ವಾಹನಗಳ ಮಾರಾಟ ಚೇತರಿಕೆ

7

ವಾಹನಗಳ ಮಾರಾಟ ಚೇತರಿಕೆ

Published:
Updated:

ನವದೆಹಲಿ (ಪಿಟಿಐ): ದೇಶದ ಪ್ರಮುಖ ಕಾರು ತಯಾರಿಕೆ ಕಂಪೆನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟಾರ್, ಟಾಟಾ ಮೋಟಾರ್ಸ್ ಜನವರಿ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿವೆ.ಕಳೆದ ಏಳು ತಿಂಗಳಲ್ಲಿ ಸತತ ಇಳಿಕೆ ದಾಖಲಿಸಿದ್ದ ಮಾರುತಿ ಸುಜುಕಿ, ಜನವರಿ ತಿಂಗಳಲ್ಲಿ ಚೇತರಿಕೆ ಕಂಡಿದೆ. ಈ ಅವಧಿಯಲ್ಲಿ ಕಂಪೆನಿ ಒಟ್ಟು 88,377 ಕಾರುಗಳನ್ನು ಮಾರಾಟ ಮಾಡಿದ್ದು, ಶೇ 2,42ರಷ್ಟು ಏರಿಕೆ ಕಂಡಿದೆ.ಬಡ್ಡಿ ದರ ಏರಿಕೆ ಮತ್ತು ತೈಲ ಬೆಲೆ ಹೆಚ್ಚಳದಿಂದ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟದ ನಡುವಿನ ಅಂತರ ಹೆಚ್ಚಿದೆ. ಕಂಪೆನಿಯು ಮತ್ತೆ ಸ್ಪರ್ಧಾಕಣಕ್ಕೆ ಮರಳುತ್ತಿದೆ ಎಂದು ಮಾರುತಿ ಸುಜುಕಿಯ ಮಾರುಕಟ್ಟೆ ಮುಖ್ಯಸ್ಥ ಮಯಾಂಕ್ ಫಾರೀಖ್ ಅಭಿಪ್ರಾಯಪಟ್ಟಿದ್ದಾರೆ.ಹುಂಡೈ ಮೋಟಾರ್‌ನ ಮಾರಾಟ ಶೇ 12ರಷ್ಟು ಹೆಚ್ಚಿದ್ದು, 33,900 ಕಾರುಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್‌ನ ದೇಶೀಯ ಮಾರಾಟ ಶೇ 15ರಷ್ಟು ಚೇತರಿಸಿಕೊಂಡಿದ್ದು, ಒಟ್ಟು 34,669 ವಾಹನಗಳು ಮಾರಾಟವಾಗಿವೆ.`ಹೊಸ ವರ್ಷದ ಮೊದಲು ತಿಂಗಳ ಅಂಕಿ ಅಂಶಗಳು ಕಾರು ತಯಾರಿಕೆ ಕಂಪೆನಿಗಳ ಮುಖದಲ್ಲಿ ನಗು ಮರಳಿಸುವಂತೆ ಮಾಡಿದೆ. ಇದು ಇಡೀ ಉದ್ಯಮದ ಚೇತರಿಕೆಗೆ ಮುನ್ನಡಿ ಬರೆದಿದೆ ಎಂದು ಹುಂಡೈ ಮೋಟಾರ್ ಇಂಡಿಯಾದ ಮಾರುಕಟ್ಟೆ ವ್ಯವಸ್ಥಾಪಕ ಅರವಿಂದ ಸಕ್ಸೇನಾ ಹೇಳಿದ್ದಾರೆ.2010ರಲ್ಲಿ ಒಟ್ಟು 18,67,246 ಕಾರುಗಳು ಮಾರಾಟವಾಗಿದ್ದವು. 2011ರಲ್ಲಿ ಈ ಸಂಖ್ಯೆ 19,46,376ಕ್ಕೆ  ಏರಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ  ಹೇಳಿದೆ.ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿ ಈ ಅವಧಿಯಲ್ಲಿ 41,369 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 20ರಷ್ಟು ಪ್ರಗತಿ ಕಂಡಿದೆ. ಟೋಯೊಟಾ ಕಿರ್ಲೋಸ್ಕರ್ ಮಾರಾಟ ಶೇ 89ರಷ್ಟು ಹೆಚ್ಚಾಗಿದೆ. ಕಂಪೆನಿಯು 17,395 ವಾಹನಗಳನ್ನು ಮಾರಾಟ ಮಾಡಿದೆ. ಹೊಸ `ಇಟಿಯೋಸ್~ ಮತ್ತು `ಲಿವಾ~ ಮಾದರಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ ಎಂದು ಕಂಪೆನಿ ಹೇಳಿದೆ.ಫೋರ್ಡ್ ಇಂಡಿಯಾದ ಮಾರಾಟ ಕಳೆದ ತಿಂಗಳಿಗೆ ಹೋಲಿಸಿದರೆ ಶೇ 3ರಷ್ಟು ಇಳಿಕೆಯಾಗಿದೆ. ಜನರಲ್ ಮೋಟಾರ್ಸ್ ಮಾರಾಟ ಕೂಡ ಶೇ 17ರಷ್ಟು ಕುಸಿತ ಕಂಡಿದೆ.ದ್ವಿಚಕ್ರ ವಾಹನ: ಜನವರಿ ತಿಂಗಳಲ್ಲಿ ಹೀರೊ ಮೋಟೊ ಕಾರ್ಪ್‌ನ ಮಾರಾಟ ದಾಖಲೆ ಪ್ರಗತಿ ಕಂಡಿದೆ. ಕಂಪೆನಿಯು ಒಟ್ಟು 5,20,275 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 11ರಷ್ಟು ಪ್ರಗತಿ ದಾಖಲಿಸಿದೆ.ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಿಕೆ ಕಂಪೆನಿ ಟಿವಿಎಸ್ ಮೋಟಾರ್ ಈ ಅವಧಿಯಲ್ಲಿ 1,53,014 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 7ರಷ್ಟು ಪ್ರಗತಿ ದಾಖಲಿಸಿದೆ.ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾದ ಮಾರಾಟ ಶೇ 44ರಷ್ಟು ಹೆಚ್ಚಿದ್ದು, ಕಂಪೆನಿಯು 1,89,353 ವಾಹನಗಳನ್ನು ಮಾರಾಟ ಮಾಡಿದೆ. ಯಮಹಾ ಕಂಪೆನಿ 23,300 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 20ರಷ್ಟು ಪ್ರಗತಿ ದಾಖಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry