ವಾರ್ಡನ್, ಸಿಬ್ಬಂದಿ ತರಾಟೆಗೆ

6

ವಾರ್ಡನ್, ಸಿಬ್ಬಂದಿ ತರಾಟೆಗೆ

Published:
Updated:

ಹೊಳಲ್ಕೆರೆ: ಪಾಚಿಕಟ್ಟಿದ ತೊಟ್ಟಿಯಲ್ಲಿ ಹುಳು ತುಂಬಿದ ನೀರು. ಹಂದಿಗೂಡುಗಳಂತಹ ಮನೆಯಲ್ಲೇ ಆಟ, ಪಾಠ, ಸ್ನಾನ. ಮನೆಯ ಮೇಲೆ ಬಿಸಿಲಿನಲ್ಲಿ ನಿಂತು ಊಟ. ತಲೆ ಮೇಲೆ ಕಿತ್ತು ಬೀಳುವಂತಿರುವ ಫ್ಯಾನು - ಇವು ಜಿ.ಪಂ. ಅಧ್ಯಕ್ಷ ಸಿ. ಮಹಾಲಿಂಗಪ್ಪ ಶುಕ್ರವಾರ ಪಟ್ಟಣದ ಪರಿಶಿಷ್ಟ ವರ್ಗದ ಮೊರಾರ್ಜಿ ದೇಸಾಯಿ ವಸತಿಶಾಲೆಗೆ ಭೇಟಿ ನೀಡಿದಾಗ ಕಂಡು ಬಂದ ದೃಶ್ಯಗಳು.ವಿದ್ಯಾರ್ಥಿಗಳು ಮತ್ತು ಪೋಷಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದಿಢೀರ್ ಶಾಲೆಗೆ ಭೇಟಿ ನೀಡಿದ ಅವರು, ಅವ್ಯವಸ್ಥೆ ಕಂಡು ವಾರ್ಡನ್ ಮತ್ತು ಸಿಬ್ಬಂದಿ ಮೇಲೆ ಹರಿಹಾಯ್ದರು. ಐದು ವರ್ಷಗಳಿಂದಲೂ ಹಳೆಯ ಬೆಡ್‌ಶೀಟ್‌ಗಳನ್ನೇ ಉಪಯೋಗಿ ಸುತ್ತಿದ್ದು, ದುರ್ವಾಸನೆ ಬೀರುತ್ತಿವೆ. ಸೊಳ್ಳೆ ಪರದೆಗಳಿಲ್ಲದೆ ಮಕ್ಕಳು ಮಲಗುತ್ತಿದ್ದಾರೆ. ಸರ್ಕಾರದಿಂದ ಒದಗಿಸಿದ ಹೊಸ ಹಾಸಿಗೆ, ಹೊದಿಕೆ, ಸೊಳ್ಳೆ ಪರದೆಗಳನ್ನು ಗಂಟುಕಟ್ಟಿ ಹಾಕಿದ್ದೀರಿ. ಅವನ್ನೇನು ಪೂಜೆ ಮಾಡ್ತೀರಾ? ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.ಮಕ್ಕಳಿಗೆ ಸರಿಯಾಗಿ ಊಟ ಕೊಡುತ್ತಿಲ್ಲ ಎಂಬ ದೂರು ಬಂದಿದೆ. ನೀವೇನು ನಿಮ್ಮ ಮನೆಯಿಂದ ತಂದು ಕೊಡುವುದಿಲ್ಲ. ಸರ್ಕಾರ ಕೊಟ್ಟಿದ್ದನ್ನೂ ಮಕ್ಕಳಿಗೆ ಸಮರ್ಪಕವಾಗಿ ಕೊಡಲಾಗುತ್ತಿಲ್ಲ ಎಂದರೆ ಹೇಗೆ? ಶಾಲೆ ನಡೆಯುತ್ತಿರುವ ಮನೆಗಳು ಪಟ್ಟಣದ ಹೊರವಲಯದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಕರೆಂಟ್ ಹೋದರೆ ಬೆಳಕಿಗೆ ಒಂದು ಬದಲಿ ವ್ಯವಸ್ಥೆಯನ್ನೂ ಮಾಡಿಲ್ಲ. ತೊಟ್ಟಿ ತೊಳೆಯದೆ ನೀರಿನಲ್ಲಿ ಹುಳುಗಳಾಗಿವೆ. ಇದೇ ನೀರನ್ನು ಮಕ್ಕಳು ಕುಡಿದರೆ ರೋಗ ಬರುತ್ತದೆ. ನಿಮ್ಮ ಮಕ್ಕಳಿಗೂ ಹೀಗೇ ಮಾಡುತ್ತೀರಾ? ಎಂದು ವಾರ್ಡನ್ ಅವರನ್ನು ಪ್ರಶ್ನಿಸಿದರು.ಹಾಸ್ಟೆಲ್‌ನಲ್ಲಿ ಕುಡಿಯಲು, ಬಟ್ಟೆ ತೊಳೆಯಲು, ಸ್ನಾನ, ಶೌಚಕ್ಕೂ ನೀರಿಲ್ಲ ಎಂದು ಮಕ್ಕಳು ದೂರುತ್ತಿದ್ದಾರೆ. ಮಕ್ಕಳು ಮನೆಯ ಮೇಲ್ಛಾವಣೆಯಲ್ಲಿ ಬಿಸಿಲಿನಲ್ಲೇ ನಿಂತುಕೊಂಡು ಊಟ ಮಾಡುತ್ತಿದ್ದಾರೆ. ಫ್ಯಾನ್ ಕಿತ್ತು ಮೇಲೆ ಬೀಳುವ ಸ್ಥಿತಿಯಲ್ಲಿ ಇದ್ದರೂ ದುರಸ್ತಿ ಮಾಡಿಸಿಲ್ಲ. ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಎಲ್ಲರೂ ಕಾಟಾಚಾರಕ್ಕೆ ಕೆಲಸ ಮಾಡುತ್ತಿದ್ದೀರಿ. ತಕ್ಷಣವೇ ತೊಂದರೆಗಳನ್ನು ಸರಿಪಡಿಸದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜಿ.ಪಂ. ಅಧ್ಯಕ್ಷರು ಸಮಾಜ ಕಲ್ಯಾಣಾಧಿಕಾರಿಗೆ ಎಚ್ಚರಿಸಿದರು.ಜಿ.ಪಂ. ಸದಸ್ಯರಾದ ಪಾರ್ವತಮ್ಮ, ರಂಗಸ್ವಾಮಿ, ತಾ.ಪಂ. ಮಾಜಿ ಅಧ್ಯಕ್ಷ ಡಿ.ಕೆ. ಶಿವಮೂರ್ತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry