ಗುರುವಾರ , ನವೆಂಬರ್ 21, 2019
21 °C

ವಾಹನ ಅಪಘಾತ ಎಂಟು ಜನರ ಸಾವು

Published:
Updated:

ಬಳ್ಳಾರಿ:   ವೇಗದಿಂದ ಬಂದ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಚಿಕ್ಕ ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದು 8 ಅಡಿಯಷ್ಟು ಕೆಳಗೆ  ಉರುಳಿ ಬಿದ್ದ ಪರಿಣಾಮ 8 ಜನ ಮೃತಪಟ್ಟ ಘಟನೆ ತಾಲ್ಲೂಕಿನ ಸೋಮಸಮುದ್ರ ಗ್ರಾಮದ ಬಳಿ ಸೋಮವಾರ ಸಂಜೆ ಸಂಭವಿಸಿದೆ.13 ಜನ ಪ್ರಯಾಣಿಕರು ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.ವಾಹನವು  ತಾಲ್ಲೂಕಿನ ಕುರುಗೋಡು ಗ್ರಾಮದಿಂದ ಬಳ್ಳಾರಿ ಕಡೆಗೆ ಬರುತ್ತಿತ್ತು.  ಚಾಲಕ ವೆಂಕಟೇಶ್ ಅವರು ಪ್ರಯಾಣಿಕರಿಗೆ ನೀಡಲೆಂದು ಕ್ಲೀನರ್‌ಗೆ ಚಿಲ್ಲರೆ ಕೊಡಲು ಹಿಂದಕ್ಕೆ ತಿರುಗಿದಾಗ ನಿಯಂತ್ರಣ ತಪ್ಪಿ ವಾಹನ ಸೇತುವೆಗೆ ಡಿಕ್ಕಿ ಹೊಡೆದು ಉರುಳಿ ಬಿತ್ತು ಎಂದು ಗಾಯಾಳುಗಳು `ಪ್ರಜಾವಾಣಿ'ಗೆ ತಿಳಿಸಿದರು.ಆರು ಜನ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬರು ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ) ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ.ವಾಹನದ ಚಾಲಕ, ಕುರುಗೋಡು ಗ್ರಾಮದ ವೆಂಕಟೇಶ (35), ಬಳ್ಳಾರಿಯ ಎಂ.ಸದಾಶಿವಪ್ಪ (55), ತಾಲ್ಲೂಕಿನ ಗುಡದೂರಿನ ಅಂಬಮ್ಮ (55), ಉಪನ್ಯಾಸಕ ಫಣೀ ಪ್ರಸಾದ್(37), ಜಾಲಿಬೆಂಚಿ ಗ್ರಾಮದ ದಂಪತಿ ಕರಿಬಸವನಗೌಡ (60) ಮತ್ತು ರೇಣುಕಮ್ಮ (50), ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಎರಡೋಣಿ ಗ್ರಾಮದ ಅಭಿಷೇಕ್ (9) ಹಾಗೂ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಸಳ್ಳಿಯ ಶ್ರೀಷಾ (3) ಮೃತಪಟ್ಟಿದ್ದಾರೆ.ತೀವ್ರವಾಗಿ ಗಾಯಗೊಂಡಿರುವ ಶ್ರೀಷಾ ಅವರ ತಂದೆ ವೀರೇಶ ಹಾಗೂ ತಾಯಿ ಲಕ್ಷ್ಮಿ ಸೇರಿದಂತೆ ನಾಲ್ವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ವಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.ಆಂಧ್ರಪ್ರದೇಶದ ಅನಂತಪುರದ ನೀಲಮ್ಮ, ಬಳ್ಳಾರಿಯ ಈಶ್ವರಮ್ಮ, ನೀಲಪ್ಪ, ಉಪನ್ಯಾಸಕ ಫಣಿಪ್ರಸಾದ್, ವಾಹನದ ಕ್ಲೀನರ್, ಕುರುಗೋಡಿನ ರಮೇಶ, ಎಚ್.ವೀರಾಪುರ ಗ್ರಾಮದ ಬಸವರಾಜ, ಮಾರೇಶ, ದಾವಣಗೆರೆಯ ನಾಗರಾಜ, ಅಂದ್ರಾಳ್ ಗ್ರಾಮದ ಮಾರೆಪ್ಪ, ಕರ್ನೂಲ್ ಜಿಲ್ಲೆ ಹೊಸಳ್ಳಿಯ ಹನುಮಪ್ಪ, ದಮ್ಮೂರು ಗ್ರಾಮದ ಕೆ.ಮಂಜುನಾಥ ರೆಡ್ಡಿ ತೀವ್ರವಾಗಿ ಗಾಯಗೊಂಡಿದ್ದಾರೆ.ಕುರುಗೋಡು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)