ವಾದ್ಯ ಪ್ರವೀಣ ಅನಿಕೇತ್

7

ವಾದ್ಯ ಪ್ರವೀಣ ಅನಿಕೇತ್

Published:
Updated:

 


ಕಲೆಗೆ ವಯಸ್ಸಿನ ಮಿತಿಯಿಲ್ಲ. ಅದರಲ್ಲೂ ಸಂಗೀತ ಕಲೆ ಒಮ್ಮೆ ಆವರಿಸಿಕೊಂಡರೆ ಅದು ನೀಡುವ ಆನಂದ ಅಗಾಧ. ಇಂತಹ ಅದ್ಭುತ ಸಂಗೀತ ಲೋಕದ ಜಾಡಿನಲ್ಲಿ ತನ್ನದೇ ಛಾಪು ಮೂಡಿಸುವ ಹಂಬಲದಲ್ಲಿದ್ದಾನೆ ಅನಿಕೇತ್ ಅಶೋಕ್.

 

ಸಂಗೀತ ಸಾಧನಗಳ ಸ್ವರವೇ ನನಗೆ ಸ್ಫೂರ್ತಿ ಎನ್ನುವ ಅನಿಕೇತ್ ವಿವಿಧ ನಮೂನೆಯ ಸಂಗೀತ ವಾದ್ಯಗಳನ್ನು ನುಡಿಸಬಲ್ಲವನು. 15 ವರ್ಷದ ಅನಿಕೇತ್ ಇದೀಗ ಅರಬಿಂದೋ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯಾಗಿದ್ದು, 5ನೇ ವಯಸ್ಸಿನಲ್ಲೇ ಸಂಗೀತ ಸಾಧನಗಳ ನಾದದೆಡೆಗೆ ಆಕರ್ಷಿತನಾದನಂತೆ.

 

ಬರೋಬ್ಬರಿ ಏಳು ವಾದ್ಯಗಳನ್ನು ನುಡಿಸಬಲ್ಲ ಅನಿಕೇತ್‌ನ ಕುಟುಂಬದಲ್ಲೇ ಸಂಗೀತದ ಗಂಧ ತುಂಬಿಕೊಂಡಿದೆ. ತಂದೆ ಅಶೋಕ್ ತಬಲಾ ವಾದಕ. ತಾಯಿ ಕೇತನ ಗಾಯಕಿ. ಇದೇ ಕಾರಣಕ್ಕೆ ಸಂಗೀತದತ್ತ ಒಲವು ಮೂಡಿದ್ದು ಎನ್ನುವ ಅನಿಕೇತ್ ಕೀಬೋರ್ಡ್ ನುಡಿಸಲು ಆರಂಭಿಸಿದ್ದು 5ನೇ ವಯಸ್ಸಿನಲ್ಲಿ.

 

`ಕೀಬೋರ್ಡ್‌ನಂಥ ಚಿಕ್ಕ ವಾದ್ಯ ಕಲಿತ ನಂತರ ತಬಲಾ ವಾದನದೆಡೆಗೆ ಮನಸ್ಸು ವಾಲಿತು. ಸಂಗೀತ ಕಛೇರಿಯಲ್ಲಿ ಕೇಳಿದ್ದ ತಬಲಾ ವಾದನ ಅದೇಕೋ ಬಿಡದೆ ಹಿಂಬಾಲಿಸಿತ್ತು. ತಬಲಾ ಕಲಿಯಲೇಬೇಕೆಂಬ ಹಂಬಲದಿಂದ ಎರಡು ವರ್ಷ ಗಾಯಕ್‌ವಾಡ್ ಅವರ ಬಳಿ ತಬಲಾ ವಾದನ ಅಭ್ಯಸಿಸಿದೆ. ಇಷ್ಟಕ್ಕೇ ಸುಮ್ಮನಾಗುವ ಮನಸ್ಸಾಗಲಿಲ್ಲ. ಮತ್ತೆ ಮೃದಂಗವನ್ನು ವಿದುಷಿ ಜಯಚಂದ್ರರಾವ್ ಅವರ ಬಳಿ ಕಲಿತೆ' ಎಂದು ನಗುತ್ತಾ ವಿವರಿಸುತ್ತಾನೆ ಅನಿಕೇತ್.

 

ಶಾಸ್ತ್ರೀಯ ವಾದನವನ್ನು ಅಭ್ಯಸಿಸಿದ ಅನಿಕೇತ್‌ಗೆ ಪಾಶ್ಚಾತ್ಯ ಸಂಗೀತ ಶೈಲಿಯೂ ಅಚ್ಚುಮೆಚ್ಚು. ಈ ಕಾರಣಕ್ಕೆ 10ನೇ ವಯಸ್ಸಿಗೇ ಡ್ರಮ್ಸ ಕಲಿಯಲು ಆರಂಭಿಸಿದ್ದು, ಇದೀಗ ಗಿಟಾರ್, ಖಂಜಿರ ಕೂಡ ನುಡಿಸಬಲ್ಲ. ಶಾಲೆಯಲ್ಲಿಯೇ `ಪೊಲಾರಿಸ್' ಎಂಬ ಬ್ಯಾಂಡ್‌ನೊಂದಿಗೆ ಗುರುತಿಸಿಕೊಂಡ ಅನಿಕೇತ್ ತನ್ನ ಸಂಗೀತದ ಅಭಿರುಚಿಯನ್ನು ಪಸರಿಸಿದ್ದು `ವಿಚಿತ್ರ' ಎಂಬ ಕನ್ನಡ ಬ್ಯಾಂಡ್ ಮೂಲಕ. 

 

`ನಾನು ಮೊದಲ ಡ್ರಮ್ಸ ಶೋ ನೀಡಿದ್ದು ಟೌನ್‌ಹಾಲ್‌ನಲ್ಲಿ. ಮೊದಲನೇ ಶೋ ಆದ್ದರಿಂದ ತುಸು ಭಯದಿಂದಲೇ ವೇದಿಕೆ ಹತ್ತಿದ್ದೆ. ವೇದಿಕೆ ಹತ್ತಿದ್ದೇ ನನಗೇ ಗೊತ್ತಿಲ್ಲದಂತೆ ತಲ್ಲೆನನಾಗಿ ಮೈ ಮರೆತು ಡ್ರಮ್ಸ ಬಾರಿಸುತ್ತಿದ್ದೆ. ನನ್ನ ವಾದನ ಮುಗಿದಿದ್ದೇ, ಸಭಾಂಗಣದ ನಾಲ್ಕೂ ಕಡೆಯಿಂದ ಚಪ್ಪಾಳೆ ಕಿವಿಗಪ್ಪಳಿಸಿತ್ತು. ನಿಜಕ್ಕೂ ಅದೊಂದು ರೋಮಾಂಚನದ ಕ್ಷಣ' ಎಂದು ಭಾವುಕನಾಗಿ ನುಡಿಯುತ್ತಾನೆ ಅನಿಕೇತ್.

 

ಅನಿಕೇತ್‌ನ ಈ ಸಂಗೀತ ಪ್ರೀತಿಗೆ ಶಾಲೆಯಿಂದಲೂ ಅಪಾರ ಬೆಂಬಲ, ಪ್ರೋತ್ಸಾಹ ದೊರಕಿದೆಯಂತೆ. ಗೂಡುಗಳಂತಿರುವ ಇಲ್ಲಿನ ಮನೆಗಳಲ್ಲಿ ಸಂಗೀತ ಕಿವಿಗೆ ಬಡಿಯುತ್ತಿದ್ದರೆ ಆ ದಿನವೇ ಜಗಳಕ್ಕಿಳಿಯುವವರು ಹೆಚ್ಚು. ಆದರೆ ನನ್ನ ಸಂಗೀತಾಭ್ಯಾಸಕ್ಕೆ ಅಕ್ಕ ಪಕ್ಕದ ಮನೆಯವರೂ ಬೆಂಬಲ ನೀಡಿದರು' ಎಂದು ನಗುತ್ತಾ ಅನುಭವಗಳನ್ನು ಹಂಚಿಕೊಳ್ಳುತ್ತಾನೆ.

 

ಅತಿ ಕಿರಿಯ ಡ್ರಮ್ಮರ್ ಎಂದು ಕರೆಸಿಕೊಂಡಿರುವ ಅನಿಕೇತ್ ಇದುವರೆಗೂ 20 ಪ್ರದರ್ಶನ ನೀಡಿದ್ದಾನೆ. `ಫ್ಯೂಷನ್ ಸಂಗೀತ'ವೆಂದರೆ ಅತಿ ಆಪ್ತ ಎನ್ನುವ ಅನಿಕೇತ್, `ನಮ್ಮ ಜನರಿಗೆ ಇಂಗ್ಲಿಷ್‌ಗಿಂತ ಕನ್ನಡದಲ್ಲಿ ಹಾಡುಗಳನ್ನು ಮುಂದಿಟ್ಟರೆ, ಹೆಚ್ಚು ಹತ್ತಿರವಾಗುತ್ತೇವೆ ಎನ್ನುವ ಹಂಬಲದೊಂದಿಗೆ ಬ್ಯಾಂಡ್ ಸೇರಿದ್ದು' ಎಂದು ಮನದ ಆಸೆಯನ್ನೂ ಬಿಚ್ಚಿಟ್ಟನು.

 

`ಸಂಗೀತವೇ ಹಾಗೆ, ಅದರಲ್ಲಿ ತಲ್ಲೆನನಾದರೆ, ಕೈಗಳು ನನಗರಿವಿಲ್ಲದಂತೆಯೇ ನುಡಿಸಲು ಆರಂಭಿಸುತ್ತವೆ' ಎಂದು ತನ್ನ ಅನುಭವಕ್ಕೆ ನಿಲುಕಿದ್ದನ್ನೇ ವಿವರಿಸುವ ಈತ ಈಗ ಜಂಬೆ ವಾದ್ಯದ ಅಭ್ಯಾಸದಲ್ಲಿ ನಿರತ. ಸಂಗೀತದೊಂದಿಗೆ ಎಂಜಿನಿಯರ್ ಆಗಬೇಕೆಂಬ ಕನಸಿನೊಂದಿಗೆ ಸಾಗುತ್ತಿರುವ ಈ ಚಿಕ್ಕ ಹುಡುಗನಿಗೆ ತನ್ನದೇ ಆಲ್ಬಂ ಹೊರತರುವ ಕನಸಿದೆಯಂತೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry