ವಿಂಡೀಸ್‌ಗೆ ಸವಾಲಿನ ಹಾದಿ

7

ವಿಂಡೀಸ್‌ಗೆ ಸವಾಲಿನ ಹಾದಿ

Published:
Updated:

ನವದೆಹಲಿ: ಗತವೈಭವವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿರುವ ವೆಸ್ಟ್ ಇಂಡೀಸ್ ತಂಡಕ್ಕೆ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಆರಂಭ ಲಭಿಸಿಲ್ಲ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕೈಯಲ್ಲಿ ನಿರಾಸೆ ಎದುರಾಗಿತ್ತು. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆಯುವ ‘ಬಿ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ವಿಂಡೀಸ್ ತಂಡ ಹಾಲೆಂಡ್ ಜೊತೆ ಪೈಪೋಟಿ ನಡೆಸಲಿದೆ. ಮೊದಲ ಪಂದ್ಯದ ಸೋಲಿನ ಕಹಿಯನ್ನು ಮರೆತು ಗೆಲುವಿನ ಹಾದಿಗೆ ಮರಳುವ ಅವಕಾಶ ಡರೆನ್ ಸಾಮಿ ನೇತೃತ್ವದ ತಂಡಕ್ಕೆ ಲಭಿಸಿದೆ.ಆದರೆ ಹಾಲೆಂಡ್ ವಿರುದ್ಧ ಗೆಲುವು ಪಡೆಯಬೇಕಾದರೆ ವಿಂಡೀಸ್‌ಗೆ ಕಠಿಣ ಪರಿಶ್ರಮ ನಡೆಸುವುದು ಅಗತ್ಯ. ಏಕೆಂದರೆ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸುವ ಮುನ್ನ ಹಾಲೆಂಡ್ ತಂಡ ಇಂಗ್ಲೆಂಡ್‌ಗೆ ನಡುಕ ಹುಟ್ಟಿಸಿತ್ತು. ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 292 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಎದುರಾಳಿಗಳನ್ನು ಹಗುರವಾಗಿ ಕಾಣುವುದಿಲ್ಲ ಎಂದು ವಿಂಡೀಸ್ ಕೋಚ್ ಆಟಿಸ್ ಗಿಬ್ಸನ್ ಸ್ಪಷ್ಟಪಡಿಸಿದ್ದಾರೆ. ಪ್ರಮುಖ ಆಟಗಾರ ಡ್ವೇಯ್ನಾ ಬ್ರಾವೊ ಅವರ ಅನುಪಸ್ಥಿತಿ ವಿಂಡೀಸ್‌ಗೆ ಕಾಡುವುದು ಖಚಿತ. ಈ ಆಲ್‌ರೌಂಡರ್ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಮಂಡಿನೋವಿಗೆ ಒಳಗಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.ಕ್ರಿಸ್ ಗೇಲ್, ಶಿವನಾರಾಯಣ ಚಂದ್ರಪಾಲ್ ಮತ್ತು ರಾಮನರೇಶ್ ಸರಣವ್ ಬ್ಯಾಟಿಂಗ್‌ನಲ್ಲಿ ಮಿಂಚಿದರೆ ವಿಂಡೀಸ್‌ಗೆ ಗೆಲುವಿನ ಕನಸು ಕಾಣ ಬಹುದು. ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಲು ಬ್ಯಾಟ್ಸ್‌ಮನ್‌ಗಳ ವೈಫಲ್ಯ ಪ್ರಮುಖ ಕಾರಣವಾಗಿತ್ತು. ವಿಂಡೀಸ್ ತಂಡದ ಬೌಲಿಂಗ್ ವಿಭಾಗ ಕೂಡಾ ಬಲಿಷ್ಠವಾಗಿಲ್ಲ. ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವ ರೀತಿಯಲ್ಲಿ ಚೆಂಡೆಸೆ ಯುವವರ ಕೊರತೆ ತಂಡದಲ್ಲಿ ಕಾಣುತ್ತಿದೆ. ಕೆಮರ್ ರೋಚ್ ಮತ್ತು ಸ್ಪಿನ್ನರ್ ಸುಲೆಮಾನ್ ಬೆನ್ ಒಮ್ಮೊಮ್ಮೆ ಮಿಂಚುತ್ತಾರಾದರೂ, ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿಲ್ಲ.ಮತ್ತೊಂದೆಡೆ ಹಾಲೆಂಡ್ ತಂಡ ರ್ಯಾನ್ ಟೆನ್ ಡಾಶೆಟ್ ಅವರನ್ನು ನೆಚ್ಚಿಕೊಂಡಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಡಾಶೆಟ್ 119 ರನ್ ಗಳಿಸಿದ್ದರು. ಮತ್ತೊಬ್ಬ ಪ್ರಮುಖ ಆಟಗಾರ ಬಾಸ್ ಜುಡೆರೆಂಟ್ ಅವರು ಈ ಪಂದ್ಯದಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಆದರೆ ಈ ತಂಡದ ಬೌಲಿಂಗ್ ದುರ್ಬಲವಾಗಿದೆ. ‘ಇಂಗ್ಲೆಂಡ್ ವಿರುದ್ಧ ನಾವು ಉತ್ತಮ ಪ್ರದರ್ಶನ ನೀಡಿದ್ದೆವು. ಸೋಮವಾರ ಕೂಡಾ ಅಂತಹದೇ ಆಟವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದ್ದೇವೆ’ ಎಂದು ಹಾಲೆಂಡ್ ನಾಯಕ ಪೀಟರ್ ೂರೆನ್ ಹೇಳಿದ್ದಾರೆ. ಇವೆರಡು ತಂಡಗಳು ವಿಶ್ವಕಪ್‌ನಲ್ಲಿ ಇದುವರೆಗೆ ಪೈಪೋಟಿ ನಡೆಸಿಲ್ಲ. ಏಕದಿನ ಪಂದ್ಯದಲ್ಲಿ ಒಮ್ಮೆ ಮಾತ್ರ ಪರಸ್ಪರ ಸೆಣಸಾಟ ನಡೆಸಿವೆ. 2007 ರಲ್ಲಿ ಡಬ್ಲಿನ್‌ನಲ್ಲಿ ನಡೆದ ಪಂದ್ಯದಲ್ಲಿ ಕೆರಿಬಿಯನ್ ನಾಡಿನ ತಂಡ 10 ವಿಕೆಟ್‌ಗಳ ಜಯ ಸಾಧಿಸಿತ್ತು.ವೆಸ್ಟ್ ಇಂಡೀಸ್/ ಡರೆನ್ ಸಾಮಿ (ನಾಯಕ), ಕ್ರಿಸ್ ಗೇಲ್, ಡರೆನ್ ಬ್ರಾವೊ, ಕೀರನ್ ಪೊಲಾರ್ಡ್, ರಾಮನರೇಶ್ ಸರವಣ್, ಡೆವೊನ್ ಸ್ಮಿತ್, ಡೆವೊನ್ ಥಾಮಸ್, ಸುಲೆಮಾನ್ ಬೆನ್, ನಿಕಿತಾ ಮಿಲ್ಲರ್, ಆಂಡ್ರೆ ರಸೆಲ್, ರವಿ ರಾಂಪಾಲ್, ಕೆಮರ್ ರೋಚ್, ಶಿವನಾರಾಯಣ ಚಂದ್ರಪಾಲ್, ಕಿರ್ಕ್ ಎಡ್ವರ್ಡ್ಸ್.ಹಾಲೆಂಡ್/ ಪೀಟರ್ ಬೊರೆನ್ (ನಾಯಕ), ಬಾಸ್ ಜುಡೆರೆಂಟ್, ವೆಸ್ಲಿ ಬಾರೆಸಿ, ಅಟ್ಸ್ ಬರ್ಮನ್, ಅಲೆಕ್ಸಿ ಕೆರ್ವೆಜಿ, ಮುದಸ್ಸರ್ ಬುಖಾರಿ, ಅದೀಲ್ ರಾಜಾ, ಎರಿಕ್ ಶ್ವಾರ್ಜಿನ್‌ಸ್ಕಿ, ಟಾಮ್ ಕೂಪರ್, ಟಾಮ್ ಡಿ ಗ್ರೂಥ್, ಬರ್ನಾರ್ಡ್ ಲೂಟ್ಸ್, ರ್ಯಾನ್ ಟೆನ್ ಡಾಶೆಟ್, ಬ್ರಾಡ್ಲಿ ಕ್ರುಗೆರ್, ಪೀಟರ್ ಸೀಲಾರ್, ಬೆರೆಂಡ್ ವೆಸ್ಟ್‌ಡಿಕ್.ಪಂದ್ಯದ ಆರಂಭ: ಮಧ್ಯಾಹ್ನ 2.30ಕ್ಕೆ

ನೇರ ಪ್ರಸಾರ: ಇಎಸ್‌ಪಿಎನ್/ಸ್ಟಾರ್ ಕ್ರಿಕೆಟ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry