ಭಾನುವಾರ, ಜನವರಿ 26, 2020
28 °C

ವಿಂಚಿಯ ಮಿಂಚು ಇನ್ನೊಬ್ಬ ಹೆಣ್ಣು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವದ ಮಹಾನ್ ಕಲಾವಿದರಲ್ಲಿ ಒಬ್ಬರಾದ ಲಿಯಾನಾರ್ಡೊ ಡಾ ವಿಂಚಿಯ ಜೊತೆಗೇ ನೆನಪಾಗುವುದು ವಿಶ್ವವಿಖ್ಯಾತ `ಮೊನಾಲಿಸಾ~ ಕಲಾಕೃತಿ. ಯುರೋಪ್‌ನ ಪಾಲಿಗೆ 15ನೇ ಶತಮಾನ ನವೋದಯದ ಸಾಂಸ್ಕೃತಿಕ ಚಳವಳಿಯ ಗಾಳಿಯ ಕಾಲ. ವಿಜ್ಞಾನ, ಧರ್ಮ, ತಂತ್ರಜ್ಞಾನ, ಕಲೆ ಎಲ್ಲದರಲ್ಲಿಯೂ ಹೊಸ ಬದಲಾವಣೆ ಕಾಣುತ್ತಿದ್ದ ಕಾಲವದು. ಲಿಯಾನಾರ್ಡೊ ಹಾಗೂ ಮೈಕೆಲಾಂಜಿಲೊ ಈ ಚಳವಳಿಯ ಪ್ರಮುಖರು. ಹಾಗೆಂದೇ ಅವರು `ಪುನರುಜ್ಜೀವನದ ಪುರುಷರು~ ಎಂದು ಪ್ರಖ್ಯಾತರು. ಸೌರಶಕ್ತಿ, ವಿಮಾನ, ಯುದ್ಧ ಟ್ಯಾಂಕರ್‌ಗಳ ಬಳಕೆಯ ಸಾಧ್ಯತೆಗಳಿಗೆ ಇಂಬು ನೀಡಿದಾತ ಲಿಯಾನಾರ್ಡೊ.

ವಾಸ್ತುಶಿಲ್ಪ, ಸಂಗೀತ, ರೇಖಾಗಣಿತ, ಯಂತ್ರಶಿಲ್ಪ, ಶರೀರ ರಚನಾ ಶಾಸ್ತ್ರ, ಖಗೋಳ ವಿಜ್ಞಾನದ ಜತೆಗೆ ಲಿಯಾನಾರ್ಡೊನ ಮತ್ತೊಂದು ಆಸಕ್ತಿಯ ಕ್ಷೇತ್ರ ಚಿತ್ರಕಲೆ. ಮೊಟ್ಟೆಯ ಲೋಳೆಯನ್ನು ಬೆರೆಸಿ ಚಿತ್ರ ಬರೆಯುವವರೇ ಹೆಚ್ಚಿದ್ದ ಇಟಲಿಯಲ್ಲಿ ತೈಲವರ್ಣವನ್ನು ಬಳಸಿದ ಮೊದಲಿಗ ಈತ. ಏಸುವಿನ ಕಡೆಯ ಭೋಜನವನ್ನು ಪ್ರಸ್ತಾಪಿಸುವ `ದಿ ಲಾಸ್ಟ್ ಸಪ್ಪರ್~, `ದಿ ಬ್ಯಾಪ್ಟಿಸಂ ಆಫ್ ಕ್ರೈಸ್ಟ್~, `ಪೋರ್ಟ್‌ರೇಟ್ ಆಫ್ ಮ್ಯುಜಿಷಿಯನ್~ ಮತ್ತಿತರ ಕೃತಿಗಳು ಆತನ ಜನಪ್ರಿಯತೆಯನ್ನು ಸಾರ್ವಕಾಲಿಕವಾಗಿಸಿವೆ.

`ಲೇಡಿ ವಿತ್ ಆ್ಯನ್ ಅರ್ಮಿನ್~ (ಕ್ರಿ.ಶ.1483) ಲಿಯಾನಾರ್ಡೊ ಬರೆದ ಸಿಸಿಲಿಯಾ ಗಲ್ಲೆರಾನಿಯ ಭಾವಚಿತ್ರ. ಈಕೆ ಮಿಲನ್‌ನ ಆಡಳಿತಗಾರನಾಗಿದ್ದ ಫೋರ್ಜಾ ಎಂಬಾತನ ಮಡದಿ. ಲಿಯಾನಾರ್ಡೊ ರಚಿಸಿದ ನಾಲ್ಕೇ ನಾಲ್ಕು ಮಹಿಳೆಯರ ಭಾವಚಿತ್ರಗಳಲ್ಲಿ ಇದೂ ಒಂದು. ಆಕೆ ಅರ್ಮಿನ್ ಎಂಬ ಪ್ರಾಣಿಯನ್ನು ನಾಜೂಕಿನಿಂದ ಹಿಡಿದಿರುವ ಕೈಗಳು ಹಾಗೂ ಪ್ರಾಣಿ ತನ್ನ ತಲೆಯನ್ನು ತಿರುಗಿಸಿರುವ ರೀತಿ ಡಾವಿಂಚಿಯ ಸ್ವೋಪಜ್ಞತೆಗೆ ಸಾಕ್ಷಿಯಾಗಿದೆ. ಸಿಸಿಲಿಯಾಳ ಸರಳ ಉಡುಪು ಮಧ್ಯಮವರ್ಗವನ್ನು ಪ್ರತಿನಿಧಿಸುತ್ತದೆ. ಕಂದುತುಪ್ಪಳದ ಮಾಂಸಾಹಾರಿ ಪ್ರಾಣಿ ಅರ್ಮಿನ್ ಆ ಕಾಲದ ಪ್ರತಿಷ್ಠೆಯ ಸಂಕೇತವಾಗಿತ್ತಂತೆ. ಹಾಗೆಯೇ ಅದು ಪರಿಶುದ್ಧತೆಯ ದ್ಯೋತಕ ಎಂದು ಸ್ವತಃ ಲಿಯಾನಾರ್ಡೊ ಒಂದು ಕಡೆ ಹೇಳಿಕೊಂಡಿದ್ದಾನೆ.

19ನೇ ಶತಮಾನದಲ್ಲಿ ಈ ಕಲಾಕೃತಿ ಕಾಲನ ಲೀಲೆಗೆ ಸಿಕ್ಕು ದೇಶಾಂತರ ಅಲೆಯಿತು. ರಷ್ಯಾದ ಯುವ ಝಾರ್ ತೋರಿಸ್ಕಿ ಇದನ್ನು ರಷ್ಯಾ ಪಡೆಗಳಿಂದ ರಕ್ಷಿಸಿದ. ನಂತರ ತನ್ನೊಂದಿಗೆ ಪ್ಯಾರಿಸ್‌ನ ಸುರಕ್ಷಿತ ಸ್ಥಳವೊಂದಕ್ಕೆ ಹೊತ್ತೊಯ್ದ. 1939ರಲ್ಲಿ ನಾಜಿಗಳು ಪೋಲೆಂಡ್ ಅನ್ನು ಆಕ್ರಮಿಸಿದಾಗ ಚಿತ್ರವನ್ನು ಬರ್ಲಿನ್‌ಗೆ ಕೊಂಡೊಯ್ದರು. 1940ರಲ್ಲಿ ಪೋಲೆಂಡ್‌ನ ಗವರ್ನರ್ ಜನರಲ್ ಹನ್ಸ್ ಫ್ರಾಂಕ್ ಕ್ರಕೋವ್‌ನ ತನ್ನ ಕಚೇರಿಯಲ್ಲಿ ಅದು ತೂಗುತ್ತಿರಬೇಕು ಎಂದು ಬಯಸಿದ. ಎರಡನೇ ವಿಶ್ವಯುದ್ಧದ ಅಂತ್ಯದ ವೇಳೆಗೆ ಮೈತ್ರಿಕೂಟದ ಪಡೆಗಳಿಗೆ ಅದು ಫ್ರಾಂಕ್‌ನ ಬವೇರಿಯಾದ ನಿವಾಸದಲ್ಲಿರುವುದು ಪತ್ತೆಯಾಯಿತು. ನಂತರ ಇದನ್ನು ಪೋಲೆಂಡ್‌ಗೆ ಹಸ್ತಾಂತರಿಸಲಾಯಿತು.

(ಚಿತ್ರ ಸೌಜನ್ಯ: ನ್ಯೂಯಾರ್ಕ್‌ನ ಟೈಮ್ ಇನ್‌ಕಾರ್ಪೊರೇಟೆಡ್ ಪ್ರಕಟಣೆ `ದಿ ವರ್ಲ್ಡ್ ಆಫ್ ಲಿಯಾನಾರ್ಡೊ~ ಕೃತಿ, 1966)

ಪ್ರತಿಕ್ರಿಯಿಸಿ (+)