ಗುರುವಾರ , ಏಪ್ರಿಲ್ 15, 2021
23 °C

ವಾರ್ಡ್ ಮಟ್ಟದಲ್ಲೇ ಕಸ ವಿಂಗಡಣೆ, ಸಂಸ್ಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊದಲ ಹಂತದ ಯೋಜನೆಗೆ ಲಕ್ಷ್ಮಣ್‌ರಾವ್ ಉದ್ಯಾನದಲ್ಲಿ ಗುದ್ದಲಿ ಪೂಜೆಬೆಂಗಳೂರು: ನಗರದ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಮುಂದಾಗಿದೆ. ವಾರ್ಡ್‌ಮಟ್ಟದಲ್ಲೇ ಕಸ ವಿಂಗಡಿಸಿ, ಸಂಸ್ಕರಣೆ ಮಾಡಲು ಯೋಜನೆ ರೂಪಿಸಿದೆ. ಯೋಜನೆಯ ಮೊದಲ ಹಂತವಾಗಿ ಕಸವಿಂಗಡಣೆ ಮತ್ತು ಜೈವಿಕ ಅನಿಲ ಹಾಗೂ ಇಂಧನ ಉತ್ಪಾದನಾ ಘಟಕ ಸ್ಥಾಪನೆಗೆ ಪದ್ಮನಾಭನಗರದ ಯಡಿಯೂರು ವಾರ್ಡ್‌ನ ಲಕ್ಷ್ಮಣ್‌ರಾವ್ ಉದ್ಯಾನದಲ್ಲಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಎಂಟು ವಾರ್ಡ್‌ಗಳಿದ್ದು, ಪ್ರತಿದಿನ 32 ಟನ್ ಹಸಿ ಮತ್ತು 12 ಟನ್ ಒಣ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಘಟಕವು ರೂ 2.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, 50 ಟನ್ ಕಸ ವಿಂಗಡಣಾ ಸಾಮರ್ಥ್ಯವನ್ನು ಹೊಂದಿದೆ. ವಿಂಗಡಣೆಯಾದ ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಮತ್ತು ಇಂಧನ ಉತ್ಪಾದನೆಗೆ ಈಗಾಗಲೇ ಜರ್ಮನಿಯ 5 ಕಂಪೆನಿಗಳು ಮುಂದೆಬಂದಿವೆ. ಯಾವ ಕಂಪೆನಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಪ್ರಸ್ತಾವನೆ ಸಲ್ಲಿಸುತ್ತದೆಯೋ ಆ ಕಂಪೆನಿಗೆ ಗುತ್ತಿಗೆ ನೀಡಲಾಗುವುದು. ಘಟಕವು ಪ್ರತಿನಿತ್ಯ ಒಂದು ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.ಪದ್ಮನಾಭನಗರದಲ್ಲಿರುವ 7 ಉದ್ಯಾನವನ, ಯಡಿಯೂರು ಕೆರೆ, ಸಮುದಾಯ ಭವನ, ಪಾಲಿಕೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೇಕಾಗುವ 400 ಕಿಲೋವಾಟ್ ವಿದ್ಯುತ್ ಅನ್ನು ಈ ಘಟಕದಿಂದ ಪಡೆಯಬಹುದು. ಉಳಿದ 600 ಕಿಲೋವಾಟ್ ವಿದ್ಯುತ್ ಅನ್ನು ಬೆಸ್ಕಾಂಗೆ ಮಾರಾಟ ಮಾಡುವ ಚಿಂತನೆ ಇದೆ.

`ಜೈವಿಕ ಅನಿಲವನ್ನು ಉತ್ಪಾದನೆ ಮಾಡಿದ ನಂತರ ಉಳಿದ ತ್ಯಾಜ್ಯವನ್ನು ಗೊಬ್ಬರವಾಗಿ ಬಳಸಬಹುದು.ಘಟಕದ ಸುತ್ತಲೂ ವಾಸನೆ ಹರಡುವುದನ್ನು ತಡೆಗಟ್ಟಲು 600 ಬೇವಿನ ಸಸಿ ನೆಡಲು ಉದ್ದೇಶಿಸಲಾಗಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ~ ಎಂದು ಬಿಬಿಎಂಪಿ ಸದಸ್ಯ ಎನ್.ಆರ್.ರಮೇಶ್ ಪ್ರಜಾವಾಣಿ~ಗೆ ತಿಳಿಸಿದರು.ಶಾಶ್ವತ ಪರಿಹಾರಕ್ಕೆ ಸಚಿವರ ಭರವಸೆ

`ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಹಸಿ ತ್ಯಾಜ್ಯ ವಿಂಗಡಣಾ ಘಟಕ ಸ್ಥಾಪಿಸುವ ಮೂಲಕ ತಲೆದೂರಿರುವ ಕಸದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲಾಗುವುದು~ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ ಹೇಳಿದರು. ಪದ್ಮನಾಭನಗರದ ಯಡಿಯೂರು ವಾರ್ಡ್‌ನ ಲಕ್ಷ್ಮಣ್ ರಾವ್ ಬುಲೇವಾರ್ಡ್ ಉದ್ಯಾನದಲ್ಲಿ ಸೋಮವಾರ 2.25 ಕೋಟಿ ರೂಪಾಯಿ ವೆಚ್ಚದ 50 ಟನ್ ಸಾಮರ್ಥ್ಯದ ಕಸ ವಿಂಗಡಣಾ ಘಟಕ ಮತ್ತು ಜೈವಿಕ ಅನಿಲದಿಂದ ಇಂಧನ ಉತ್ಪಾದನಾ ಘಟಕದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.`ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಕಸ ವಿಂಗಡಣಾ ಘಟಕದ ಸ್ಥಾಪನೆಗೆ ಜಾಗವನ್ನು ಗುರುತಿಸಲಾಗುತ್ತಿದೆ. ಈ ಘಟಕಗಳ ನಿರ್ಮಾಣಕ್ಕೆ ಬೇಕಾದ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.