ಬುಧವಾರ, ಏಪ್ರಿಲ್ 21, 2021
25 °C

ವಾಷಿಂಗ್‌ಮಷಿನ್‌ನಲ್ಲಿ 10 ಲಕ್ಷ; ಮಂಚದಡಿ ಚಿನ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್‌ಮಷಿನ್‌ನಲ್ಲಿ 10 ಲಕ್ಷ; ಮಂಚದಡಿ ಚಿನ್ನ!

ಲೋಕಾಯುಕ್ತ ಬಲೆಗೆ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ

ವಿಜಾಪುರ: ವಾಷಿಂಗ್ ಮಷಿನ್‌ನಲ್ಲಿ ರೂ 10 ಲಕ್ಷ ನಗದು. ಮಂಚ, ಅಲ್ಮೇರಾ, ಕಪಾಟುಗಳ ಸಂದಿಗಳಲ್ಲಿ ಒಂದೂವರೆ ಕೆ.ಜಿ. ಚಿನ್ನ ಹಾಗೂ ನಾಲ್ಕು ಕೆ.ಜಿ. ಬೆಳ್ಳಿ! ಹಣ, ಚಿನ್ನಾಭರಣ ಹೀಗೆ ಅಡಗಿಸಿಟ್ಟಿದ್ದನ್ನು ಕಂಡು ಲೋಕಾಯುಕ್ತ ಪೊಲೀಸರಿಗೇ ಅಚ್ಚರಿ.ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ವಿಜಯನಾಮಾ ಮರಲಿಂಗಪ್ಪ ಚೌರ ಅವರ ಸ್ಥಳೀಯ ಗ್ಯಾಂಗ್ ಬಾವಡಿಯ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ ಸಂದರ್ಭದಲ್ಲಿ ಕಂಡು ಬಂದ ಅಚ್ಚರಿ ಇದು.ರೂ 2.06 ಕೋಟಿ ಆಸ್ತಿ ಪತ್ತೆ ಹಚ್ಚಿರುವ ಲೋಕಾಯುಕ್ತ ಪೊಲೀಸರಿಗೆ ಚೌರ ಅವರ ಮನೆಯಲ್ಲಿ ದೊರೆತ 10 ಲಕ್ಷ ನಗದು ಸೇರಿದಂತೆ ಚಿನ್ನಾಭರಣದ ಮೊತ್ತವೇ ರೂ 62 ಲಕ್ಷ ಮೌಲ್ಯದ್ದು!ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮನೆಯ ಬಾಗಿಲು ತಟ್ಟುತ್ತಿದ್ದಂತೆಯೇ ಓಡಿ ಒಳಗೆ ಹೋದ ಚೌರ, ಅರ್ಧ ಗಂಟೆ ಅವಧಿಯಲ್ಲಿ ತಮ್ಮ ಮನೆಯಲ್ಲಿದ್ದ ಈ ಹಣ, ಚಿನ್ನ-ಬೆಳ್ಳಿಯನ್ನು `ಮಾಯ~ ಮಾಡಿ ಬಿಟ್ಟರು. ನಂತರ ಸತತ ಮೂರು ಗಂಟೆಗಳ ಕಾಲ ಜಾಲಾಡಿದರೂ ನಿರೀಕ್ಷಿಸಿದಷ್ಟು ಆಸ್ತಿಪಾಸ್ತಿ ದೊರೆಯದಿದ್ದಾಗ ಪೊಲೀಸರೂ ದಂಗಾದರು.`ನಾವು ಬೆಳಿಗ್ಗೆ 6ಕ್ಕೆ ಚೌರ ಮನೆಗೆ ಬಂದೆವು. ನೀವು ಯಾರು ಎಂದು ಕೇಳಿದಾಗ ನಮ್ಮ ಪರಿಚಯ ಹೇಳಿಕೊಂಡೆವು. ಅರ್ಧ ಗಂಟೆಯಾದರೂ ಬಾಗಿಲು ತೆರೆಯಲಿಲ್ಲ. ನಮ್ಮ ಪೊಲೀಸರು ಮನೆಯನ್ನು ಸುತ್ತು ವರೆದಿದ್ದರು. ಅರ್ಧ ಗಂಟೆ ಬಳಿಕ ಅವರು ಬಾಗಿಲು ತೆರೆದರು~ ಎಂದು ದಾಳಿ ನೇತೃತ್ವ ವಹಿಸಿದ್ದ ಲೋಕಾಯುಕ್ತ ಎಸ್.ಪಿ ಡಿ.ಎಸ್. ಜಗಮಯ್ಯನವರ್ ಹೇಳಿದರು.`ಮನೆ ಶೋಧಿಸಿದಾಗ ನಾವು ನಿರೀಕ್ಷಿಸಿದ್ದಷ್ಟು ಅಕ್ರಮ ಆಸ್ತಿ ದೊರೆಯಲಿಲ್ಲ. ಏನೋ ಮಸಲತ್ತು ನಡೆದಿದೆ ಎಂಬ ಸಂಶಯದಿಂದ ಮನೆಯ ಇಂಚು ಇಂಚು ಜಾಗವನ್ನೂ ಜಾಲಾಡಿದೆವು. ಆಗ ವಾಷಿಂಗ್ ಮಷಿನಲ್ಲಿ 10 ಲಕ್ಷ ರೂಪಾಯಿ ನಗದು, ಮಂಚದ ಕೆಳಗೆ, ಅಲ್ಮೇರಾ, ಮನೆಯ ಕೋಣೆಗಳಲ್ಲಿರುವ ಕಪಾಟುಗಳ ಸಂದಿಗಳಲ್ಲಿ ಚಿನ್ನ-ಬೆಳ್ಳಿ ಅಡಗಿಸಿ ಇಟ್ಟಿರುವುದು ಪತ್ತೆಯಾಯಿತು~ ಎಂದು   ಮಾಹಿತಿ ನೀಡಿದರು.ಎಸ್‌ಡಿಎ ಆಗಿ ನೌಕರಿ ಆರಂಭ: ಸಿಂದಗಿಯವರಾದ ಚೌರ 1977ರಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸರ್ಕಾರಿ ಸೇವೆಗೆ ಸೇರಿ, ವಿಜಾಪುರ, ಬೆಳಗಾವಿ, ಹಾಸನ, ಬಾಗಲಕೋಟೆ ವಿವಿಧೆಡೆ ಸೇವೆ ಸಲ್ಲಿಸಿದ ನಂತರ ಹಲವು ವರ್ಷಗಳಿಂದ ವಿಜಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತ್ದ್ದಿದಾರೆ.`ಈವರೆಗೆ ಅವರಿಗೆ ವೇತನದಿಂದ ಬಂದ ಆದಾಯ ರೂ 35 ಲಕ್ಷ. ಪತ್ನಿ ಸುಮಂಗಲಾದೇವಿ, ಪುತ್ರರಾದ ಸತೀಶ್, ಗಿರೀಶ್ ಅವರೊಟ್ಟಿಗೆ ಇಲ್ಲಿಯ ಬ್ಯಾಂಗ್‌ಬಾವಡಿಯ ಸ್ವಂತ ಮನೆಯಲ್ಲಿ ವಾಸವಾಗಿರುವ ಅವರು,  ತಮ್ಮ  ಹಾಗೂ ಪತ್ನಿ, ಪುತ್ರರ ಹೆಸರಿನಲ್ಲಿ ವಿಜಾಪುರದ ಮಹಾಲ್ ಬಾಗಾಯತ್, ಅಲಿಯಾಬಾದ್, ಗೂಗದಡ್ಡಿ ಗ್ರಾಮಗಳಲ್ಲಿ ಜಮೀನು-ನಿವೇಶನ ಖರೀದಿಸಿದ್ದಾರೆ. ಮಗನ ಹೆಸರಿನಲ್ಲಿ 2 ಹುಂಡೈ ಕಾರುಗಳನ್ನು ಖರೀದಿದ್ದಾರೆ~ ಎಂದು ಜಗಮಯ್ಯನವರ್ ಹೇಳಿದರು.`ಎಕ್ಸಿಸ್ ಬ್ಯಾಂಕ್ ವಿಜಾಪುರ ಶಾಖೆಯಲ್ಲಿ ಪತ್ನಿ ಹೆಸರಿನಲ್ಲಿ ರೂ 25.63 ಲಕ್ಷ ಠೇವಣಿ, ಉಳಿತಾಯ ಖಾತೆಯಲ್ಲಿ ರೂ 6.27 ಲಕ್ಷ, ಅಲಹಾಬಾದ್ ಬ್ಯಾಂಕಿನ ಸ್ಥಳೀಯ ಶಾಖೆಯಲ್ಲಿ ಈ ಅಧಿಕಾರಿ ತಮ್ಮ ಹೆಸರಿನಲ್ಲಿ ರೂ 43.51 ಲಕ್ಷ ಠೇವಣಿ, ಉಳಿತಾಯ ಖಾತೆಯಲ್ಲಿ ರೂ 6 ಲಕ್ಷ ಹಣ ಇಟ್ಟಿದ್ದಾರೆ.

 

ಅಲ್ಲದೇ ಎಲ್‌ಐಸಿ ಪಾಲಿಸಿಗಳು, ಬ್ಯಾಂಕ್‌ಗಳ ಪಾಸ್ ಪುಸ್ತಕಗಳು ಪತ್ತೆಯಾಗಿವೆ. ಖಾತೆಗಳ ಸ್ಥಗಿತಕ್ಕೆ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದು, ಲಾಕರ್ ಹಾಗೂ ಎಲ್ಲ ಬ್ಯಾಂಕ್‌ಗಳ ಖಾತೆಗಳ ತಪಾಸಣೆ ಮಾಡಬೇಕಿದೆ. ಕನಕದಾಸ ಬಡಾವಣೆಯ ರೈಲ್ವೆ ಗೇಟ್ ಹತ್ತಿರ ಮನೆ ಇದ್ದು, ಅದನ್ನು ಬಾಡಿಗೆ ಕೊಟ್ಟಿದ್ದಾರೆ~ ಎಂದರು.ಭ್ರಷ್ಟಾಚಾರ ನಿರ್ಮೂಲನ (ಪಿ.ಸಿ) ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆ ಇನ್ನೂ ಬಾಕಿ ಇರುವುದರಿಂದ ಆರೋಪಿಯನ್ನು ಬಂಧಿಸಿಲ್ಲ. ಅಗತ್ಯಬಿದ್ದರೆ ಬಂಧಿಸಲಾಗುವುದು ಎಂದರು.

 

ಪತ್ತೆಯಾದ ಆಸ್ತಿ ವಿವರ

ವಿಜಾಪುರದಲ್ಲಿ ಪತ್ನಿ ಹೆಸರಲ್ಲಿ ರೂ 25 ಲಕ್ಷ ಮೌಲ್ಯದ ಮನೆ.  ಸ್ವಂತದ ಹೆಸರಲ್ಲಿ ರೂ 10 ಲಕ್ಷ ಮೌಲ್ಯದ ಮನೆ. ವಿಜಾಪುರ ತಾಲ್ಲೂಕಿನ ಅಲಿಯಾಬಾದ ಗ್ರಾಮದಲ್ಲಿ ಪತ್ನಿ-ಮಕ್ಕಳ ಹೆಸರಲ್ಲಿ ಎಂಟು ಎಕರೆ ಕೃಷಿ ಜಮೀನು- ಮೌಲ್ಯ ರೂ4.01 ಲಕ್ಷ. ವಿಜಾಪುರ ಮಹಾಲಬಾಗಾಯತ್‌ನಲ್ಲಿ ರೂ 2.45 ಲಕ್ಷ ಹಾಗೂ ರೂ 3.64 ಲಕ್ಷ ಮೌಲ್ಯದ ಎರಡು ನಿವೇಶನ. ವಿಜಾಪುರ ತಾಲ್ಲೂಕು ಗೂಗದಡ್ಡಿ ಗ್ರಾಮದಲ್ಲಿ 5 ಎಕರೆ ಕೃಷಿ ಜಮೀನು- ಮೌಲ್ಯ ರೂ 2 ಲಕ್ಷ. ತಲಾ ಎಂಟು ಲಕ್ಷ ಮೌಲ್ಯದ ಎರಡು ಹುಂಡೈ ಕಾರುಗಳು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.