ವಾಲಿಬಾಲ್: ಫೈನಲ್‌ಗೆ ಕರ್ನಾಟಕ ಬಾಲಕರು

7

ವಾಲಿಬಾಲ್: ಫೈನಲ್‌ಗೆ ಕರ್ನಾಟಕ ಬಾಲಕರು

Published:
Updated:

ವಿಜಾಪುರ: ಆತಿಥೇಯ ಕರ್ನಾಟಕದ ಬಾಲಕರು ಬುಧವಾರ ರಾತ್ರಿ 37ನೇ ರಾಷ್ರೀಯ ಜೂನಿಯರ್ ವಾಲಿಬಾಲ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೇರಳ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಬಾಲಕಿಯರ ವಿಭಾಗದ ಸೆಮಿಫೈನಲ್ ನಲ್ಲಿ ಕರ್ನಾಟಕ ತಂಡದ ಸೋಲನ್ನು ನೋಡಿ ನಿರಾಶರಾಗಿದ್ದ ಸಾವಿರಾರು ಜನರಿಗೆ ಬಾಲಕರು ಗೆಲುವಿನ ಕಾಣಿಕೆ ನೀಡಿದರು.ಕರ್ನಾಟಕ ತಂಡವು 25-23, 25-22, 25-18ರಿಂದ ಕೇರಳ ಹುಡುಗರಿಗೆ ಸೋಲಿನ ರುಚಿ ತೋರಿಸಿದರು. ಕೇರಳದ ಓ. ಎಸ್. ಸಜಯ್ ನೇತೃ ತ್ವದ ತಂಡವು ಒಡ್ಡಿದ ಸವಾಲುಗಳಿಗೆ ತಕ್ಕ ಉತ್ತರ ನೀಡಿದ ಕರ್ನಾಟಕದ ಹುಡುಗರ ಛಲದ ಆಟಕ್ಕೆ ಜಯ ಒಲಿಯಿತು. ಕರ್ನಾಟಕದ ಮೊಹ್ಮದ್ ಅಕೀಬ್, ಗೋವಿಂದಸ್ವಾಮಿ, ಕೆ. ಸಂದೀಪ್ ಮತ್ತು ನಾಯಕ ನಿಖಿಲ್ ಗೌಡ ಅವರ ಬ್ಲಾಕ್, ಸ್ಲೋಡ್ರಾಪ್ ಮತ್ತು ಸ್ಮ್ಯಾಷ್‌ಗಳು ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದವು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲ ಸೆಟ್‌ನಲ್ಲಿ ಅತ್ಯಂತ ತುರುಸಿನ ಪೈಪೋಟಿ ಕಂಡುಬಂದಿತು. ಎರಡನೇ ಸೆಟ್‌ನಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ಮಾಡಿದರೂ ಕರ್ನಾಟಕದ ಸಮಯೋಜಿತ ಆಟಕ್ಕೆ ಜಯ ಒಲಿಯಿತು. ಮೂರನೇ ಸೆಟ್‌ನಲ್ಲಿ ಆತಿಥೇಯ ಹುಡುಗರು ಎದುರಾಳಿಗಳಿಗೆ ಹೆಚ್ಚಿನ ಅವಕಾಶವನ್ನೇ ನೀಡಲಿಲ್ಲ.ಬಾಲಕಿಯರಿಗೆ ನಿರಾಶೆ:  ಬಾಲಕಿ ಯರ ವಿಭಾಗದ ಸೆಮಿಫೈನಲ್‌ನ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದ ಕೇರಳ ತಂಡ 25-15, 25-19, 25-12ರಿಂದ ಕರ್ನಾಟಕ ವನ್ನು ಮಣಿಸಿ ಅಂತಿಮ ಹಂತಕ್ಕೆ ಲಗ್ಗೆಯಿಟ್ಟರು.ನಾಯಕಿಗೆ ತಕ್ಕ ಆಟವಾಡಿದ ಎಂ.ಎಸ್. ಪೂರ್ಣಿಮಾ ತಮ್ಮ ಬ್ಲಾಕ್ ಮತ್ತು ಸ್ಮ್ಯಾಷ್‌ಗಳ ಮೂಲಕ ಕರ್ನಾ ಟಕದ ಹುಡುಗಿಯರಿಗೆ ಸೋಲಿನ ಹಾದಿ ತೋರಿಸಿದರು.

ನಾಯಕಿ ಕೆ.ವಿ. ಮೇಘನಾ ಉತ್ತಮ ಬ್ಲಾಕ್ ಮತ್ತು ಸ್ಮ್ಯಾಷ್ ಗಳನ್ನು ಪ್ರದರ್ಶಿಸಿದರಾದರೂ ತಂಡಕ್ಕೆ ಗೆಲುವು ಕೊಡಿಸುವಲ್ಲಿ ಸಫಲರಾಗಲಿಲ್ಲ.  ಲಿಫ್ಟರ್ ಅಭಿಲಾಷಾ ಕೂಡ ಸಾಧಾರಣ ಪ್ರದರ್ಶನ ನೀಡಿದರು. ಆದರೆ ಕೇರಳದ ಹುಡುಗಿಯರು ಯಾವುದೇ ಹಂತದಲ್ಲಿಯೂ ಎದೆಗುಂದಲಿಲ್ಲ. ತಣ್ಣಗೆ ಆಟವಾಡಿ ಎದುರಾಳಿಗಳನ್ನು ಕಂಗೆಡಿಸಿದರು. ತಂಡಕ್ಕೆ ಎಫ್.ಪಿ. ರೇಷ್ಮಾ ಮತ್ತು ಕೆ.ಎಸ್. ಸ್ಮಿಷಾ ಅವರು ಹಲವು ಪಾಯಿಂಟ್‌ಗಳ ಕಾಣಿಕೆ ನೀಡಿದರು.ಕಳೆದ ವರ್ಷ ರನ್ನರ್ಸ್ ಅಪ್ ಆಗಿದ್ದ ಕರ್ನಾಟಕ ತಂಡ, ಗುರುವಾರ ಬೆಳಿಗ್ಗೆ ಈ ಟೂರ್ನಿಯ ಮೂರನೇ ಸ್ಥಾನಕ್ಕಾಗಿ ಪಶ್ಚಿಮ ಬಂಗಾಳದ ವಿರುದ್ಧ ಆಡಿ ಗೆಲ್ಲಬೇಕು.

ತಮಿಳುನಾಡಿಗೆ ಗೆಲುವು: ಕಳೆದ ವರ್ಷದ ಚಾಂಪಿಯನ್ ತಮಿಳು ನಾಡು ಬಾಲಕಿಯರ ತಂಡವು ಈ ಬಾರಿಯೂ ಫೈನಲ್‌ಗೆ ಪ್ರವೇಶಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry