ಸಿಡಿಸಿದ ಅಶ್ವಿನ್ `ಸ್ಕಾಚ್ ಆಂಡ್ ಸ್ಕೋಡಾ~ ಭಾಷೆಯಲ್ಲಿ ಅಶ್ಲೀಲತೆಯ ಸೋಂಕು ತಾಕಿಸಿದರು. ಸಹ್ಯ ಸಂಪ್ರದಾಯವನ್ನು ಪಕ್ಕಕ್ಕಿಟ್ಟು ತಮ್ಮದೇ ಆಡು ಭಾಷೆಯಲ್ಲಿ ಜೋಕ್ ಕಟ್ ಮಾಡಿದಾಗಲೂ ನೆರೆದಿದ್ದ ಪ್ರೇಕ್ಷಕರಿಂದ ಭಾರೀ ಪ್ರಶಂಸೆ. ವೈನ್-ಡಿನ್ನರ್ ಕಾರ್ಯಕ್ರಮಕ್ಕೆ ಕಳೆಕಟ್ಟಿತು.

 

ಪ್ರತಿಕ್ರಿಯಿಸಿ (+)