ವಾರದಲ್ಲಿ ಸಂಪುಟ ವಿಸ್ತರಣೆ: ಸಿಎಂ

7

ವಾರದಲ್ಲಿ ಸಂಪುಟ ವಿಸ್ತರಣೆ: ಸಿಎಂ

Published:
Updated:

ನವದೆಹಲಿ: `ಬಹು ಸಮಯದಿಂದ ನಿರೀಕ್ಷಿಸಿರುವ ಸಂಪುಟ ಪುನರ‌್ರಚನೆ ತುರ್ತಾಗಿ ಆಗಬೇಕಾದ ಕೆಲಸವಾಗಿದ್ದು, ಇನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಅತೀ ಶೀಘ್ರದಲ್ಲಿ ಖಾಲಿ ಇರುವ ಎಲ್ಲ ಸಚಿವ ಸ್ಥಾನಗಳನ್ನು ತುಂಬಲಾಗುವುದು. ಕೆಲವು ಸಚಿವರ ಮೇಲೆ ದಂಡ ಪ್ರಯೋಗ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಸದಾನಂದಗೌಡ ಶನಿವಾರ ತಿಳಿಸಿದರು.ಎನ್‌ಸಿಟಿಸಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ಸಂಪುಟ ವಿಸ್ತರಣೆ ಜತೆಗೆ ಪುನರ‌್ರಚನೆಯೂ ಆಗಲಿದೆ. ಈ ಸಂಬಂಧ ಪಕ್ಷದ ಮುಖಂಡರು ಹಾಗೂ ಶಾಸಕರ ಜತೆ ಸಮಾಲೋಚನೆ ನಡೆಸಲು ಒಂದೆರಡು ದಿನಗಳಲ್ಲಿ ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಬರುತ್ತಿದ್ದಾರೆ. ಪಕ್ಷದ ಅಧ್ಯಕ್ಷ ನಿತಿನ್  ಗಡ್ಕರಿ ಪ್ರಧಾನ್ ಅವರನ್ನು ರಾಜಧಾನಿಗೆ ಕಳುಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.`ನಾನು ಗಡ್ಕರಿ ಅವರ ಜತೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದೇನೆ. ಸಂಪುಟ ವಿಸ್ತರಣೆ ಮಾಡಬೇಕಾದ ಅನಿವಾರ್ಯತೆ ಕುರಿತು ವಿವರಿಸಿದ್ದೇನೆ. ವಿವಿಧ ರಾಜ್ಯಗಳಲ್ಲಿ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷರು 8ರಂದು ದೆಹಲಿಗೆ ಹಿಂತಿರುಗುತ್ತಿದ್ದಾರೆ. ಅನಂತರ ಅವರಿಗೆ ಧರ್ಮೇಂದ್ರ ಪ್ರಧಾನ್ ವರದಿ ಸಲ್ಲಿಸಲಿದ್ದಾರೆ. ಆ ಬಳಿಕ ನಾನು ಗಡ್ಕರಿ ಅವರನ್ನು ಕಂಡು ಸಂಪುಟ ವಿಸ್ತರಣೆ- ಪುನರ‌್ರಚನೆಗೆ ಒಪ್ಪಿಗೆ ಪಡೆಯುತ್ತೇನೆ~ ಎಂದು ವಿವರಿಸಿದರು.`ನಮಗೆ ಉಳಿದಿರುವುದು ಒಂದು ವರ್ಷ ಮಾತ್ರ. ಉಳಿದಿರುವ ಸ್ವಲ್ಪ ಸಮಯದಲ್ಲಿ ಪ್ರಾಮಾಣಿಕವಾಗಿ ಏನಾದರೂ ಕೆಲಸ ಮಾಡಬೇಕಿದೆ. ಇದುವರೆಗೆ ಬೇಕಾದಷ್ಟು ಕೆಲಸ ಮಾಡಿದ್ದೇವೆ. ಆದರೆ, ಈ ಕೆಲಸ ತೃಪ್ತಿ ತಂದಿಲ್ಲ. ಹೀಗಾಗಿ ಖಾತೆಗಳನ್ನು ಇಟ್ಟುಕೊಂಡು ಕಾಯಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಮುಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ತೀರ್ಪು ಬರುವವರೆಗೆ ಕಾಯದೆ ಸಂಪುಟ ವಿಸ್ತರಣೆ ಮಾಡಲಾಗುವುದು~ ಎಂದು ಸದಾನಂದಗೌಡರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ನನ್ನ ಬಳಿ 20 ಖಾತೆಗಳಿವೆ. ಇಷ್ಟೊಂದು ಖಾತೆಗಳನ್ನು ಇಟ್ಟುಕೊಂಡು ಕೆಲಸ ಮಾಡುವುದು ಹೇಗೆ. ಕನಿಷ್ಠ ಪಕ್ಷ ಕಡತಗಳಿಗೆ ಸಹಿ ಹಾಕಲಾದರೂ ಸಮಯ ಬೇಡವೇ. ಈ ಕಾರಣಕ್ಕೆ ಅತೀ ತುರ್ತಾಗಿ ಹೊರೆ ಇಳಿಸಬೇಕಾಗಿದೆ. ಸಂಪುಟದಲ್ಲಿ 11 ಸ್ಥಾನಗಳು ಖಾಲಿ ಇವೆ. ಇನ್ನು ಖಾಲಿ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ~ ಎಂದು ಮುಖ್ಯಮಂತ್ರಿ ಸದಾನಂದಗೌಡರು ಖಾತೆಗಳ ಹೊರೆಯಿಂದಾಗಿರುವ ಸಮಸ್ಯೆಯನ್ನು ಬಿಡಿಸಿಟ್ಟರು.`ಸಚಿವರನ್ನು ಕೈಬಿಡಲು ಬಳಸುವ ಮಾನದಂಡ ಯಾವುದು?~ ಎಂಬ ಮತ್ತೊಂದು ಪ್ರಶ್ನೆಗೆ, `ಯಾವ ಮಾನದಂಡ ಬಳಸಬೇಕೆಂದು ಇನ್ನೂ ನಿರ್ಧರಿಸಿಲ್ಲ. ಆದರೆ, ದಂಡ ಪ್ರಯೋಗ  ನಿಶ್ಚಿತ~ ಎಂದು ಹೇಳಿ ಸದಾನಂದಗೌಡರು ನಕ್ಕರು.ಸಚಿವ ಸಂಪುಟದ ಪುನರ‌್ರಚನೆ ಹಿಂದೆಯೇ ನಿಗಮ- ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕವೂ ಆಗಲಿದೆ. ಒಟ್ಟು 36 ನಿಗಮ- ಮಂಡಳಿಗಳ ಅಧ್ಯಕ್ಷರ ಸ್ಥಾನ ಖಾಲಿ ಉಳಿದಿವೆ ಎಂದು ಮುಖ್ಯಮಂತ್ರಿ ಹೇಳಿದರು.ರಾಜ್ಯದ ಬರಗಾಲ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ `ಕೇಂದ್ರ ತಂಡ ರಾಜ್ಯದಲ್ಲಿ ಪ್ರವಾಸ ಮಾಡಿ ವರದಿ ಕೊಟ್ಟ ತಕ್ಷಣ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಲಿದೆ~ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry