ಮಂಗಳವಾರ, ಮೇ 11, 2021
27 °C

ವಾಸ್ತುಶಿಲ್ಪಿ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2011-12ರ ಗ್ಲೋಬಲ್ ಅಜೆಂಡಾ ಕೌನ್ಸಿಲ್(ಜಾಗತಿಕ ಕಾರ್ಯಸೂಚಿ ಮಂಡಳಿ)ಗೆ ಶೀಲಾ ಶ್ರೀಪ್ರಕಾಶ್ ಅವರನ್ನು ಸದಸ್ಯರನ್ನಾಗಿ  ವಿಶ್ವ ಆರ್ಥಿಕ ವೇದಿಕೆ ಆಯ್ಕೆ ಮಾಡಿದೆ. ಈ ಮೂಲಕ ಅವರು ವರ್ಲ್ಡ್ ಎಕನಾಮಿಕ್ ಫೋರಂನ (ಡಬ್ಲ್ಯೂಇಎಫ್)ಡಿಸೈನ್ ಇನ್ನೊವೇಷನ್ ಕೌನ್ಸಿಲ್‌ನಿಂದ ಆಹ್ವಾನಿಸಲ್ಪಟ್ಟ ಪ್ರಥಮ ಭಾರತೀಯ ವಾಸ್ತುಶಿಲ್ಪಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಸುಸ್ಥಿರ ಯೋಜನೆಗಳಿಗೆ ಗಣನೀಯ ಕೊಡುಗೆ ಸಲ್ಲಿಸಿದ ವಿಶ್ವದ ಏಳು ಮಹಿಳಾ ವಾಸ್ತುಶಿಲ್ಪಿಗಳಲ್ಲಿ ಶೀಲಾ ಶ್ರೀಪ್ರಕಾಶ್ ಒಬ್ಬರು ಎಂದು 2011ರ ಏಪ್ರಿಲ್‌ನಲ್ಲಿ ಜರ್ಮನಿ ಸರ್ಕಾರ ಹಾಗೂ ಸ್ಪೇನ್‌ನ ವ್ಯಾಲೆನ್ಷಿಯಾ ವಿಶ್ವವಿದ್ಯಾಲಯಗಳು ಗುರುತಿಸಿದ್ದವು. ಸಂಕೀರ್ಣವಾದ ಬದಲಾವಣೆಗಳನ್ನು ಹಾಗೂ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವಂತೆ ಮಾಡುವ ಹಾಗೂ ಅದನ್ನು ಉಪಯುಕ್ತವಾಗಿಸಲು ವಿಶ್ವದ ಪ್ರಮುಖ ವಿನ್ಯಾಸಗಾರರು ಮತ್ತು ವಿನ್ಯಾಸ ಚಿಂತಕರನ್ನು ಒಗ್ಗೂಡಿಸುವ ಒಂದು ಮಾಧ್ಯಮವೇ ವಿನ್ಯಾಸ ಎನ್ನುತ್ತದೆ ವಿಶ್ವ ಆರ್ಥಿಕ ವೇದಿಕೆ. 2012ರ ಜಾಗತಿಕ ಕಾರ್ಯಸೂಚಿ ಮಂಡಳಿಯಲ್ಲಿ ವಿಶ್ವದ ವಿವಿಧ ಭಾಗಗಳನ್ನು ಪ್ರತಿನಿಧಿಸುವ 16 ತಜ್ಞರು ಇದ್ದಾರೆ. ಹೀಗಾಗಿ, ಅನೇಕ ವರ್ಷಗಳಿಂದ ವಾಸ್ತುಶಿಲ್ಪಿಯಾಗಿ ಅನುಭವ ಪಡೆದಿರುವ ತಮಗೆ  ಈ ಸದಸ್ಯತ್ವ ಸಂತೃಪ್ತಿಯೊಂದಿಗೆ ಹೆಚ್ಚಿನ ಜವಾಬ್ದಾರಿಯನ್ನೂ ತಂದಿದೆ ಎನ್ನುತ್ತಾರೆ ಶೀಲಾಶ್ರೀಪ್ರಕಾಶ್.2012ರ ಅಕ್ಟೋಬರ್‌ನಲ್ಲಿ ಅಬುಧಾಬಿಯಲ್ಲಿ  ವಿನ್ಯಾಸ  ಪ್ರಯೋಗಗಳ ಕುರಿತಂತೆ ಜಾಗತಿಕ ಕಾರ್ಯಸೂಚಿ ಮಂಡಳಿಗಳ ಜಾಲದ ವಾರ್ಷಿಕ ಶೃಂಗಸಭೆ ನಡೆಯಲಿದೆ. `ಈ ಸಂದರ್ಭದಲ್ಲಿ  ಭಾರತದ ನಿರೀಕ್ಷೆಗಳು ಹಾಗೂ ಆಶಯಗಳನ್ನು ಪ್ರತಿನಿಧಿಸುವಂತಹದ್ದು ನನ್ನಲ್ಲಿ ವಿನೀತ ಭಾವ ಮೂಡಿಸಿದೆ. ಭಾರತಕ್ಕೆ ಅನ್ವಯವಾಗುವಂಥದ್ದು ಅಭಿವೃದ್ಧಿಶೀಲ ಹಾಗೂ ಹೆಚ್ಚಾಗಿ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗೂ ಅನ್ವಯಿಸುತ್ತದೆ.

 

ವಾಸಯೋಗ್ಯ ನಗರಗಳನ್ನು ನಿರ್ಮಿಸುವಲ್ಲಿ ತಂತ್ರಜ್ಞಾನದ ಪಾತ್ರ ಹಾಗೂ ಇತಿಮಿತಿಯ ಬಗ್ಗೆಯೂ ನಾವು ಗಮನಹರಿಸುತ್ತೇವೆ. ಶಿಕ್ಷಣ, ಆರೋಗ್ಯ, ಸಂಕಷ್ಟ ನಿರ್ವಹಣೆ, ವಲಸೆ,  ನಗರೀಕರಣ, ಮೂಲಸೌಕರ್ಯಗಳ ಅಭಿವೃದ್ಧಿ.... ಇಂತಹ ಹಲವು ವಿಷಯಗಳನ್ನು ಪರಿಶೀಲಿಸುತ್ತೇವೆ~ ಎನ್ನುವುದು ಶೀಲಾ ಅವರ ಮಾತು.ತನ್ನದೇ ಸ್ವಂತ ವಾಸ್ತುಶಿಲ್ಪ ಸಂಸ್ಥೆ ಆರಂಭಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ ಶೀಲಾ ಶ್ರೀಪ್ರಕಾಶ್ ಅವರದ್ದು. 1979ರಲ್ಲಿ ಚೆನ್ನೈನಲ್ಲಿ  `ಶಿಲ್ಪಾ ಆರ್ಕಿಟೆಕ್ಟ್ಸ್ ಪ್ಲಾನರ್ಸ್  ಡಿಸೈನರ್ಸ್~ ಸಂಸ್ಥೆ ರೂಪು ತಳೆದ ಬಗೆಯನ್ನು ಅವರು ವಿವರಿಸುವುದು ಹೀಗೆ: `ಪದವಿ ಮುಗಿಸಿದ ನಂತರ ಎರಡು ವರ್ಷ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದೆ.ಆ ಕೆಲಸದ ಅನುಭವದ ಆಧಾರದ ಮೇಲೆ ಕುಟುಂಬ ಹಾಗೂ ಹಿತೈಷಿಗಳ ನೆರವಿನಿಂದ `ಶಿಲ್ಪಾ ಆರ್ಕಿಟೆಕ್ಟ್ಸ್~ ಆರಂಭಿಸಿದೆ. ಭಾರತವಲ್ಲದೆ ಅಮೆರಿಕ, ಜಪಾನ್, ಚೀನಾ, ಕುವೈತ್‌ಗಳಲ್ಲೂ ಹಲವು ವಿನ್ಯಾಸ ಯೋಜನೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಯಿತು. ಖಾಸಗಿ ಮತ್ತು ಸಾರ್ವಜನಿಕ ವಲಯ ಸೇರಿದಂತೆ ಕಾರ್ಪೋರೇಟ್ ಕಚೇರಿಗಳು, ಕ್ಯಾಂಪಸ್‌ಗಳು, ಮ್ಯೂಸಿಯಂ, ಹೆರಿಟೇಜ್ ಕಟ್ಟಡಗಳು, ಕಲಾ ಅಕಾಡೆಮಿ, ಶೈಕ್ಷಣಿಕ ಕಟ್ಟಡ, ಆಸ್ಪತ್ರೆ, ಹೋಟೇಲ್ ಸೇರಿದಂತೆ ಅನೇಕ ವಿಧದ ಯೋಜನೆಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ವಾಸ್ತುಶಿಲ್ಪ ಯೋಜನೆ, ಒಳಾಂಗಣ ವಿನ್ಯಾಸ ಸೇರಿದಂತೆ ಹಲವು ರೀತಿಯ ಯೋಜನೆಗಳನ್ನು ನಮ್ಮ ಪರಿಣತ ತಂಡ ಕಾರ್ಯಗತಗೊಳಿಸಿದೆ~ ಎನ್ನುತ್ತಾರೆ ಅವರು.

80ರ ಆ ಕಾಲಘಟ್ಟದಲ್ಲಿ ವಾಸ್ತುಶಿಲ್ಪ ಮಹಿಳೆಯರಿಗಾಗಿ ಇರುವ ಕ್ಷೇತ್ರವಲ್ಲ ಎಂಬ ವಾತಾವರಣವಿತ್ತು. ಆದ್ದರಿಂದ ಹೆಚ್ಚಿನ ಸವಾಲುಗಳನ್ನು ಮಹಿಳಾ ವಾಸ್ತುಶಿಲ್ಪಿಗಳು ಎದುರಿಸಬೇಕಾಗಿತ್ತು.ಆದರೆ ಸಮಸ್ಯೆಗಳನ್ನು ನಿವಾರಿಸುವ ಸೂಕ್ಷ್ಮತೆ ಮತ್ತು ತಂಡವಾಗಿ ಕಾರ್ಯನಿರ್ವಹಿಸುವ ವಿಶೇಷ ಗುಣಗಳಿಂದ ಇತರ ಎಲ್ಲಾ ಕ್ಷೇತ್ರಗಳಂತೆ ಈ ಕ್ಷೇತ್ರದಲ್ಲಿಯೂ ಮಹಿಳೆ ಸಾಮಾಜಿಕ ಮನ್ನಣೆಯನ್ನು ಗಳಿಸಿದ್ದಾಳೆ.ಪದವಿ ಮಟ್ಟದಲ್ಲಿ ಮಹಿಳಾ ವಾಸ್ತುಶಿಲ್ಪಿಗಳ ಸಂಖ್ಯೆ ಬಲವಾಗಿಯೇ ಇದೆ. ಆದರೆ ತರಗತಿಗೆ ಪ್ರವೇಶಿಸಿದ ಕೂಡಲೇ ಸವಾಲುಗಳೂ ಎದುರಾಗುತ್ತವೆ. ತಾಂತ್ರಿಕ ಜ್ಞಾನ, ಮಾದರಿಗಳ ಕುರಿತಾದ ತರಗತಿಗಳಲ್ಲಿ ಪುರುಷರದೇ ಮೇಲುಗೈ ಎಂಬಂತಹ ಪೂರ್ವಗ್ರಹಗಳೇನೂ ಕಡಿಮೆ ಇರುವುದಿಲ್ಲ.ಪದವಿ ಪೂರೈಸಿದ ನಂತರ ಸಮಾನ ಅಥವಾ ಕೆಲವೊಮ್ಮೆ ಮಹಿಳೆಗೇ ಹೆಚ್ಚಿನ ಅವಕಾಶಗಳೂ ಲಭ್ಯ. ಹೀಗಿದ್ದೂ, ಆಡಳಿತದ ಮಧ್ಯಮ ಹಂತಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೇ. ಆಡಳಿತದ ಉನ್ನತ ಹಂತಗಳಲ್ಲಂತೂ ಮಹಿಳಾ ಪ್ರಾತಿನಿಧ್ಯ ಇನ್ನಷ್ಟು ಕಡಿಮೆಯಾಗುತ್ತದೆ.`ಬಹುತೇಕ ಯೋಜನೆಗಳು ಮುಕ್ತಾಯ ಕಾಣಲು ಅನೇಕ ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಈ ಸಂದರ್ಭದಲ್ಲಿ ಗರ್ಭಧರಿಸುವುದು ವೃತ್ತಿಗೆ ತೊಡಕಾಗುವುದುಂಟು. ಆಗ ಯೋಜನೆಯ ಎಲ್ಲಾ ಮಾಹಿತಿ ಹಾಗೂ ಹೊಣೆಗಾರಿಕೆಯನ್ನು ತಂಡದ ಮತ್ತೊಬ್ಬ ಸದಸ್ಯರಿಗೆ ವರ್ಗಾಯಿಸಬೇಕಾಗುತ್ತದೆ. ಮತ್ತೆ ಆಕೆ  ಪ್ರಸೂತಿ ರಜೆ ಮುಗಿಸಿಕೊಂಡು ಬಂದಾಗ ತಂಡದಲ್ಲಿ ಪರಕೀಯತೆ ಅನುಭವಿಸುವ ಸಾಧ್ಯತೆ ಇರುತ್ತದೆ~ ಎನ್ನುತ್ತಾರೆ ಶೀಲಾ ಶ್ರೀಪ್ರಕಾಶ್.ನಿರ್ಮಾಣ ತಾಣಗಳಲ್ಲಿ ಗುತ್ತಿಗೆದಾರರು ಮಹಿಳೆಯರನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವುದೂ ಉಂಟು. ಸಮಯದ ಪರಿವೆ ಇಲ್ಲದೆ ಕೆಲಸ ಮಾಡುವ ಮನಸ್ಥಿತಿ, ದೇಶದೇಶಗಳ ನಡುವಿನ ಪ್ರವಾಸಗಳಿಗೆ ಒಗ್ಗಿಕೊಳ್ಳುವಂತಹದ್ದು ಬಹಳ ಮುಖ್ಯ. ಇಂತಹ ಸನ್ನಿವೇಶಗಳಲ್ಲಿ, ಮಹಿಳೆಯರು ಕೌಟುಂಬಿಕ ಜೀವನ ಹಾಗೂ ವೃತ್ತಿಯ ನಡುವಿನ ಆಯ್ಕೆಯ ಗೊಂದಲದಲ್ಲಿ ಬೀಳುತ್ತಾರೆ ಎನ್ನುತ್ತಾರೆ ಅವರು.`ಇತ್ತೀಚೆಗೆ ತಂತ್ರಜ್ಞಾನ ಅಭಿವೃದ್ಧಿಯಿಂದಾಗಿ ಹೊಸ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ಹೊಟೇಲ್ ಕೋಣೆಗಳಿಂದ ಅಥವಾ ವಿಮಾನ ನಿಲ್ದಾಣಗಳಿಂದ ಕೆಲಸ ಮಾಡುವುದೂ ಈಗ ಸಾಧ್ಯ. ಹೀಗಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆಯೂ ಈಗ ತೆರೆದುಕೊಂಡಿದೆ. ಬೇಕಾದಂತೆ ಹೊಂದಿಸಿಕೊಳ್ಳಬಹುದಾದ ಉದ್ಯೋಗಕ್ಷೇತ್ರದ ಅನುಕೂಲಗಳತ್ತ ಈಗ ಅರಿವು ಮೂಡುತ್ತಿದೆ.~ಕಾರ್ಪೊರೆಟ್ ಲ್ಯಾಡರ್~ (ಏಣಿ) ಎಂಬ ಮಾದರಿಗೆ ಬದಲಾಗಿ `ಕಾರ್ಪೊರೆಟ್ ಲ್ಯಾಟಿಸ್~  (ಜಾಲರಿ) ಎಂಬ ಮಾದರಿ ಈಗ ಹೆಚ್ಚು ಪ್ರಚುರಗೊಳ್ಳುತ್ತಿದೆ. ಎಲ್ಲದಕ್ಕೂ ಹೊಂದಿಸಬಹುದಾದ ಈ ಮಾದರಿಯಲ್ಲಿ ನೌಕರರು ಯಾವುದೇ ಶಿಕ್ಷೆ ಇಲ್ಲದೆ ಉದ್ಯೋಗಕ್ಕೆ ವಾಪಸಾಗುವುದು ಸಾಧ್ಯವಿದೆ~ ಎನ್ನುತ್ತಾರೆ ಶೀಲಾಶ್ರೀಪ್ರಕಾಶ್  

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.