ವಾಸು ಇಲೆವೆನ್‌ಗೆ ‘ಡಬಲ್‌’ ಜಯ

7
ಹಾಕಿ: ಹ್ಯಾಟ್ರಿಕ್‌ ಗೋಲು ಗಳಿಸಿದ ಸಂತೋಷ್‌ ಮಲ್ಲೂರು

ವಾಸು ಇಲೆವೆನ್‌ಗೆ ‘ಡಬಲ್‌’ ಜಯ

Published:
Updated:

ಹುಬ್ಬಳ್ಳಿ: ಸಂತೋಷ್‌ ಮಲ್ಲೂರು ಅವರ ಹ್ಯಾಟ್ರಿಕ್‌ ಹಾಗೂ ರಫೀಕ್‌ ಗಳಿಸಿದ ಎರಡು ಗೋಲುಗಳು ಸ್ಥಳೀಯ ವಾಸು ಇಲೆವೆನ್‌ ತಂಡಕ್ಕೆ ಇಲ್ಲಿ ನಡೆಯುತ್ತಿರುವ ಹುಬ್ಬಳ್ಳಿ ಹಾಕಿ ಅಕಾಡೆಮಿ ಆಶ್ರಯದ ಅಂತರರಾಜ್ಯ ಆಹ್ವಾನಿತ ಹಾಕಿ ಟೂರ್ನಿಯಲ್ಲಿ ಭರ್ಜರಿ ಜಯ ತಂದುಕೊಟ್ಟಿತು.ಸೆಟ್ಲ್‌ಮೆಂಟ್‌ನ ಯಂಗ್‌ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ಮಧ್ಯಾಹ್ನ ಆತಿಥೇಯ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ವಾಸು ಇಲೆವೆನ್ 7–0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ಇಸ್ಲಾಂಪುರದ ಸಂಜಯ್ ಪಾಟೀಲ್ ತಂಡದ ವಿರುದ್ಧ ಸಂಜೆ ನಡೆದ ಮತ್ತೊಂದು ಪಂದ್ಯದಲ್ಲಿ 1–0 ಅಂತರದ ಜಯ ಸಾಧಿಸುವುದರ ಮೂಲಕ ‘ಡಬಲ್‌’ ಸಂಭ್ರಮ ಅನುಭವಿಸಿತು.ಹುಬ್ಬಳ್ಳಿ ಅಕಾಡೆಮಿ ವಿರುದ್ಧದ ಪಂದ್ಯದಲ್ಲಿ ಸಂತೋಷ್‌ ಒಟ್ಟು ನಾಲ್ಕು ಗೋಲು ಹೊಡೆದರು. ರಫೀಕ್‌ (21ನೇ ನಿಮಿಷ) ಮತ್ತು ಬಿದ್ದಪ್ಪ (22) ತಂದುಕೊಟ್ಟ ಆರಂಭಿಕ ಮುನ್ನಡೆಯ ನಂತರ ಸಂತೋಷ್‌ (24,28,35ನೇ ನಿಮಿಷ) ಹ್ಯಾಟ್ರಿಕ್ ಗಳಿಸಿದರು. 49ನೇ ನಿಮಿಷದಲ್ಲಿ ರಫೀಕ್‌ ಮತ್ತು  50ನೇ ನಿಮಿಷದಲ್ಲಿ ಸಂತೋಷ್‌ ಮತ್ತೆ ತಲಾ ಒಂದೊಂದು ಗೋಲು ಗಳಿಸಿ ತಂಡಕ್ಕೆ ಭಾರಿ ಮುನ್ನಡೆ ಒದಗಿಸಿದರು.ಸಂಜೆ ನಡೆದ ರೋಚಕ ಪಂದ್ಯದಲ್ಲಿ ‘ಅತಿಥಿ ಆಟಗಾರರ’ ಆಲ್‌ರೌಂಡ್ ಪ್ರದರ್ಶನದ ಬೆಂಬಲದಿಂದ ತಂಡ ಜಯ ಸಾಧಿಸಿತು. ಪಂದ್ಯದ ಹತ್ತನೇ ನಿಮಿಷದಲ್ಲಿ ಲಭಿಸಿದ ಸತತ ಮೂರು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ಇಸ್ಲಾಂಪುರ ತಂಡಕ್ಕೆ ವಾಸು ಇಲೆವೆನ್‌ ಅವಕಾಶ ನೀಡಲಿಲ್ಲ. ನಂತರವೂ ಉತ್ತಮ ರಕ್ಷಣಾ ಗೋಡೆ ನಿರ್ಮಿಸಿದ ವಾಸು ತಂಡದವರು 40ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ಸಾಧಿಸಿದರು. ರಫೀಕ್ ಗೋಲು ತಂದಿತ್ತರು.ಕಿಶೋರ್ ಕುಮಾರ್‌ ತಂಡಕ್ಕೆ ಜಯ: ಬೆಳಿಗ್ಗೆ ನಡೆದ ದಿನದ ಮೂರನೇ ಪಂದ್ಯದಲ್ಲಿ ಸ್ಥಳೀಯ ಕಿಶೋರ್‌ ಕುಮಾರ್‌ ಹಾಕಿ ಕ್ಲಬ್‌ ತಂಡದವರು ಯಂಗ್‌ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡದ ವಿರುದ್ಧ 10–0 ಗೋಲುಗಳ ಜಯ ಸಾಧಿಸಿದರು. ಬಿಜು ಎರಕಲ್‌ (11,14,40ನೇ ನಿಮಿಷ), ವಿನಾಯಕ ಬಿಜವಾಡ (20, 23), ದೀಪಕ್‌ ಬಿಜವಾಡ (41), ರಾಘವೇಂದ್ರ (40, 50) ಹಾಗೂ ಉಮೇಶ್‌ (43) ತಂಡಕ್ಕೆ ಗೋಲು ತಂದುಕೊಟ್ಟರೆ ಒಂದು ಗೋಲು ಎದುರಾಳಿ ತಂಡದಿಂದ ಕಾಣಿಕೆಯಾಗಿ ಲಭಿಸಿತು. ಔರಂಗಾಬಾದ್‌ನ ಸಾಯ್‌ ತಂಡವನ್ನು 2–0 ಗೋಲುಗಳಿಂದ ಮಣಿಸಿದ ಕೊಲ್ಹಾಪುರ ಚಾವಾ ತಂಡ  ಹುಬ್ಬಳ್ಳಿ ಹಾಕಿ ಅಕಾಡೆಮಿ ತಂಡವನ್ನು 3–0 ಗೋಲುಗಳಿಂದ ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry