ಸೋಮವಾರ, ಏಪ್ರಿಲ್ 19, 2021
33 °C

ವಾಯುಪಡೆಗೆ ಬೋಯಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಯುಪಡೆಗೆ ಬೋಯಿಂಗ್

ಲಾಂಗ್ ಬೀಚ್ (ಕ್ಯಾಲಿಫೋರ್ನಿಯ) (ಪಿಟಿಐ): ಭಾರತೀಯ ವಾಯುಪಡೆ ವ್ಯೆಹಬಲ ಹೆಚ್ಚಿಸಲಿರುವ ಬೋಯಿಂಗ್ ಸಿ-17 ಸೇನಾ ವಿಮಾನವು  ಪೂರ್ವನಿಗದಿಯಾಗಿದ್ದಂತೆ 2013ರಲ್ಲಿ ಭಾರತಕ್ಕೆ ಪೂರೈಕೆಯಾಗಲಿದೆ.ಮೊದಲ ವಿಮಾನ 2013ರಲ್ಲಿ ಪೂರೈಕೆಯಾಗಿ ಉಳಿದ ಒಂಬತ್ತು ವಿಮಾನಗಳು ಹಂತಹಂತವಾಗಿ 2014ರ ವೇಳೆಗೆ ಸರಬರಾಜಾಗಲಿವೆ.ಎತ್ತರಕ್ಕೇರಿಸಿದ ರೆಕ್ಕೆ, ನಾಲ್ಕು ಎಂಜಿನ್‌ಗಳು, ಸರಂಜಾಮು ತುಂಬಲು ನೆರವಾಗುವ ಹಿಂಭಾಗದ ರ‌್ಯಾಂಪ್ ಇತ್ಯಾದಿಗಳನ್ನು ಒಳಗೊಂಡ ಈ ಆಧುನಿಕ ವಿಮಾನಗಳು ಈಗ ಐಎಎಫ್‌ನಲ್ಲಿರುವ ರಷ್ಯಾ ನಿರ್ಮಿತ ಸರಕು ಸಾಗಣೆ ವಿಮಾನಗಳ ಜಾಗಕ್ಕೆ ಬರಲಿವೆ.ಈ ಸಂಬಂಧ ಇಲ್ಲಿನ ಬೋಯಿಂಗ್ ತಯಾರಿಕಾ ಘಟಕದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ, ಉದ್ದೇಶಿತ ವಿಮಾನದ ಮುಂಭಾಗ, ಮಧ್ಯಭಾಗ, ಹಿಂಭಾಗ ಹಾಗೂ ರೆಕ್ಕೆಗಳನ್ನು ಜೋಡಿಸಲಾಯಿತು.ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ಕಾನ್ಸುಲ್ ಜನರಲ್ ಎನ್.ಪಾರ್ಥಸಾರಥಿ,  ಕಾನ್ಸುಲೇಟ್‌ನ ಇತರ ಅಧಿಕಾರಿಗಳು ಮತ್ತು ಐಎಎಫ್ ಅಧಿಕಾರಿಗಳು, ವಿಮಾನದ ಪ್ರತ್ಯೇಕ ಭಾಗಗಳನ್ನು ಸಾಂಕೇತಿಕವಾಗಿ ಜೋಡಿಸುವ ಮೂಲಕ ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾದರು.ಬೋಯಿಂಗ್‌ನ ಅತ್ಯಂತ ದೊಡ್ಡ ಗ್ರಾಹಕ ರಾಷ್ಟ್ರವಾಗಿರುವ ಭಾರತವು ಈ ಮಾದರಿಯ 10 ವಿಮಾನಗಳ ಖರೀದಿಗಾಗಿ ಕಳೆದ ವರ್ಷ 410 ಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು.ಸುಮಾರು 75,000 ಕೆ.ಜಿ. (1,64,900 ಪೌಂಡ್) ತೂಕವನ್ನು ಹೊತ್ತೊಯ್ಯಬಲ್ಲ ಈ ವಿಮಾನವು 7000 ಅಡಿ ಉದ್ದದ ವಾಯುನೆಲೆಯ ರನ್‌ವೇಯಿಂದ ಮೇಲಕ್ಕೇರಬಲ್ಲದು. 3000 ಅಡಿ ಅಥವಾ ಅದಕ್ಕಿಂತ ಚಿಕ್ಕದಾದ ವಾಯುನೆಲೆಯ ರನ್‌ವೇಯಲ್ಲಿ ಇಳಿಯಬಲ್ಲದು.ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಸೇರಿದಂತೆ 18 ರಾಷ್ಟ್ರಗಳ ಸೇನಾ ಪಡೆಯ ಭಾಗವಾಗಿರುವ ಈ ವಿಮಾನವು ಒಮ್ಮೆ ಇಂಧನ ತುಂಬಿದರೆ 2400 ನಾಟಿಕಲ್ ಮೈಲುಗಳಷ್ಟು (ಸುಮಾರು 4500 ಮೈಲುಗಳು) ದೂರ ಹಾರಬಲ್ಲದು. ತೈಲ ಬರಿದಾದಾಗ ಆಗಸದಲ್ಲೇ ಇಂಧನ ತುಂಬಬಹುದಾದ ವ್ಯವಸ್ಥೆಯೂ ಇದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.