ಭಾನುವಾರ, ಏಪ್ರಿಲ್ 11, 2021
20 °C

ವಾಹನ ಇಂಧನವಾಗಿ ಪ್ಲಾಸ್ಟಿಕ್ ತ್ಯಾಜ್ಯ!:ದಾವಣಗೆರೆ ಎಂಜಿನಿಯರಿಂಗ್ ವಿದ್ಯಾರ್ಥಿಯ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನ ಇಂಧನವಾಗಿ ಪ್ಲಾಸ್ಟಿಕ್ ತ್ಯಾಜ್ಯ!:ದಾವಣಗೆರೆ ಎಂಜಿನಿಯರಿಂಗ್ ವಿದ್ಯಾರ್ಥಿಯ ಶೋಧ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಶಿ ಬೀಳುವ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪರ್ಯಾಯ ಇಂಧನವಾಗಿ ಬಳಸಿ ವಾಹನಗಳಿಗೆ ಬಳಕೆ ಮಾಡಬಹುದು!ಇಂತಹ ಅಚ್ಚರಿ ಫಲಿತಾಂಶವನ್ನು ದಾವಣಗೆರೆಯ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿ ರವಿ ಕುಮಾರ್ ತಮ್ಮ ಸಂಶೋಧನಾ ಯೋಜನೆಯಲ್ಲಿ ತೋರಿಸಿದ್ದಾರೆ.ಸದಾ ಚಿತ್ರಕಲಾ ಚಟುವಟಿಕೆಯಲ್ಲಿ ಗಿಜಿಗುಡುವ ಚಿತ್ರಕಲಾ ಪರಿಷತ್‌ನಲ್ಲಿ ಜೈವಿಕ ಇಂಧನ ಕ್ಷೇತ್ರದ ಹೊಸ ಲೋಕ ತೆರೆದುಕೊಂಡಿದೆ. ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಆಶ್ರಯದಲ್ಲಿ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಜೈವಿಕ ಇಂಧನ ಮೇಳವು ವಿದ್ಯಾರ್ಥಿಗಳ ಶೋಧಗಳ ಪ್ರದರ್ಶನಕ್ಕೆ ವೇದಿಕೆಯಾಗಿ ಪರಿವರ್ತನೆಗೊಂಡಿದೆ.ಉದ್ಯಮ ಹಾಗೂ ವಾಹನಗಳಲ್ಲಿ ಜೈವಿಕ ಇಂಧನಗಳನ್ನು ಹೇಗೆ ಪರ್ಯಾಯ ಇಂಧನವಾಗಿ ಬಳಸಬಹುದು ಎಂಬ ಬಗ್ಗೆ ಮೇಳದಲ್ಲಿ ಬೆಳಕು ಚೆಲ್ಲಲಾಗಿದೆ. ರಾಜ್ಯದಾದ್ಯಂತದ 32 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಜೈವಿಕ ಇಂಧನದ ಬಳಕೆಯಿಂದ ಆಗುವ ಲಾಭದ ಕುರಿತಾಗಿ ಸಂಶೋಧನಾ ಯೋಜನೆಗಳಲ್ಲಿ ಗಮನಸೆಳೆದಿದ್ದಾರೆ. ಜೈವಿಕ ಇಂಧನವನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಇಂಧನದ ಕೊರತೆಯನ್ನು ನೀಗಿಸಬಹುದು ಎಂಬುದು ವಿದ್ಯಾರ್ಥಿಗಳ ವಾದ.`ಪ್ಲಾಸ್ಟಿಕ್ ತ್ಯಾಜ್ಯವನ್ನು ದ್ರವ ಇಂಧನವಾಗಿ ಪರಿವರ್ತಿಸಬಹುದು. ಇದರಿಂದ ಮಾಲಿನ್ಯದ ಸಮಸ್ಯೆ ಇಲ್ಲ. ನೀರಿನ ಬಾಟಲಿ, ಹಾಲಿನ ಪ್ಯಾಕೇಟ್‌ಗಳನ್ನು ಇಲ್ಲಿ ಸಂಶೋಧನಾ ಯೋಜನೆಗೆ ಬಳಸಲಾಗಿದೆ. ಪೈರೊಲಾಜಿಕ್ ಮಾದರಿಯ ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ದ್ರವರೂಪಕ್ಕೆ ಇಳಿಸಲಾಗುತ್ತದೆ. ಈ ದ್ರವಗಳನ್ನು ಮತ್ತಷ್ಟು ಕಾರ್ಯವಿಧಾನದ ಮೂಲಕ ಜೈವಿಕ ಇಂಧನವಾಗಿ ಪರಿವರ್ತಿಸಲಾಗುವುದು.ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯಲ್ಲೇ ಈ ಇಂಧನವನ್ನು ಬಳಸಿ ವಾಹನಗಳನ್ನು ಓಡಿಸಬಹುದು. ಈ ಯೋಜನೆಯಿಂದ ಉತ್ತಮ ಫಲಿತಾಂಶ ಬಂದಿದೆ. ಈ ಯಂತ್ರವನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸುವ ಗುರಿ ಇದೆ~ ಎಂದು ವಿದ್ಯಾರ್ಥಿ ರವಿಕುಮಾರ್ `ಪ್ರಜಾವಾಣಿ~ಗೆ ಶುಕ್ರವಾರ ತಿಳಿಸಿದರು.ಜೈವಿಕ ಇಂಧನದ ಬೆರಣಿ:

ಜೈವಿಕ ಇಂಧನದ ಹೊಂಗೆ, ಹಿಪ್ಪೆ ಸಿಪ್ಪೆಗಳನ್ನು ಬಳಸಿ ಉರುವಲಿನ ಬೆರಣಿ (ಬ್ರಿಕ್ವೆಟ್ಸ್) ಮಾಡಿ ಸೌಧೆ ಸಮಸ್ಯೆಯನ್ನು ನಿವಾರಿಸಬಹುದು ಎಂಬುದು ತುಮಕೂರಿನ ಎಚ್‌ಎಂಎಸ್‌ಐಟಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ಯೋಜನೆಯ ಸಾರಾಂಶ.`ಜೈವಿಕ ಇಂಧನದ ಉಪ ಉತ್ಪನ್ನಗಳು ಸಹ ವ್ಯರ್ಥಗೊಳ್ಳಬಾರದು ಎಂಬುದು ನಮ್ಮ ಉದ್ದೇಶ. ಸಾಮಾನ್ಯವಾಗಿ ಉದ್ಯಮಗಳಲ್ಲಿ ಶೇಂಗಾ ಸಿಪ್ಪೆಯನ್ನು ಬೆರಣಿಯಾಗಿ ಪರಿವರ್ತಿಸಿ ಬಳಕೆ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ಹೊಂಗೆ, ಹಿಪ್ಪೆ ಹಾಗೂ ಇತರ ಉಪ ಉತ್ಪನ್ನಗಳನ್ನು ಬಳಸಿ ಈ ಬೆರಣಿ ಮಾಡಲಾಗಿದೆ. ಇದರಲ್ಲಿ ಯಶಸ್ಸು ಕಂಡಿದ್ದೇವೆ~ ಎಂದು ವಿದ್ಯಾರ್ಥಿ ಬಿ.ಎಂ. ನಿಶಾಂತ್ ಮಾಹಿತಿ ನೀಡಿದರು. ಎಸ್. ನವೀನ್, ಆರ್. ಶಿವಕುಮಾರ್, ಎಚ್.ಎಸ್. ಯುವರಾಜ್ ಈ ಯೋಜನೆಯ ಇತರೆ ಸದಸ್ಯರು.17 ಮಳಿಗೆಗಳು: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿದೆ. ಇನ್ನೊಂದೆಡೆ ಸಾಂಪ್ರದಾಯಿಕ ಇಂಧನಗಳ ಮೂಲಗಳು ಬರಿದಾಗುತ್ತಿವೆ. ಈ ನಿಟ್ಟಿನಲ್ಲಿ ಪರ್ಯಾಯ ಇಂಧನಗಳ ಬಳಕೆ ಅನಿವಾರ್ಯ ಎಂಬ ಮಾಹಿತಿ ನೀಡುವ ಹಾಗೂ ಜೈವಿಕ ಇಂಧನ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯ ಕುರಿತು ಬೆಳಕು ಚೆಲ್ಲುವ 17 ಮಳಿಗೆಗಳು ಮೇಳದಲ್ಲಿವೆ.ಪರಿಸರ ಕ್ಲಬ್ ಕಡ್ಡಾಯ

ಬೆಂಗಳೂರು: `ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪರಿಸರ ಕ್ಲಬ್ ಹಾಗೂ ಆರೋಗ್ಯ ಕ್ಲಬ್‌ಗಳನ್ನು ಕಡ್ಡಾಯವಾಗಿ ಆರಂಭಿಸಬೇಕು ಎಂಬುದಾಗಿ ಆದೇಶ ಹೊರಡಿಸಲಾಗಿದೆ~ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ನಗರದ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಶನಿವಾರ ನಡೆದ ಜೈವಿಕ ಇಂಧನ ಮೇಳದಲ್ಲಿ `ವಿದ್ಯಾರ್ಥಿಗಳೊಂದಿಗೆ ಇಂಧನ ಸಂವಾದ~ ದಲ್ಲಿ ಮಾತನಾಡಿದರು.`ಶಾಲೆಗಳಲ್ಲಿ ಪರಿಸರ ಪೂರಕವಾದ ಅನೇಕ ಚಟುವಟಿಕೆಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು~ ಎಂದರು.

`ಪ್ರಕೃತಿಯನ್ನು ಶೋಷಣೆ ಹಾಗೂ ದುರ್ಬಳಕೆ ಮಾಡಿದ್ದೇವೆ.

 

ಪ್ರಕೃತಿಯ ಅಸಮತೋಲನದಿಂದ ಬರಗಾಲದಂತಹ ಪರಿಸ್ಥಿತಿ ಉದ್ಭವವಾಗಿದೆ. ಪ್ರಕೃತಿ ಸದಾ ಹಸಿರಿನಿಂದ ಇರುವಂತೆ ನೋಡಿಕೊಳ್ಳಬೇಕಾದುದು ಎಲ್ಲರ ಜವಾಬ್ದಾರಿ. ಪ್ಲಾಸ್ಟಿಕ್, ಕುಡಿಯುವ ನೀರನ್ನು ಹಿತಮಿತವಾಗಿ ಬಳಸಬೇಕು~ ಎಂದು ಸಲಹೆ ನೀಡಿದರು.ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಮಾತನಾಡಿದರು. ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸದಸ್ಯ ಜೆ.ಟಿ.ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಮೊನ್ನಪ್ಪ ಉಪಸ್ಥಿತರಿದ್ದರು.ಈ ಸಂದರ್ಭ ಚಿತ್ರಕಲೆ, ಪ್ರಬಂಧ ಹಾಗೂ ಕಾವ್ಯ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದಕ್ಕೂ ಮುನ್ನ ಸಬ್ಬನಹಳ್ಳಿ ರಾಜು ವಿಜ್ಞಾನ ವಿನೋದ ಕಾರ್ಯಕ್ರಮ ನಡೆಸಿಕೊಟ್ಟರು.`ಪರಿಸರ ಮಾಲಿನ್ಯ: ಮಕ್ಕಳಲ್ಲಿ ಜಾಗೃತಿ ಅಗತ್ಯ~

ಬೆಂಗಳೂರು: `ಪರಿಸರ ಮಾಲಿನ್ಯದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಬಾಲಭವನ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ~ ಎಂದು ಬಾಲಭವನದ ಅಧ್ಯಕ್ಷೆ ಸುಲೋಚನಾ ಭಟ್ ಅವರು ತಿಳಿಸಿದರು. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಬಾಲಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೈವಿಕ ಇಂಧನದ ಪುಟಾಣಿ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.ನೈರ್ಮಲ್ಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರೆ ಅದರ ಫಲಶ್ರುತಿ ಉತ್ತಮವಾಗಿರುತ್ತದೆ.ಶಾಲಾ ಹುಡುಗನೊಬ್ಬ ರಸ್ತೆ ವಿಸ್ತರಣೆಗೆ ಎರಡು ಕಡೆಯ ಮರಗಳನ್ನು ತೆಗೆಯುವ ಬದಲು ರಸ್ತೆ ಒಂದು ಬದಿಯ ಮರಗಳನ್ನು ಮಾತ್ರ ತೆಗೆಯುವಂತೆ ನೀಡಿದ್ದ ಸಲಹೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿತ್ತು ಎಂಬುದನ್ನು ಮಕ್ಕಳಿಗೆ ತಿಳಿಸಿದ ಅವರು, ಪರಿಸರ ಉಳಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಕ್ಕಳಿಗೆ ಸಲಹೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಮೇಶ ಬಿ. ಝಳಕಿ, `ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮಕ್ಕಳ ಪುಟಾಣಿ ರೈಲಿಗೆ ಜೈವಿಕ ಇಂಧನವನ್ನು ಅಳವಡಿಸಲಾಗಿದೆ.  ಸಾಂಪ್ರದಾಯಿಕ ಇಂಧನವನ್ನು ಬಳಸದೇ, ಜೈವಿಕ ಇಂಧನವನ್ನು ಎಲ್ಲಾ ಕಡೆಗಳಲ್ಲೂ ಬಳಸಿಕೊಳ್ಳುವಂತೆ ಮಂಡಳಿಯವರು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ರಾಜ್ಯವನ್ನು ಪರಿಸರ ಸ್ನೇಹಿ ರಾಜ್ಯವನ್ನಾಗಿ ಮಾಡಬೇಕು~ ಎಂದು ಅವರು ಕೋರಿದರು. ಕರ್ನಾಟಕ ರಾಜ್ಯ ಜೈವಿಕ ಇಂಧನ ಆಭಿವೃದ್ಧಿ ಮಂಡಳಿಯ ಕಾರ್ಯಕಾರಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಎ. ಕೆ. ಮೊನ್ನಪ್ಪ, ತಾಂತ್ರಿಕ ಅಧಿಕಾರಿ ಬಸವರಾಜು, ಬಾಲಭವನದ ಕಾರ್ಯದರ್ಶಿ ದಿವ್ಯ ನಾರಾಯಣಪ್ಪ ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.