ವಾಲ್ಮೀಕಿ ಜಯಂತಿ; ಅದ್ದೂರಿ ಮೆರವಣಿಗೆ

7

ವಾಲ್ಮೀಕಿ ಜಯಂತಿ; ಅದ್ದೂರಿ ಮೆರವಣಿಗೆ

Published:
Updated:

ಚಿಕ್ಕಬಳ್ಳಾಪುರ: ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ನಗರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸ್ತಬ್ಧಚಿತ್ರಗಳ ಪ್ರದರ್ಶನ ಮತ್ತು ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದಲೂ ಆಗಮಿಸಿದ್ದ ಮಹರ್ಷಿ ವಾಲ್ಮೀಕಿ ಸಂಘದ ಮುಖಂಡರು, ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.ಜಯಂತಿ ಹಿನ್ನೆಲೆಯಲ್ಲಿ ಮಂಗಳವಾರ ನಸುಕಿನಿಂದಲೇ ಸಿದ್ಧತಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ವಾಲ್ಮೀಕಿ ಸಂಘದ ಸದಸ್ಯರು ಪ್ರಮುಖ ಬೀದಿಗಳಲ್ಲಿ, ಸ್ಥಳಗಳಲ್ಲಿ, ವೃತ್ತಗಳಲ್ಲಿ ಮತ್ತು ಕಂಬಗಳ ಮೇಲೆ ಶುಭಾಶಯಗಳನ್ನು ಕೋರುವ ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಿದರು. ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದರು.ನಗರದ ಹೊಸ ಬಸ್ ನಿಲ್ದಾಣದಿಂದ ಒಕ್ಕಲಿಗರ ಭವನದವರೆಗೆ ಆಯೋಜಿಸಲಾಗಿದ್ದ ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ವಿವಿಧ ತಾಲ್ಲೂಕುಗಳಿಂದ 50ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದವು. ಬಹುತೇಕ ವಾಹನಗಳಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರವಿದ್ದರೆ, ಇನ್ನೂ ಕೆಲ ವಾಹನಗಳಲ್ಲಿ ಕಲಾವಿದರು ಮಹರ್ಷಿ ವಾಲ್ಮೀಕಿಯ ವೇಷಧಾರಿಗಳಾಗಿ ಅಲಂಕೃತಗೊಂಡಿದ್ದರು. ಮಹಾತ್ಮ ಗಾಂಧಿ, ಕೃಷ್ಣ, ಹನುಮಂತನ ವೇಷಧಾರಿಗಳು ಸಹ ಕಂಡು ಬಂದರು. ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಎನ್.ಮಂಜುಳಾ ಚಾಲನೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಟಿ.ಡಿ.ಪವಾರ್ ಶುಭ ಹಾರೈಸಿದರು.ವೀರಗಾಸೆ ನೃತ್ಯ, ಹುಲಿವೇಷ ನೃತ್ಯ, ಬೃಹತ್ ಗೊಂಬೆಗಳ ನೃತ್ಯ, ಕುದುರೆ ಕುಣಿತ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸುವ ಜಾನಪದ ಕಲಾವಿದರು ಪಾಲ್ಗೊಂಡು ಮೆರವಣಿಗೆಗೆ ಇನ್ನಷ್ಟು ರಂಗೇರಿಸಿದರು. ಜಾನಪದ ಕಲಾವಿದರ ನೃತ್ಯವನ್ನು ನೋಡಲು ನೂಕುನುಗ್ಗಲು ಕೂಡ ಉಂಟಾಯಿತು.ನಿರೀಕ್ಷೆಗೂ ಮೀರಿ ವಾಹನಗಳು, ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರಿಂದ ನಗರದ ಎಂ.ಜಿ.ರಸ್ತೆ, ಬಿ.ಬಿ.ರಸ್ತೆಯಲ್ಲಿ ಕೆಲ ಕಾಲ ವಾಹನ ದಟ್ಟಣೆ ಉಂಟಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry