ಸೋಮವಾರ, ಏಪ್ರಿಲ್ 19, 2021
30 °C

ವಾರದ ಬೇಟೆಗೆ ತುತ್ತಾದ ಕಾಡು ಪ್ರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ವಾರದ ಬೇಟೆ ಇನ್ನೂ ಜೀವಂತವಾಗಿದೆ. ಸೋಮವಾರ ದಳಸನೂರು ಗ್ರಾಮದ ಕಾಡು ಹಾಗೂ ಸುತ್ತಮುತ್ತಲಿನ ಮಾವಿನ ತೋಟಗಳಲ್ಲಿ ಬೇಟೆಗಾರರು ಸಂಚರಿಸಿ ಸಿಕ್ಕಿದ ಮೊಲಗಳನ್ನು ಕೊಂದು ಕೊಂಡೊಯ್ಯುತ್ತಿದ್ದರು.ಇದು ಈ ಸೋಮವಾರಕ್ಕೆ ಮಾತ್ರ ಸೀಮಿತವಾದ ಚಟುವಟಿಕೆಯಲ್ಲ. ಪ್ರತಿ ಸೋಮವಾರದ ವಿಶೇಷ. ಸೋಮವಾರ ಬಂದಿತೆಂದರೆ ಬೇಟೆಗಾರರು ದೊಡ್ಡ ಸಂಖ್ಯೆಯಲ್ಲಿ ಬಂದು ರಸ್ತೆಯ ಅಂಚಲ್ಲಿ ಸೇರುತ್ತಾರೆ. ಎಲ್ಲರೂ ಒಟ್ಟಾದ ಮೇಲೆ ಕೈಯಲ್ಲಿ ಬಾಗಿದ ಕೋಲನ್ನು ಹಿಡಿದು ಕಾಡು ಅಥವಾ ಮಾವಿನ ತೋಟಗಳನ್ನು ಪ್ರವೇಶಿಸುತ್ತಾರೆ. ಪೊದೆ, ಬೇಲಿಗಳನ್ನು ಜಾಲಾಡುತ್ತಾ ಸಾಗುತ್ತಾರೆ. ಹೆದರಿ ಅಡಗುತಾಣದಿಂದ ಹೊರಬಂದು ಓಡುವ ಮೊಲಗಳನ್ನು ಪರಿಣತ ಬೇಟೆಗಾರರು ಗುದ್ದಿಕೋಲನ್ನು ಬೀಸಿ ಬೀಳಿಸುತ್ತಾರೆ. ಅನಂತರ ಕೊಂದು ಬಳ್ಳಿಯಲ್ಲಿ ಕಟ್ಟಿ ಹೆಗಲಿಗೇರಿಸಿ ನಡೆಯುತ್ತಾರೆ.ಬೇಟೆಗೆ ಹೊರಟವರಿಗೆ ಮೊಲವೇ ಅಲ್ಲ ಉಡ, ಮುಂಗುಸಿ, ಕೌಜು ಹೀಗೆ ಯಾವುದೇ ಪ್ರಾಣಿ, ಪಕ್ಷಿ ಸಿಕ್ಕಿದರೂ ನಡೆಯುತ್ತದೆ. ನಾಲಗೆ ಚಪಲಕ್ಕೆ ಬಲಿಯಾಗುವ ಪ್ರಾಣಿಗಳಿಗೆ ಲೆಕ್ಕವಿಲ್ಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಬೇಟೆಗಾರರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಮಳೆ ಕೈಕೊಟ್ಟಿರುವ ಪರಿಣಾಮವಾಗಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ಬಿಡುವು ಬೇಟೆಯನ್ನು ಪ್ರೋತ್ಸಾಹಿಸಿದೆ ಎಂದರೆ ತಪ್ಪಾಗಲಾರದು. ಎಲ್ಲರೂ ಅಲ್ಲದಿದ್ದರೂ, ಬೇಟೆ ಚಪಲ ಹೊಂದಿರುವ ಜನ ಒಂದಾಗಿ ಕಾಡಿನಲ್ಲಿ ಕಾರ್ಯಾಚರಣೆ ನಡೆಸುತ್ತಾರೆ.ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕಿನ ಕಾಡುಗಳಲ್ಲಿ ಪ್ರಾಣಿ ಪಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಜಿಂಕೆ, ನವಿಲು, ಹಂದಿ, ನರಿ ಮುಂತಾದ ಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ. ಕಾಡುಗಳಲ್ಲಿ ನೀರು ಸಿಗುತ್ತಿಲ್ಲವಾದ್ದರಿಂದ ಈ ಪ್ರಾಣಿಗಳು ನೀರಿಗಾಗಿ ಗ್ರಾಮ ಅಥವಾ ಪಟ್ಟಣ ಪ್ರದೇಶಕ್ಕೆ ಬರುವುದು ಸಾಮಾನ್ಯವಾಗಿದೆ. ಹೀಗೆ ಬಂದ ಪ್ರಾಣಿಗಳು ಜನರ ಕೈಗೆ ಸಿಕ್ಕಿಬೀಳುತ್ತಿವೆ. ನಾಯಿಗಳ ಪಾಲಾಗುತ್ತಿವೆ. ಇದು ಸಾಲದೆಂಬಂತೆ ಬೇಟೆಗಾರರು ಅವುಗಳ ನೆಮ್ಮದಿ ಕೆಡಿಸುತ್ತಿದ್ದಾರೆ.ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಯಾವುದೇ ಕಾಡು ಪ್ರಾಣಿಯನ್ನು ಕೊಲ್ಲುವಂತಿಲ್ಲ. ಆದರೆ ಬೇಟೆಗಾರರು ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣು ತಪ್ಪಿಸಿ ಬೇಟೆಯಾಡುತ್ತಾರೆ. ಕೆಲವೊಮ್ಮೆ ಈ ಗ್ರಾಮೀಣ ಬೇಟೆಗಾರರನ್ನು ಸಿಬ್ಬಂದಿಯೇ ನಿರ್ಲಕ್ಷಿಸುತ್ತಾರೆ. ಇದರಿಂದಾಗಿ ವಾರದ ಬೇಟೆ ಇನ್ನೂ ಚಾಲ್ತಿಯಲ್ಲಿದೆ.ಅರಣ್ಯ ಇಲಾಖೆ ಕನಿಷ್ಠ ಈ ಬೇಟೆಗಾರರನ್ನು ಭೇಟಿಯಾಗಿ ವನ್ಯಜೀವಿ ರಕ್ಷಣೆ ಅಗತ್ಯದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಅಲ್ಲಿಗೂ ಬಗ್ಗದಿದ್ದರೆ ಕಾನೂನು ಇದ್ದೇ ಇದೆ ಎಂಬುದನ್ನು ಅವರ ಗಮನಕ್ಕೆ ತರಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.