ವಾದ್ರಾ ಭೂ ಹಗರಣ ಅಧಿಕಾರಿ ಎತ್ತಂಗಡಿ

7

ವಾದ್ರಾ ಭೂ ಹಗರಣ ಅಧಿಕಾರಿ ಎತ್ತಂಗಡಿ

Published:
Updated:
ವಾದ್ರಾ ಭೂ ಹಗರಣ ಅಧಿಕಾರಿ ಎತ್ತಂಗಡಿ

ಚಂಡೀಗಡ (ಪಿಟಿಐ): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ವಿರುದ್ಧದ ಭೂವ್ಯವಹಾರಗಳ ತನಿಖೆ ಕೈಗೊಂಡಿದ್ದ ಹರಿಯಾಣದ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರನ್ನು ಸರ್ಕಾರ ರಾತೋರಾತ್ರಿ ಎತ್ತಂಗಡಿ ಮಾಡಲಾಗಿದೆ.ನೋಂದಣಿ ಹಾಗೂ ಭೂ ದಾಖಲೆಗಳ ಮಹಾ ನಿರ್ದೇಶಕ ಖೇಮ್ಕಾ, ರಾಜ್ಯದ ಮಾನೇಸರ-ಶಿಕೋಪುರ ಮತ್ತಿತರ ನಾಲ್ಕು ಜಿಲ್ಲೆಗಳಲ್ಲಿ ವಾದ್ರಾ ಕೈಗೊಂಡ ಭೂವ್ಯವಹಾರಗಳ ಕುರಿತು ತನಿಖೆಗೆ ಆದೇಶ ನೀಡಿದ ಮೂರೇ ದಿನಗಳಲ್ಲಿ ಸರ್ಕಾರ ಅವರನ್ನು ಎತ್ತಂಗಡಿ ಶಿಕ್ಷೆಗೆ ಗುರಿಮಾಡಿದೆ. ಮಾನೇಸರ-ಶಿಕೋಪುರನಲ್ಲಿಯ 3.5 ಎಕರೆ ಜಾಗದ ಭೂಪರಿವರ್ತನೆ ರದ್ದುಗೊಳಿಸಲು ಆದೇಶ ಖೇಮ್ಕಾ ಹೊರಡಿಸಿದ್ದರು. ಈ ಭೂಮಿಯನ್ನು ವಾದ್ರಾ ಅವರು, ರಿಯಲ್ ಎಸ್ಟೇಟ್ ದೈತ್ಯ ಸಂಸ್ಥೆ ಡಿಎಲ್‌ಎಫ್‌ಗೆ ರೂ 58 ಕೋಟಿಗೆ ಮಾರಾಟ ಮಾಡಿದ್ದರು. ಈ ಸಂಬಂಧ ತನಿಖೆ ಕೈಗೊಳ್ಳಲು ಸಾಮಾಜಿಕ ಕಾರ‌್ಯಕರ್ತ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದರು.ಸರ್ಕಾರದ ಈ ನಿರ್ಧಾರ 1991ರ ತಂಡದ ಐಎಎಸ್ ಅಧಿಕಾರಿ ಖೇಮ್ಕಾ ಅವರ ಆತ್ಮಸ್ಥೈರ್ಯ ಕುಂದಿಸಿದಂತಾಗಿದೆ ಎಂದು ಅಭಿಪ್ರಾಯಪಡಲಾಗಿದೆ. `ನನ್ನ ಈ ನಿರ್ಧಾರ ಕೆಲ ಸ್ಥಾಪಿತ ಹಿತಾಸಕ್ತಿಗಳಿಗೆ ವಿರುದ್ಧವಾಗಿರಬಹುದು, ಹಾಗಾಗಿ ಇದು ಒಂದು ರೀತಿಯಲ್ಲಿ `ಬೆದರಿಕೆ~ ಎಂದೇ ಭಾವಿಸಬೇಕಾಗಿದೆ. ನನ್ನ 20 ವರ್ಷಗಳ ಸೇವಾವಧಿಯಲ್ಲಿ ಇದು 43ನೇ ವರ್ಗಾವಣೆಯಾಗಿದೆ~ ಎಂದು ಖೇಮ್ಕಾ ಪ್ರತಿಕ್ರಿಯೆ ನೀಡಿದ್ದಾರೆ.

ಅಧಿಕಾರವಹಿಸಿಕೊಂಡ ಮರುದಿನವೇ (ಅ. 12ರಂದು) ರಾಬರ್ಟ್ ವಾದ್ರಾ ಅವರಿಂದ ಇಲ್ಲವೆ ಅವರ ಕಂಪೆನಿಗಳಿಂದ ನೋಂದಣಿಯಾದ ಆಸ್ತಿಗಳ ಕಡಿಮೆ ಮೌಲ್ಯಮಾಪನದ ಕುರಿತು ತನಿಖೆ ನಡೆಸುವಂತೆ ಆದೇಶಿಸಿ ಗುಡಗಾಂವ್, ಫರಿದಾಬಾದ್, ಪಲವಾಲ್ ಹಾಗೂ ಮೇವತ್ ಜಿಲ್ಲಾಧಿಕಾರಿಗಳಿಗೆ ಖೇಮ್ಕಾ ಪತ್ರ ಬರೆದಿದ್ದರು.ಸರ್ಕಾರದ ಸಮರ್ಥನೆ:


ಈ ನಡುವೆ ಖೇಮ್ಕಾ ವರ್ಗಾವಣೆಯನ್ನು ಸಮರ್ಥಿಸಿಕೊಂಡಿರುವ ಹರಿಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿ ಪಿ.ಕೆ. ಚೌಧರಿ, ಖೇಮ್ಕಾ ಅವರ ವರ್ಗಾವಣೆ ಹಿಂದೆ ಯಾವ ದುರುದ್ದೇಶವೂ ಇಲ್ಲ, ವಾದ್ರಾ ಭೂವ್ಯವಹಾರಗಳ ಕುರಿತು ತನಿಖೆಗೆ ಈಗಾಗಲೇ ಆದೇಶ ನೀಡಲಾಗಿದೆ ಎಂದಿದ್ದಾರೆ.ಕಾಂಗ್ರೆಸ್ ತುರ್ತುಸ್ಥಿತಿ ಮನಸ್ಥಿತಿ: ಬಿಜೆಪಿ ಖಂಡನೆ

ಐಎಎಸ್ ಅಧಿಕಾರಿಯ ವರ್ಗಾವಣೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಇದು ಕಾಂಗ್ರೆಸ್‌ನ ತುರ್ತುಸ್ಥಿತಿ ಮನಃಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದಿದೆ.ವಾದ್ರಾ ಭೂವ್ಯವಹಾರಗಳ ತನಿಖೆಗೆ ಆದೇಶ ನೀಡಿದ ಅಶೋಕ ಖೇಮ್ಕಾ ಅವರನ್ನು `ರಾತ್ರಿ ಹತ್ತು ಗಂಟೆ ಹೊತ್ತಿಗೆ ವರ್ಗಾವಣೆ ಮಾಡುವ ಅನಿವಾರ್ಯ ಏನಿತ್ತು. ಕಾಂಗ್ರೆಸ್ ಪರಿವಾರದ ಕುಟುಂಬದವರಿಗೆ ತೊಂದರೆ ನೀಡಿದರೆ ಅವರನ್ನು ಬಲಿಪಶು ಮಾಡದೇ ಬಿಡುವುದಿಲ್ಲ~ ಎಂಬ ಸಂದೇಶವನ್ನು ಈ ತರಾತುರಿಯ ವರ್ಗಾವಣೆಯಿಂದ ದೃಢಪಟ್ಟಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ ಜಾವಡೇಕರ್ ಹೇಳಿದರು.ವಾದ್ರಾ ಭೂವ್ಯವಹಾರಗಳನ್ನು ಪಾರದರ್ಶಕವಾಗಿ ತನಿಖೆ ಮಾಡಲು ಒತ್ತಾಯಿಸಿದ ಜಾವಡೇಕರ್ ಈ ವಿಷಯದಲ್ಲಿ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಯಾಕೆ ಮೌನವಹಿಸಿದ್ದಾರೆಂಬುದೇ ತಿಳಿಯುತ್ತಿಲ್ಲ ಎಂದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry