ಮಂಗಳವಾರ, ನವೆಂಬರ್ 19, 2019
26 °C

ವಾರ್ಡ್ 56: ಶೇ 50ರಷ್ಟು ಮತದಾನ

Published:
Updated:

ಕೆ.ಆರ್.ಪುರ/ ಬೆಂಗಳೂರು: ಸದಸ್ಯತ್ವ ಅನರ್ಹತೆಯಿಂದ ತೆರವಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಎ.ನಾರಾಯಣಪುರ ವಾರ್ಡ್‌ಗೆ (ನಂ. 56) ಭಾನುವಾರ ಉಪ ಚುನಾವಣೆ ನಡೆಯಿತು. ಶೇ 50.59ರಷ್ಟು ಮತದಾನವಾಗಿದೆ.ಈ ವಾರ್ಡ್ ವ್ಯಾಪ್ತಿಗೆ ಉದಯನಗರ, ದರ್ಗ ಮಹಲ್, ಜ್ಯೋತಿಪುರ ಗ್ರಾಮಗಳು ಬರುತ್ತವೆ. ಡಿ.ಎ. ಗೋಪಾಲ್ (ಕಾಂಗ್ರೆಸ್), ವಿಜಯ ಪ್ರಸಾದ್ (ಬಿಜೆಪಿ), ಸಯ್ಯದ್ ಬಕ್ತಿಯಾರ್ (ಜೆಡಿಎಸ್), ಸಿ.ರಮೇಶ್ (ಸಿಪಿಎಂ), ಎಚ್.ಎಸ್. ಅಮಾನುಲ್ಲಾ ಮತ್ತು ಕೆ.ಕುಮಾರ್ (ಪಕ್ಷೇತರರು) ಕಣದಲ್ಲಿ ಇದ್ದರು.14839 ಪುರುಷರು ಮತ್ತು 13563 ಮಹಿಳೆಯರು ಒಟ್ಟಾರೆ 28,407 ಮತದಾರರ ಪೈಕಿ 14,370 ಜನ ತಮ್ಮ ಪರಮಾಧಿಕಾರ ಚಲಾಯಿಸಿದರು. ಮತಗಟ್ಟೆ ನಂ. 8ರಲ್ಲಿ ಅತಿ ಕಡಿಮೆ (ಶೇ 28.86) ಮತ್ತು ಮತಗಟ್ಟೆ ನಂ. 12ರಲ್ಲಿ ಅತಿ ಹೆಚ್ಚು (67.85) ಮತದಾನ ದಾಖಲಾಗಿದೆ. ಏ. 10ರಂದು ಮತ ಎಣಿಕೆ ನಡೆಯಲಿದೆ.ಹಿಂದುಳಿದ ಎ ವರ್ಗಕ್ಕೆ ಈ ವಾರ್ಡಿನ ಸ್ಥಾನ ಮೀಸಲಾಗಿದೆ. ಈ ವಾರ್ಡ್‌ನಿಂದ ಆಯ್ಕೆಯಾಗಿದ್ದ ಎಸ್.ಎಸ್. ಪ್ರಸಾದ್ ಮೀಸಲಾತಿ ಲಾಭ ಪಡೆಯಲು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರಕರಣ ಕೋರ್ಟ್ ಕಟ್ಟೆಯನ್ನೂ ಏರಿತ್ತು. ಸದಸ್ಯತ್ವ ರದ್ದುಗೊಳಿಸಿ ತೀರ್ಪು ಹೊರಬಿದ್ದಿತ್ತು.ಬೆಳಗಿನಿಂದಲೂ ಮತದಾನ ಮಂದಗತಿಯಲ್ಲಿ ಇತ್ತು. ಹೊತ್ತು ಏರುತ್ತಿದ್ದಂತೆ ಬಿಸಿಲಿನ ಪ್ರಖರತೆ ಹೆಚ್ಚಾಗಿ ಮತಗಟ್ಟೆಗಳು ಭಣಗುಡಲು ಆರಂಭಿಸಿದವು.ಸಂಜೆಯ ಇಳಿಹೊತ್ತಿನಲ್ಲಿ ಮತಗಟ್ಟೆಗಳಲ್ಲಿ ಮತ್ತೆ ಒಂದಿಷ್ಟು ಚಟುವಟಿಕೆ ಕಾಣಿಸಿಕೊಂಡಿತು. ಒಟ್ಟು 34 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಶಾಂತಿಯುತವಾಗಿ ಮತದಾನ ನಡೆಯಿತು. ವಾರ್ಡ್ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)