ವಿಂಡೀಸ್‌ ಮೆರೆದಾಟ

7

ವಿಂಡೀಸ್‌ ಮೆರೆದಾಟ

Published:
Updated:
ವಿಂಡೀಸ್‌ ಮೆರೆದಾಟ

ವೆಸ್ಟ್‌ಇಂಡೀಸ್‌ ತಂಡದ ವೇಗದ ಬೌಲರ್‌ಗಳ ಹೆಸರು ಕೇಳಿದರೆ ಎದುರಾಳಿ ಬ್ಯಾಟ್ಸ್‌ಮನ್‌ಗಳು ಗಡಗಡ ನಡುಗುತ್ತಿದ್ದ ಕಾಲವೊಂದಿತ್ತು. ಕೆರಿಬಿಯನ್‌ ನಾಡಿನ ತಂಡದವರು ವಿಶ್ವ ಕ್ರಿಕೆಟ್‌ನಲ್ಲಿ ಹಲವು ವರ್ಷಗಳ ಕಾಲ ಪ್ರಭುತ್ವ ಸಾಧಿಸಿದ್ದರು. ಆದರೆ ಈಗ ಎದುರಾಳಿ ಬ್ಯಾಟ್ಸ್‌ಮನ್‌ಗಳ ಮನಸ್ಸಿನಲ್ಲಿ ಭಯ ಮೂಡಿಸುವಂತಹ ಬೌಲರ್‌ಗಳು ಈ ತಂಡದಲ್ಲಿಲ್ಲ. ಮಾತ್ರವಲ್ಲ, ಬಲಿಷ್ಠ ತಂಡವಾಗಿಯೂ ಉಳಿದುಕೊಂಡಿಲ್ಲ.ಸತತ ಎರಡು ವಿಶ್ವಕಪ್‌ ಜಯಿಸಿ ಏಕದಿನ ಕ್ರಿಕೆಟ್‌ನ ಸಾಮ್ರಾಟ ಎನಿಸಿಕೊಂಡಿದ್ದ ವಿಂಡೀಸ್‌ ಆ ಬಳಿಕ ಪತನದ ಹಾದಿ ಹಿಡಿದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಕಾರಣಗಳು ಹಲವು ಇರಬಹುದು. ಆದರೂ ಈ ದೇಶದಲ್ಲಿ ಕ್ರಿಕೆಟ್‌ ಪ್ರತಿಭೆಗಳಿಗೆ ಕೊರತೆಯಿರಲಿಲ್ಲ. ಬ್ರಯಾನ್‌ ಲಾರಾ ಅವರಂತಹ ಅಪ್ರತಿಮ ಆಟಗಾರನನ್ನು ಜಗತ್ತಿಗೆ ನೀಡಿದೆ. 1979ರ ಬಳಿಕ ವಿಂಡೀಸ್‌ ತಂಡ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿಲ್ಲ. ಆದರೆ ಈ ಅವಧಿಯಲ್ಲಿ ಹಲವು ಆಟಗಾರರು ವೈಯಕ್ತಿಕವಾಗಿ ಶ್ರೇಷ್ಠ ಸಾಧನೆ ತೋರಿದ್ದಾರೆ.ಇಂತಹ ವಿಂಡೀಸ್‌ ತಂಡ ಇದೀಗ ಚೇತರಿಕೆಯ ಹಾದಿಯಲ್ಲಿದೆ. ಗತ ವೈಭವವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಈ ತಂಡಕ್ಕೆ ಹೊಸ ಚೈತನ್ಯ ತುಂಬುವ ಪ್ರಯತ್ನ ನಡೆದಿದೆ. 2012 ರಲ್ಲಿ ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್‌ ಆದದ್ದು ವಿಂಡೀಸ್‌ ತಂಡ ಚೇತರಿಕೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂಬುದಕ್ಕೆ ಉತ್ತಮ ಉದಾಹರಣೆ.ಕೆರಿಬಿಯನ್‌ ನಾಡಿನಲ್ಲೂ ಯುವ ಪ್ರತಿಭೆಗಳು ಬೆಳೆದು ಬರುತ್ತಿದ್ದಾರೆ. ಭಾರತ ಪ್ರವಾಸದಲ್ಲಿರುವ ವಿಂಡೀಸ್‌ ‘ಎ’ ತಂಡದ ಆಟಗಾರರು ನೀಡುತ್ತಿರುವ ಪ್ರದರ್ಶನವೇ ಇದಕ್ಕೆ ಸಾಕ್ಷಿ. ಬೆಂಗಳೂರಿನಲ್ಲಿ ಹೋದ ವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಂಡೀಸ್‌ 2–1 ರಲ್ಲಿ ಗೆದ್ದುಕೊಂಡಿದೆ. ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದ್ದರೂ ಬಳಿಕ ಪುಟಿದೆದ್ದು ನಿಲ್ಲುವಲ್ಲಿ ತಂಡ ಯಶಸ್ವಿಯಾಗಿದೆ.   ವಿಂಡೀಸ್‌ನ ಕೆಲವು ಆಟಗಾರರಿಗೆ   ರಾಷ್ಟ್ರೀಯ ತಂಡದಲ್ಲಿ ರಳಿ ಸ್ಥಾನ ಪಡೆಯಲು ಈ ಸರಣಿ ಉತ್ತಮ ಅವಕಾಶ ಕಲ್ಪಿಸಿತ್ತು. ‘ಎ’ ತಂಡದಲ್ಲಿದ್ದ ಹೆಚ್ಚಿನ ಆಟಗಾರರು ಈ ಹಿಂದೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿಂಡೀಸ್‌ ತಂಡವನ್ನು ಪ್ರತಿನಿಧಿಸಿದ್ದವರೇ ಆಗಿದ್ದಾರೆ. ಮತ್ತೆ ರಾಷ್ಟ್ರೀಯ ತಂಡದಲ್ಲಿ  ಸ್ಥಾನ ಪಡೆಯುವ ಕನಸು ಹೊತ್ತುಕೊಂಡಿರುವ ಆಟಗಾರರು ತಮಗೆ ದೊರೆ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ.ಜೊನಾಥನ್‌ ಕಾರ್ಟರ್‌ ಮತ್ತು ಮಿಗುಯೆಲ್‌ ಕಮಿನ್ಸ್‌ ಇನ್ನೂ ವಿಂಡೀಸ್‌   ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿಲ್ಲ.  ಈ ಯುವ ಆಟಗಾರರು ಮುಂದೊಂದು ದಿನ ತಂಡದ ಪ್ರಧಾನ ಶಕ್ತಿಯಾಗಿ ಬೆಳೆದರೆ ಅಚ್ಚರಿಯಿಲ್ಲ. ಕಾರ್ಟರ್‌ ಸರಣಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಒಟ್ಟು 168 ರನ್‌ ಪೇರಿಸಿದರೆ, ಕಮಿನ್ಸ್ ಮೂರು ಪಂದ್ಯಗಳಿಂದ ಏಳು ವಿಕೆಟ್‌ ಪಡೆದರು. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ತಂಡದ ಆಯ್ಕೆಗೆ ನನ್ನನ್ನೂ ಪರಿಗಣಿಸಬೇಕೆಂಬ ಸಂದೇಶವನ್ನು ಕಾರ್ಟರ್‌ ವಿಂಡೀಸ್‌ನ ಆಯ್ಕೆದಾರರಿಗೆ ರವಾನಿಸಿದ್ದಾರೆ.

 

ಈ ಸರಣಿಯಲ್ಲಿ ಭಾರತದ ಪರ ಶತಕ ಗಳಿಸಿದ್ದು ಯುವರಾಜ್‌ ಸಿಂಗ್‌ ಮಾತ್ರ. ಮೊದಲ ಪಂದ್ಯದಲ್ಲಿ ಅವರು 123 ರನ್‌ ಪೇರಿಸಿದ್ದರು. ಆದರೆ ವಿಂಡೀಸ್‌ ಪರ ಕಾರ್ಟರ್‌ ಹಾಗೂ ಕರ್ಕ್‌ ಎಡ್ವರ್ಡ್ಸ್‌ ಇಂತಹ ಸಾಧನೆ ಮಾಡಿದ್ದಾರೆ. ಮಾತ್ರವಲ್ಲ, ಇವರ ಉತ್ತಮ ಆಟ ಎರಡು ಹಾಗೂ ಮೂರನೇ ಏಕದಿನ ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಎಡ್ವರ್ಡ್ಸ್‌ ಈ ಶತಕದ ಮೂಲಕ ಆಯ್ಕೆದಾರರಿಗೆ ತನ್ನ ನೆನಪಾಗುವಂತೆ ಮಾಡಿದ್ದಾರೆ. 2012ರ ಮೇ ತಿಂಗಳ ಬಳಿಕ ಈ ಬ್ಯಾಟ್ಸ್‌ಮನ್‌ ವಿಂಡೀಸ್‌ ಪರ ಯಾವುದೇ ಪಂದ್ಯ ಆಡಿಲ್ಲ.ಈ ಸರಣಿಯಲ್ಲಿ ವಿಂಡೀಸ್‌ ತಂಡದ ಬೌಲರ್‌ಗಳು ಎಲ್ಲರ ಗಮನ ಸೆಳೆದರು. ಶಿಸ್ತಿನ ಬೌಲಿಂಗ್‌ ಮೂಲಕ ಎಷ್ಟೇ ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕವನ್ನೂ ಕಾಡಬಹುದು ಎಂಬುದನ್ನು ಈ ತಂಡ ತೋರಿಸಿಕೊಟ್ಟಿತು. ಮಿಗುಯೆಲ್‌ ಕಮಿನ್ಸ್‌, ಆ್ಯಂಡ್ರೆ ರಸೆಲ್‌ ಮತ್ತು ವೀರಸ್ವಾಮಿ ಪೆರುಮಾಳ್‌ ಇಲ್ಲಿನ ಪರಿಸ್ಥಿತಿಯಲ್ಲೂ ಉತ್ತಮ ಬೌಲಿಂಗ್‌ ತೋರಿದರು. ಆದರೆ ಭಾರತದ ಬೌಲರ್‌ಗಳು ಪರಿಸ್ಥಿತಿಯ ಲಾಭ ಎತ್ತಿಕೊಳ್ಳುವಲ್ಲಿ ವಿಫಲರಾದರು.ಭಾರತ ನಾಲ್ಕು ‘ಸ್ಪೆಶಲಿಸ್ಟ್‌’ ಬೌಲರ್‌ಗಳೊಂದಿಗೆ ಆಡಿತು. ‘ಪಾರ್ಟ್‌ಟೈಮ್‌’ ಬೌಲರ್‌ಗಳು ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟರು. ಇದು ಕೂಡಾ ಸೋಲಿಗೆ ಒಂದು ಕಾರಣ. ‘ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ತಂಡ ಗೆಲುವು ಪಡೆಯಿತು’ ಎನ್ನುವ ಮೂಲಕ ಭಾರತ ‘ಎ’ ತಂಡದ ನಾಯಕ ಯುವರಾಜ್‌ ಸಿಂಗ್‌ ಎದುರಾಳಿ ಬೌಲರ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ಸರಣಿಯಲ್ಲಿ ಭಾರತ ‘ಎ’ ತಂಡದ ಸೋಲು ಹಲವರಿಗೆ ಅಚ್ಚರಿ ಉಂಟಮಾಡಿದೆ. ವಿಂಡೀಸ್‌ ಎದುರಿನ ಸರಣಿಗೆ ಮುನ್ನ ಭಾರತ ತಂಡ ವಿಶಾಖಪಟ್ಟಣದಲ್ಲಿ ನ್ಯೂಜಿಲೆಂಡ್‌ ‘ಎ’ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿತ್ತು. ಮಾತ್ರವಲ್ಲ ‘ಕ್ಲೀನ್‌ಸ್ವೀಪ್‌’ ಸಾಧನೆಯನ್ನೂ ಮಾಡಿತ್ತು. ಆದ್ದರಿಂದ ವಿಂಡೀಸ್‌ ಎದುರೂ ಭಾರತವೇ ಗೆಲ್ಲುತ್ತದೆ ಎಂದು ಹೆಚ್ಚಿನವರು ಲೆಕ್ಕಹಾಕಿಕೊಂಡಿದ್ದರು. ಆದರೆ ಅದು ನಡೆಯಲಿಲ್ಲ.ವಿಂಡೀಸ್ ತಂಡ ಇನ್ನೂ ಮೂರು ವಾರಗಳ ಕಾಲ ರಾಜ್ಯದಲ್ಲಿ ತಂಗಲಿದೆ. ಈ ಅವಧಿಯಲ್ಲಿ ನಾಲ್ಕು ದಿನಗಳ ಮೂರು ಪಂದ್ಯ ಗಳನ್ನು ಆಡಲಿದೆ. ಈಗಾಗಲೇ ಇಲ್ಲಿನ ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡಿರುವ ಆಟಗಾರರು ಭಾರತ ‘ಎ’ ತಂಡಕ್ಕೆ ಸವಾಲಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

-ಮಹಮ್ಮದ್‌ ನೂಮಾನ್ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry