ಮಂಗಳವಾರ, ಮೇ 18, 2021
23 °C

ವಾಹನ, ಇಂಧನ ಕ್ಷೇತ್ರ: 35 ಸಾವಿರ ಕೋಟಿ ಹೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಟೊಮೊಬೈಲ್, ಶಿಕ್ಷಣ, ಇಂಧನ, ಮಾಹಿತಿ ತಂತ್ರಜ್ಞಾನ ಸೇರಿದಂತೆ 14 ಕ್ಷೇತ್ರಗಳಲ್ಲಿ ಒಟ್ಟು 35,785 ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ 43 ಯೋಜನೆಗಳಿಗೆ ರಾಜ್ಯ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿದೆ. ಸರ್ಕಾರದ ಅಂದಾಜಿನ ಪ್ರಕಾರ ಈ ಯೋಜನೆಗಳು ಒಟ್ಟು 4.83 ಲಕ್ಷ ಉದ್ಯೋಗ ಸೃಷ್ಟಿಸಲಿವೆ.ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ನಡೆದ ಸಮಿತಿಯ 27ನೇ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಅನುಮೋದನೆ ದೊರೆತ ಯೋಜನೆಗಳ ಅನುಷ್ಠಾನಕ್ಕೆ 24 ಗಂಟೆಗಳಲ್ಲಿ ಸರ್ಕಾರಿ ಆದೇಶ ಹೊರಡಿಸುವ ಭರವಸೆಯೂ ಮುಖ್ಯಮಂತ್ರಿಗಳಿಂದ ದೊರೆಯಿತು.ಸಭೆ ನಂತರ ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, `ಅನುಮೋದನೆ ದೊರೆತ ಯೋಜನೆಗಳಿಗೆ 24 ಗಂಟೆಗಳಲ್ಲಿ ಸರ್ಕಾರಿ ಆದೇಶದ ಪ್ರತಿ ನೀಡುವಂಥ ವ್ಯವಸ್ಥೆ ಕಲ್ಪಿಸಿರುವುದು ರಾಷ್ಟ್ರದಲ್ಲೇ ಪ್ರಥಮ~ ಎಂದರು.ಒಪ್ಪಿಗೆ ದೊರೆತ ಯೋಜನೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 11, ಬೆಂಗಳೂರು ನಗರ ಜಿಲ್ಲೆಯಲ್ಲಿ 6, ಬೆಳಗಾವಿ, ಗುಲ್ಬರ್ಗ, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ತಲಾ ಮೂರು ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ. ಉತ್ತರ ಕರ್ನಾಟಕ ಪ್ರದೇಶಕ್ಕೆ ಹೆಚ್ಚಿನ ಯೋಜನೆಗಳು ದೊರೆಯಲಿವೆ ಎಂದರು.ಭೂ ಬ್ಯಾಂಕ್: ಬಂಡವಾಳ ಹೂಡುವ ಉದ್ಯಮಿಗಳಿಗೆ ಭೂಮಿ ನೀಡಲು ರಾಜ್ಯದ ಎರಡನೆಯ ಮತ್ತು ಮೂರನೆಯ ಹಂತದ ನಗರಗಳ ಸುತ್ತಮುತ್ತ ಒಟ್ಟು 1.10 ಲಕ್ಷ ಎಕರೆ ಭೂಮಿ ಗುರುತಿಸಲಾಗಿದೆ. ಈ ಪೈಕಿ 82 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 40 ಸಾವಿರ ಎಕರೆ ಭೂಮಿ ಸರ್ಕಾರದ ವಶದಲ್ಲಿ ಇದೆ ಎಂದು ವಿವರಿಸಿದರು.2010ರಲ್ಲಿ ನಡೆದ ಸಮಾವೇಶದಲ್ಲಿ ಒಪ್ಪಂದ ಮಾಡಿಕೊಂಡಿದ್ದ ಉದ್ಯಮಿಗಳ ಪೈಕಿ ಶೇ 38ರಷ್ಟು ಮಂದಿ ವಿವಿಧ ಕಾರಣಗಳಿಂದ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕಿದ್ದಾರೆ. ಕಾನೂನು ತೊಡಕು, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ಅಡ್ಡಿ, ವಿಶ್ವ ಆರ್ಥಿಕ ಹಿಂಜರಿತ ಇದಕ್ಕೆ ಕೆಲವು ಕಾರಣಗಳು ಎಂದು ಹೇಳಿದರು.ಭೂಮಿ ಹಸ್ತಾಂತರಿಸಿದ ಒಂದು ವರ್ಷದ ನಂತರವೂ ಯೋಜನೆ ಅನುಷ್ಠಾನಕ್ಕೆ ಬಾರದಿದ್ದರೆ, ಭೂಮಿ ಹಿಂಪಡೆಯಲಾಗುವುದು. ಈಗಾಗಲೇ ವಿವಿಧ ಕಂಪೆನಿಗಳಿಗೆ ನೀಡಿದ್ದ ಒಟ್ಟು 480 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಯೋಜನೆಯ ಅನುಷ್ಠಾನ ಪ್ರಗತಿಯಲ್ಲಿದ್ದರೆ, ಪೂರ್ಣಗೊಳಿಸಲು ಹೆಚ್ಚಿನ ಕಾಲಾವಕಾಶ ನೀಡಲಾಗುವುದು ಎಂದರು.ಉದ್ಯಮ ಸ್ಥಾಪನೆಗೆ ಭೂಮಿ ಮಂಜೂರು ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಸಂಬಂಧ ಕರ್ನಾಟಕ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜ್ಯೋತಿ ರಾಮಲಿಂಗಂ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.