ವಾಯುಪಡೆ ಆಸ್ಪತ್ರೆ ಸೇವೆ ಪ್ರಶಂಸನೀಯ

7

ವಾಯುಪಡೆ ಆಸ್ಪತ್ರೆ ಸೇವೆ ಪ್ರಶಂಸನೀಯ

Published:
Updated:

ಬೆಂಗಳೂರು: ಭಾರತೀಯ ವಾಯುಪಡೆಯ ಆಸ್ಪತ್ರೆ ತನ್ನ ಸಿಬ್ಬಂದಿಗೆ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.ಭಾರತೀಯ ವಾಯುಪಡೆಯ 80ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಾಯುಪಡೆ ಕಮಾಂಡ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಅವರು ಮಾತನಾಡಿದರು.ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡುವಲ್ಲಿ ವಾಯುಪಡೆ ಸಿಬ್ಬಂದಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾರೆ. ಇಂಥವರ ಕುಟುಂಬಗಳಿಗೆ ಮಾತ್ರವಲ್ಲದೆ, ಹುತಾತ್ಮರಾದ ಯೋಧರ ಕುಟುಂಬದವರಿಗೂ ಆಸ್ಪತ್ರೆ ಉತ್ತಮ ಸೇವೆ ಒದಗಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮದ ನಂತರ ರೋಗಿಗಳನ್ನು ಭೇಟಿ ಮಾಡಿ ಕ್ಷೇಮ ವಿಚಾರಿಸಿದರು. ಭಾರದ್ವಾಜ್ ಅವರ ಪತ್ನಿ ಪ್ರಫುಲ್ಲತಾ ಅವರು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿ ಹಣ್ಣು ಮತ್ತು ಸಿಹಿ ವಿತರಿಸಿದರು. ಏರ್‌ಮಾರ್ಷಲ್, ತರಬೇತಿ ಕಮಾಂಡ್‌ನ ಮುಖ್ಯಸ್ಥ ರಾಜಿಂದರ್ ಸಿಂಗ್, ಉಪ ಏರ್‌ಮಾರ್ಷಲ್, ಆಸ್ಪತ್ರೆಯ ಪ್ರಾಂಶುಪಾಲ ರಾಜವೀರ್ ಬಲ್ವಾರ್ ಮತ್ತಿತರರು ಉಪಸ್ಥಿತರಿದ್ದರು.

ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಸಾಧ್ಯ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮುಖಂಡರು ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.ವಾಯುಪಡೆಯ ಕಮಾಂಡ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಕಾವೇರಿ ವಿವಾದವನ್ನು ಕೆಲವರು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ತಪ್ಪು. ವಾಸ್ತವದ ಆಧಾರದ ಮೇಲೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದೇನೆ~ ಎಂದರು.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ವಿರುದ್ಧ ಸಮಾಜಿಕ ಕಾರ್ಯಕರ್ತ ಅರವಿಂದ ಕೇಜ್ರಿವಾಲ್, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಮತ್ತಿತರರು ಮಾಡಿರುವ ಆರೋಪ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಭಾರದ್ವಾಜ್, `ನೆಹರೂ ಕುಟುಂಬದ ವಿರುದ್ಧ ಹಿಂದೆಯೂ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಆದರೆ ಯಾವುದೂ ಸಾಬೀತಾಗಿಲ್ಲ~ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry