ಮಂಗಳವಾರ, ಡಿಸೆಂಬರ್ 10, 2019
26 °C
ರಾಜಾತಿಥ್ಯದ ಸವಿ

ವಾವ್ಹಾ ಖಾನಾ ನವಾಬ್ ಕಾ...

Published:
Updated:
ವಾವ್ಹಾ ಖಾನಾ ನವಾಬ್ ಕಾ...

ತ್ತರಪ್ರದೇಶದ ರಾಂಪುರಿ- ಅವಧಿ ಷಾಹಿ ನವಾಬರಿಗೆ ಪ್ರಸಿದ್ಧಿ. ನವಾಬರಷ್ಟೇ ಪ್ರಸಿದ್ಧಿ ಅಲ್ಲಿನ ರಾಜಮನೆತನದ ಊಟೋಪಚಾರ. ಅಂಥ ಊಟದ ರುಚಿಯನ್ನು ಸವಿಯಬೇಕೆನ್ನುವ ಆಸೆ ಯಾರಿಗೆ ತಾನೆ ಇರೋಲ್ಲ ಹೇಳಿ? ಆದರೆ, ಅಂಥ ಊಟ ಸಿಗೋದಾದ್ರೂ ಎಲ್ಲಿ ಅಂತೀರಾ? ಈ ಪ್ರಶ್ನೆಗೆ  ಉತ್ತರ ‘ಕೀಸ್ ಹೋಟೆಲ್’ನಲ್ಲಿದೆ.ಹೌದು, ನಗರದ ಹೊಸೂರು ರಸ್ತೆಯ ಸಿಂಗಸಂದ್ರದ ಬಳಿ ಇರುವ ‘ಕೀಸ್ ಹೋಟೆಲ್’ನಲ್ಲಿ ಸೆ.8ರ ತನಕ ನವಾಬ್ ಮನೆತನದ ‘ಷಾಹೀ ಖಾನಾ’ ಸವಿಯಬಹುದು. ಅದೂ ಅತಿ ಕಡಿಮೆ ಬೆಲೆಯಲ್ಲಿ! (ಡಿನ್ನರ್ ಬಫೆ ₨ 450ರಿಂದ ಆರಂಭ).ಆಗಸ್ಟ್ 30ರಿಂದ ಆರಂಭವಾಗಿರುವ ‘ಅವಧಿ ಫುಡ್ ಫೆಸ್ಟಿವಲ್’ನಲ್ಲಿ ಉತ್ತರ ಪ್ರದೇಶದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಊಟದ ಬಗೆಬಗೆ ರುಚಿಗಳನ್ನು ಸವಿಯುವ ಅವಕಾಶವನ್ನು ‘ಕೀಸ್ ಹೋಟೆಲ್’ ಗ್ರಾಹಕರಿಗೆ ಕಲ್ಪಿಸಿದೆ. ಈ ಆಹಾರ ಉತ್ಸವ ಸೆ. 8ರವರೆಗೆ ನಡೆಯಲಿದೆ.‘ಭೌಗೋಳಿಕವಾಗಿ ಪ್ರಾದೇಶಿಕ ಭಿನ್ನತೆ ಇರುವಂತೆ ಊಟೋಪಚಾರದಲ್ಲೂ ದಕ್ಷಿಣ-, ಉತ್ತರದ ನಡುವೆ ಭಿನ್ನತೆ ಇದೆ. ಅಡುಗೆ ಮಾಡುವ ವಿಧಾನ, ಮೂಲ ಮಸಾಲೆಗಳ ಬಳಕೆಯಲ್ಲಿ ಕೆಲವು ಸಾಮ್ಯವಿದ್ದರೂ ರುಚಿಯಲ್ಲಿ ಭಿನ್ನತೆ ಇದ್ದೇ ಇರುತ್ತದೆ. ಈ ಭಿನ್ನ ರುಚಿ ಮೂಲಕವೇ ಗ್ರಾಹಕರನ್ನು ಹೋಟೆಲ್‌ಗೆ ಕರೆತರುವ ಉದ್ದೇಶ ಈ ಆಹಾರೋತ್ಸವದ್ದು’ ಎನ್ನುತ್ತಾರೆ ಉತ್ಸವದ ಆಯೋಜಕ ಕೃಷ್ಣ ಪಾಂಡೆ.‘ಅವಧಿ ಪ್ರದೇಶ ಆಗ್ರಾಕ್ಕೆ ಹತ್ತಿರವಾಗಿರುವಂಥದ್ದು. ಹಾಗಾಗಿ ಉತ್ಸವದ ಆಹಾರದಲ್ಲಿ ನವಾಬರ ಮನೆತನದ ರುಚಿ ಸಹಜವಾಗಿಯೇ ಕಂಡುಬರುತ್ತದೆ. ಉತ್ಸವಕ್ಕಾಗಿ ಲಖನೌನಿಂದ ಬಂದಿರುವ ಬಾಣಸಿಗರಾದ ಇಮ್ರಾನ್‌ ಖಾನ್ ಮತ್ತು ನೂರ್ ಮೊಹಮ್ಮದ್ ಅವರ ಕೈರುಚಿಗೆ ಈಗಾಗಲೇ ಬೆಂಗಳೂರಿಗರು ಮನಸೋತಿದ್ದಾರೆ’ ಎನ್ನುತ್ತಾರೆ ಅವರು.ಮಂದ ಉರಿಯ ರುಚಿ

ಮಂದವಾಗಿ ಉರಿಯುವ ಬೆಂಕಿಯಲ್ಲಿ ಆಹಾರ ಬೇಯಿಸುವುದರಿಂದ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ. ಇಲ್ಲಿಗೆ ಬರುವ ಗ್ರಾಹಕರು ಊಟವನ್ನು ನಾಲಿಗೆಯಿಂದಷ್ಟೇ ಅಲ್ಲ, ವಾಸನೆ ಮತ್ತು ನೋಟದ ಮೂಲಕವೂ ಆಸ್ವಾದಿಸುತ್ತಾರೆ. ಇಂಥ ಆಸ್ವಾದನೆಗೆ ತಕ್ಕಂತೆ ಆಹಾರ ರೂಪಿಸಿರುವುದೇ ಈ ಆಹಾರೋತ್ಸವದ ವಿಶೇಷ.ಉಲ್ಟಾ ತವಾದ ಪರೋಟ

‘ಉಲ್ಟಾ ತವಾ’ದಲ್ಲಿ ಪರೋಟವನ್ನು ಉಲ್ಟಾ ಬೇಯಿಸಲಾಗುತ್ತದೆ. ಇದು ಕೇರಳದ ಪರೋಟಕ್ಕಿಂತಲೂ ಹೆಚ್ಚು ಮೃದುವಾಗಿರುತ್ತದೆ. ಬಾಯಲ್ಲಿಟ್ಟರೆ ಸಾಕು ಹಾಗೇ ಕರಗುತ್ತದೆ. ಇದರ ಜತೆ ನೆಂಚಿಕೊಳ್ಳಲು ನೀಡಿದ್ದ ‘ದಾಲ್ ಅಸ್ಮತ್’, ‘ದಮ್ ಪನ್ನೀರ್’ ಮತ್ತು ‘ಬೈಂಗನ್ ಕಾ ಸಾಲಂದರ್‌’ನಿಂದ ಪರೋಟದ ರುಚಿ ಮತ್ತಷ್ಟು ಹೆಚ್ಚಿ, ಬಾಯಿ ಚಪ್ಪರಿಸುವಂತಾಗುತ್ತದೆ. ಅದರಲ್ಲೂ ‘ಬೈಂಗನ್ ಕಾ ಸಾಲಂದರ್’ ಈ ಪರೋಟಕ್ಕೆ ಉತ್ತಮ ಜೋಡಿ.ಲ್ಯಾಂಬ್‌ನ ಕಮಾಲ್

ಇದಿಷ್ಟು ಸಸ್ಯಾಹಾರದ ಮಾತಾಯಿತು. ಇನ್ನು ಮಾಂಸಾಹಾರದ ಖದರೇ ಬೇರೆ. ಕುರಿಮರಿಯ ಎಳೆ ಮಾಂಸ (ಲ್ಯಾಂಬ್) ಬಳಸಿ ಮಾಡಿದ್ದ ‘ಗಲೌಂಟಿ ಕಬಾಬ್’ ಎಂಥವರ ಬಾಯಲ್ಲೂ ನೀರೂರಿಸದೇ ಇರದು. ಲ್ಯಾಂಬ್‌ನ ಮಾಂಸವನ್ನು ಪಟ್ಟೆಯಾಕಾರದಲ್ಲಿ ಕತ್ತರಿಸಿ, ಶುದ್ಧ ತುಪ್ಪದೊಳಗೆ ಕಂದು ಬಣ್ಣ ಬರುವವರೆಗೂ ಕರಿದು ತಯಾರಿಸಲಾಗುವ ‘ಗಲೌಂಟಿ ಕಬಾಬ್’ ಲಖನೌ ಬಿರಿಯಾನಿಯನ್ನು ಹೋಲುತ್ತದೆ. ಇದು ಅವಧಿಯ ಸಿಗ್ನೇಚರ್ ಡಿಷ್ ಆಗಿದ್ದು, ಲಖನೌ ನವಾಬ ವಾಜಿದ್ ಅಲಿ ಷಾನ ಫೇವರಿಟ್ ಕೂಡ ಆಗಿತ್ತಂತೆ.ಬಾಯಲ್ಲಿ ಹಲ್ಲಿಲ್ಲದ ಆ ನವಾಬನಿಗಾಗಿಯೇ ಬಾಣಸಿಗರು ವಿಶೇಷವಾಗಿ ರೂಪಿಸಿದ್ದ ಇದು ಮಕ್ಕಳಿಂದ ವೃದ್ಧರವರೆಗೆ ಅಚ್ಚುಮೆಚ್ಚು. ಗಲೌಂಟಿ ಹೆಸರೇ ಹೇಳುವಂತೆ ಬಾಯಲ್ಲಿಟ್ಟರೆ ಕರಗುವಂಥದ್ದು. ಹೆಸರಿಗೆ ತಕ್ಕಂತೆ ಈ ಕಬಾಬ್ ಇದೆ. ಚೆನ್ನಾಗಿ ಕತ್ತರಿಸಿದ 1 ಕೆ.ಜಿ. ಕುರಿಮರಿಯ ಮಾಂಸಕ್ಕೆ ಹಸಿಶುಂಠಿ, ಬೆಳ್ಳುಳ್ಳಿಯ ಪೇಸ್ಟ್, ಸ್ವಲ್ಪ ಮೊಸರು, ಪಪ್ಪಾಯ ಹಾಗೂ ಕೆಂಪು ಕಾರದ ಪುಡಿ, ಜಾಯಿಕಾಯಿಯ ಪುಡಿ, ಸ್ವಲ್ಪ  ಹುರಿದ ಕಡ್ಲೇಬೇಳೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪಿನ ಪೇಸ್ಟ್ ಹಚ್ಚಿ, ಒಂದು ತಾಸು ಫ್ರಿಜ್‌ನಲ್ಲಿಡಬೇಕು.

ನಂತರ ಪಟ್ಟೆಯಾಕಾರದಲ್ಲಿ ಮಾಂಸವನ್ನು ಕತ್ತರಿಸಿ, ಎಣ್ಣೆ ಅಥವಾ ತುಪ್ಪದಲ್ಲಿ ಫ್ರೈ ಮಾಡಿದರೆ ‘ಗಲೌಂಟಿ ಕಬಾಬ್’ ರೆಡಿ. ಇದನ್ನು ಉಲ್ಟಾ ತವಾದ ಪರೋಟ ಇಲ್ಲವೇ ರೋಟಿ ಜತೆ ನೆಂಚಿಕೊಂಡು ತಿಂದಲ್ಲಿ ಮತ್ತಷ್ಟು ತಿನ್ನಬೇಕೆಂಬ ಆಸೆ ಆಗುತ್ತದೆ. ಗಲೌಂಟಿ ಕಬಾಬ್ ಜತೆಗೆ ಜಾಫ್ರಿನ್ ನೆಹರಿ, ಪಾಯ ಪೋಟ್ಲಿ ಶೋರ್‌ಬಾ ಬಾಯಲ್ಲಿ ನೀರೂರಿಸುತ್ತವೆ.

ಇವುಗಳ ಜತೆಗೆ ನೀಡುವ ಡೆಸರ್ಟ್‌ನಲ್ಲಿ ಷಾಹಿ ತುಕಡಾ, ಮಿರ್ಚಿ ಕಾ ಹಲ್ವಾ ಊಟದ ಸಮಾರೋಪಕ್ಕೆ ಮತ್ತಷ್ಟು ಮೆರುಗು ತರುತ್ತವೆ. ಸ್ಟಾರ್ಟರ್‌ನಿಂದ ಹಿಡಿದು ಡೆಸರ್ಟ್ ತನಕ ನವಾಬೀ ಖಾನಾದ ಖದರು ನಾಲಿಗೆಯಷ್ಟೇ ಅಲ್ಲ, ಮನಸ್ಸಿಗೂ ತೃಪ್ತಿ ನೀಡಿ ‘ವಾವ್ಹಾ ಖಾನಾ ನವಾಬ್ ಕಾ’ ಎಂದು ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಹಾಗಾದರೆ, ಇನ್ನೇಕೆ ತಡ ಸೆ. 8ರ ಒಳಗೆ ‘ಕೀಸ್ ಹೋಟೆಲ್’ನಲ್ಲಿ ನೆಚ್ಚಿನವರ ಜೊತೆ ನೀವು ಒಂದು ಟೇಬಲ್ ಬುಕ್ ಮಾಡಿಸಿ, ನವಾಬರ ರಾಜಾತಿಥ್ಯ ಪಡೆಯಬಹುದು.

ವಿಳಾಸ: ಕೀಸ್ ಹೋಟೆಲ್, ಲೈವ್ 100 ಆಸ್ಪತ್ರೆ ಎದುರು, ನ್ಯೂ ಎಲೆಕ್ಟ್ರಾನಿಕ್ ಸಿಟಿ ಬಳಿ, ಹೊಸೂರು ಮುಖ್ಯರಸ್ತೆ, ಸಿಂಗಸಂದ್ರ, ಬೆಂಗಳೂರು-560008.

ದೂರವಾಣಿ: 080 39189407, ಮೊಬೈಲ್: 96862 01582.

–-ಮಂಜುಶ್ರೀ ಎಂ. ಕಡಕೋಳ.

ಪ್ರತಿಕ್ರಿಯಿಸಿ (+)