ವಿಂಡೀಸ್‌ಗೂ ಕಪ್ ಗೆಲ್ಲುವ ಅವಕಾಶ

7

ವಿಂಡೀಸ್‌ಗೂ ಕಪ್ ಗೆಲ್ಲುವ ಅವಕಾಶ

Published:
Updated:

ನವದೆಹಲಿ: ‘ಈ ಹತ್ತನೇ ವಿಶ್ವಕಪ್‌ನಲ್ಲಿ ಆಡುತ್ತಿರುವ ಹಾಗೂ ಕಪ್ ಗೆಲ್ಲುವ ನೆಚ್ಚಿನ ತಂಡಗಳಿಗೆ ನನ್ನ ಹಾರ್ದಿಕ ಶುಭಾಶಯ’-ಹೀಗೆಂದು ಹೇಳಿದವರು ವೆಸ್ಟ್‌ಇಂಡೀಸ್ ತಂಡದ ಉಪನಾಯಕ ಡ್ವೇಯ್ನ್ ಬ್ರಾವೊ.ತಂಡಗಳಿಗೆ ಶುಭ ಕೋರುತ್ತಲೇ ವೆಸ್ಟ್‌ಇಂಡೀಸ್ ತಂಡಕ್ಕೂ ವಿಶ್ವ ಕಪ್ ಗೆಲ್ಲುವ ಎಲ್ಲ ಅವಕಾಶಗಳೂ ಇವೆ ಎಂದು ಹೇಳಲು ಅವರು ಮರೆಯಲಿಲ್ಲ. ವಿಂಡೀಸ್ ತಂಡ ಮಂಗಳವಾರ ಬೆಳಿಗ್ಗೆ ಫಿರೋಜ್ ಷಾ ಕೋಟ್ಲಾ ಮೈದಾನದ ಹೊರಗಿರುವ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿತು. “ನಾವು ವಿಶ್ವ ಕಪ್ ಗೆದ್ದು ಬಹಳ ವರ್ಷಗಳಾದವು. 1975 ಮತ್ತು 1979 ರ ನಂತರ ವಿಂಡೀಸ್ ಗೆದ್ದಿಲ್ಲ.ಆದರೆ ಅದರ ಬಗ್ಗೆ ನಾವೀಗ ತಲೆಕೆಡಿಸಿಕೊಂಡಿಲ್ಲ. ಇದೊಂದು ಹೊಸ ವಿಶ್ವ ಕಪ್. ನಾವು ಆತ್ಮವಿಶ್ವಾಸದಿಂದಲೇ ಬಂದಿದ್ದೇವೆ. ಭಾರತ, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ, ಶ್ರೀಲಂಕಾದಂತೆ ನಮ್ಮ ತಂಡವೂ ಕಪ್ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ” ಎಂದು ಅವರು ನುಡಿದರು.“ಐವತ್ತು ಓವರುಗಳ ಪಂದ್ಯದಲ್ಲಿ ಉತ್ತಮ ಆಲ್‌ರೌಂಡರುಗಳು ಬೇಕು. ನಾಯಕ ಡರೆನ್ ಸ್ಯಾಮಿ, ಕ್ರಿಸ್ ಗೇಯ್ಲಿ, ಕೀರನ್ ಪೊಲಾರ್ಡ್ ವಿಶ್ವ ದರ್ಜೆಯ ಆಲ್‌ರೌಂಡರುಗಳು. ನಾನೂ ಚೆನ್ನಾಗಿ ಆಡುತ್ತಿದ್ದೇನೆ. ಅಲ್ಲದೇ ನಮ್ಮ ಕೆಲವು ಆಟಗಾರರು ಭಾರತದಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಆಡಿರುವುದರಿಂದ ಇಲ್ಲಿಯ ವಾತಾವರಣ ಅವರಿಗೆ ಚೆನ್ನಾಗಿ ಗೊತ್ತಿದೆ. ನಾವು ಎರಡನೇ ಹಂತಕ್ಕೆ ಹೋಗುವುದಂತೂ ಗ್ಯಾರಂಟಿ” ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry