`ವಾಹನ ತೆರಿಗೆ ವಂಚನೆಗೆ ಅವಕಾಶ ಇಲ್ಲ'

7
ಕಂಕನಾಡಿ ರೈಲು ನಿಲ್ದಾಣದಲ್ಲಿ ಮುಂದಿನ ವಾರದಿಂದ ಪ್ರಿಪೇಯ್ಡ ಆಟೊ

`ವಾಹನ ತೆರಿಗೆ ವಂಚನೆಗೆ ಅವಕಾಶ ಇಲ್ಲ'

Published:
Updated:

ಮಂಗಳೂರು: ವಾಹನಗಳಿಗೆ ವಿಧಿಸುವ ಜೀವಿತಾವಧಿ ತೆರಿಗೆ (ಲೈಫ್ ಟೈಮ್ ಟ್ಯಾಕ್ಸ್) ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ತೆರಿಗೆ ವಂಚಿಸುವ ಪರಿಪಾಠ ನಡೆಯುತ್ತಿದೆ. ಇದಕ್ಕೆ ಖಂಡಿತ ಅವಕಾಶ ನೀಡುವುದಿಲ್ಲ. ವರ್ಗಾವಣೆಗೊಂಡು ಬಂದ ಕೇಂದ್ರ ಸರ್ಕಾರಿ ನೌಕರರಿಗೆ ಮಾತ್ರ ಈ ತೆರಿಗೆಯಿಂದ ವಿನಾಯಿತಿ ಇದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.`ಕೇಂದ್ರ ಸರ್ಕಾರಿ ನೌಕರರೂ ರಾಜ್ಯದಲ್ಲಿ ತಮ್ಮ ವಾಹನಕ್ಕೆ ವಾರ್ಷಿಕ ತೆರಿಗೆ ಪಾವತಿಸಬೇಕು. ಅವರು ಜೀವಿತಾವಧಿ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಆದರೆ ಉಳಿದ ಯಾರಿಗೂ ಈ ಅವಕಾಶ ಇಲ್ಲ. ಇತರ ರಾಜ್ಯಗಳಲ್ಲಿ ನೋಂದಾಯಿಸುವಾಗ ತೆರಿಗೆ ಪಾವತಿಸಿದ್ದರೂ, ರಾಜ್ಯದಲ್ಲಿ ಜೀವಿತಾವಧಿ ತೆರಿಗೆ ಪಾವತಿಸಲೇಬೇಕು.

ಬೇರೆ ರಾಜ್ಯದಲ್ಲಿ ಕಟ್ಟಿದ ತೆರಿಗೆ ವಾಪಸ್ ಪಡೆಯುವುದು ಅವರಿಗೆ ಬಿಟ್ಟ ವಿಚಾರ' ಎಂದು ಅವರು ಶುಕ್ರವಾರ ಇಲ್ಲಿನ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ (ಕೆಸಿಸಿಐ) ನಡೆದ ರಸ್ತೆ ಸುರಕ್ಷತೆ ಕುರಿತ ಸಂವಾದದಲ್ಲಿ ತಿಳಿಸಿದರು.

ಈ ವರ್ಷದ ಜನವರಿ 1ರಿಂದಲೇ ಈ ಜೀವಿತಾವಧಿ ತೆರಿಗೆ ನಿಯಮ ಜಾರಿಗೆ ಬಂದಿದೆ. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಇದಕ್ಕೆ ತಪ್ಪಿದಲ್ಲಿ ಅಂತಹ ವಾಹನಗಳ ಮೇಲೆ ದಂಡ ವಿಧಿಸುವುದು ನಿಶ್ಚಿತ ಎಂದು ಅವರು ಸ್ಪಷ್ಟಪಡಿಸಿದರು.ಪರವಾನಗಿ ರದ್ದು ಎಚ್ಚರಿಕೆ: ದೆಹಲಿಯಲ್ಲಿ ಬಸ್‌ನೊಳಗೆ ನಡೆದ ಬರ್ಬರ ಅತ್ಯಾಚಾರ ಕೃತ್ಯವನ್ನು ಉಲ್ಲೇಖಿಸಿದ ಅವರು, ಮಂಗಳೂರಿನ್ಲ್ಲಲೂ ಇಂತಹ ಸಣ್ಣಪುಟ್ಟ ಲೈಂಗಿಕ ದೌರ್ಜನ್ಯಗಳು ಆಗಾಗ ನಡೆಯುತ್ತಿವೆ, ಆದರೆ ಅವಮಾನಕ್ಕೆ ಒಳಗಾಗುವುದು ಬೇಡ ಎಂಬ ಕಾರಣಕ್ಕೆ ಹಲವರು ದೂರು ನೀಡುತ್ತಿಲ್ಲ, ಬಸ್ ನಂಬರ್ ಮತ್ತು ಘಟನೆಯ ವಿವರ ನೀಡಿದರೆ, ಹೆಸರನ್ನು ಗೋಪ್ಯವಾಗಿ ಇಟ್ಟುಕೊಂಡು ಅಂತಹ ಬಸ್‌ಗಳ ಪರವಾನಗಿ ರದ್ದುಪಡಿಸುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಒ ತಿಳಿಸಿದರು.ಕಂಕನಾಡಿ ರೈಲು ನಿಲ್ದಾಣದ ಬಳಿ ಮುಂಗಡ ಪಾವತಿಯ ಆಟೊ ನಿಲ್ದಾಣ ಮುಂದಿನ ವಾರದಿಂದ ಜಾರಿಗೆ ಬರಲಿದೆ. ಅದರೊಂದಿಗೆ ನಗರದ 3 ಕಡೆಗಳಲ್ಲಿ ಈ ವ್ಯವಸ್ಥೆ ಆರಂಭಗೊಂಡಂತಾಗಲಿದೆ ಎಂದು ಅವರು ತಿಳಿಸಿದರು. ಅವರು ಇದೇ ಸಂದರ್ಭದಲ್ಲಿ ಕೆಸಿಸಿಐಯಿಂದ ನೀಡಲಾದ 3 ಟಿಕೆಟ್ ನೀಡುವ ಯಂತ್ರವನ್ನು ಸ್ವೀಕರಿಸಿದರು.ಬಸ್‌ಗಳಲ್ಲಿ ಕರ್ಕಶವಾಗಿ ಕೂಗುವ ಲೌಡ್‌ಸ್ಪೀಕರ್‌ಗಳನ್ನು ತೆಗೆಸಬೇಕು, ಹೊಗೆ ತಪಾಸಣೆಯನ್ನು ಲಾರಿಗಳು, ಆಟೊಗಳಿಗೆ ಕಟ್ಟುನಿಟ್ಟುಗೊಳಿಸಬೇಕು, ಕರ್ಕಶ ಹಾರನ್‌ಗಳನ್ನು ನಿಯಂತ್ರಿಸಬೇಕು, ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆಗೆಸಬೇಕು, ಬೈಕಂಪಾಡಿ ಕೈಗಾರಿಕಾ ಪ್ರಾಂಗಣಕ್ಕೆ ತೆರಳುವ ವೃತ್ತದಲ್ಲಿ ಬಸ್ ಚಾಲಕರು ಹೋಂ ಗಾರ್ಡ್‌ಗಳ ಸೂಚನೆಗೆ ಬೆಲೆ ಕೊಡುತ್ತಿಲ್ಲ, ಇದನ್ನು ತಡೆಗಟ್ಟಬೇಕು ಎಂಬಂತಹ ಹಲವಾರು ಬೇಡಿಕೆಗಳನ್ನು ಉದ್ಯಮಿಗಳು ಮತ್ತು ಸಾರ್ವಜನಿಕರು ಮುಂದಿಟ್ಟರು.ಕೆಸಿಸಿಐ ಅಧ್ಯಕ್ಷ ಮೊಹಮ್ಮದ್ ಅಮೀನ್, ಉಪಾಧ್ಯಕ್ಷ ನಿಗಮ್ ಬಿ.ವಸಾನಿ, ಗೌರವ ಕಾರ್ಯದರ್ಶಿ ಜೀವನ್ ಸಲ್ಡಾನ, ಗಣೇಶ್ ಭಟ್, ರಾಮಮೋಹನ್ ಪೈ ಮರೂರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry