ವಾಮನನ `ತ್ರಿವಿಕ್ರಮ' ಕಾರ್ಯ

ಮಂಗಳವಾರ, ಜೂಲೈ 23, 2019
25 °C
ಸಮಾಜಸೇವೆಗೆ ಅಡ್ಡಿಯಾಗದ ಕುಬ್ಜತನ

ವಾಮನನ `ತ್ರಿವಿಕ್ರಮ' ಕಾರ್ಯ

Published:
Updated:

ಬೆಂಗಳೂರು: ಪೂರ್ಣ ಮೂರಡಿಯೂ ಇರದ ಆ ವ್ಯಕ್ತಿ, ಭರ್ತಿ ಐದೂವರೆ ಅಡಿ ಎತ್ತರದ ಸ್ನೇಹಿತನನ್ನು ಸೋಮವಾರ ವಿಧಾನಸೌಧಕ್ಕೆ ಕೈಹಿಡಿದು ಕರೆ ತಂದಿದ್ದರು. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ವಿಧಾನಸೌಧದ ಮೊಗಸಾಲೆಯಲ್ಲಿ ಅತ್ತಿಂದಿತ್ತ ಎತ್ತರದ ಗೆಳೆಯನನ್ನು ಜತೆಯಲ್ಲಿ ಕರೆದುಕೊಂಡು ಓಡಾಡುತ್ತಿದ್ದ ಅವರು, ಎಲ್ಲರ ಗಮನ ಸೆಳೆದರು.ಯಾದಗಿರಿ ಜಿಲ್ಲೆಯ ಸಾವೂರ ಗ್ರಾಮದಿಂದ ಈ ಜೋಡಿ ಬಂದಿತ್ತು. ಕಾಲಿಗೆ ಎರಡು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ದುಡ್ಡಿಲ್ಲದೆ ಒದ್ದಾಡುತ್ತಿರುವ ಗೆಳೆಯ ಶಿವರಾಜ ಮಡಿವಾಳರ ಅವರ ಕಷ್ಟ ನೋಡಲಾಗದೆ ಅವರನ್ನು ಕುಳ್ಳ ವ್ಯಕ್ತಿ ಸಿದ್ರಾಮರೆಡ್ಡಿ ಸಲ್ಕೆಪುರ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು.`ಶಿವರಾಜ ನಮ್ಮೂರಿನ ಮನುಷ್ಯ. ನನ್ನ ಗೆಳೆಯ. ಕಾಲಿಗೆ ಎರಡು ಆಪರೇಷನ್ ಮಾಡಿಸ್ಕೊಳ್ಳಾಕ ಕೈಯಾಗಿನ ರೊಕ್ಕ ಎಲ್ಲ ಖರ್ಚು  ಮಾಡ್ಯಾನ. ಸಾಲಾನೂ ಮಾಡ್ಕೊಂಡಾನ. ಸಿ.ಎಂ ಅವರನ್ನ ಕಂಡು, ಸಹಾಯ ಕೊಡ್ಸಾಕ ಕರ‌್ಕೊಂಡ್ ಬಂದೀನಿ' ಎಂದು ಸಿದ್ರಾಮರೆಡ್ಡಿ ಹೇಳಿದರು.`ಸಿ.ಎಂ ಅಸೆಂಬ್ಲಿಯೊಳಗ ಇದ್ರಂತ. ಅವ್ರನ್ನ ಭೇಟಿ ಮಾಡಾಕ ಆಗ್ಲಿಲ್ಲ. ಅಧಿಕಾರಿಗಳು ಪರಿಹಾರ ನಿಧಿ ಆಫೀಸಿಗೆ ಕರ‌್ಕೊಂಡು ಹೋದ್ರು. ಅರ್ಜಿ ಕೊಟ್ರು. ಕೆಲವೊಂದು ಕಾಗದ-ಪತ್ರ ಕೇಳ್ಯಾರ. ಮತ್ ತಗೊಂಡು ಬರ್ತೀವಿ' ಎಂದು ತಿಳಿಸಿದರು. `ಹಿಂದ್ಕ ನೌಕರಿಗೆ ಭಾಳ ಸಲ ಅಡ್ಡಾಡಿದ್ದೆ. ಅದ್ಕ ವಿಧಾನಸೌಧ ಗೊತ್ತೈತಿ. ರಾಜಕೀಯದವ್ರ ಗೊತ್ತದಾರ' ಎಂದು ಹೇಳಿದರು.ಈ ಕುಳ್ಳ ವ್ಯಕ್ತಿ ಮೆರೆದ ಮಾನವೀಯತೆಗೆ ವಿಧಾನಸೌಧದ ಅಧಿಕಾರಿಗಳೂ ಮಾರುಹೋದರು. ವಿಧಾನಸೌಧದ ಒಳಗೆ ಕರೆದುಕೊಂಡು ಹೋದರು. ಬೇಕಾದ ನೆರವನ್ನು ಫಟಾಫಟ್ ಅಂತ ಮಾಡಿಕೊಟ್ಟರು. ಪರಿಹಾರ ಧನವನ್ನು ಪಡೆಯುವ ಮಾರ್ಗ ವಿವರಿಸಿದರು. ಅರ್ಜಿ ಜತೆಗೆ ಬೇಕಾದ ಪ್ರಮಾಣ ಪತ್ರಗಳ ಪಟ್ಟಿಯನ್ನು ಬರೆದುಕೊಟ್ಟರು.40 ವರ್ಷದ ಸಿದ್ರಾಮರೆಡ್ಡಿ ಅವರಿಗೆ ಮದುವೆಯೂ ಆಗಿದೆ. ಮಗ ಸಹ ಇದ್ದಾನೆ. ಹೊಟ್ಟೆಪಾಡಿಗಾಗಿ ಎಲ್‌ಐಸಿ ಏಜೆಂಟ್ ಆಗಿದ್ದಾರೆ. ತಮ್ಮ ಊರಿನವರಿಗೆ ಏನಾದರೂ ತೊಂದರೆಯಾದರೆ ಸಾಧ್ಯವಾದ ಸಹಾಯ ಮಾಡುತ್ತಾರೆ. ತಮ್ಮ ಜೇಬಿನಿಂದಲೇ ದುಡ್ಡು ಖರ್ಚು ಮಾಡಿಕೊಂಡು ಶಿವರಾಜ ಅವರನ್ನು ದೂರದ ಯಾದಗಿರಿಯಿಂದ ಬೆಂಗಳೂರಿಗೆ ಕರೆ ತಂದಿದ್ದಾರೆ.`ನಮ್ ಶಿವರಾಜಗೆ ಪರಿಹಾರದ ರೊಕ್ಕ ಸಿಗೋದು ಗ್ಯಾರಂಟಿ ಆಗೈತ್ರಿ' ಎಂದು ಅವರು ಖುಷಿಯಿಂದ ಹೇಳಿದರು. `ನಾ ಗಿಡ್ಡ ಆದ್ರ ಏನಾತು? ಕೈಲಾದ ಸಹಾಯ ಮಾಡ್ತೀನಿ. ದೇವ್ರ ಕೊಟ್ಟ ಜೀವ್ನಾನ ಸಾರ್ಥಕ ಮಾಡ್ಕೋಬೇಕು ನೋಡ್ರಿ' ಎಂದು ತಮ್ಮ ಸಮಾಜ ಸೇವೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಬಂದ ಕೆಲಸ ಆಗಲೇ ಅರ್ಧದಷ್ಟು ಆದ ಖುಷಿಯಲ್ಲಿ ಇಬ್ಬರೂ ಸ್ನೇಹಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry