ಬುಧವಾರ, ಅಕ್ಟೋಬರ್ 16, 2019
26 °C

ವಾಹನ ಲೋಕದ ಕೌತುಕ ವರ್ಷ 2012!

Published:
Updated:

ಬೈಕ್, ಸ್ಕೂಟರ್ ಎಂದರೆ ಯುವಕರಲ್ಲಿ ವಿದ್ಯುತ್ ಸಂಚಲನವೇ ಆಗುತ್ತದೆ. ಬೈಕ್‌ನ ಮೈಮಾಟ, ಭೋರ್ಗರೆಯುವ ಸದ್ದು, ಮುದ ನೀಡುವ ವೇಗ ಯಾವ ಯುವಕರನ್ನೂ ಮೋಡಿ ಮಾಡದೇ ಇರದು. ಹಾಗೆಯೇ ಯುವತಿಯರಿಗೂ ಅಚ್ಚುಮೆಚ್ಚಾದ ಸ್ಕೂಟರ್, ಸ್ಕೂಟರೆಟ್‌ಗಳು (100 ಸಿಸಿಗೂ ಕಡಿಮೆ ಸಾಮರ್ಥ್ಯದ ಸ್ಕೂಟರ್) ಕಡಿಮೆಯೇನಿಲ್ಲ.ಈಗಾಗಲೇ ಬೈಕ್ ಮತ್ತು ಸ್ಕೂಟರ್ ಎಂದರೆ ಒಂದು ನಿಶ್ಚಿತ ಏಕತಾನೀಯ ರೂಪ ಸಿಕ್ಕಿರುವ ಭಾರತೀಯ ವಾಹನ ಮಾರುಕಟ್ಟೆಯಲ್ಲಿ, ವಾಹನದ ವಿನ್ಯಾಸ, ಶಕ್ತಿ ಸಾಮರ್ಥ್ಯ ಹಾಗೂ ಇಂಧನ ಕ್ಷಮತೆಯಲ್ಲಿ ಗಮನಾರ್ಹ ವ್ಯತ್ಯಾಸಗಳೇನೂ ಆಗುತ್ತಿಲ್ಲ. ರೂಪದಲ್ಲಿ ಕೊಂಚ ಮಾರ್ಪಾಟುಗಳಿರುವ, ಕಡಿಮೆ ಬೆಲೆಗೆ ಉತ್ಕೃಷ್ಟ ಗುಣಮಟ್ಟ ಹಾಗೂ ಅಂತರ ರಾಷ್ಟ್ರೀಯ ಮಾನದಂಡಗಳಿಗೆ ಸರಿಸಮನಾದ ಬೈಕ್, ಸ್ಕೂಟರ್‌ಗಳು ಹೊರ ಬರುತ್ತಿರುವುದು ವಿಶೇಷ. ಇವುಗಳ ಜತೆಗೇ ಹೊಸ ವಿದ್ಯುಚ್ಚಾಲಿತ ಸ್ಕೂಟರ್‌ಗಳು  ರಸ್ತೆಗಿಳಿಯಲಿರುವುದು 2012 ರ ವಿಶೇಷ.

ಮೆಚ್ಚಿನ ಬೈಕ್, ಅಗ್ಗದ ಸ್ಕೂಟರ್

ಬಜಾಜ್ ಆಟೋ: ದ್ವಿಚಕ್ರ ವಾಹನ ಕ್ಷೇತ್ರದಲ್ಲಿ  ಮಾರಾಟದಲ್ಲಿ 3 ನೇ ಸ್ಥಾನದಲ್ಲಿರುವ ಬಜಾಜ್ ಆಟೋದ ವಿಶೇಷತೆ, ಇದು ಭಾರತದ ಏಕ ಮಾತ್ರ ಬೈಕ್‌ನ್ನು ಮಾತ್ರ ತಯಾರಿಸುವ ಸಂಸ್ಥೆ. ತನ್ನ `ಚೇತಕ್~, `ಸೂಪರ್~ ಸ್ಕೂಟರ್‌ಗಳ ಮೂಲಕ ಭಾರತದ ರಸ್ತೆಗಳನ್ನು ಆಳಿದ್ದ ಬಜಾಜ್ ಈಗ ಸ್ಕೂಟರ್ ಉತ್ಪಾದನೆಯನ್ನು ಅಧಿಕೃತವಾಗಿ ನಿಲ್ಲಿಸಿದೆ.

 

ಆ ನಂತರ ತನ್ನ ಪಲ್ಸರ್, ಡಿಸ್ಕವರ್, ಅವೆಂಜರ್, ಬಾಕ್ಸರ್, ಪ್ಲಾಟಿನಾ ಬೈಕ್‌ಗಳ ಮೂಲಕ ಬೈಕ್ ಮಾರುಕಟ್ಟೆಯ ಮೇಲೆ ಪ್ರಾಬಲ್ಯ ಮರೆದದ್ದು ಬಜಾಜ್‌ನ ಸಾಧನೆ. 2011 ರಲ್ಲಿ ಪ್ರೀಮಿಯಂ ವಿಭಾಗದಲ್ಲಿ ಬಜಾಜ್ ಪಲ್ಸರ್ ಮೂಲಕ ಯಶಸ್ವಿ ಮಾರ್ಗ ಹಿಡಿದದ್ದು ನಿಜವೇ ಆದರೂ, ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ 100 ಸಿಸಿ (ಕ್ಯೂಬಿಕ್ ಕೆಪಾಸಿಟಿ) ಬೈಕ್‌ಗಳಲ್ಲಿ ಅತ್ಯಂತ ಕಡಿಮೆ ಬೆಲೆಯ ಇಕಾನಮಿ ವಿಭಾಗದ `ಪ್ಲಾಟಿನಾ~ (ರೂ. 44 ಸಾವಿರ) ಬೈಕ್‌ಗಳನ್ನು ಮಾರಾಟ ಮಾಡಿ ಲಾಭಾಂಶ ಗಳಿಸಿದ್ದ ಬಜಾಜ್, 2012 ರಲ್ಲೂ ಎಕಾನಮಿ ವಿಭಾಗದ ಬೈಕ್‌ಗಳ ಮೇಲೆ ಗಮನ ಹರಿಸಲಿದೆ. ಸುಧಾರಿತ ಪ್ಲಾಟಿನಾ ಬೈಕ್ ಮಾರುಕಟ್ಟೆಗೆ ಇಳಿಯಲಿದೆ. ಬೈಕ್‌ಗೆ ಎಲೆಕ್ಟ್ರಿಕ್ ಸ್ಟಾರ್ಟ್ ಸೌಲಭ್ಯ ಸೇರ್ಪಡೆಗೊಳ್ಳಲಿದ್ದು, ಬೆಲೆಯಲ್ಲಿ ಏರಿಕೆಯಿಲ್ಲ.ಆದರೆ ಬಹು ನಿರೀಕ್ಷಿತ `ನೆಕ್ಸ್ಟ್ ಜನರೇಷನ್ ಬಜಾಜ್ ಪಲ್ಸರ್~ ರಸ್ತೆಗಿಳಿಯಲಿರುವುದು ಈಗಾಗಲೇ ಯುವಕರ ನಿದ್ದೆ ಕೆಡೆಸಿದೆ. ಆಸ್ಟ್ರಿಯಾ ಮೂಲದ `ಕೆಟಿಎಂ~ ಸಂಸ್ಥೆ ಜತೆಗಿನ ಸಹಭಾಗಿತ್ವದಲ್ಲಿ ಕೆಟಿಎಂ ಪಲ್ಸರ್ 2012 ರಲ್ಲಿ ಹೊರಬರಲಿದೆ. 125 ಸಿಸಿ ಯಿಂದ 250 ಸಿಸಿ ವರೆಗಿನ ಸಾಮರ್ಥ್ಯದ  ಎಂಜಿನ್ ನಿರೀಕ್ಷಿಸಲಾಗಿದೆ. ಇದೇ ಮೊದಲ ಬಾರಿಗೆ ಪಲ್ಸರ್ ತನ್ನೀ ಬೈಕ್ ಮೂಲಕ ಮಾನೋಕ್ರಾಸ್ ಏಕ ಸಸ್ಪೆನ್ಷನ್ ಸೌಲಭ್ಯ ಪರಿಚಯಿಸುತ್ತಿರುವುದೂ ವಿಶೇಷ. ದೊಡ್ಡ ಡಿಸ್ಕ್ ಬ್ರೇಕ್, 10 ಸ್ಪೋಕ್ ಅಲಾಯ್ ಚಕ್ರ ಇರಲಿದೆ. ಬೆಲೆ ರೂ. 80 ಸಾವಿರ, ರೂ. 1.25 ಲಕ್ಷ ವರೆಗೂ ಅಂದಾಜಿಸಲಾಗಿದೆ. ಇದರ ಬೆನ್ನಲ್ಲೇ ನೆಕ್ಸ್ಟ್ ಜನರೇಷನ್ ಬಜಾಜ್ ಡಿಸ್ಕವರ್ ಬೈಕ್ ಸಹ ಹೊರ ಬರಲಿದೆ. ಸಾಂಪ್ರದಾಯಿಕ ಕಾರ್ಬುರೇಟರ್ ಬದಲಿಗೆ, ಫ್ಯೂಯಲ್ ಇಂಜೆಕ್ಷನ್ ಕಂಪ್ಯೂಟರ್ ನಿಯಂತ್ರಿತ ಇಂಧನ ಬಳಕೆ ವ್ಯವಸ್ಥೆ ಇರಲಿರುವುದು ವಿಶೇಷ. ಬೆಲೆ ರೂ. 65 ಸಾವಿರ ನಿರೀಕ್ಷಿಸಲಾಗಿದೆ.

ಹೀರೋ ಮೋಟೋಕಾರ್ಪ್: ಹೋಂಡಾ ಸಹಭಾಗಿತ್ವದಿಂದ ಹೊರಬಂದ ಹೀರೋ ಸಂಸ್ಥೆ, ಸ್ವತಂತ್ರ ಮಾರುಕಟ್ಟೆಯನ್ನು ಕಂಡುಕೊಂಡ ವಿಶೇಷ ವರ್ಷ 2011. ಹೋಂಡಾ ತಂತ್ರಜ್ಞಾನ ಸಹಾಯದಿಂದ ತನ್ನ ಹೀರೋ ಹೋಂಡಾ ಸಿಡಿ 100, ಸ್ಪ್ಲೆಂಡರ್ ಮೂಲಕ ಅಕ್ಷರಶಃ ಭಾರತೀಯ ರಸ್ತೆಗಳನ್ನಾಳಿದ, ಇಂದಿಗೂ ದೇಶದ ನಂಬರ್ ಒಂದನೇ ಸ್ಥಾನದಲ್ಲಿರುವ ಹೀರೋ ಹೋಂಡಾ 2012 ರಲ್ಲಿ ಅದ್ಭುತ ಯೋಜನೆಗಳನ್ನೇ ಹೊಂದಿದೆ.

 

ಹೋಂಡಾದಿಂದ ಬೇರ್ಪಟ್ಟ ಮೇಲೆ, ಹೀರೋದ ಕತೆ ಮುಗಿಯಿತು ಎಂದು ಲೆಕ್ಕಾಚಾರಗಳನ್ನು ಹಾಕುತ್ತಿರುವಾಗಲೇ 2011 ಮುಗಿಯುವ ಮೊದಲೇ ದೇಶದ ಮೊಟ್ಟ ಮೊದಲ ದೇಶೀಯ ತಂತ್ರಜ್ಞಾನದ `ಆಫ್ ರೋಡ್~ (ಕಚ್ಚಾ ರಸ್ತೆ) ಬೈಕ್- `ಇಂಪಲ್ಸ್~ನ್ನು ಪರಿಚಯಿಸಿ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದು ಹೀರೋದ ಸಾಧನೆ. ವಿದೇಶಿ ಆಫ್ ರೋಡ್ ಬೈಕ್‌ಗಳ ಬೆಲೆ ಕನಿಷ್ಠ ರೂ. 2 ಲಕ್ಷದಿಂದ ಪ್ರಾರಂಭವಾದರೆ, ಇಂಪಲ್ಸ್ ಕೇವಲ ಎಲ್ಲ ತೆರಿಗೆಗಳನ್ನು ಸೇರಿ ರೂ. 75 ಸಾವಿರಗಳಿಗೆ ಸಿಗುವಂತೆ ಮಾಡಿ ಮೋಡಿ ಮಾಡಿತು. ಅಂತೆಯೇ 2012 ರಲ್ಲೂ ಹೀರೋ ಅನೇಕ ಹೊಸ ಬೈಕ್‌ಗಳನ್ನು ಹೊರಬಿಡುವ ತವಕದಲ್ಲಿದೆ. ಆದರೆ ಹೀರೋ ಕಡಿಮೆ ಬೆಲೆಯ ಇಕಾನಮಿ ಬೈಕ್‌ಗಳ ಮೇಲೆ ಗಮನ ಹರಿಸಿದೆ. ಇನ್ನೂ ಹೆಸರಿಡದ 250 ಸಿಸಿ ಸಾಮರ್ಥ್ಯದ ಬೈಕ್ ವರ್ಷದ ಆರಂಭದಲ್ಲೇ ರಸ್ತೆಗಿಳಿಯಲಿದೆ.2012 ರಲ್ಲಿ ಹೀರೋ `ಮೀಸ್ಟ್ರೋ~ ಹೆಸರಿನ ಕಡಿಮೆ ಬೆಲೆಯ ಹೊಸ ಸುಧಾರಿತ ಸ್ಕೂಟರ್‌ನ್ನು ಹೊರಬಿಡಲಿದೆ. ಮಿಸ್ಟ್ರೋ ಪುರುಷ ಹಾಗೂ ಮಹಿಳಾ ಸವಾರರನ್ನು ಗಮನದಲ್ಲಿರಿಸಿಕೊಂಡು ತಯಾರಿಸಲ್ಪಟ್ಟಿದೆ 110 ಸಿಸಿ, 8.2 ಬಿಎಚ್‌ಪಿ ಸಾಮರ್ಥ್ಯದ ಎಂಜಿನ್ ಇರಲಿದೆ. ಬೆಲೆ ರೂ. 45 ಸಾವಿರದಿಂದ ರೂ. 50 ಸಾವಿರ. ಹೋಂಡಾದ ಆಕ್ಟಿವಾ, ಏವಿಯೇಟರ್ ಸ್ಕೂಟರ್‌ಗಳಿಗೆ ಸ್ಪರ್ಧೆ ನೀಡುವುದು ಉದ್ದೇಶ. ಹಾಲಿ ಇರುವ ಪ್ಲೆಷರ್ ಸ್ಕೂಟರ್‌ನ ಉತ್ಪಾದನೆ ನಿಲ್ಲಿಸಿ, ಮೀಸ್ಟ್ರೋ ಅನ್ನು ಹೀರೋ ಉತ್ತೇಜಿಸಲಿದೆ. ಸುಧಾರಿತ ಮೈಕ್ರೋ ಪ್ರಾಸೆಸರ್ ತಂತ್ರಜ್ಞಾನದ ಇಂಧನ ದಹನ ವ್ಯವಸ್ಥೆ ಇರಲಿದೆ.

ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಲಿಮಿಟೆಡ್: 2011 ರಲ್ಲಿ ಸಿಬಿಆರ್ 250 ಸಿಸಿ ಬೈಕ್ ಪರಿಚಯಿಸಿದ್ದ ಹೋಂಡಾ, 2012 ರಲ್ಲಿ 100 ಸಿಸಿ ಬೈಕ್‌ಗಳ ಮೇಲೆ ಗಮನ ಹರಿಸಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ 110 ಸಿಸಿಯ ಸಿಬಿ ಟ್ವಿಸ್ಟರ್‌ಗೂ ಕಡಿಮೆ ಸಾಮರ್ಥ್ಯದ 100 ಸಿಸಿ ಬೈಕ್ ಹೊರ ಬರಲಿದೆ. `ಸಿಬಿ 100~ ಹೆಸರಿನ, 100 ಸಿಸಿಯ, ರೂ. 38 ಸಾವಿರಕ್ಕೆ ಗ್ರಾಹಕರ ಕೈ ಸೇರಬಲ್ಲ ಬೈಕಿದು.ಬಜಾಜ್‌ನ ಪ್ಲಾಟಿನ ಬೈಕ್‌ಗೂ ಕಡಿಮೆ ಬೆಲೆ ಬೈಕ್ ನೀಡುವ ಉದ್ದೇಶ. ಜತಗೆ 150 ಸಿಸಿಯ `ಸಿಬಿಆರ್ 150~ ಬೈಕ್ ಸಹ ಪರಿಚಯಗೊಳ್ಳಲಿವೆ. ಬೆಲೆ ರೂ. 75 ಸಾವಿರ ಅಂದಾಜಿಸಲಾಗಿದೆ.ಸ್ಕೂಟರ್ ಕ್ಷೇತ್ರದಲ್ಲಿ ಮಾತ್ರ ಹೀರೋ ಒಂದು ಹೆಜ್ಜೆ ಮುಂದಿಡಲಿವೆ. 125 ಸಿಸಿಯ ಬೈಕ್‌ಗಳನ್ನು ತನ್ನ ಗುಡಗಾಂವ್ ಘಟಕದಲ್ಲಿ ತಯಾರಿಸಲಿದೆ. ಹಾಲಿ ಇರುವ ಆಕ್ಟಿವಾ, ಏವಿಯೇಟರ್‌ಗಳಿಗೂ ಹೆಚ್ಚಿನ ಸಾಮರ್ಥ್ಯದ, ಸುಧಾರಿತ ತಂತ್ರಜ್ಞಾನದ ಸ್ಕೂಟರ್ ಇದು. ಇಲೆಕ್ಟ್ರಾನಿಕ್ ಫ್ಯೂಯಲ್ ಇಂಜ್ಞೆಕ್ಷನ್ ವ್ಯವಸ್ಥೆ ಇರಲಿದೆ. ಬೆಲೆ ರೂ. 50 ಸಾವಿರದಿಂದ ರೂ. 60 ಸಾವಿರ ಇರಲಿದೆ.

ಯಮಹಾ ಇಂಡಿಯಾ ಲಿಮಿಟೆಡ್: ಬೈಕ್ ಕ್ಷೇತ್ರದಲ್ಲಿ ಮಾತ್ರ ಇರುವ ಯಮಹಾ 2012 ಕ್ಕೆ ಸ್ಕೂಟರ್ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಲಿದೆ. ತನ್ನ ಸರ್ಜಾಪುರ ಮತ್ತು ಫರಿದಾಬಾದ್ ಘಟಕದಲ್ಲಿ 200 ಸಿಸಿ ಸಾಮರ್ಥ್ಯವರೆಗಿನ ಸ್ಕೂಟರ್‌ಗಳು ತಯಾರಾಗಲಿವೆ. ಬೆಲೆ ರೂ. 50 ಸಾವಿರದಿಂದ ರೂ. 80 ಸಾವಿರ ನಿರೀಕ್ಷಿಸಲಾಗಿದೆ.   ಬೈಕ್ ಕ್ಷೇತ್ರ ಯಮಹಾಕ್ಕೆ ಹೊಸತಲ್ಲ. ವಿಶ್ವದಾದ್ಯಂತ ಮಾರುಕಟ್ಟೆ ಇರುವ ಯಮಹಾ 250 ಸಿಸಿ ಮೇಲ್ಪಟ್ಟ ಬೈಕ್‌ಗಳನ್ನು ಹೊರಬಿಡುವ ತವಕದಲ್ಲಿದೆ. ಕೊಳ್ಳುವ ಸಾಮರ್ಥ್ಯ ಭಾರತೀಯರಿಗೆ ಹೆಚ್ಚಿದೆ ಎಂಬ ಸಮರ್ಥನೆಯನ್ನೂ ಈಗಾಗಲೇ ನೀಡಿದೆ!

ಮಹಿಂದ್ರಾ ಸ್ಕೂಟರ್ಸ್: ಕೇವಲ ನಾಲ್ಕು ಚಕ್ರದ ವಾಹನ ಕ್ಷೇತ್ರದಲ್ಲಿ ಮಾತ್ರವಿದ್ದ ಮಹಿಂದ್ರಾ 2008 ರಲ್ಲಿ ಕೈನೆಟಿಕ್ ಸಂಸ್ಥೆಯನ್ನು ಕೊಂಡುಕೊಂಡು ದ್ವಿಚಕ್ರ ವಾಹನ ಲೋಕಕ್ಕೆ ಕಾಲಿಟ್ಟಿತು. ಕೈನೆಟಿಕ್ ಮುಂಚೆಯೇ ಪರಿಚಯಿಸಿದ್ದ ಡ್ಯೂರೋ, ಫ್ಲೈಟ್ ಕೈನಿ ಸ್ಕೂಟರ್‌ಗಳ ಜತೆಗೆ ರೋಡಿಯೋ ಸ್ಕೂಟರ್‌ನ್ನು ಸೇರಿಸಿದ ಮಹಿಂದ್ರಾ ಸ್ಟಾಲಿಯೋ ಮೂಲಕ ಬೈಕ್ ಲೋಕಕ್ಕೂ ಕಾಲಿಟ್ಟಿದೆ. 2012 ಕ್ಕೆ ಬಹುನಿರೀಕ್ಷತ ಮೋಜೋ ಬಿಡುಗಡೆಗೊಳ್ಳಲಿದೆ. 300 ಸಿಸಿ ಸಾಮರ್ಥ್ಯದ ರೂ. 1.75 ಲಕ್ಷ ಬೆಲೆಯ ಬೈಕಿದು. ಇದರ ಜತೆಗೆ ರೂ. 44 ಸಾವಿರದ ಸ್ಟಾಲಿಯೋ ಬೈಕನ್ನೂ ಸುಧಾರಿಸಿ, ಎಲ್ಲ ವರ್ಗದ ಗ್ರಾಹಕರನ್ನೂ ಸಂತೈಸಲು ಮಹಿಂದ್ರಾ ಪ್ರಯತ್ನಿಸಲಿದೆ.

ಸುಜುಕಿ ಇಂಡಿಯಾ ಲಿಮಿಟೆಡ್: ಸುಜುಕಿ 100 ಸಿಸಿ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ನೇರವಾಗಿ ಹೀರೋ ಬೈಕ್‌ಗಳಿಗೆ ಪ್ರತಿಸ್ಪರ್ಧೆ ನೀಡಲಿದೆ. 2012 ರ ಫೆಬ್ರವರಿ ತಿಂಗಳಲ್ಲಿ ಬೈಕ್ ಪಾದಾರ್ಪಣೆ ಮಾಡಲಿದೆ. ಈಗಾಗಲೇ ಆಕ್ಸೆಸ್ ಸ್ಕೂಟರ್ ಮೂಲಕ ಜನಪ್ರಿಯಗೊಂಡಿರುವ ಮಾದರಿಯನ್ನೇ ಸುಧಾರಿಸಿ ಮರು ಬಿಡುಗಡೆಗೊಳಿಸಲಿದೆ.

ವೆಸ್ಪಾ ಪುನರಾಗಮನ!: ಇಟಲಿ ಮೂಲದ ವೆಸ್ಪಾದ ಸ್ಕೂಟರ್‌ಗಳು ಇಡೀ ವಿಶ್ವಕ್ಕೆ ಸ್ಕೂಟರ್‌ಗಳಿಗೆ ಮಾದರಿ ನಿರ್ಮಿಸಿಕೊಟ್ಟ ಸಂಸ್ಥೆ. ಭಾರತದಲ್ಲಿ ಬಜಾಜ್‌ನ ಚೇತಕ್ ಹಾಗೂ ಸೂಪರ್ ಸ್ಕೂಟರ್‌ಗೆ ವೆಸ್ಪಾನೆ ಸ್ಫೂರ್ತಿ. ಇಂದಿಗೂ ವೆಸ್ಪಾನ ಅನೇಕ ವಿಂಟೇಜ್ ಸ್ಕೂಟರ್‌ಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. 2012 ರ ವಿಶೇಷ ಎಂಬಂತೆ ವೆಸ್ಪಾ ಮತ್ತೆ ಭಾರತದಲ್ಲಿ ತನ್ನಾ ಕಾರ್ಯಾರಂಭ ಮಾಡುತ್ತಿದೆ. 125 ಸಿಸಿಯ `ವೆಸ್ಪಾ ಎಲ್‌ಎಕ್ಸ್ 125 ಐಇ~ ಸ್ಕೂಟರ್ ಹೊರಬರಲಿದೆ. ಅತಿ ನಯವಾದ ಸುಧಾರಿತ ಎಂಜಿನ್ ಇರಲಿದ್ದು, ರೂ. 40 ಸಾವಿರದಿಂದ ರೂ. 50 ಸಾವಿರ ಇರಲಿದೆ. ಈಗಾಗಲೇ ಪಿಯಾಗಿಯೋ ಸಂಸ್ಥೆ ಉತ್ಪಾದನೆ ಪ್ರಾರಂಭಿಸಿದ್ದು, ವರ್ಷದ ಮಧ್ಯದಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ.

ಟಿವಿಎಸ್: ಇಕಾನಮಿಯಿಂದ, ಪ್ರೀಮಿಯಂ ಬೈಕ್‌ಗಳವರೆಗೆ ತನ್ನ ಛಾಪು ಮೂಡಿಸಿರುವ ಟಿವಿಎಸ್ 2012 ರಲ್ಲಿ `ಟಿವಿಎಸ್ ನಿಯೋ~, `ಟಿವಿಎಸ್ ರಾಕ್ಸ್~ ಹೆಸರಿನ ಬೈಕ್‌ಗಳನ್ನು ಹೊರಬಿಡಲಿದೆ. ಬೆಲೆ ರೂ. 42 ಸಾವಿರದಿಂದ ರೂ. 45 ಸಾವಿರ. ಅಧಿಕ ಮೈಲೇಜ್   ಹಾಗೂ ಶಕ್ತಿಯುಳ್ಳ ಪುರುಷ, ಮಹಿಳೆರಿಬ್ಬರೂ ಸವಾರಿ ಮಾಡಬಲ್ಲ ಬೈಕ್ ಇದು. ಕ್ಲಚ್ ಸಹಾಯವಿಲ್ಲದೇ ಗಿಯರ್ ಬದಲಿಸಬಲ್ಲ ಟಿವಿಎಸ್ ಜೈವ್ ಬೈಕ್‌ನ್ನು ಪರಿಚಯಿಸಿ ಸುಧಾರಿತ ತಂತ್ರಜ್ಞಾನದ ಅಚ್ಚರಿ ಮೂಡಿಸಿದ್ದ ಟಿವಿಎಸ್, ಮತ್ತಷ್ಟು ಸುಧಾರಿತ ತಂತ್ರಜ್ಞಾನವುಳ್ಳ ಬೈಕ್‌ಗಳನ್ನು 2012 ರಲ್ಲಿ ಪರಿಚಯಿಸಲಿರುವುದು ವಿಶೇಷ.

ಎಲೆಕ್ಟ್ರಿಕ್ ಸ್ಕೂಟರ್ ಮೋಡಿ: 2011 ವಿದ್ಯುಚ್ಚಾಲಿತ ಸ್ಕೂಟರ್‌ಗಳು ಹೆಚ್ಚು ಪ್ರಸಿದ್ಧ ಪಡೆದ ವರ್ಷ. 2012 ಮತ್ತಷ್ಟು ಅಚ್ಚರಿಗಳನ್ನು ನೀಡಲಿದೆ. ಗುಜರಾತ್ ಮೂಲದ ಯೋ ಬೈಕ್ಸ್ ವಿದ್ಯುಚ್ಚಾಲಿತ ವಾಹನಗಳಲ್ಲಿ ಸ್ಕೂಟರೆಟ್ ವಿಭಾಗದ ಮಿತಿಯಿಂದ ಹೊರಬಂದು ಮೊಟ್ಟ ಮೊದಲ ಬಾರಿಗೆ ಸ್ಕೂಟರ್‌ನ್ನು ಪರಿಚಯಿಸಿದೆ. ಎಕ್ಸೆಲ್ ಹೆಸರಿನ ಈ ವಿದ್ಯುತ್‌ಚಾಲಿತ ಸ್ಕೂಟರ್, ಹೋಂಡಾ ಆಕ್ಟಿವಾ ಸ್ಕೂಟರ್‌ನ್ನು ಹೋಲುತ್ತದೆ. ಇದೇ ಮಾದರಿಯ ಮತ್ತಷ್ಟು ಸ್ಕೂಟರ್‌ಗಳು ಹೊರಬರಲಿವೆ. ಹೀರೋ ಎಲೆಕ್ಟ್ರಿಕ್, ಬಿಎಸ್‌ಎ ಮೋಟಾರ್ಸ್, ಏವನ್ ಮೊದಲಾದ ಸಂಸ್ಥೆಗಳು ರೂ. 45 ಸಾವಿರದೊಳಗಿನ ಬೆಲೆಯ ಸ್ಕೂಟರ್‌ಗಳನ್ನು ಹೊರಬಿಡುತ್ತಿವೆ.

Post Comments (+)