ವಾರದೊಳಗೆ ಅನಧಿಕೃತ ಹಾಸ್ಟೆಲ್‌ಗಳ ರದ್ದು: ಪಾಲಿಕೆ ಎಚ್ಚರಿಕೆ

ಬುಧವಾರ, ಜೂಲೈ 17, 2019
26 °C

ವಾರದೊಳಗೆ ಅನಧಿಕೃತ ಹಾಸ್ಟೆಲ್‌ಗಳ ರದ್ದು: ಪಾಲಿಕೆ ಎಚ್ಚರಿಕೆ

Published:
Updated:

ಮಂಗಳೂರು: ಮಲೇರಿಯ ಮತ್ತು ಡೆಂಗೆ ಜ್ವರಗಳು ನಗರದಲ್ಲಿ ವ್ಯಾಪಕವಾಗಿದ್ದು, ಮಹಾನಗರ ಪಾಲಿಕೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಕಳವಳ ವ್ಯಕ್ತಪಡಿಸಿದರು. ವಸತಿ ನಿವೇಶನಗಳಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳನ್ನು ರದ್ದುಪಡಿಸುವ ಕಾರ್ಯ ವಾರದೊಳಗೆ ಆರಂಭವಾಗಲಿದೆ ಎಂದು ಎಚ್ಚರಿಸಲಾಗಿದೆ.ಶನಿವಾರ ಜಿಲ್ಲಾ ಪಂಚಾಯಿತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಕಳವಳಕ್ಕೆ ಸ್ಪಂದಿಸಿದ ಆಯುಕ್ತ ಹರೀಶ್ ಕುಮಾರ್, ವಸತಿ ನಿವೇಶನಗಳ ಪರವಾನಗಿ ಪಡೆದು ಅಲ್ಲಿ ವಿದ್ಯಾರ್ಥಿ ನಿಲಯಗಳನ್ನು ನಡೆಸುವುದು ನಿಯಮ ಪ್ರಕಾರ ಅಕ್ರಮವಾಗುತ್ತದೆ.

 

ಇಂತಹ ಕಟ್ಟಡಗಳಲ್ಲಿ 40-50 ಮಂದಿ ಇರುತ್ತಾರೆ. ಇವರಿಂದ ನೈರ್ಮಲ್ಯದಂತಹ ಸಮಸ್ಯೆಗಳು ತೀವ್ರವಾಗುತ್ತದೆ. ಮಲೇರಿಯ, ಡೆಂಗೆಯಂತಹ ಕಾಯಿಲೆಗಳು ಹರಡುವುದಕ್ಕೆ ಇದೂ ಒಂದು ಕಾರಣ. ಹೀಗಾಗಿ ಅನಧಿಕೃತ ವಿದ್ಯಾರ್ಥಿ ನಿಲಯಗಳನ್ನು ಮುಚ್ಚಿಸುವ ಕಾರ್ಯ ವಾರದೊಳಗೆ ಆರಂಭವಾಗಲಿದೆ ಎಂದರು.ಮಲೇರಿಯ, ಡೆಂಗೆ ನಿಯಂತ್ರಣಕ್ಕೆ ಸಿಬ್ಬಂದಿಯ ಕೊರತೆ ತೀವ್ರವಾಗಿದೆ. ಹೀಗಾಗಿ ಹೊರಗಿನ 70ಕ್ಕೂ ಅಧಿಕ ಮಂದಿಯ ಸೇವೆ ಪಡೆದು ಜ್ವರ ನಿಯಂತ್ರಣಕ್ಕೆ ಸೂಕ್ತ ಜಾಗೃತಿ ಕಾರ್ಯಕ್ರಮ ಶೀಘ್ರ ಆರಂಭವಾಗಲಿದೆ. ಕಟ್ಟಡ ಕಾರ್ಮಿಕರು ನೆಲೆಸಿರುವ ಸ್ಥಳಗಳ ಸುತ್ತಮುತ್ತ ಶುಚಿತ್ವ ಕಾಪಾಡುವುದಕ್ಕೆ ವಿಶೇಷ ಗಮನ ಹರಿಸಲಾಗುವುದು ಎಂದರು.ಜಂಟಿ ಆಯುಕ್ತ ಶ್ರೀಕಾಂತ್ ರಾವ್ ಪೂರಕ ಮಾಹಿತಿ ನೀಡಿ, ಅಕ್ರಮ ವಿದ್ಯಾರ್ಥಿ ನಿಲಯಗಳ ವಿವರ ಪಾಲಿಕೆಯ ಬಳಿ ಇದೆ. ಸಾಂಕ್ರಾಮಿಕ ರೋಗಳಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಅವರು ನೀಡಿದ ಸೂಚನೆಯಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಸುಧೀರ್ ಶೆಟ್ಟಿ ಅವರು ವಿಷಯ ಪ್ರಸ್ತಾಪಿಸಿ, ಕಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಭಾರಿ ಸಮಸ್ಯೆ ಎದುರಾಗಿದ್ದು, ಅದರಲ್ಲಿ ಸಮೀಪದ ಅನಧಿಕೃತ ವಿದ್ಯಾರ್ಥಿನಿಲಯದ ತ್ಯಾಜ್ಯ ನೀರು ಸಹ ಸೇರಿಕೊಂಡು ಸುತ್ತಮುತ್ತಲಿನ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದೆ. ಈ ಹಾಸ್ಟೆಲ್‌ನಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಗದ್ದೆಗಳಿಗೆ ಮಣ್ಣು ತುಂಬಿಸಿ ಕಟ್ಟಡಗಳನ್ನು ಕಟ್ಟಿಸುವವರು ನೀರು ಹರಿದುಹೋಗಲು ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಭೂ ಪರಿವರ್ತನೆ ಮಾಡಿಕೊಡಬಾರದು ಎಂದರು.ಕಸದ ಸಮಸ್ಯೆ: ನಗರದಲ್ಲಿ ಮಲೇರಿಯ, ಡೆಂಗೆ ಜ್ವರ ಹರಡಲು ಕಸದ ಸೂಕ್ತ ನಿರ್ವಹಣೆ ಇಲ್ಲದಿರುವುದೂ ಕಾರಣ ಎಂದು ಜೇಮ್ಸ ಡಿಸೋಜ ದೂರಿದರು. ಮರಿಯಮ್ಮ ಥಾಮಸ್ ಅವರು ನಗರದಲ್ಲಿ ಎಷ್ಟು ಮಂದಿ ಈ ಜ್ವರದಿಂದ ಬಳಲುತ್ತಿದ್ದಾರೆ ಎಂಬ ಲೆಕ್ಕ ಕೇಳಿದರು.ನಗರದಲ್ಲಿ ಮೇ ತಿಂಗಳಿಂದೀಚೆಗೆ 550 ಮಲೇರಿಯ ಮತ್ತು 31 ಡೆಂಗೆ ಪ್ರಕರಣಗಳು ದಾಖಲಾಗಿವೆ, ಈ ಪೈಕಿ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಅಧಿಕಾರಿ ಡಾ.ಸುದರ್ಶನ್ ತಿಳಿಸಿದರು.

ಕಸ ವಿಲೇವಾರಿಗೆ ಮನೆ ಮನೆ ಕಸ ಸಂಗ್ರಹವೇ ಪರಿಹಾರ. ಈ ನಿಟ್ಟಿನಲ್ಲಿ 3ನೇ ಹಂತದ ಪ್ಯಾಕೇಜ್‌ಗೆ ಸರ್ಕಾರ ಶೀಘ್ರ ಅನುಮತಿ ನೀಡುವ ವಿಶ್ವಾಸ ಇದೆ. ಜಿಪಿಎಸ್ ಅಳವಡಿಕೆಯಿಂದ ಕಸದ ವಿಲೇವಾರಿಯ ಬಗ್ಗೆಯೂ ಮಾಹಿತಿ ಲಭಿಸಲಿದೆ ಎಂದು ಆಯುಕ್ತರು ತಿಳಿಸಿದರು.ಪಿ.ಆರ್.ಕಾರ್ಡ್‌ಗೆ ವಿಶೇಷ ಸಭೆ: ನಗರ ಮಾಪನ ಯೋಜನೆ ಹಿನ್ನೆಲೆಯಲ್ಲಿ ನಗರದಲ್ಲಿ ಕಳೆದ ಎರಡು ತಿಂಗಳಿಂದ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಈ ಬಗ್ಗೆ ವಿವರವಾಗಿ ಚರ್ಚಿಸುವುದಕ್ಕೆ ಪಾಲಿಕೆಯ ವಿಶೇಷ ಸಭೆ ಕರೆಯಬೇಕೆಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.ಸರ್ವೆ ಇಲಾಖೆಯ ಉಪನಿರ್ದೇಶಕ ಬಿ.ಕೆ.ಕುಸುಮಾಧರ್ ಅವರು ಯೋಜನೆಯ ಮಾಹಿತಿ ನೀಡಿದಾಗ ಶಂಕರ್ ಭಟ್, ದೀಪಕ್ ಪೂಜಾರಿ, ಮರಿಯಮ್ಮ ಥಾಮಸ್, ಶಶಿಧರ ಹೆಗ್ಡೆ ಮತ್ತಿತರರು ಆಕ್ಷೇಪ ಎತ್ತಿ, ಈ ಹಿಂದೆ ನಿರ್ಮಲ ನಗರ, ಸಿಟಿ ಸರ್ವೆ ಕಾರ್ಯಗಳು ಅರ್ಧಕ್ಕೇ ಕೊನೆಗೊಂಡಿದ್ದವು.

 

ಈಗಲೂ ಅದೇ ಸ್ಥಿತಿ ಒದಗಿದರೆ ಕಷ್ಟ. ಮೇಲಾಗಿ ಪಿ.ಆರ್.ಕಾರ್ಡ್‌ನಲ್ಲಿ ಹಲವು ನ್ಯೂನತೆಗಳಿರುವ ಸಾಧ್ಯತೆ ಇದೆ. ಇದರ ಬಗ್ಗೆ ಸಮಗ್ರ ಚರ್ಚೆಯ ಅಗತ್ಯ ಇದೆ,. ಇದಕ್ಕಾಗಿ ಪ್ರತ್ಯೇಕ ಸಭೆ ಕರೆಯಬೇಕು ಎಂಬ ಸದಸ್ಯರ ಸಲಹೆಗೆ ಮೇಯರ್ ಗುಲ್ಜಾರ್ ಬಾನು ಸಮ್ಮತಿ ಸೂಚಿಸಿದರು. ಉಪಮೇಯರ್ ಅಮಿತಕಲಾ ಇದ್ದರು.

ದಾಳಿ: ಪೂರ್ವಸೂಚನೆ ಇಲ್ಲ

ವ್ಯಾಪಾರ ವಹಿವಾಟಿಗೆ ಪರವಾನಗಿ ಮಾಡಿಸಿಕೊಳ್ಳಲು ಜುಲೈ 31ರ ಗಡುವು ನೀಡಲಾಗಿದೆ. ಅಲ್ಲಿಯವರೆಗೆ ದಾಳಿ ನಡೆಸುವುದಿಲ್ಲ. ಮುಂದೆ ಯಾವುದೇ ಪೂರ್ವಸೂಚನೆ ನೀಡದೆ ದಾಳಿ ನಡೆಸಲಾಗುವುದು. ಈ ವಿಚಾರದಲ್ಲಿ ಯಾರೂ ಅಧಿಕಾರಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಆಯುಕ್ತ ಹರೀಶ್ ಕುಮಾರ್ ಸ್ಪಷ್ಟಪಡಿಸಿದರು.ದಾಳಿಗೆ ಮೊದಲು ತಮಗೆ ಮಾಹಿತಿ ನೀಡಬೇಕು ಎಂದು ಮೇಯರ್ ಅವರು ತಿಳಿಸಿಲ್ಲ. ಅವರು ನೀಡಿದ ಟಿಪ್ಪಣಿಯನ್ನು ತಪ್ಪಾಗಿ ಅರ್ಥೈಸಲಾಗಿದೆ. ದಾಳಿಯ ನಂತರ ಪತ್ರಕರ್ತರು ತಮ್ಮಲ್ಲಿ ಮಾಹಿತಿ ಕೇಳಿದಾಗ ತಮಗೆ ಮಾಹಿತಿ ಇರುವುದಿಲ್ಲ, ಹೀಗಾಗಿ ದಾಳಿ ನಡೆಸಿದ ಬಗ್ಗೆ ತಮಗೆ ಮಾಹಿತಿ ನೀಡಬೇಕೆಂದು ಅವರು ಕೇಳಿದ್ದಾರೆ ಅಷ್ಟೇ. ಅದನ್ನು ಅಧಿಕಾರಿಗಳು ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry