ವಾಹ್ ತಾಜ್...!

7

ವಾಹ್ ತಾಜ್...!

Published:
Updated:

ಭಾರತ ಬ್ರಿಟಿಷರ ತೆಕ್ಕೆಯಲ್ಲಿದ್ದ ದಿನಗಳು. ವಿದೇಶಿಗರ ಹರವು ದಿನದಿನಕ್ಕೆ ಹೆಚ್ಚುತ್ತಿದ್ದ ಕಾಲವದು. ಸಣ್ಣಪುಟ್ಟ ನಗರಗಳಿಗೆ ದೊಡ್ಡದಾಗಿ ಬೆಳೆಯುತ್ತಿರುವ ಹಿಗ್ಗು. ಆಗ ಸಹಜವಾಗೇ ಎದುರಾದದ್ದು ವಸತಿ ಸಮಸ್ಯೆ. ಆಸರೆ ಬೇಡಿ ನಗರಕ್ಕೆ ಬಂದವರನ್ನೆಲ್ಲಾ ಒಡಲಲ್ಲಿ ತುಂಬಿಕೊಳ್ಳುವ ಪರಿಪಾಠ ರೂಢಿಯಾದದ್ದು ಆಗಲೇ.ತನ್ನ ಬಳ್ಳವನ್ನು ಹಿಗ್ಗಿಸಿಕೊಂಡು ಪರಿವರ್ತನೆಯ ತುಡಿತಕ್ಕೆ ಸಿಲುಕುವುದು ಆಗ ಅನಿವಾರ್ಯವೂ ಆಗಿತ್ತು. ಬಂದವರಿಗೆ ವಸತಿ, ಊಟ ಮತ್ತಿತರ ಬೇಡಿಕೆಗಳ ನೀಗಿಸಲು ವಸತಿ ಗೃಹಗಳ ಕಾರುಬಾರು ಆರಂಭಗೊಂಡಿತು.ಮಹಾನಗರಿಯೂ ಅಂತಹ ಅನಿವಾರ್ಯತೆಗೆ ಒಗ್ಗಿಹೋಯಿತು. ಈ ವಾಸ್ತವ ಅರಿತ ಮಹಿಳೆಯೊಬ್ಬರು `ವಸತಿಗೃಹ~ ಆರಂಭಿಸಿ ಒಂದಷ್ಟು ಜನರಿಗೆ ತಾತ್ಕಾಲಿಕ ಸೂರನ್ನು ಒದಗಿಸಿದರು. ಕೆಲವೇ ವರ್ಷಗಳಲ್ಲಿ ಆಧುನಿಕತೆ ಸ್ಪರ್ಶ ದಕ್ಕಿ ಅದು ದೊಡ್ಡ ಹೋಟೆಲ್ ಆಯಿತು.

 

ಬೆಂಗಳೂರಿಗೆ ಬರುವ ಅನೇಕ ವಿದೇಶಿಗರ ಚಿತ್ತ ಮೊದಲು ಹರಿಯುವುದು ಇದರತ್ತ. ಆ ಹೋಟೆಲ್ ಹೊಸತನದೊಂದಿಗೆ ಹೊರಜಗತ್ತಿಗೆ ಪರಿಚಯವಾಗಿ ಈ ವಸಂತಕ್ಕೆ 100 ವರ್ಷ. ಹೀಗೆ  ಎಲ್ಲರ ಕಣ್ಣು ತಾಕುವಂತೆ ಬೆಳೆದು ನಿಂತ ಬೃಹತ್ ಹೋಟೆಲ್- ರೇಸ್‌ಕೋರ್ಸ್ ರಸ್ತೆಯ `ದಿ ತಾಜ್ ವೆಸ್ಟೆಂಡ್~.1887ರಲ್ಲಿ ವಿದೇಶಿ ಮೂಲದ ಬ್ರಾನ್‌ಸನ್ ಎಂಬ ಮಹಿಳೆ ಎಂಟು ಕೊಠಡಿಗಳುಳ್ಳ ವಸತಿ ಗೃಹವನ್ನು ಅಂದಿನ ಹೈಗ್ರೌಂಡ್‌ನಲ್ಲಿ ಆರಂಭಿಸಿದಾಗ ಈ ಪರಿ ಬೆಳೆಯುವ ಕನಸು ಕಂಡಿರಲಿಲ್ಲ. ಸ್ಪೆನ್ಸರ್ ಸಂಸ್ಥೆಯು 1912ರಲ್ಲಿ (2012ಕ್ಕೆ ನೂರು ವರ್ಷ) ಬ್ರಾನ್‌ಸನ್ ವೆಸ್ಟೆಂಡ್ ಹೋಟೆಲ್ ಆಗಿ ಪರಿವರ್ತಿಸಿತು.ಹೋಟೆಲ್‌ಗಳ ಪಾರುಪತ್ಯ ಹೆಚ್ಚುತ್ತಿರುವ ಬೆಂಗಳೂರಲ್ಲಿ 1870-80ರ ದಶಕದಲ್ಲಿದ್ದದ್ದು ಬೆರಳೆಣಿಕೆಯ ನಾಲ್ಕೈದು ಹೋಟೆಲ್‌ಗಳು ಮಾತ್ರ. ಬಿಳಿಯರ ಐಷಾರಾಮಿ ಬದುಕಿಗೆ ತಕ್ಕಂತೆ ಅವುಗಳೂ ಐರೋಪ್ಯ ಶೈಲಿಯನ್ನೇ ರೂಢಿಸಿಕೊಂಡಿದ್ದವು.ಯೂರೋಪಿಯನ್ನರಿಗಾಗೇ ಮೀಸಲು ಎಂಬಂತೆ ಬಿಂಬಿತವಾಗುತ್ತಿದ್ದವು. ಈ ಸಾಲಿಗೆ ಸೇರುವ ವೆಸ್ಟೆಂಡ್ ಹೋಟೆಲ್ ಈಗಲೂ ಕಾರ್ಯ ನಿರ್ವಹಿಸುತ್ತಿರುವ ನಗರದ ಏಕೈಕ ಹಳೆಯ ಪ್ರತಿಷ್ಠಿತ ಹೋಟೆಲ್.ಆರಂಭದ ಕಾಲ

ರೇಸ್‌ಕೋರ್ಸ್ ಹಾಗೂ ರೈಲ್ವೇ ನಿಲ್ದಾಣಗಳ ಸಮೀಪ ಎಂಟು ಕೊಠಡಿಗಳ ಪುಟ್ಟ ವಸತಿ ಗೃಹ ಆರಂಭದಲ್ಲೇ ವ್ಯವಸ್ಥಿತವಾಗಿ ರೂಪುಗೊಂಡಿತ್ತು. ಡ್ರೆಸ್ಸಿಂಗ್ ರೂಂ, ಲಾಂಡ್ರಿ, ಬೇಕರಿ, ಕುದುರೆ ಲಾಯ, ಪುಟ್ಟ ಉದ್ಯಾನ ಹೀಗೆ ಪಾಶ್ಚಾತ್ಯರ ಅನುಕರಣೆಯ ಭಾಗವಾಗಿತ್ತು. ತತ್ಪರಿಣಾಮವಾಗೇ ವಿದೇಶಿಗರ ಪ್ರೀತ್ಯಾದರಗಳಿಗೆ ಪಾತ್ರವಾಯಿತು. ವಿಕ್ಟೋರಿಯನ್ ಮಹಿಳೆಯರ ಮಧ್ಯಾಹ್ನದ ಚಹಾ ಸೇವನೆಗೆ ಇಲ್ಲಿನ ಬೆತ್ತದ ಕುರ್ಚಿಗಳು ಬೆನ್ನುಕೊಡುತ್ತಿದ್ದವು.ಐಸಾಕ್ ಬ್ರಾನ್‌ಸನ್ ಕೂಡ 1888ರಲ್ಲಿ ಸತಿಯೊಂದಿಗೆ ಕೈ ಜೋಡಿಸಿದರು. ಬಳಿಕ ಸಮೀಪದಲ್ಲಿದ್ದ ಇತರ ಕಟ್ಟಡಗಳನ್ನೂ ತೆಕ್ಕೆಗೆ ತೆಗೆದುಕೊಂಡು ಮತ್ತಷ್ಟು ಹಿಗ್ಗಿಸಿದರು. ಕ್ರಮೇಣ ಬಿಲಯರ್ಡ್ಸ್, ಟೆನಿಸ್ ಹಾಗೂ ಇತರ ಆಟಗಳಿಗೂ ಇಲ್ಲಿ ಸ್ಥಳಾವಕಾಶ ಒದಗಿಸಲಾಯಿತು. ಇದರಿಂದ ಪ್ರವಾಸಿಗರ ಆಕರ್ಷಣೆಗೆ ಒಳಗಾಗಿ ಮೆಚ್ಚಿನ ಬ್ರಾನ್‌ಸನ್ ವೆಸ್ಟೆಂಡ್ ಹೋಟೆಲಾಯಿತು.`ವೆಸ್ಟೆಂಡ್~ ತಾಜ್ ಆದದ್ದು

ಮದ್ರಾಸ್ ಮೂಲದ ಸ್ಪೆನ್ಸರ್ಸ್‌ ವಾಣಿಜ್ಯ ಸಂಸ್ಥೆ 1912ರಲ್ಲಿ ಇದನ್ನು ಬ್ರಾನ್‌ಸನ್ ದಂಪತಿಯಿಂದ ಖರೀದಿಸಿ ತುಸು ಆಧುನಿಕ ಸ್ಪರ್ಶ ನೀಡಿತು. ನಂತರದಲ್ಲೂ ತನ್ನ ಮನ್ನಣೆಯನ್ನು ಉಳಿಸಿಕೊಂಡು ಮುಂದೆ ಸಾಗಿತು. ಇದರ ಖ್ಯಾತಿ ಎಷ್ಟಿತ್ತೆಂದರೆ 1961ರಲ್ಲಿ ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್ ನಗರಕ್ಕೆ ಭೇಟಿ ನೀಡಿದಾಗ ತಂಗಿದ್ದು ಇಲ್ಲಿಯೇ.ನಂತರ ದೇಸಿ ಹೋಟೆಲ್ ಉದ್ಯಮವಾದ ತಾಜ್ ಗ್ರೂಪ್ 1982ರಲ್ಲಿ ಈ ಹೋಟೆಲನ್ನು ತನ್ನದಾಗಿಸಿಕೊಂಡು `ದಿ ತಾಜ್ ವೆಸ್ಟೆಂಡ್ ಹೋಟೆಲ್~ ಆಗಿ ಪರಿವರ್ತಿಸಿತು.ಪ್ರಸ್ತುತ ಹಳೆಯ ಕಟ್ಟಡಗಳ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟುಕೊಡದೆ ನೂತನ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಹಳೆಯ ವಿಕ್ಟೋರಿಯನ್ ವಾಸ್ತುಶೈಲಿಗೆ ಹೊಂದುವಂತೆ ಇಪ್ಪತ್ತು ಕೊಠಡಿಗಳನ್ನು ನಿರ್ಮಿಸಲಾಗಿದೆ. ಹೋಟೆಲ್‌ನ ಒಟ್ಟು 20 ಎಕರೆ ಪ್ರದೇಶದಲ್ಲಿ ಐದು ಎಕರೆ ಕಟ್ಟಡಗಳಿಂದ ಕೂಡಿದ್ದರೆ, ಉಳಿದ 15 ಎಕರೆ ಹುಲ್ಲು ಹಾಸಿನ ಉದ್ಯಾನವನದಿಂದ ಕೂಡಿದೆ.ತನ್ನ ಸಾಂಪ್ರದಾಯಿಕ ಸೊಗಡನ್ನೂ ಉಳಿಸಿಕೊಂಡು ಆಧುನಿಕತೆಯನ್ನೂ ರೂಢಿಸಿಕೊಂಡಿರುವ ತಾಜ್ ವೆಸ್ಟೆಂಡ್ ಇಂದಿಗೂ ವಿದೇಶಿಯರ ಪ್ರೀತಿಯ ತಂಗುದಾಣ.

`ಹೋಟೆಲ್ ಇಟ್ಟವರು ಒಂದು ಬಣ್ಣ ಕಡಿಮೆ, ಅನ್ನ ಮಾರುವವರು ದಾನ ಮಾಡುವವರಲ್ಲ~ ಎಂಬ ನಾಣ್ಣುಡಿ ಕೆಲವೆಡೆ ಇದೆ. ಹೋಟೆಲ್ ಇಟ್ಟವರಿಗೆ ಹೆಣ್ಣುಕೊಡಲು ಹಿಂದೇಟು ಹಾಕುವವರಿಂದ ಹುಟ್ಟಿದ ಮಾತಿದು. ಆದರೆ, ಬದಲಾದ ಜಾಯಮಾನದಲ್ಲಿ ಹೋಟೆಲ್ ಇಟ್ಟವರ ಬಣ್ಣ ತುಸು ಹೆಚ್ಚೇ ಆಗಿದೆ!ತಾಜ್ ಗ್ರೂಪ್‌ನ ಇತರ ಹೋಟೆಲ್‌ಗಳು

ಕುಟೀರಂ

ವಿವಂತ (ಎಂ.ಜಿ.ರೋಡ್)

ವಿವಂತ (ವೈಟ್‌ಫೀಲ್ಡ್)

ಹೋಟೆಲ್ ಗೇಟ್ ವೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry