ವಾರ್ಡ್ ಮೀಸಲು ಇಂದೇ ಪ್ರಕಟಿಸಿ

7

ವಾರ್ಡ್ ಮೀಸಲು ಇಂದೇ ಪ್ರಕಟಿಸಿ

Published:
Updated:

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ವಾರ್ಡ್‌ವಾರು ಮೀಸಲಾತಿ ಅಂತಿಮ ಪಟ್ಟಿಯನ್ನು ಶುಕ್ರವಾರವೇ ಪ್ರಕಟಿಸಬೇಕು ಎಂದು ಹೈಕೋರ್ಟ್ ಗುರುವಾರ ಸರ್ಕಾರಕ್ಕೆ ತಾಕೀತು ಮಾಡಿದೆ.


ಮೀಸಲಾತಿ ಕರಡು ಪಟ್ಟಿಗೆ 2,500 ಆಕ್ಷೇಪಣೆಗಳು ಬಂದಿವೆ. ಇವುಗಳನ್ನು ಇತ್ಯರ್ಥಗೊಳಿಸಿ ಅಂತಿಮ ಪಟ್ಟಿ ಪ್ರಕಟಿಸಲು ಇನ್ನೂ ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಸರ್ಕಾರ ಮುಂದಿಟ್ಟಿದ್ದ ಕೋರಿಕೆಯನ್ನು ತಿರಸ್ಕರಿಸಿರುವ ಹೈಕೋರ್ಟ್, `ಮನಸ್ಸಿದ್ದಲ್ಲಿ ಮಾರ್ಗವಿದೆ' ಎಂದು ಬುದ್ಧಿಮಾತು ಹೇಳಿದೆ.

 

ಅಧ್ಯಕ್ಷ/ ಉಪಾಧ್ಯಕ್ಷ, ಮೇಯರ್/ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪಟ್ಟಿಯನ್ನು ಜನವರಿ 31ರಂದೇ ಪ್ರಕಟಿಸಬೇಕು ಎಂದು ಸರ್ಕಾರಕ್ಕೆ ಸ್ಪಷ್ಟ ಮಾತುಗಳಲ್ಲಿ ನಿರ್ದೇಶನ ನೀಡಿದೆ. ಈ ಪಟ್ಟಿ ಪ್ರಕಟಣೆಗೆ ಹೆಚ್ಚುವರಿಯಾಗಿ ಆರು ವಾರಗಳ ಕಾಲಾವಕಾಶ ಬೇಕು ಎಂದು ಸರ್ಕಾರ ಮನವಿ ಮಾಡಿತ್ತು.

 

ಮೀಸಲಾತಿ ಅಂತಿಮ ಪಟ್ಟಿಯನ್ನು 2 ದಿನಗಳಲ್ಲಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಇದೇ 19ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆನಂದ ಬೈರಾರೆಡ್ಡಿ ಮತ್ತು ಬಿ. ಮನೋಹರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶ ಕಾಯ್ದಿರಿಸಿತ್ತು.

 

`ಮೀಸಲಾತಿ ಕರಡು ಪಟ್ಟಿಗೆ ದೊಡ್ಡ ಸಂಖ್ಯೆಯಲ್ಲಿ ಬಂದಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಡಿ. 17ರೊಳಗೆ ಅಂತಿಮ ಪಟ್ಟಿ ಸಿದ್ಧಪಡಿಸುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಮುಂದಿಟ್ಟಿರುವ ವಾದವನ್ನು ಒಪ್ಪಲಾಗದು' ಎಂದು ಅದು ತನ್ನ ಆದೇಶದಲ್ಲಿ ಹೇಳಿದೆ.

 

`ವಾರ್ಡ್‌ವಾರು ಮೀಸಲಾತಿ ಅಂತಿಮ ಪಟ್ಟಿ ಸಿದ್ಧಪಡಿಸುವುದು ಸಂಕೀರ್ಣ ಕೆಲಸ ಎಂಬುದು ನಿಜ. ಆದರೆ ಮೀಸಲಾತಿ ಕರಡು ಪಟ್ಟಿ ಈಗಾಗಲೇ ಪ್ರಕಟವಾಗಿದೆ. ಸಾಕಷ್ಟು ಕಾಳಜಿ ವಹಿಸಿಯೇ ಕರಡು ಪಟ್ಟಿ ಸಿದ್ಧಪಡಿಸಲಾಗುತ್ತದೆ. ರಾಜ್ಯ ಸರ್ಕಾರ ಯಾವುದಾದರೂ ಅಂಶವನ್ನು ಸರಿಯಾಗಿ ಗಮನಿಸದೆ ಕರಡು ಸಿದ್ಧಪಡಿಸಿದ್ದರೆ ಮಾತ್ರ ಆಕ್ಷೇಪಣೆಗಳಿಗೆ ಹೆಚ್ಚಿನ ಮಹತ್ವ ಬರುತ್ತದೆ. ಬಂದಿರುವ ಎಲ್ಲ ಆಕ್ಷೇಪಣೆಗಳು ಕರಡು ಮೀಸಲಾತಿ ಪಟ್ಟಿಯಲ್ಲಿ ಗಂಭೀರ ಬದಲಾವಣೆ ತರುವುದಿಲ್ಲ' ಎಂದು ಆದೇಶದಲ್ಲಿ ಹೇಳಿದೆ.

 

ಮೀಸಲಾತಿ ಅಂತಿಮ ಪಟ್ಟಿಯನ್ನು ಇದೇ 17ರಂದು ನೀಡುವುದಾಗಿ ಸರ್ಕಾರ ಈ ಹಿಂದೆ ಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಭರವಸೆ ನೀಡಿತ್ತು. 19ರಂದು ನಡೆದ ವಿಚಾರಣೆಯ ವೇಳೆ, ಪಟ್ಟಿ ಸಲ್ಲಿಸಲು ಇನ್ನೂ ಎರಡು ವಾರ ಕಾಲಾವಕಾಶ ಬೇಕು ಎಂದು ಕೋರಿತು. ಈ ಹಿನ್ನೆಲೆಯಲ್ಲಿ ಡಿ. 17ರಿಂದ ಅನ್ವಯ ಆಗುವಂತೆ ಸರ್ಕಾರಕ್ಕೆ ನಾಲ್ಕು ದಿನಗಳ ಹೆಚ್ಚಿನ ಕಾಲಾವಕಾಶವನ್ನು ನ್ಯಾಯಪೀಠ ನೀಡಿದೆ. ಇದೇ 21ರಂದು (ಶುಕ್ರವಾರ) ಅಥವಾ ಅದಕ್ಕಿಂತ ಮೊದಲು ಪಟ್ಟಿ ಪ್ರಕಟಿಸಬೇಕು ಎಂದು ಆದೇಶದಲ್ಲಿ ಹೇಳಿದೆ.

 

ಮೀಸಲಾತಿ ಪಟ್ಟಿಯನ್ನು ತ್ವರಿತವಾಗಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಚುನಾವಣಾ ಆಯೋಗ ನವೆಂಬರ್ 8ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಪ್ರಮಾಣಪತ್ರ ಸಲ್ಲಿಸಿದ್ದ ಸರ್ಕಾರ, 2011ರ ಜನಗಣತಿಯ ಅಂಕಿ-ಅಂಶಗಳನ್ನು ನಿರೀಕ್ಷಿಸುತ್ತಿರುವ ಕಾರಣ ಮೀಸಲಾತಿ ಪಟ್ಟಿ ಪ್ರಕಟಣೆ ವಿಳಂಬ ಆಗಿರುವುದಾಗಿ ತಿಳಿಸಿತ್ತು. ಡಿ. 18ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲೂ ಸರ್ಕಾರ ಅದೇ ವಾದವನ್ನು ಮುಂದಿಟ್ಟಿತ್ತು.

 

ಈ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, `ಮೀಸಲಾತಿ ಪಟ್ಟಿಯನ್ನು ನೀಡುವಲ್ಲಿ ವಿಳಂಬ ಆಗಿರುವುದಕ್ಕೆ ಈ ಕಾರಣವನ್ನು ಒಪ್ಪಲಾಗದು' ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಆಯೋಗದ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ. ಆಯೋಗದ ಪರವಾಗಿ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿದ್ದರು.

 

ಸರ್ಕಾರಕ್ಕೆ ಪೀಕಲಾಟ

ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರದ ಒಳಗೆ ವಾರ್ಡ್‌ವಾರು ಮೀಸಲು ಪಟ್ಟಿ ಪ್ರಕಟಿಸಬೇಕು ಎಂದು ಹೈಕೋರ್ಟ್ ಕಟ್ಟಾಜ್ಞೆ ಮಾಡಿರುವುದು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.

 


ಈ ಆದೇಶ ಹೊರ ಬಿದ್ದ ನಂತರ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ರಾತ್ರಿ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದರು. ಕಾನೂನು ಸಚಿವ ಎಸ್. ಸುರೇಶಕುಮಾರ್, ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ಅಡ್ವೊಕೇಟ್ ಜನರಲ್ ಎಸ್.ವಿಜಯಶಂಕರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

 


ಕರಡು ಮೀಸಲು ಪಟ್ಟಿ ಪ್ರಕಟಿಸಿದ ನಂತರ ಸಾರ್ವಜನಿಕರಿಂದ ಹೆಚ್ಚು ಆಕ್ಷೇಪಣೆಗಳು ಬಂದಿದ್ದು, ಅವುಗಳ ಪರಿಶೀಲನೆ ನಡೆದಿದೆ. ಹೀಗಾಗಿ ಒಂದೇ ದಿನದಲ್ಲಿ ವಾರ್ಡ್‌ವಾರು ಮೀಸಲು ಪಟ್ಟಿ ಪ್ರಕಟಿಸುವುದು ಕಷ್ಟ ಎನ್ನುವ ವಿಷಯದ ಮೇಲೆಯೇ ಸಭೆಯಲ್ಲಿ ಹೆಚ್ಚು ಚರ್ಚೆಯಾಗಿದೆ.

 


ಹೈಕೋರ್ಟ್ ಆದೇಶದ ಪ್ರಕಾರ ಶುಕ್ರವಾರ ಮೀಸಲು ಪಟ್ಟಿ ಪ್ರಕಟಿಸದೇ ಇದ್ದಲ್ಲಿ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಅದರಿಂದ ಪಾರಾಗಲು ಯಾವ ತಂತ್ರ ಅನುಸರಿಸಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗಿದೆ.

 


ಸಂಪುಟ ಸಭೆ: ಹೈಕೋರ್ಟ್ ಆದೇಶ ಕುರಿತು ಚರ್ಚಿಸಲು ಶುಕ್ರವಾರ ಬೆಳಿಗ್ಗೆ 10ಕ್ಕೆ ತುರ್ತು ಸಂಪುಟ ಸಭೆ ಕರೆಯಲಾಗಿದೆ. ಹೈಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಸಂಬಂಧ ಈ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್ ಪುನರ್‌ಪರಿಶೀಲನಾ ಅರ್ಜಿಯನ್ನೂ ವಜಾ ಮಾಡಿದರೆ, ಅದನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್‌ಗೆ ಹೋಗುವುದಕ್ಕೂ ಸರ್ಕಾರ ಸಿದ್ಧತೆ ನಡೆಸಿದೆ.


 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry