ಬುಧವಾರ, ಜೂನ್ 16, 2021
28 °C

ವಾರದ ವಿನೋದ: ಸ್ವರ್ಣ ಕಮಾಲ್

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

ದಿಲಾವರ್ ಸೈಕಲ್ ಶಾಪ್‌ನಲ್ಲಿ ಮುನ್ನಾ ಸೈಕಲ್‌ಗೆ ಬ್ಲೋ ಹೊಡೀತಾ ಬುಸ್ ಬುಸ್ ಅಂತ ಉಸಿರು ಬಿಟ್ಕಂಡು `ನಮ್ದುಕೇ ಪ್ಯಾರ್‌ಗೇ ಆಗ್‌ಬುಟ್ಟೈತೆ~ ಅಂತ ಒರಲ್ತಿದ್ದ. ಲೇ! ಸುಮ್‌ಕೆ ಬ್ಲೋ ಒಡೀಯಲೇ! ನಮ್ದೂಕೆ ಪಂಕ್ಚರ‌್ರೇ ಆಗ್‌ಬುಟ್ಟೈತೆ! ಇವನೇನೋ ಪ್ಯಾರ್‌ಗೆ ಆಗ್‌ಬುಟ್ಟೈತೆ ಅಂತ ಚೀರ‌್ತಾವ್ನೆ ಎಂದು ಆಯಿಲ್ ಹಾಕದ ಚೈನ್ ತರ ಕಿರಕಿರ ಅಂದ ಪರಮಿ.ಪಂಚರ‌್ರು ಆಗಿದ್ದು ಎಂಗೆ? ಎಂದು ಮುನ್ನಾ ಪಿನ್ ಇಟ್ಟ. `ಶಾದೀದೂ ಆದೆ ನೋಡು, ಅದ್ಕೇ ಪಂಕ್ಚರ‌್ದು ಆಗಿದೆ, ನಿಂಗೆ ಅವೆಲ್ಲಾ ಗೊತ್ತಾಗಕಿಲ್ಲ, ಸುಮ್ಕೆ ಕೆಲ್ಸ ನೋಡು~ ಎಂದು ದಬಾಯಿಸಿದ ಪರಮಿ. ಮುರುಕಲು ಡಬ್ಬಾ ದಬ್ಬಾಕಿಕೊಂಡು ಅಡಕೆ ಪಟ್ಟಿಯ ಟೋಪಿ ತರ ತಲೆಗಾಕ್ಕಂಡು ಎರಡೂ ಅಂಗೈ ಅಗಲಿಸಿ ಸೈಕಲ್ ಶಾಪ್ ಚಾವಣಿ ತೂತಲ್ಲಿ ಆಕಾಶ ನೋಡ್ತಿದ್ದ ಡೈರೆಕ್ಟರ್ ನಂಜುಂಡ  ಹ್ಞಾ! ಯುರೇಖಾ ಸಿಕ್ಕಿಬಿಡ್ತು ಅಂತ ಕೂಗಿಕೊಂಡ. ಎಲ್ಲಾ ಗಾಬರಿ ಆದ್ರು. ಯಾವ ರೇಖಾನಲೇ ನಿಂಗೆ ಸಿಕ್ಕಿದ್ದು? ನಮ್ ಕನ್ನಡದ ತುಂಟಾಟದ ರೇಖಾನಾ? ಹಿಂದಿ ರೇಖಜ್ಜಿನಾ? ಕಿಚಾಯಿಸಿದ ಪರಮಿ. ಲೇ ಗುಗ್ಗು! ನನ್ ಸಿನಿಮಾಗೆ ಟೈಟಲ್ ಸಿಕ್ತು ಕಣಲೇ!ಹೌದಾ? ಏನು ಟೈಟಲ್ಲು

ಮ್ಯೋರಿಗೆ ಆಗ್‌ಬುಟ್ಟೈತೆ!ವಾಹ್! ಜಗ್ಗೇಶ್‌ಗೆ ಒಂದು ಸೂಪರ್ ಡೂಪರ್ ಪಿಕ್ಚರ್ ಸಿಕ್ಕಂಗಾಯ್ತು ಅನ್ನು

ಜಗ್ಗೇಶ್ ಸಿಕ್ಕದಿದ್ರೆ ಕೋಮಲ್, ಇಲ್ಲ ಅಂದ್ರೆ ಶರಣ್, ನಮ್ ತೆಂಗಿನಕಾಯಿ ಮಂಜಣ್ಣ ಕಾಸ್ ಹಾಕಕ್ಕೆ ರೆಡಿ ಅವ್ರೆಅವರ ಕೈಗೆ ಚಿಪ್ ಕೊಟ್‌ಬಿಟ್ಟೀಯ. ಮೊದ್ಲು ಕತೆ ಏನು ಒದರು ಅಂದ ಪರಮಿ

ಲೇಯ್ ನನ್ ಕತೆ ಅಂದ್ರೆ ಏನಂದ್ಕಂಡಿದೀಯ! ಲವ್ ಕಮ್ ಮ್ಯೋರೇಜ್ ಸ್ಟೋರಿ! ಟೀನ್ ಏಜರ್ಸ್‌ಗೆ , ಮಿಡಲ್ ಏಜರ್ಸ್‌ಗೆ ಇಬ್ಬರಿಗೂ ಲೈಕ್ ಆಗೋ ಸ್ಟೋರಿ ಕಣಲೇ! ಮೊದ್ಲು ಹಳ್ಳಿ ಟ್ರಾಕ್! ನೈಟ್ ಎಫೆಕ್ಟಿಂದ ಸ್ಟಾರ್ಟಾಗುತ್ತೆ, ನರಸಿಂಹಯ್ಯನ ಪತ್ತೇದಾರಿ ತರ! ಅಮಾವಾಸ್ಯೆ ರಾತ್ರಿ, ಊ ಊ ಅಂತ ಗೂಬೆಗಳು ಊಳಿಡ್ತಿವೆ. ಒಬ್ ಹುಡುಗ ಎಸ್‌ಎಸ್‌ಎಲ್‌ಸಿಲಿ ಫೇಲಾಗಿ ಸಾಯಕ್ಕೆ ಹೊಂಟವ್ನೆ! ಇನ್ನೇನು ಕೆರೆಗೆ ಬಿದ್ದು ಸಾಯಬೇಕು ಅನ್ನೋ ಒತ್ಗೆ ಒಂದು ಎಳೆ ಮಗು ಅಳ್ತಿರೋದು ಕೇಳುತ್ತೆ. ಆ ಉಡ್ಗ ಚೆಡ್ಡಿಲೇ ಎಲ್ಲಾ ಮಾಡ್ಕಂಡು ವಾಪಸ್ ಓಡಿ ಬರ‌್ತಾನೆಊರಲ್ಲಿ ಬಂದು ಹೇಳ್ತಾನೆ. ಊರೋರೆಲ್ಲಾ ಹೋಗಿ ನೋಡಿದಾಗ ಪೊದೆ ಸಂದೀಲಿ ಒಂದು ಮಗು ಇರುತ್ತೆ. ಅದು ಯಾರದು? ಅದರ ಅಪ್ಪ ಯಾರು? ಅಮ್ಮ ಯಾರು ಅಂತ ಸಸ್ಪೆನ್ಸ್ ಶುರುವಾಗುತ್ತೆ. ಕೊನೆಗೆ ಮಗು ಆ ಊರಿನ ಮದುವೆ ಆಗದ ಹುಡುಗಿ ಲಚ್ಚಿದು ಅಂತ ಗೊತ್ತಾಗುತ್ತೆ  ಲವ್ ಸ್ಟೋರಿ ಅಂದು ಮಕ್ಕಳಾದ ಮೇಲಿಂದ ಹೇಳ್ತಿದೀಯಲ್ಲೋ!

ಮುಚ್ಕಂಡು ಕೇಳಲೇ! ಲವ್ ಫ್ಲಾಷ್ ಬ್ಯಾಕಲ್ಲಿ ಸ್ಟಾರ್ಟಾಗುತ್ತೆ. ಆ ಹುಡುಗಿನ ಅದೇ ಊರಿನ ರವಿ ಅನ್ನೋನು ಲವ್ ಮಾಡಿರ‌್ತಾನೆ. ಮದುವೆಗೆ ಮುಂಚೆನೇ ಮಗು ಆಗಿಬಿಟ್ಟಿರುತ್ತೆ. ಹುಡುಗ ಊರ್ ಬಿಟ್ ಓಗಿರ‌್ತಾನೆ`ಅಂದ್ರೆ ಶಾದಿಗೆ ಮುಂಚೇನೇ ಪ್ಯಾರ್‌ಗೆ ಆಗ್‌ಬುಟ್, ಮಗೂಗೂ ಆಗ್‌ಬಿಟ್ಟಿರುತ್ತೆ~ ಅನ್ನು

ಹೂ! ಮನೆಯೋರು ಗುಟ್ಟಾಗಿ ಮಗುನ ಬೆಂಗಳೂರಿಗೆ ಸಾಗಿಸಿ ಒಂದು ಆಶ್ರಮದಲ್ಲಿ ಬಿಟ್‌ಬತ್ತಾರೆ. ಆಮೇಲೆ ಊರೆಲ್ಲಾ ಗುಲ್ಲಾಗಿ ಲಚ್ಚಿ ಲವರ್ ಮೇಲೆ ಕಂಪ್ಲೇಟ್ ಕೊಡ್ತಾಳೆ.ಪೋಲೀಸರು ಹುಡುಕ್ತಾರೆ. ಹೈದರಾಬಾದಿಂದ ಡಿಎನ್‌ಎ ಟೆಸ್ಟ್‌ಗೆ ಓಕೆ ಆಗುತ್ತೆ. ಆಗ ನೋಡಪ್ಪ ಸಿನಿಮಾ ಟರ್ನ್ ತಗಳುತ್ತೆಏನು ಯೂ ಟರ್ನಾ?  ದೀಕ್ಷಿತ ಕುಹಕವಾಡಿದ.

ನಿನ್ ತಲೆ! ತಲಹರಟೆ ಬಿಟ್ಟು ಸುಮ್ನೆ ಕೇಳ್ರಲೇ! ಲಚ್ಚಿ ಮನೆಯೋರು ಮಗುನ ಹುಡಿಕ್ಕಂಡು ಆಶ್ರಮಕ್ಕೆ ಹೋಗ್ತಾರಾ? ಅಲ್ಲಿ ಮಗುನ ಅವರು ಯಾರಿಗೋ ದತ್ತು ಕೊಟ್‌ಬಿಟ್ಟಿರ‌್ತಾರೆ.ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಮಗು ಎಲ್ಲಿದೆ ಅಂತ ಏಳೋ ಅಂಗಿಲ್ಲ. ಇಲ್ಲಿ ಸಿಟಿ ಟ್ರಾಕ್ ಓಪನ್ ಆಗುತ್ತೆ. ಲಚ್ಚಿ ರವಿ, ಮಗು ಇಬ್ಬರನ್ನೂ ಹುಡುಕಕ್ಕೆ ಶುರುಮಾಡ್ತಾಳೆ. ಸೀಮಾ ಅನ್ನೋಳು ಅವಳಿಗೆ ಫ್ರೆಂಡಾಗ್ತಾಳೆ. ಆ ಸೀಮಾ ಹಳ್ಳಿಯಿಂದ ಓಡಿಬಂದಿದ್ನಲ್ಲ, ಆ ರವಿನ ಲವ್ ಮಾಡ್ತಿರ‌್ತಾಳೆ. ಇದು ಲಚ್ಚಿಗೆ ಗೊತ್ತಾಗುತ್ತೆ. ಸ್ನೇಹಿತೆ ಪ್ರೀತಿ ಗೆಲ್ಲಲಿ ಅಂತ ಅವಳು ರವಿನ ತ್ಯಾಗ ಮಾಡಕ್ಕೆ ನಿರ್ಧರಿಸ್ತಾಳೆ. ಇದು ಇಂಟರ್‌ವಲ್ ಪಾಯಿಂಟ್

ಇನ್ನೂ ಸಿನಿಮಾ ಇದೆಯಾ?ಇಲ್ಲಿಂದ ಮುಂದಕ್ಕೇ ನಿಜವಾದ ಸಿನಿಮಾ ಇರೋದು. ನಿಜವಾಗಿ ರವಿ ಲಚ್ಚಿನ ಹಾಳು ಮಾಡಿರಲ್ಲ, ಲಚ್ಚಿ ಅಕ್ಕನ ಮನೇಲಿದ್ದಾಗ ಅವಳ ಬಾವ ಏನೋ ಎಡವಟ್ಟು ಮಾಡಿರ‌್ತಾನೆ ಅಂತ ಎಲ್ಲರಿಗೂ ಗುಮಾನಿ ಇರುತ್ತೆ. ಇದ್ದಕ್ಕಿದ್ದಂತೆ ಲಚ್ಚಿ ಅಕ್ಕ ಸತ್‌ಹೋಗ್ತಾಳೆ. ಬಾವ ಒಂಟಿಯಾಗ್ತಾನೆ. ಆದರೆ ಅದೇ ಸಮಯಕ್ಕೆ ಲಚ್ಚಿನ ಇನ್ನೊಬ್ಬ ಲವ್ ಮಾಡಕ್ಕೆ ಶುರು ಮಾಡ್ತಾನೆ. ಲಚ್ಚಿ ಬಾವನಿಗೆ ಬದುಕು ಕೊಡೋದಾ? ಪ್ರೇಮಿ ಕೈ ಹಿಡಿಯೋದಾ ಅನ್ನೋ ಗೊಂದಲದಲ್ಲಿ ಸಿಕ್ಕಿಬೀಳ್ತಾಳೆ. ಆಗ ದೊಡ್ಡ ರಹಸ್ಯ ಸ್ಪೋಟವಾಗುತ್ತೆ. ಲಚ್ಚಿನ ನಿಜವಾಗಿ ಹಾಳು ಮಾಡಿದೋರು ರವಿ, ಅವಳ ಭಾವ ಇಬ್ಬರೂ ಅಲ್ಲ, ಬೇರೆನೇ ಅಂತ ಗೊತ್ತಾಗುತ್ತೆ. ಕ್ಲೈಮ್ಯೋಕ್ಸ್ ಸಸ್‌ಪೆನ್ಸ್! ಎಂಗಿದೆ? ಹುಬ್ಬು ಕುಣಿಸಿದ ನಂಜುಂಡ!ಸಖತ್ತಾಗಿದೆ. ಮ್ಯೋರಿಗೆ ಆಗ್‌ಬುಟ್ಟೈತೆ! ಬದ್ಲು ಬರೀ ಮ್ಯೋರಿ ಅಂತ ಇಟ್ರೆ `ಸ್ವರ್ಣ ಕಮಲ~ ಸಿಗುತ್ತೆ ಕಣಲೇ ಎಂದ ಪರಮಿಅವಾರ್ಡ್ ಅನ್ನುತ್ಲು ಜ್ಞಾಪಕ ಬಂತು, ಈ ಕತೇನ ಎಲ್ಲೋ ಕೇಳ್ದಂಗೈತಲ್ಲ ದೀಕ್ಷಿತ ನಾಯಿ ತರ ಮೂಗು ಚೂಪು ಮಾಡಿದ.ಹೌದೌದು ತಮಿಳ್ ಭಾಗ್ಯರಾಜ್‌ದು  ಅಂದ ಸೆವನ್ ನಾಟ್ಗಳ್, ನಮ್ದು ಕಾಶೀನಾಥ್‌ದು ಒಂದು ಸಿನಿಮಾ ಕತೆ ಎಲ್ಲಾ ಮಿಕ್ಸಿಗೆ ಹಾಕಿ ರುಬ್ಬಿ ಬಿರಿಯಾನಿ ಮಸಾಲೆ ಮಾಡಿರೋ ಅಂಗೈತೆ  ಎಂದ ಮುನ್ನಾ.ಛಾನ್ಸೇ ಇಲ್ಲ! ಇದು ನನ್ನದೇ ಒರಿಜಿನಲ್ಲು

ಸುಮ್ನಿರಲೇ! ಸ್ವರ್ಣ ಕಮಲ ತಗೊಂಡಿರೋ ಕತೆನೇ ಕೃತಿಚೌರ್ಯ ಅಂತ ದೊಡ್ಡ ಗುಲ್ಲೆದ್ದಿದೆ. ನಿಂದ್ಯಾವ ಮಹಾ?ನಾನು ಎಷ್ಟು ಲಕ್ಷ ಬೇಕಾದರೂ ಬೆಟ್ ಕಟ್ತೀನ್ರಲೇ! ಇದು ಕದ್ದ ಕತೆ ಅಲ್ಲ, ಇದು ನನ್ನ ಒರಿಜಿನಲ್ ಕತೆಮತ್ತೆ ಎಲ್ಲೋ ಕೇಳಿರೋ ಅಂಗೈತಲ್ಲಾ? ಕೂದಲು ಕಿತ್‌ಕೊಂಡ ದೀಕ್ಷಿತ

ಏಯ್ ವಿನಾಕಾರಣ ನಂಜುಂಡನ ಮೇಲೆ ಅನುಮಾನ ಪಟ್ರಲ್ಲಲೇ! ಇದು ನಂಜುಂಡನ ಒರಿಜಿನಲ್ ಕತೆನೇ! ಲಚ್ಚಿ ಬೇರೆ ಯಾರೂ ಅಲ್ಲ ಕಣ್ರಲೇ! ತರ‌್ಲೆಕ್ಯಾತನಹಳ್ಳಿ ಮಾದೇವಿ !

ಮಾದೇವಿನ ಹಾಳು ಮಾಡ್ದೋರು ರವಿನೂ ಅಲ್ಲ, ಅವರ ಬಾವನೂ ಅಲ್ಲ, ಈ ನನ್ಮಗ ನಂಜುಂಡನೇ! ನಂಗೆ ಈ ಅನುಮಾನ ಮೊದ್ಲಿಂದ್ಲೂ ಇತ್ತು, ಸಿನಿಮಾ ತೆಗೀತಾನಂತೆ! ಹಾಕ್ರುಲಾ ನನ್ ಮಗಂಗೆ!ತಿರುಗಿ ನೋಡುವಷ್ಟರಲ್ಲಿ ನಂಜುಂಡ ಪಂಕ್ಚರಾದ ಸೈಕಲ್ ಹತ್ತಿಕೊಂಡು ಪೇರಿ ಕಿತ್ತ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.