ವಾದ್ರಾ ಭೂವ್ಯವಹಾರ ತನಿಖೆ ಇಲ್ಲ

7

ವಾದ್ರಾ ಭೂವ್ಯವಹಾರ ತನಿಖೆ ಇಲ್ಲ

Published:
Updated:
ವಾದ್ರಾ ಭೂವ್ಯವಹಾರ ತನಿಖೆ ಇಲ್ಲ

ನವದೆಹಲಿ (ಪಿಟಿಐ): ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ಸಂಸ್ಥೆಯ ಮಧ್ಯೆ ನಡೆದಿರುವುದು ಖಾಸಗಿ ವ್ಯವಹಾರ. ಆದ್ದರಿಂದ ಯಾವುದೇ ನಿರ್ದಿಷ್ಟ ಭ್ರಷ್ಟಾಚಾರದ ಆರೋಪವಿಲ್ಲದೆ ಖಾಸಗಿ ವ್ಯವಹಾರಗಳಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವ ಪಿ. ಚಿದಂಬರಂ ಅವರು ತಿಳಿಸಿದರು.ಖಾಸಗಿ ವ್ಯವಹಾರಗಳ ಬಗ್ಗೆ ದುರುದ್ದೇಶದಿಂದ ಮಾಡುವ ಆಪಾದನೆಗಳ ಬಗ್ಗೆ ಸರ್ಕಾರ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸಚಿವರು ಆರ್ಥಿಕ ಸಂಪಾದಕರ ಸಮ್ಮೇಳನದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಹೇಳಿದರು.ವಾದ್ರಾ ಅವರ ಕಂಪೆನಿ ಮತ್ತು ರಿಯಲ್ ಎಸ್ಟೇಟ್ ಕಂಪೆನಿಯಾದ ಡಿಎಲ್‌ಎಫ್ ಮಧ್ಯೆ ನಡೆದಿರುವ ಭೂ ವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದರು.ಪ್ರಿಯಾಂಕಾ ಆಸ್ತಿ ತನಿಖೆಗೆ ಸಲಹೆ:  ವಾದ್ರಾ ಮತ್ತು ಡಿಎಲ್‌ಎಫ್ ಭೂವ್ಯವಹಾರದ ವಿವರಗಳ ಜತೆ ಪ್ರಿಯಾಂಕಾ ವಾದ್ರಾ ಅವರು ಹಿಮಾಚಲಪ್ರದೇಶದಲ್ಲಿ ಹೊಂದಿರುವ ಆಸ್ತಿಯ ವಿವರಗಳನ್ನೂ ಸೇರಿಸಬೇಕು ಎಂಬ  ಬಿಜೆಪಿ ಮುಖಂಡ ಶಾಂತಕುಮಾರ್ ಅವರು  ಸಾಮಾಜಿಕ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್‌ಗೆ ಸಲಹೆ ಮಾಡಿದ್ದಾರೆ.ಪ್ರಿಯಾಂಕಾ ವಾದ್ರಾ ಕುಟುಂಬದವರು ಹಿಮಾಚಲ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದು, ಅವುಗಳ ಪೂರ್ತಿ ವಿವರ ತಮ್ಮ ಬಳಿ ಇಲ್ಲ ಎಂದು ಶಾಂತಕುಮಾರ್ ಅವರು ಕೇಜ್ರಿವಾಲ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ಹಿಮಾಚಲಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ಇರುವುದರಿಂದ ಪ್ರಿಯಾಂಕಾ ಅವರ ಆಸ್ತಿ ವಿವರಗಳನ್ನು ಪಡೆಯುವುದು ಶಾಂತಕುಮಾರ್ ಅವರಿಗೆ ಕಷ್ಟವಾಗುವುದಿಲ್ಲ. ಆದ್ದರಿಂದ ಅವರೇ ಎಲ್ಲಾ ವಿವರಗಳನ್ನು ಒದಗಿಸಲಿ ಎಂದು ವ್ಯಂಗ್ಯವಾಡಿದ್ದಾರೆ. ವಾದ್ರಾ ಅವರಿಗೆ ಡಿಎಲ್‌ಎಫ್ ಯಾವ ರೀತಿ ನೆರವು ನೀಡಿದೆ, ಹರಿಯಾಣ ಸರ್ಕಾರ ಡಿಎಲ್‌ಎಫ್ ಪರ ಏನು ಕ್ರಮ ತೆಗೆದುಕೊಂಡಿದೆ ಮತ್ತು ಡಿಎಲ್‌ಎಫ್ ಯಾವ ರೀತಿ ಸುಳ್ಳು ಹೇಳಿದೆ ಎಂಬಿತ್ಯಾದಿ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಐದು ಗಂಟೆಗೆ ವಿವರ ನೀಡುವುದಾಗಿ ಕೇಜ್ರಿವಾಲ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಫೇಸ್‌ಬುಕ್ ಖಾತೆ ಮುಚ್ಚಿದ ವಾದ್ರಾ

ನವದೆಹಲಿ (ಪಿಟಿಐ): ಡಿಎಲ್‌ಎಫ್ ಜತೆಗಿನ ವಹಿವಾಟು ಬಯಲಾದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಸಾಮಾಜಿಕ ಸಂಪರ್ಕ ಅಂತರ್ಜಾಲ ತಾಣ ಫೇಸ್‌ಬುಕ್‌ನಲ್ಲಿದ್ದ ತಮ್ಮ ಖಾತೆ ಮುಚ್ಚಿದ್ದಾರೆ. ವಾದ್ರಾ ಸೋಮವಾರ ತಮ್ಮ ಖಾತೆಯನ್ನು ಮುಚ್ಚಿದ್ದು ಈ ನಿರ್ಧಾರಕ್ಕೆ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಸಾಮಾಜಿಕ ಹೋರಾಟಗಾರ ಅರವಿಂದ್ ಕೇಜ್ರಿವಾಲ್ ಮಾಡಿದ ಆರೋಪದ ನಂತರ ಅವರನ್ನು ವಿವಾದಗಳು ಸುತ್ತಿಕೊಂಡಿದ್ದು ಹಲವು ಬಗೆಯ ಪ್ರತಿಕ್ರಿಯೆಗಳು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.ವಿವಾದದ ಬಗ್ಗೆ ವಾದ್ರಾ ಭಾನುವಾರ ಫೇಸ್‌ಬುಕ್‌ನಲ್ಲಿ ಬರೆದ `ಮ್ಯಾಂಗೊ ಪೀಪಲ್ ಇನ್ ಎ ಬನಾನಾ ರಿಪಬ್ಲಿಕ್~ ವ್ಯಂಗೋಕ್ತಿಗೆ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ವಾದ್ರಾ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry