ಮಂಗಳವಾರ, ಮೇ 18, 2021
22 °C

ವಾರ್ಡ್ ಸಮಿತಿ ಆದೇಶದಂತೆ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಾರ್ಡ್ ಸಮಿತಿಯಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣಿಗಳ ಬೆಂಬಲಿಗರಿಗೆ ಸದಸ್ಯತ್ವ ನೀಡಬಾರದು. ಸಮಿತಿ ಸೂಚಿಸುವ ಕೆಲಸಗಳೇ ವಾರ್ಡ್‌ನಲ್ಲಿ ಆಗಬೇಕು. ಪ್ರತಿ ತಿಂಗಳ ಸಭೆ ನಡೆಯುವ ದಿನವನ್ನು ನಿಗದಿ ಮಾಡಬೇಕು. ವಾರ್ಡ್ ಮಟ್ಟದಲ್ಲಿ ಜನಸ್ಪಂದನ ಸಭೆಯೂ ನಡೆಯಬೇಕು...'

ವಾರ್ಡ್ ಸಮಿತಿ ರಚನೆಗೆ ಸಂಬಂಧಿಸಿದಂತೆ ಸಿವಿಕ್ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಕೇಳಿಬಂದ ಸಲಹೆಗಳು ಇವು. ಪ್ರಾಸ್ತಾವಿಕವಾಗಿ ಮಾತನಾಡಿದ ಸಿವಿಕ್ ಸಂಸ್ಥೆ ಮುಖ್ಯಸ್ಥೆ ಕಾತ್ಯಾಯಿನಿ ಚಾಮರಾಜ್, `ವಾರ್ಡ್ ಸಮಿತಿ ಎಲ್ಲ ಅರ್ಥದಲ್ಲೂ ಮೂರನೇ ಹಂತದ ಸರ್ಕಾರ ಆಗಿರಬೇಕು' ಎಂದು ಪ್ರತಿಪಾದಿಸಿದರು.`ವಾರ್ಡ್ ಸಮಿತಿಗೆ ಪಾಲಿಕೆ ಸದಸ್ಯರೇ ತಮಗೆ ಬೇಕಾದವರನ್ನು ನೇಮಕ ಆಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳು ಇದರಿಂದ ರಕ್ಷಣೆ ಆಗುವುದಿಲ್ಲ. ಅರ್ಜಿಗಳನ್ನು ಆಹ್ವಾನಿಸಿ, ಅರ್ಹತೆ ಆಧಾರದ ಮೇಲೆ ಸದಸ್ಯರ ನೇಮಕ ಆಗಬೇಕು' ಎಂದು ಹೇಳಿದರು.`ವಾರ್ಡ್‌ನಲ್ಲಿ ಇರುವ ಸರ್ಕಾರಿ ಆಸ್ತಿ, ಶಾಲೆ-ಆಸ್ಪತ್ರೆಗಳು ಮತ್ತು ರಸ್ತೆಗಳ ವಿವರ ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳ ಸಮಗ್ರ ಮಾಹಿತಿ ವಾರ್ಡ್ ಸಮಿತಿಗಳಿಗೆ ಲಭ್ಯವಾಗಬೇಕು. ವರಮಾನ ಎಷ್ಟು ಬಂದಿದೆ, ಯಾವ ಉದ್ದೇಶಕ್ಕೆ ಹಣವನ್ನು ಖರ್ಚು ಮಾಡಲಾಗಿದೆ ಎಂಬುದರ ಲೆಕ್ಕ ಇಡಬೇಕು. ಪ್ರತಿ ವಾರ್ಡ್‌ಗೆ ಒಂದರಂತೆ ವೆಬ್‌ಸೈಟ್ ತೆರೆಯಬೇಕು' ಎಂದರು.`ನಿಗದಿತ ದಿನ ಸಭೆ ನಡೆಸದಿದ್ದರೆ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುವ ಬಿಬಿಎಂಪಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ವಾರ್ಡ್‌ನಲ್ಲಿ ಐದು ವರ್ಷಗಳ ಮುಂದಿನ ಗುರಿ ಇಟ್ಟುಕೊಂಡು ಪ್ರತಿಯೊಂದು ಯೋಜನೆ ರೂಪಿಸಬೇಕು. ಸಮಾಜ ಕಲ್ಯಾಣ ಯೋಜನೆಗಳೂ ವಾರ್ಡ್ ಸಮಿತಿ ಮೂಲಕವೇ ಅನುಷ್ಠಾನಕ್ಕೆ ಬರಬೇಕು' ಎಂದು ತಿಳಿಸಿದರು.ಕಾಂಗ್ರೆಸ್ ಮುಖಂಡ ಬಿ.ಕೆ. ಶಿವರಾಂ ಮಾತನಾಡಿ, `ಮತದಾನ ಮಾಡಿದವರಷ್ಟೇ ವಾರ್ಡ್ ಸಮಿತಿ ಸದಸ್ಯರಾಗಲು ಅರ್ಹರು ಎಂಬ ನಿಯಮ ಮಾಡಬೇಕು. ಎಲ್ಲ ಸಾರ್ವಜನಿಕ ಸೇವಾ ಸಂಸ್ಥೆಗಳನ್ನು ವಾರ್ಡ್ ಸಮಿತಿ ವ್ಯಾಪ್ತಿಗೆ ಒಳಪಡಿಸಬೇಕು. ನಾವೇ ಚುನಾಯಿಸಿ ಕಳುಹಿಸಿದ ವ್ಯಕ್ತಿಯ ಸುತ್ತಲೂ ನಾವೇ ಬೇಲಿ ನಿರ್ಮಿಸುವಂತಹ ವ್ಯವಸ್ಥೆ ಸೃಷ್ಟಿಯಾಗಿದೆ' ಎಂದು ವಿಷಾದಿಸಿದರು.ಬಿಬಿಎಂಪಿ ಸದಸ್ಯರೂ ಆದ ಜೆಡಿಎಸ್ ಮುಖಂಡ ಬಿ.ತಿಮ್ಮೇಗೌಡ, `ತೆರಿಗೆ ವಸೂಲಿ ಅಧಿಕಾರವೂ ವಾರ್ಡ್ ಸಮಿತಿಗೆ ಸಿಗಬೇಕು. ಕೋಟ್ಯಂತರ ತೆರಿಗೆ ಉಳಿಸಿಕೊಂಡ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಹ ಕೊಡಬೇಕು' ಎಂದು ಪ್ರತಿಪಾದಿಸಿದರು.ಸಭೆಯಲ್ಲಿ ಮಾತನಾಡಿದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕೆಲವು ಸಲಹೆಗಳನ್ನು ಮುಂದಿಟ್ಟರು. ಸಾರ್ವಜನಿಕರು ಕೊಟ್ಟ ಪ್ರತಿದೂರಿನ ಕುರಿತು ಸರಿಯಾದ ಮಾಹಿತಿ ಇಡಬೇಕು. ಸಮಿತಿ ಸಭೆಗಳನ್ನು ದಾಖಲಿಸಿ, ಅದನ್ನು ಸಾರ್ವಜನಿಕರು ಅವಲೋಕಿಸಲು ಮುಕ್ತವಾಗಿಡಬೇಕು. ಆಯಾ ವಾರ್ಡ್ ಚುನಾವಣೆಯಲ್ಲಿ ಸೋತ ಮೊದಲ ಇಬ್ಬರು ಅಭ್ಯರ್ಥಿಗಳನ್ನು ಸಮಿತಿಗೆ ಸದಸ್ಯರನ್ನಾಗಿ ಮಾಡಬೇಕು. ಹಣಕಾಸು ಪರಿಶೀಲನೆಗೆ ವ್ಯವಸ್ಥೆ ರೂಪಿಸಬೇಕೆಂಬ ಸಲಹೆಗಳು ಕೇಳಿಬಂದವು.ಸಭೆಗಳೇ ನಡೆದಿಲ್ಲ

`ಕಳೆದ ಜನವರಿಯಲ್ಲೇ ಎಲ್ಲ 198 ವಾರ್ಡ್‌ಗಳಲ್ಲಿ ಸಮಿತಿಗಳು ರಚನೆಯಾಗಿದ್ದರೂ ಕೇವಲ ಒಂದೇ ವಾರ್ಡ್‌ನಲ್ಲಿ ಇದುವರೆಗೆ ನಿಯಮಿತವಾಗಿ ಸಭೆ ನಡೆಸಲಾಗಿದೆ'-ಸಿವಿಕ್ ಸಂಸ್ಥೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬಿಬಿಎಂಪಿಯಿಂದ ಈ ವಿವರವನ್ನು ಪಡೆದಿದೆ. `ಪಿ.ಆರ್. ರಮೇಶ್ ಅವರ ವಾರ್ಡ್‌ನಲ್ಲಿ ಮಾತ್ರ ಸರಿಯಾಗಿ ಸಭೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ಬಿಬಿಎಂಪಿ ನೀಡಿದೆ' ಎಂದು ಕಾತ್ಯಾಯಿನಿ ಚಾಮರಾಜ್ ತಿಳಿಸಿದರು. `ಬಹುತೇಕ ಸಮಿತಿಗಳ ರಚನೆಯಲ್ಲಿ ಹೈಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿಲ್ಲ' ಎಂದೂ ಅವರು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.