ಶುಕ್ರವಾರ, ಜೂನ್ 18, 2021
21 °C

ವಾರಾಣಸಿ ಮುಸ್ಲಿಮರ ಮೇಲೆ ಕೇಜ್ರಿವಾಲ್‌ ಕಣ್ಣು

ಪ್ರಜಾವಾಣಿ ವಾರ್ತೆ/ ಸಂಜಯ್‌ ಪಾಂಡೆ Updated:

ಅಕ್ಷರ ಗಾತ್ರ : | |

ಲಖನೌ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ವಾರಾಣಸಿ­ಯಲ್ಲಿ ಎದುರಿಸಲು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್‌ ಅವರು ಸಜ್ಜಾಗುತ್ತಿದ್ದಾರೆ.  ಈ ಕ್ಷೇತ್ರದಲ್ಲಿ ಗಣನೀಯವಾಗಿರುವ ಮುಸ್ಲಿಂ ಮತಗಳನ್ನು ಸೆಳೆಯಲು ತಾವು ‘ಜಾತ್ಯತೀತ’ ಎಂದು ಬಿಂಬಿಸಿಕೊಳ್ಳುವ ಸಾಧ್ಯತೆ ಇದೆ.ವಾರಾಣಸಿ ಕ್ಷೇತ್ರದಲ್ಲಿ 2.50 ಲಕ್ಷ ಮುಸ್ಲಿಂ ಮತದಾರರಿದ್ದಾರೆ. ಚುನಾ­ವಣಾ ಫಲಿತಾಂಶ ನಿರ್ಧಾರದಲ್ಲಿ ಈ ಸಮುದಾಯದ್ದು ನಿರ್ಣಾಯಕ ಪಾತ್ರ­ವಿದೆ. ಇವರಲ್ಲಿ ಹೆಚ್ಚಿನವರು ಸಾಂಪ್ರ­ದಾಯಿಕ­ವಾದ ನೇಕಾರ ವೃತ್ತಿಯವ­ರಾ­ಗಿದ್ದು ಪ್ರಸಿದ್ಧ ಬನಾರಸ್‌ ಸೀರೆ ನೇಯುವವರು.ಕೋಮುವಾದಿ ಶಕ್ತಿಗಳನ್ನು ಸೋಲಿ­ಸು­ವುದು ಮೋದಿ ವಿರುದ್ಧ ಸ್ಪರ್ಧಿಸಲು ಕಾರಣ ಎಂದು ಎಎಪಿ ಮುಖಂಡರು ಹೇಳುತ್ತಿದ್ದಾರೆ. ‘ನಾವು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವು­-ದಿಲ್ಲ. ಆದರೆ ನಾವು ಕೋಮುವಾದಿ ಶಕ್ತಿಗಳ ವಿರುದ್ಧವಿದ್ದೇವೆ’ ಎಂದು ಎಎಪಿ ಮುಖಂಡ ರವೂಫ್‌ ಕೈಫಿ ಹೇಳಿದ್ದಾರೆ.

ಮುಸ್ಲಿಮರಿಗೆ ಕೇಜ್ರಿವಾಲ್‌ ಅವರ ಮೇಲೆ ಶೇಕಡ ನೂರರಷ್ಟು  ವಿಶ್ವಾಸ­ವಿದೆ. ಮುಸ್ಲಿಮರ ಮತಗಳು ‘ಜಾತ್ಯತೀತ’ ಪಕ್ಷಗಳ ನಡುವೆ ಹಂಚಿ ಹೋಗದಂತೆ ಎಎಪಿ ನೋಡಿಕೊಳ್ಳಬೇಕಾಗಿದೆ ಎಂದು ಕೈಫಿ ಅಭಿಪ್ರಾಯಪಟ್ಟಿದ್ದಾರೆ. ವಾರಾಣಸಿಯಲ್ಲಿರುವ ಎಎಪಿ ಮೂಲಗಳು ಕೂಡ ಇದೇ ಅಭಿ­ಪ್ರಾಯ­ವನ್ನು ಹೊಂದಿವೆ. ಇತರ ಮತದಾರರ ಜೊತೆ ಮುಸ್ಲಿಂ ಮತಗಳ ಮೇಲೆ ಗಮನ ಕೇಂದ್ರೀಕರಿಸಲು ಎಎಪಿ ನಾಯಕರು ಕಾರ್ಯತಂತ್ರ ರೂಪಿಸು­ತ್ತಿದ್ದಾರೆ.ಮಂಗಳವಾರ ಕೇಜ್ರಿವಾಲ್‌ ವಾರಾ­ಣಸಿಯ ಬೆನಿಯಾಭಾಗ್‌ ಮೈದಾನ­ದಲ್ಲಿ ಸಮಾವೇಶ ನಡೆಸಿದರು. ಇದು ಮುಸ್ಲಿಮರು ಹೆಚ್ಚಾಗಿ ವಾಸಿಸುವ ಸ್ಥಳವಾಗಿದೆ.ಕಾಂಗ್ರೆಸ್‌ ಬೆಂಬಲ ಇಲ್ಲ

ನವದೆಹಲಿ (ಪಿಟಿಐ): ವಾರಾ­ಣಸಿಯಲ್ಲಿ ನರೇಂದ್ರ ಮೋದಿ ಅವರಿಗೆ ಕಠಿಣ ಸ್ಪರ್ಧೆ ಒಡ್ಡಬಲ್ಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದ್ದು ಹಣಾಹಣಿ  ಭಾರಿ ಕುತೂಹಲ ಕೆರಳಿಸಲಿದೆ. ಮೋದಿ ವಿರುದ್ಧ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂಬುದನ್ನು ಕೂಡ ಕಾಂಗ್ರೆಸ್‌ ಸ್ಪಷ್ಟಪಡಿಸಿದೆ.

ವಾರಾಣಸಿಗೆ ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿದ್ದು ಅಭ್ಯರ್ಥಿಯನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.‘ವಾರಾಣಸಿ ಕ್ಷೇತ್ರಕ್ಕೆ ಹಲವು ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತಿದ್ದು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಾಗುವುದು’ ಎಂದು ಕೇಂದ್ರ ಸಚಿವ ಆನಂದ್‌ ಶರ್ಮಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.