ಗುರುವಾರ , ಮೇ 19, 2022
23 °C

ವಾಲಿಬಾಲ್: ಕರ್ನಾಟಕ ತಂಡಗಳಿಗೆ ಅಗ್ರಸ್ಥಾನ

ಗಿರೀಶ ದೊಡ್ಡಮನಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಟೂರ್ನಿಯ ಎಂಟರ ಘಟ್ಟಕ್ಕೆ ಈಗಾಗಲೇ ಲಗ್ಗೆ ಹಾಕಿರುವ  ಕರ್ನಾಟಕದ ಬಾಲಕ-ಬಾಲಕಿಯರ ತಂಡಗಳು ಲೀಗ್ ಹಂತದ ತಮ್ಮ ಗುಂಪುಗಳಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿಯೂ ಯಶಸ್ವಿಯಾಗಿವೆ.



ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಲೀಗ್ ಹಂತದ ಕೊನೆಯ ಸುತ್ತಿನ ಪಂದ್ಯಗಳಲ್ಲಿಯೂ ಜಯ ಸಾಧಿಸಿದ ಬಾಲಕರ ತಂಡ ಎ ಗುಂಪಿನಲ್ಲಿ ಮತ್ತು ಬಾಲಕಿಯರ ಬಿ ಗುಂಪಿನಲ್ಲಿ ಕರ್ನಾಟಕ ತಂಡಗಳು ಮೊದಲ ಸ್ಥಾನ ಗಳಿಸಿದವು. ಬಾಲಕರ ತಂಡವು ವಿಭಾಗದಲ್ಲಿ ಎಲ್ಲ ಐದು ಪಂದ್ಯಗಳನ್ನು ಗೆದ್ದು ಹತ್ತು ಪಾಯಿಂಟ್ ಮತ್ತು ಬಾಲಕಿಯರು ಎಲ್ಲ ನಾಲ್ಕು ಪಂದ್ಯಗಳನ್ನೂ ಜಯಿಸಿ ಎಂಟು ಪಾಯಿಂಟ್ ಗಳಿಸಿ ಅಗ್ರಸ್ಥಾನ ಗಳಿಸಿವೆ.



ಸೋಮವಾರ ಬೆಳಿಗ್ಗೆ ನಡೆದ ಪಂದ್ಯದಲ್ಲಿ ಬಾಲಕರ ಪಂದ್ಯದಲ್ಲಿ ಆತಿ ಥೇಯ ಕರ್ನಾಟಕ ತಂಡವು 25-5, 27-25, 25-7ರಿಂದ ಮಣಿಪುರ ತಂಡವನ್ನು ನಿರಾಯಾಸವಾಗಿ ಮಣಿಸಿತು.



ಭಾನುವಾರ ರಾತ್ರಿ ಚಾಂಪಿಯನ್ ಹರಿಯಾಣಕ್ಕೆ ಸೋಲಿನ ರುಚಿ ತೋರಿಸಿದ್ದ ಹುರುಪಿನಲ್ಲಿದ್ದ ನಿಖಿಲ್ ಗೌಡ ಬಳಗವು ಗೆಲುವಿನ ಓಟವನ್ನು ಮುಂದುವರಿಸಿತು. ಪ್ರೇಕ್ಷಕರ ಗ್ಯಾಲರಿ ಯಲ್ಲಿ ಬ್ಯಾಂಡ್ ಸದ್ದು  ಮುಗಿಲು ಮಟ್ಟಲು ಕರ್ನಾಟಕದವರ ಉತ್ತಮ ಪ್ರದರ್ಶನ ಕಾರಣವಾಯಿತು. ಮನೋಜ್, ನಿಖಿಲ್ ಮತ್ತು ಅಕೀಬ್ ತಮ್ಮ ಸ್ಲೋಡ್ರಾಪ್, ಬ್ಲಾಕ್ ಮತ್ತು ಸ್ಮ್ಯಾಷ್‌ಗಳ ಮೂಲಕ ಮಣಿಪುರದ ಹೇಮಂತಸಿಂಗ್ ನಾಯಕತ್ವದ ತಂಡವನ್ನು ತಬ್ಬಿಬ್ಬುಗೊಳಿಸಿದರು.



ಮಿಂಚಿದ ಬಾಲಕಿಯರು: ರಾತ್ರಿ ಹೊನಲು ಬೆಳಕಿನಲ್ಲಿ ಬಲಾಢ್ಯ ಪಂಜಾಬ್ ತಂಡವನ್ನು ಮಣಿಸಿದ ಕರ್ನಾಟಕದ ಬಾಲಕಿಯರು ಮಿಂಚಿ ದರು.



ಕೆ.ವಿ. ಮೇಘಾ ನಾಯಕತ್ವದ ಬಾಲಕಿಯರ ತಂಡವು 25-16, 25-12, 25-14ರಿಂದ ಪಂಜಾಬಿನ ರಾಜವೀರ್ ಕೌರ್ ಬಳಗವನ್ನು ಸೋಲಿಸಿತು. ಇದರೊಂದಿಗೆ ಕರ್ನಾಟಕ ಬಿ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರೆ, ಪಂಜಾಬ್ ಎಂಟರ ಘಟ್ಟಕ್ಕೆ ಅರ್ಹತೆ ಗಿಟ್ಟಿಸುವಲ್ಲಿ ಎಡವಿತು.



ಕಿಕ್ಕಿರಿದು ಸೇರಿದ ಪ್ರೇಕ್ಷಕರ ಕೇಕೆ, ಚಪ್ಪಾಳೆಗಳ ನಡುವೆ ಮಿಂಚಿದ ಎಸ್.ಪಿ. ಗಾನವಿ ನೆಟ್ ಸಮೀಪ ತಮ್ಮ ಕೈಚಳಕ ತೋರಿದರು. ಉತ್ತಮ ಸ್ಮ್ಯಾಷ್ ಮತ್ತು ಸ್ಲೋ ಡ್ರಾಪ್‌ಗಳ ಮೂಲಕ ಎದುರಾಳಿಗಳನ್ನು ಕಾಡಿ ದರು. ಅಭಿಲಾಷಾ (1) ಲಿಫ್ಟ್ ಮತ್ತು ವರ್ಷಿತಾ ಪಾಸ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವು. 

ಕಳೆದ ಬಾರಿಯ ಚಾಂಪಿಯನ್ ತಮಿಳುನಾಡು 25-8, 25-5, 25-11ರಿಂದ ಮಧ್ಯಪ್ರದೇಶ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.



ಮಂಗಳವಾರ ಸಂಜೆ ನಡೆಯುವ ಕ್ವಾರ್ಟರ್‌ಫೈನಲ್‌ಗಳು:



ಬಾಲಕರು:ಕರ್ನಾಟಕ ವಿರುದ್ಧ ಮಹಾರಾಷ್ಟ್ರ, ಹರಿಯಾಣ ವಿರುದ್ಧ ತಮಿಳುನಾಡು, ಉತ್ತರ ಪ್ರದೇಶ ವಿರುದ್ಧ ರಾಜಸ್ತಾನ, ಉತ್ತರಾಖಂಡ ವಿರುದ್ಧ ಕೇರಳ.

ಬಾಲಕಿಯರು: ಕರ್ನಾಟಕ ವಿರುದ್ಧ ಹರಿಯಾಣ, ರಾಜಸ್ತಾನ ವಿರುದ್ಧ ಪಶ್ಚಿಮ ಬಂಗಾಳ, ತಮಿಳುನಾಡು ವಿರುದ್ಧ ಮಹಾರಾಷ್ಟ್ರ, ಉತ್ತರಪ್ರದೇಶ ವಿರುದ್ಧ ಕೇರಳ.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.