ವಾರದಲ್ಲೇ ತಿಂಗಳ ಮಳೆ: ರಾಜಧಾನಿಯಲ್ಲಿ ಕರಾವಳಿ ಹವೆ

7

ವಾರದಲ್ಲೇ ತಿಂಗಳ ಮಳೆ: ರಾಜಧಾನಿಯಲ್ಲಿ ಕರಾವಳಿ ಹವೆ

Published:
Updated:

ಬೆಂಗಳೂರು: ರಾಜ್ಯದ ರಾಜಧಾನಿಗೆ ಕರಾವಳಿಯ ಹವೆ ಬೀಸಿದೆ. ಕಳೆದ  ಹತ್ತು ದಿನದಿಂದ   ಸುರಿಯುತ್ತಿರುವ ಮಳೆಯೇ ಇದಕ್ಕೆ ಸಾಕ್ಷಿ.

ಸಾಮಾನ್ಯವಾಗಿ ತಿಂಗಳಿಗೆ ಇಷ್ಟು ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಆದರೆ, ಸೆಪ್ಟೆಂಬರ್ ತಿಂಗಳ ಪೂರ್ತಿ ಅಂದಾಜಿಸಿದ್ದ ವಾಡಿಕೆ ಮಳೆಯ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ಮಳೆ ಮೊದಲ ಹತ್ತು  ದಿನಗಳಲ್ಲಿಯೇ ಆಗಿದೆ.‘ನಗರದಲ್ಲಿ ಸೆಪ್ಟೆಂಬರ್ ತಿಂಗಳೊಂದ­ರಲ್ಲೇ ಸುಮಾರು 200.2 ಮಿ.ಮೀ ವಾಡಿಕೆ ಮಳೆಯಾಗಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಈ ಹತ್ತುದಿನದಲ್ಲಿ ( ಸೆ. 2 ರಿಂದ 12) 200.50 ಮಿ.ಮೀ ಮಳೆ ಸುರಿದಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಮಾತ್ರ ತಿಂಗಳೆಲ್ಲಾ ಸುರಿಯಬೇಕಾಗಿರುವ ಮಳೆ ಒಂದೆರಡು ದಿನಗಳಲ್ಲಿ ಸುರಿದ ನಿದರ್ಶನವಿದೆ.ಈ ಬಾರಿ ನಗರದಲ್ಲಿ ಕರಾವಳಿಯ ಮಳೆಯ ಲಕ್ಷಣಗಳು ಕಂಡುಬಂದಿರು ವುದು ವಿಶೇಷ’  ಎಂದು ಬೆಂಗಳೂರು ಕೃಷಿ ವಿವಿಯ ಕೃಷಿ ಹವಾಮಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಬಿ.ರಾಜೇಗೌಡ ‘ಪ್ರಜಾವಾಣಿ’ ಗೆ ಮಾಹಿತಿ  ನೀಡಿದರು.‘ಒಂದು ತಿಂಗಳಲ್ಲಿ ಬರುವ ಮಳೆಯೆಲ್ಲಾ ಒಂದು ವಾರದಲ್ಲೇ ಸುರಿದಿದೆ. ಈ ರೀತಿ ಕೇವಲ ಬೆಂಗಳೂರು ನಗರ ಜಿಲ್ಲೆ ಮಾತ್ರವಲ್ಲದೇ, ಮಂಡ್ಯ,  ಮೈಸೂರು, ಕೋಲಾರ, ಚಿಕ್ಕಬಳ್ಳಾ­ಪುರ, ದಾವಣಗೆರೆ ಜಿಲ್ಲೆಗಳಲ್ಲಿ  ಮಳೆ­ಯಾಗಿದೆ. ವಾಡಿಕೆ ಮಳೆಗಿಂತ ಶೇ 25ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದರೆ ಅತಿ ಹೆಚ್ಚಿನ ಮಳೆ ಎಂದು ಪರಿಗಣಿಸಲಾಗುತ್ತದೆ’ ಎಂದು ಹೇಳಿದರು.‘ಮುಂದಿನ ಮೂರು ದಿನಗಳಲ್ಲಿ ನಗರ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ  ಉತ್ತಮ ಪ್ರಮಾಣದಲ್ಲಿ ನೈರುತ್ಯ ಮುಂಗಾರು ಸುರಿಯಲಿದ್ದು, ಅಕ್ಟೋಬರ್ 2ನೇ ವಾರದ ತನಕ ಮುಂಗಾರು ಮುಂದುವರಿಯಲಿದೆ.  ನಂತರ ಹಿಂಗಾರು ಮಳೆಯಾಗಿ ಪರಿ­ವರ್ತ­ನೆಯಾಗುತ್ತದೆ’ ಎಂದು ಹೇಳಿದರು.‘ಬೊಮ್ಮನಹಳ್ಳಿ, ಗೊಟ್ಟಿಗೆರೆ, ಮಹದೇವಪುರ, ವರ್ತೂರು ಸೇರಿದಂತೆ ನಗರದ ಹೊರವಲಯ­ದಲ್ಲಿ ನಿಗದಿತ ಸಂದರ್ಭದಲ್ಲಿ ಬಿತ್ತನೆ ಮಾಡದೇ ಇರುವ ರೈತರು ಈಗ ಸುರಿಯುತ್ತಿರುವ ಮಳೆಯನ್ನು ಉಪಯೋಗಿಸಿಕೊಂಡು ರಾಗಿ ನಾಟಿ ಮಾಡಬಹುದು. ಇದಲ್ಲದೇ ಹಲಸಂದೆ, ಹುರುಳಿ­ಯಂತಹ ಪರ್ಯಾಯ ಬೆಳೆಗಳನ್ನು ಕೂಡ ಬೆಳೆಯಬಹುದು. ಆದರೆ ನಗರದಂತಹ ಕಾಂಕ್ರೀಟ್ ಕಾಡಿನಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲದೇ ಇರುವುದರಿಂದ ‘ಮಳೆ ನೀರು ಸಂಗ್ರಹ’ಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.ಮಳೆ ನೀರು ಸಂಗ್ರಹ ಅಪೂರ್ಣ!:  ಮಳೆ  ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಜಲಮಂಡಳಿಯು ಗಡವು ವಿಧಿಸುತ್ತಲೇ ಇದೆ. ಆದರೆ, ಶೇ 70ರಷ್ಟು ಮಾತ್ರ   ಯಶಸ್ಸು ಸಾಧ್ಯವಾಗಿದೆ.ನಗರದಾದ್ಯಂತ ಇರುವ 47 ಸಾವಿರ 60X40 ನಿವೇಶನಗಳಲ್ಲಿ ಈ ಪದ್ಧತಿ ಅಳವಡಿಕೆಯಾಗಿದೆ. ಇನ್ನೂ 12 ಸಾವಿರಕ್ಕೂ ಅಧಿಕ ನಿವೇಶನಗಳಲ್ಲಿ ಪದ್ಧತಿ ಅಳವಡಿಕೆಯಾಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry