ಸೋಮವಾರ, ಮೇ 16, 2022
29 °C

`ವಾರದಲ್ಲಿ ಪೌರಸಂಸ್ಥೆ ಮೀಸಲಾತಿ ಪ್ರಕಟ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಅವರು ಬುಧವಾರ ವಿಧಾನಸಭೆಗೆ ತಿಳಿಸಿದರು.ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ನಾಯಕ ಜಗದೀಶ ಶೆಟ್ಟರ್, `ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ನಾಲ್ಕು ತಿಂಗಳಾಗಿದೆ. ಈವರೆಗೂ ಏಕೆ ಮೀಸಲಾತಿ ನಿಗದಿ ಮಾಡಿಲ್ಲ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ವ್ಯವಸ್ಥೆ ಕುಸಿದುಬಿದ್ದಿದೆ. ತಕ್ಷಣವೇ ಮೀಸಲಾತಿ ಪ್ರಕಟಿಸಲು ಏನು ಅಡ್ಡಿ ಇದೆ' ಎಂದು ಪ್ರಶ್ನಿಸಿದರು.ಮೀಸಲಾತಿ ಪ್ರಕಟಣೆಗೆ ಇರುವ ತಾಂತ್ರಿಕ ತೊಂದರೆಗಳ ಕುರಿತು ವಿವರಿಸಲು ಖಮರುಲ್ ಇಸ್ಲಾಂ ಪ್ರಯತ್ನಿಸಿದರು. ಆಗ ಬಿಜೆಪಿಯ ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಕೆಜೆಪಿಯ ಬಿ.ಎಸ್.ಯಡಿಯೂರಪ್ಪ, ಗುರುಪಾದಪ್ಪ ನಾಗಮಾರಪಳ್ಳಿ ಮತ್ತಿತರರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ನೇರವಾದ ಉತ್ತರ ನೀಡುವಂತೆ ಪಟ್ಟು ಹಿಡಿದರು.`ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಗಡೆ ಮಾತನಾಡಿದಂತೆ ಕೆಲಸ ಮಾಡುತ್ತಿಲ್ಲ. ಪರಿಶಿಷ್ಟರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ನ್ಯಾಯ ದೊರಕಿಸುವುದಾಗಿ ಅವರು ಹೇಳುತ್ತಿದ್ದಾರೆ. ಆದರೆ, ಮೀಸಲಾತಿ ಪ್ರಕಟಿಸದೇ ಸುಮ್ಮನೆ ಕುಳಿತಿದ್ದಾರೆ. ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ' ಎಂದು ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.ನಂತರ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಉತ್ತರ ನೀಡಲು ಮುಂದಾದರು. ಆಗಲೂ ಪ್ರತಿಪಕ್ಷಗಳ ಸದಸ್ಯರು ಅಡ್ಡಿಪಡಿಸಿದರು.

ಬಳಿಕ ಉತ್ತರಿಸಿದ ಖಮರುಲ್, `ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಸರದಿ ಪ್ರಕಾರ ನಿರ್ಧಾರ ಆಗುತ್ತದೆ. ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ಮೀಸಲಾತಿ ವಿವಾದ ಹೈಕೋರ್ಟ್‌ನಲ್ಲಿದೆ. ಆದ್ದರಿಂದ ರಾಜ್ಯದ ಯಾವುದೇ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹುದ್ದೆಗೆ ಮೀಸಲಾತಿ ಪ್ರಕಟಿಸಲು ಸಾಧ್ಯವಿಲ್ಲ. ಉಳಿದ ನಗರ ಸ್ಥಳೀಯ ಸಂಸ್ಥೆಗಳ ಮೀಸಲಾತಿಯನ್ನು ಮುಂದಿನ ವಾರ ಪ್ರಕಟಿಸಲಾಗುವುದು' ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.