ವಾಮಾಚಾರ ನಿಷೇಧಕ್ಕೆ ಮಸೂದೆ

7

ವಾಮಾಚಾರ ನಿಷೇಧಕ್ಕೆ ಮಸೂದೆ

Published:
Updated:

ಬೆಂಗಳೂರು:ಮೂಢನಂಬಿಕೆ, ವಾಮಾಚಾರ, ನರಬಲಿ ಮುಂತಾದ ಅನಿಷ್ಠ ಪದ್ಧತಿಗಳನ್ನು ನಿಷೇಧಿಸುವ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರವೂ ಮುಂದಾಗಿದೆ.‘ನರಬಲಿ, ಅಮಾನವೀಯ ದುಷ್ಟ ಪದ್ಧತಿಗಳು, ಅಗೋರಿ ಪದ್ಧತಿಗಳು, ಮಾಟ–ಮಂತ್ರ ತಡೆಗಟ್ಟುವ ಹಾಗೂ ನಿರ್ಮೂಲನೆಗೊಳಿಸುವ ಮಸೂದೆ–2013’ ಅನ್ನು ರೂಪಿಸಲಾಗುತ್ತಿದೆ. ಕಾನೂನಿನ ಮೂಲಕ ಅನಿಷ್ಠ ಪದ್ಧತಿಗಳಿಗೆ ಕಡಿವಾಣ ಹಾಕುವುದು ಮಸೂದೆ ಉದ್ದೇಶ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.ಈ ಮಸೂದೆ ಸಂಬಂಧ ರಾಷ್ಟ್ರೀಯ ಕಾನೂನು ಕಾಲೇಜು ಮತ್ತು ಕಾನೂನು ವಿಶ್ವವಿದ್ಯಾಲಯದ ಅಭಿಪ್ರಾಯಗಳನ್ನು ಪಡೆಯಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಗೂ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.ಅನಿಷ್ಠ ಪದ್ಧತಿಗಳು ಮತ್ತು ಮೂಢನಂಬಿಕೆಗಳ ಮೂಲಕ ಅಮಾಯಕರ ಶೋಷಣೆ ನಡೆಯುತ್ತಿದೆ.  ದೆವ್ವ ಬಿಡಿಸಲು ದೇಹ ದಂಡಿಸುವುದು, ಪಾದರಕ್ಷೆಯನ್ನು ನೀರಲ್ಲಿ ಅದ್ದಿ ಕುಡಿಸುವುದು, ಛಾವಣಿಗೆ ನೇತು ಹಾಕುವುದು, ಕಾದ ಕಬ್ಬಿಣ ಚುಚ್ಚುವುದು ಮುಂತಾದ ಆಚರಣೆ ಗಳನ್ನು ಪವಾಡ ಎಂದು ನಂಬಿಸಿ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿವೆ.ನಿಧಿಗಾಗಿ ನರಬಲಿ ನೀಡುವುದು ಮತ್ತು ಹಳೇ ದೇವಸ್ಥಾನ ಹಾಗೂ ಐತಿಹಾಸಿಕ ಕೋಟೆಗಳ ಆವರಣದಲ್ಲಿ ಅಗೆಯುವ ಪ್ರಸಂಗಗಳು ಸಹ ನಡೆಯುತ್ತಿವೆ. ಬಾನಾಮತಿ, ಪುನರ್ಜನ್ಮದ ಬಗ್ಗೆಯೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗು ತ್ತಿದೆ. ಈ ರೀತಿಯ ಎಲ್ಲ ವಿಷಯಗಳ ಬಗ್ಗೆ ಪರಿಶೀಲಿಸಿ ಸಮಗ್ರವಾದ ವರದಿ ನೀಡುವಂತೆ ರಾಷ್ಟ್ರೀಯ ಕಾನೂನು ಕಾಲೇಜಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಮಸೂದೆ ಮೂಲಕ ಜ್ಯೋತಿಷಿಗಳಿಗೆ ನಿರ್ಬಂಧ ಹೇರುತ್ತೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಕಾಯ್ದೆ ತಂದಾಗ ನೋಡಿ. ಒಟ್ಟಾರೆ ಇದೊಂದು ಸಮಗ್ರ ಕಾನೂನು. ಮೂಢನಂಬಿಕೆ ಗಳಿಂದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶ. ಈ ವಿಶೇಷ ಕಾನೂನಿನ ಮೂಲಕ ಶೋಷಣೆ ತಡೆಗಟ್ಟಲಾಗು ವುದು’ ಎಂದು ನುಡಿದರು.ಮೂಢನಂಬಿಕೆಗಳ ಕುರಿತು ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದಿರುವ ಕಾನೂನು ಸಹ ಪರಿಶೀಲಿಸ ಲಾಗುವುದು. ಆದರೆ, ಮಹಾರಾಷ್ಟ್ರ ಕ್ಕಿಂತ ವಿಭಿನ್ನವಾಗಿ ಈ ಮಸೂದೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.ವೈಜ್ಞಾನಿಕ ಆಚರಣೆಗಳನ್ನು ಸರ್ಕಾರ ವಿರೋಧಿಸುವುದಿಲ್ಲ. ಆದರೆ, ಶೋಷಣೆಗೆ ಒಳಗಾಗುವ ಪದ್ಧತಿಗಳಿಗೆ ಅವಕಾಶ ನೀಡುವುದಿಲ್ಲ. ಮೂಢನಂಬಿಕೆ, ಅನಿಷ್ಠ ಪದ್ಧತಿಗಳಿಂದ ಮಹಿಳೆಯರನ್ನು ಶೋಷಣೆಗೆ ಒಳಪಡಿಸುವ ದೊಡ್ಡ ಜಾಲವೇ ಇದೆ. ಇಂತಹ ಜಾಲದಲ್ಲಿರುವ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸಬೇಕಾಗಿದೆ. ಅದಕ್ಕಾಗಿಯೇ ಕಾನೂನು ತರುತ್ತಿದ್ದೇವೆ ಎಂದು ಪ್ರತಿಪಾದಿಸಿದರು.ವಜಾ ಇಲ್ಲ: ಸಚಿವ ಸಂತೋಷ್‌ ಲಾಡ್‌ ಅವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಜಯಚಂದ್ರ ತಿಳಿಸಿದರು.ಲಾಡ್‌ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಯಾವುದೇ ದಾಖಲೆಗಳು ಇಲ್ಲ. ಈ ಬಗ್ಗೆ ಸರ್ಕಾರಕ್ಕೆ ಮತ್ತು ಲೋಕಾಯುಕ್ತಕ್ಕೆ ಲಾಡ್‌ ಸ್ಪಷ್ಟನೆ ನೀಡಿದ್ದಾರೆ ಎಂದರು. ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯನ್ನು ಹಿಂದಿನ ಸರ್ಕಾರ ಉನ್ನತ ಸಮಿತಿ ಪರಿಶೀಲನೆಗೆ ವಹಿಸಿತ್ತು. ಈ ಸಮಿತಿಯೂ ವರದಿ ನೀಡಿದೆ. ಈ ರೀತಿಯ ಗಣಿಗಾರಿಕೆ ಕುರಿತು ಎಲ್ಲ ವಿಷಯಗಳ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.ಸಚಿವರ ಪತ್ನಿಗೂ ಜ್ಯೋತಿಷದ ಮೋಡಿ!

‘ಬೆಳಗಿನ ಜಾವ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುವ ಜ್ಯೋತಿಷದ ಕಾರ್ಯಕ್ರಮಗಳನ್ನು ವೀಕ್ಷಿಸದೆ ಯಾವುದೇ ಕೆಲಸಗಳು ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನ ಪತ್ನಿಯೂ ಬೆಳಿಗ್ಗೆ ಟೀ–ಕಾಫಿ ಕೊಡದೆ ಈ ಕಾರ್ಯಕ್ರಮ ವೀಕ್ಷಿಸುತ್ತಾರೆ. ನಾನು ಸಿಟ್ಟಿಗೇಳುವವರೆಗೂ ಕಾಫಿ ಕೊಡುವುದಿಲ್ಲ’ ಎಂದು ಸಚಿವ ಜಯಚಂದ್ರ ತಮಗಾದ ಅನುಭವವನ್ನು ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry