ವಾರೆ ವ್ಹಾ... ನೊವಾಕ್

7

ವಾರೆ ವ್ಹಾ... ನೊವಾಕ್

Published:
Updated:

5 ಗಂಟೆ 53 ನಿಮಿಷ....!

ಮೆಲ್ಬರ್ನ್ ಪಾರ್ಕ್‌ನ ರಾಡ್ ಲೇವರ್ ಅರೆನಾದಲ್ಲಿ ಜನವರಿ 29 ರಂದು ನಡೆದ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯ ಕೊನೆಗೊಂಡಾಗ ಕೋರ್ಟ್‌ನ ಮೂಲೆಯಲ್ಲಿದ್ದ `ಸ್ಟಾಪ್ ಕ್ಲಾಕ್~ನಲ್ಲಿ ಈ ಮೇಲಿನ ಸಮಯ ದಾಖಲಾಗಿತ್ತು!ಸರ್ಬಿಯದ ನೊವಾಕ್ ಜೊಕೊವಿಚ್ ಮತ್ತು ಸ್ಪೇನ್‌ನ ರಫೆಲ್ ನಡಾಲ್ ನಡುವಿನ ಫೈನಲ್ ಪಂದ್ಯಕ್ಕೆ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನ ಲಭಿಸಿದೆ. ಈ ಪಂದ್ಯವನ್ನು ನೆನಪಿಸಿದಾಗ ಟೆನಿಸ್ ಪ್ರೇಮಿಗಳ ಮನ ಪುಳಕಗೊಳ್ಳುವುದು ಖಚಿತ. ಜ. 29ರ ರಾತ್ರಿ ಅಲ್ಲಿ ನಡೆದದ್ದು ಕೇವಲ ಪಂದ್ಯ ಮಾತ್ರವಲ್ಲ.ಅದೊಂದು ಐತಿಹಾಸಿಕ ಹೋರಾಟ. ಇಬ್ಬರ ನಡುವಿನ ಸೆಣಸಾಟದ ಉದ್ದಕ್ಕೂ ಟೆನಿಸ್ ಕ್ರೀಡೆಯೊಳಗಿನ ರೋಚಕತೆ, ಸೌಂದರ್ಯ ಎಳೆಎಳೆಯಾಗಿ ಅನಾವರಣಗೊಂಡಿತ್ತು.ಅಂತಿಮವಾಗಿ ಗೆಲುವು ಪಡೆದ ಜೊಕೊವಿಚ್ ಟೆನಿಸ್ ಪ್ರೇಮಿಗಳ ಕಣ್ಮಣಿಯಾದರು. ನಡಾಲ್ ವಿರುದ್ಧದ ತಮ್ಮ ಪಾರಮ್ಯ ಮುಂದುವರಿಸಿದರು. ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಸ್ವಿಟ್ಜರ್‌ಲೆಂಡ್‌ನ ರೋಜರ್ ಫೆಡರರ್ ಮತ್ತು ನಡಾಲ್ ಪ್ರಭುತ್ವಕ್ಕೆ ತೆರೆ ಎಳೆದ ಶ್ರೇಯ ಜೊಕೊವಿಚ್‌ಗೆ ಸಲ್ಲಬೇಕು.ನಡಾಲ್ ಮತ್ತು ಫೆಡರರ್ ಈಗಲೂ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದರ ನಡುವೆಯೂ ಸರ್ಬಿಯಾದ ಆಟಗಾರ ಐದು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿರುವುದು ಸಣ್ಣ ವಿಚಾರವಲ್ಲ. ನಡಾಲ್ ಹಲವು ಸಲ ಸ್ವಿಸ್ ದಿಗ್ಗಜ ಫೆಡರರ್‌ಗೆ ಸೋಲುಣಿಸಿದ್ದಾರೆ. ಆದರೆ ಜೊಕೊವಿಚ್ ವಿರುದ್ಧ ಎಡವುತ್ತಿದ್ದಾರೆ. ಸರ್ಬಿಯಾದ ಆಟಗಾರನ ಕೈಯಲ್ಲಿ ಸತತ ಏಳು ಫೈನಲ್‌ಗಳಲ್ಲಿ ನಿರಾಸೆ ಅನುಭವಿಸಿದ್ದೇ ಇದಕ್ಕೆ ಸಾಕ್ಷಿ.ಗ್ರ್ಯಾನ್ ಸ್ಲಾಮ್ ಟೂರ್ನಿಯ ಫೈನಲ್ ಪಂದ್ಯವೊಂದು ಐದು ಗಂಟೆ 53 ನಿಮಿಷಗಳ ಕಾಲ ನಡೆದ ಬೇರೆ ಉದಾಹರಣೆ ಇಲ್ಲ. ಉಭಯ ಅಟಗಾರರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ, ಏಕಾಗ್ರತೆ ಹಾಗೂ ಛಲವನ್ನು ಒರೆಗೆ ಹಚ್ಚಿದ ಸೆಣಸಾಟ ಅಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಮಧ್ಯರಾತ್ರಿ 1.40ರ ಸುಮಾರಿಗೆ (ಮೆಲ್ಬರ್ನ್ ಕಾಲಮಾನ) ಈ ಪಂದ್ಯ ಕೊನೆಗೊಂಡಿತ್ತು. ಮ್ಯಾರಥಾನ್ ಹೋರಾಟದಿಂದಾಗಿ ಇಬ್ಬರೂ ಬಳಲಿದ್ದರು. ಜೊಕೊವಿಚ್ ಎಷ್ಟು ಆಯಾಸಗೊಂಡಿದ್ದರೆಂದರೆ ಗೆಲುವಿನ ಸಂಭ್ರಮ ಆಚರಿಸುವ ಶಕ್ತಿ ಅವರಲ್ಲಿರಲಿಲ್ಲ. ಪಂದ್ಯ ಗೆದ್ದ ಕ್ಷಣ ಅಂಗಳದಲ್ಲಿ ಅಂಗಾತ ಮಲಗಿದರು. ಆ ಬಳಿಕ ಟಿ-ಶರ್ಟ್ ಹರಿದು ಬಿಸಾಕಿ ಸಂತಸಪಟ್ಟರು. ಗೆಲುವಿನ ಕೇಕೆ ಹಾಕಿದರು.ಹೋಟೆಲ್‌ಗೆ ತೆರಳಿದ ಬಳಿಕ ಸಂಭ್ರಮ ಮುಂದುವರಿಸಲು ಆಗಲಿಲ್ಲ. ಗೆಲುವಿನ ಅಲೆಯಲ್ಲಿ ಅವರಿಗೆ ರಾತ್ರಿ ನಿದ್ದೆಯೂ ಬರಲಿಲ್ಲ. ಪುಸ್ತಕ ಓದುತ್ತಾ ಕಾಲ ಕಳೆದರು. ಜೊತೆಗೆ ಅಲ್ಪ ರಾಕ್ ಸಂಗೀತ ಆಲಿಸಿದರು. ಆ ಬಳಿಕ ತಾವಾಡಿದ ಪಂದ್ಯದ   ಹೈಲೈಟ್ಸ್ ವೀಕ್ಷಿಸಿದ್ದಾರೆ. ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನಿದ್ದೆಗೆ ಜಾರಿದ್ದಾರೆ!ಜೊಕೊವಿಚ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ‌್ರೆ ಅವರನ್ನು ಮಣಿಸಲು ನಾಲ್ಕು ಗಂಟೆ 50 ನಿಮಿಷಗಳ ಕಾಲ ಹೋರಾಡಿದ್ದರು. ಫೈನಲ್ ಅದಕ್ಕಿಂತಲೂ ಉದ್ದವಾಗಿ ಬೆಳೆದುನಿಂತಿತು. ಪಂದ್ಯದಲ್ಲಿ ಇಬ್ಬರೂ ಒಟ್ಟು 369 ಪಾಯಿಂಟ್ ಸಂಗ್ರಹಿಸಿದರು. 140 ಅನಗತ್ಯ ತಪ್ಪುಗಳನ್ನು ಎಸಗಿದರು. 55 ಗೇಮ್ ಹಾಗೂ ಅದರ ಜೊತೆಗೆ ಟೈಬ್ರೇಕರ್ ಆಡಿದರು, 101 ವಿನ್ನರ್‌ಗಳನ್ನು ಸಿಡಿಸಿದರು.ಫೈನಲ್‌ನಲ್ಲಿ ಸೋಲು ಅನುಭವಿಸಿದ ನಡಾಲ್‌ಗೂ ಶಹಬ್ಬಾಸ್ ಹೇಳಬೇಕು. ಅವರು ಕೆಚ್ಚೆದೆಯ ಹೋರಾಟ ತೋರದಿದ್ದಲ್ಲಿ ಈ ಪಂದ್ಯಕ್ಕೆ ಇತಿಹಾಸದ ಪುಟಗಳಲ್ಲಿ ಸ್ಥಾನ ದೊರೆಯುತ್ತಿರಲಿಲ್ಲ. ಕೊನೆಯವರೆಗೂ ತೋರಿದ ಪ್ರತಿರೋಧ ಮಾತ್ರ ಅದ್ಭುತವಾಗಿತ್ತು. ಈ ಕಾರಣದಿಂದಲೇ ಪಂದ್ಯದ ಬಳಿಕ ಜೊಕೊವಿಚ್ ಎದುರಾಳಿಯ ಬಗ್ಗೆ ವೆುಚ್ಚುಗೆಯ ಮಾತನ್ನಾಡಿದ್ದರು.`ನಾನು ಮತ್ತು ನಡಾಲ್ ಇತಿಹಾಸ ನಿರ್ಮಿಸಿದ್ದೇವೆ. ಆದರೆ ದುರದೃಷ್ಟವೆಂದರೆ ಟ್ರೋಫಿಯನ್ನು ಇಬ್ಬರಿಗೂ ನೀಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ನಮ್ಮಿಂದ ಇಂತಹ ಇನ್ನಷ್ಟು ಪಂದ್ಯಗಳನ್ನು ನಿರೀಕ್ಷಿಸಬಹುದು~ ಎಂದಿದ್ದರು. ನಡಾಲ್ ಕೂಡಾ ಗೆದ್ದಿದ್ದಾರೆ ಎಂಬ ಅರ್ಥದಲ್ಲಿ ಅವರು ಮಾತನ್ನಾಡಿದ್ದರು.ಜೊಕೊವಿಚ್ ಕಳೆದ ವರ್ಷ ಮೂರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಫ್ರೆಂಚ್ ಓಪನ್‌ನಲ್ಲಿ ಮಾತ್ರ ವಿಫಲರಾಗಿದ್ದರು. ಈ ಬಾರಿ ಋತುವಿನ ಎಲ್ಲ ಗ್ರ್ಯಾನ್ ಸ್ಲಾಮ್ ಗೆದ್ದು ಅಪೂರ್ವ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾರೆ.ಆ ನಿಟ್ಟಿನಲ್ಲಿ ಯಶಸ್ವಿ ಹೆಜ್ಜೆಯಿಟ್ಟಿದ್ದಾರೆ. ಈ ಸಾಧನೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ರಾಡ್ ಲೇವರ್ ಅರೆನಾದಲ್ಲಿ ಜ. 29ರ ರಾತ್ರಿ ತೋರಿದ ಪ್ರದರ್ಶನದ ಮೂಲಕ ತನಗೆ ಅಸಾಧ್ಯವಾದುದು ಏನೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಕೂಡಾ ಹೊಸ ಅಲೆ ಎಬ್ಬಿಸಿದ್ದಾರೆ. ಫೈನಲ್‌ನಲ್ಲಿ ರಷ್ಯಾದ ಮರಿಯಾ ಶರ್ಪೋವಾ ಎದುರು ತೋರಿದ ಪ್ರದರ್ಶನ ಆಕರ್ಷವಾಗಿತ್ತು. ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ಮೂಲಕ ಅವರು ಇತರ ಆಟಗಾರ್ತಿಯರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ಪೇಸ್ ಸಾಧನೆ: ಹಿರಿಯ ಆಟಗಾರ ಲಿಯಾಂಡರ್ ಪೇಸ್ ಭಾರತದ ಟೆನಿಸ್ ಪ್ರೇಮಿಗಳ ಸಂತಸಕ್ಕೆ ಕಾರಣರಾದರು. ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೊತೆ ಸೇರಿಕೊಂಡು ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. 38ರ ಹರೆಯದಲ್ಲೂ ಪೇಸ್ ತೋರುತ್ತಿರುವ ಛಲ ಅದ್ಭುತ.ಆಸ್ಟ್ರೇಲಿಯನ್ ಓಪನ್‌ನ ಡಬಲ್ಸ್ ವಿಭಾಗದ ಕಿರೀಟ ಪೇಸ್‌ಗೆ ಇದುವರೆಗೂ ದಕ್ಕಿರಲಿಲ್ಲ. ಆದರೆ ಈ ಬಾರಿ ಅದನ್ನು ಪಡೆಯುವಲ್ಲಿ ಯಶಸ್ವಿಯಾದರು. ರಷ್ಯಾದ ಎಲೆನಾ ವೆಸ್ನಿನಾ ಜೊತೆ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸಿದರೂ ಚಾಂಪಿಯನ್ ಆಗುವಲ್ಲಿ ವಿಫಲರಾದರು. ಇಲ್ಲದಿದ್ದಲ್ಲಿ, ಪ್ರಶಸ್ತಿ `ಡಬಲ್~ ಸಾಧನೆ ಅವರದ್ದಾಗುವ ಸಾಧ್ಯತೆಯಿತ್ತು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry