ಶನಿವಾರ, ಜೂಲೈ 11, 2020
25 °C

ವಿಂಡೀಸ್ ವಿರುದ್ಧ ಸೋತಿದ್ದರೆ ಚೆನ್ನಾಗಿತ್ತೇ?

ಗೋಪಾಲಕೃಷ್ಣ ಹೆಗಡೆ Updated:

ಅಕ್ಷರ ಗಾತ್ರ : | |

ವಿಂಡೀಸ್ ವಿರುದ್ಧ ಸೋತಿದ್ದರೆ ಚೆನ್ನಾಗಿತ್ತೇ?

ಅಹಮದಾಬಾದ್: ಸಾಬರಮತಿ ಸಂತನ ನಾಡಿನಲ್ಲಿ ಗೋದ್ರಾ ಹತ್ಯಾಕಾಂಡದ ಬಗ್ಗೆ ಮಾತನಾಡಲು ಯಾರಿಗೂ ಇಷ್ಟವಿಲ್ಲ. ಹಾಗೆಯೇ ಅಹಮದಾಬಾದಿನಲ್ಲಿ ಭಾರತ ಕ್ರಿಕೆಟ್ ತಂಡದ ಎದುರಾಳಿ ಪಾಕಿಸ್ತಾನ ಆಗದಿರುವುದಕ್ಕೆ ದೇವರಿಗೆ ಧನ್ಯವಾದವನ್ನೂ ಅರ್ಪಿಸುತ್ತಾರೆ. ‘ಯಾರಿಗೆ ಬೇಕು ಸರ್ ಈ ಆತಂಕ, ಹೆದರಿಕೆ. ನಾವು ಭಾರತದ ಕ್ರಿಕೆಟ್ ಪಂದ್ಯವನ್ನು ಆರಾಮವಾಗಿ ಆನಂದಿಸಬೇಕು. ಪಾಕಿಸ್ತಾನ ತಂಡವನ್ನು ಸೋಲಿಸುವುದಕ್ಕಿಂತ ಹೆಚ್ಚಿನ ತೊಂದರೆ ಇರುವುದು ವಿಷಮ ಭಾವನೆಯ ವಾತಾವರಣದಲ್ಲಿ. ಆಸ್ಟ್ರೇಲಿಯ ಎದುರಾಳಿಯಾಗಿದ್ದೇ ಒಳ್ಳೆಯದಾಯಿತು’ ಎಂಬುದೇ ಇಲ್ಲಿಯ ಸಾರ್ವತ್ರಿಕ ಅಭಿಪ್ರಾಯ.ಗುಜರಾತ್ ಅಭಿವೃದ್ಧಿಯ ಬಗ್ಗೆ ಮಾತನಾಡುವುದೆಂದರೆ ಜನರಿಗೆ ಇಷ್ಟ. ಜೊತೆಗೆ ಭಾರತ ತಂಡ ಗುರುವಾರ ನಡೆಯುವ ವಿಶ್ವ ಕಪ್ ಕ್ರಿಕೆಟ್ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು ಸದೆಬಡಿಯುವುದೇ ಎಂಬ ಪ್ರಶ್ನೆಯನ್ನೂ ಕೇಳುತ್ತಾರೆ. ಭಾರತ ತಂಡದ ದೌರ್ಬಲ್ಯಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಪರಿಣತ ವಿವರವನ್ನು ಕೊಡುತ್ತಾರೆ. ‘ಚೆನ್ನೈನಲ್ಲಿ ಭಾರತ ಸೋತಿದ್ದರೆ ಒಳ್ಳೆಯದಾಗಿತ್ತು, ಆಸ್ಟ್ರೇಲಿಯಕ್ಕಿಂತ ಶ್ರೀಲಂಕಾ ತಂಡವನ್ನು ಸೋಲಿಸುವುದು ಸುಲಭವಾಗಿತ್ತು’ ಎಂಬುದು ಬಹಳ ಜನರ ಅಭಿಪ್ರಾಯ.

 

ಭಾರತದ ಗುರಿ ಈಗ ಆಸ್ಟ್ರೇಲಿಯವನ್ನು ಸೋಲಿಸಿ ಸೆಮಿಫೈನಲ್‌ಗೆ ಮುನ್ನಡೆಯುವುದು. ಸೆಮಿಫೈನಲ್‌ನಲ್ಲಿ ಪಾಕಿಸ್ತಾನವೇ ಎದುರಾಳಿಯಾಗುವ ಸಾಧ್ಯತೆ ಇದೆಯಾದರೂ, ಅಹಮದಾಬಾದ್ ಅಥವಾ ಮುಂಬೈನಲ್ಲಿ ಆಡುವಾಗ ಇರುವ ಒತ್ತಡ ಚಂಡೀಗಢದ ಮೊಹಾಲಿಯಲ್ಲಿ ಇರುವುದಿಲ್ಲ. ಅಲ್ಲಿಯ ಜನರು ಪಾಕಿಸ್ತಾನಿ ಕ್ರಿಕೆಟಿಗರನ್ನು ಅತಿಥಿಗಳಂತೆಯೇ ನೋಡುತ್ತಾರೆ.

 

ಮಹೇಂದ್ರ ಸಿಂಗ್ ದೋನಿ ಮನದಲ್ಲಿ ಭಾನುವಾರ ಚೆನ್ನೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆಡುವಾಗ, ‘ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯ ಬದಲು ಶ್ರೀಲಂಕಾ ಎದುರಾಳಿಯಾದರೆ ಒಳ್ಳೆಯದು’ ಎಂಬ ಯೋಚನೆ ಮೂಡಿತ್ತೇ? ‘ಯುದ್ಧ ಹಾಗೂ ಪ್ರೇಮದಲ್ಲಿ ಮಾಡಿದ್ದೇ ಸರಿ’ ಎಂದು ಹೇಳಿದಂತೆ, ‘ಕ್ರಿಕೆಟ್‌ನಲ್ಲೂ ನಾನು ಮಾಡಿದ್ದೇ ಸರಿ’ ಎಂಬ ಗಮ್ಮತ್ತಿನಲ್ಲಿ ಇರುವ ದೋನಿ ಕ್ವಾರ್ಟರ್‌ಫೈನಲ್ ಲೆಕ್ಕಾಚಾರಗಳನ್ನು ಹಾಕಿರಬಹುದು. ಮುಖ್ಯವಾಗಿ ಸೆಮಿಫೈನಲ್ ಹಾದಿ ಸುಗಮಗೊಳಿಸುವ ದೃಷ್ಟಿಯಿಂದ ಶ್ರೀಲಂಕಾ ತಂಡವನ್ನು ಸೋಲಿಸುವುದು ಸುಲಭ ಎಂದು ಅವರು ಭಾವಿಸಿರಲೂಬಹುದು. ಜನರು ಭಾವಿಸಿರುವಂತೆ ಆಸ್ಟ್ರೇಲಿಯವನ್ನು ಸೋಲಿಸುವುದು ಕಷ್ಟ ಎಂದು ಅವರಿಗೆ ಅನಿಸಿರಬಹುದು. ಆದರೆ ಇದನ್ನು ಅವರೇ ಬಾಯಿಬಿಟ್ಟು ಹೇಳಬೇಕು. ಇಲ್ಲದಿದ್ದರೆ ಇದೊಂದು ಊಹಾಪೋಹವಾಗುತ್ತದೆ.ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯಕ್ಕೆ ಮೊದಲು, ‘ಭಾರತ ತಂಡ ಹಿಂದೆ ಮಾಡಿರುವ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ’ಎಂದು ದೋನಿ ಹೇಳಿದ್ದರು. ಆದರೆ ಭಾನುವಾರ ಅದೇ ತಪ್ಪುಗಳು ಎದ್ದುಕಂಡವು. ಬ್ಯಾಟಿಂಗ್ ಪವರ್‌ಪ್ಲೇ ಯಾವಾಗ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅವರಲ್ಲಿ ಅನುಮಾನಗಳಿವೆ. ಅವರ ಬ್ಯಾಟಿಂಗ್ ಲೆಕ್ಕಾಚಾರ ತಪ್ಪುತ್ತಿದೆ. ಬೌಲಿಂಗ್ ಬದಲಾವಣೆಗಳಲ್ಲೂ ಗೊಂದಲಗಳಿವೆ.

 

ಸ್ವಲ್ಪ ಹಳೆಯ ಚೆಂಡಿನಲ್ಲಿ ಚೆನ್ನಾಗಿ ಬೌಲ್ ಮಾಡುವ ಜಹೀರ್ ಖಾನ್ ಸೂಕ್ತ ಸಮಯದಲ್ಲಿ ವಿಕೆಟ್ ಪಡೆಯದೇ ಇದ್ದರೆ ದೋನಿ, ಸೋಲಿಗಾಗಿಯೇ ಆಡುತ್ತಿದ್ದಾರೆ ಎಂಬ ಭಾವನೆ ಬಲವಾಗುತ್ತಿತ್ತು. ಭಾರತ ಚೆನ್ನಾಗಿ ಆಡಲೇ ಇಲ್ಲ. ಆದರೆ ಭಾರತಕ್ಕಿಂತ ಇನ್ನೂ ಕೆಟ್ಟದಾಗಿ ಆಡಿದ ವೆಸ್ಟ್‌ಇಂಡೀಸ್ ಸೋಲು ಅನುಭವಿಸಿತು. ವಿಂಡೀಸರಿಗೂ ಆಸ್ಟ್ರೇಲಿಯಕ್ಕಿಂತ ಪಾಕಿಸ್ತಾನ ವಿರುದ್ಧ ಆಡುವುದೇ ಸುಲಭ ಎಂದೆನಿಸಿರಬಹುದು!ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ನರು ಮುಕ್ತಾಯದ ಓವರುಗಳಲ್ಲಿ ಹೆಚ್ಚು ರನ್ನುಗಳನ್ನು ಗಳಿಸಲು ಸಾಧ್ಯವಾಗುತ್ತಿಲ್ಲ. ವೆಸ್ಟ್‌ಇಂಡೀಸ್ ವಿರುದ್ಧ ಇದು ಸಮಸ್ಯೆಯಾಗದಿದ್ದರೂ ಆಸ್ಟ್ರೇಲಿಯ ವಿರುದ್ಧ ಖಂಡಿತವಾಗಿಯೂ ಮಹತ್ವದ್ದಾಗಿ ಪರಿಣಮಿಸಬಹುದು. ದೋನಿ ತಮ್ಮ ಬ್ಯಾಟ್ಸಮನ್ನರ ಕಿವಿ ಹಿಂಡಬೇಕಾಗಿದೆ. ಯೂಸುಫ್ ಪಠಾಣ್ 20 ಓವರುಗಳ ಗುಂಗಿನಿಂದ ಹೊರಬರಬೇಕು. ತಾಳ್ಮೆಯಿಂದ ಆಡಿದರೆ ರನ್ನುಗಳು ಬಂದೇಬರುತ್ತವೆ ಎಂಬುದಕ್ಕೆ ಯುವರಾಜ್ ಸಿಂಗ್ ಅವರ ಶತಕದ ಆಟವೇ ನಿದರ್ಶನ. ಸ್ವತಃ ದೋನಿ ಈ ಅಂಶವನ್ನು ಅರಿಯಬೇಕಿದೆ.ಆಫ್‌ಸ್ಪಿನ್ನರ್ ಆರ್. ಅಶ್ವಿನ್ ತಮ್ಮ ಊರಿನ ಪಿಚ್ ಮೇಲೆ ಚೆನ್ನಾಗಿಯೇ ಬೌಲ್ ಮಾಡಿದರಾದರೂ, ನಿರ್ಜೀವ ಪಿಚ್‌ಗಳ ಮೇಲೆ ಪ್ರಬಲ ಬ್ಯಾಟ್ಸಮನ್ನರ ವಿರುದ್ಧ ಬೌಲ್ ಮಾಡುವುದು ಅವರಿಗೆ ದೊಡ್ಡ ಸವಾಲಾಗಬಹುದು. ಹರಭಜನ್ ಸಿಂಗ್ ಹೊಸ ಬೌಲರ್‌ಗೆ ತಮ್ಮ ಸಹಾಯಹಸ್ತ ಚಾಚಿದರಾದರೂ, ಸ್ವತಃ ಅವರೇ ಪರದಾಡುತ್ತಿರುವುದು ಭಾರತದ ಬೌಲಿಂಗ್ ಶಕ್ತಿಯನ್ನೇ ಕುಂದಿಸಿದೆ. ಜಹೀರ್ ಒಬ್ಬರೇ ಪಂದ್ಯ ಗೆದ್ದುಕೊಡಲು ಸಾಧ್ಯವಿಲ್ಲ.ಆದರೆ ಈಗ ದೋನಿಗೆ ತಲೆಕೆಡಿಸಿಕೊಳ್ಳಲು ಸಮಯ ಇಲ್ಲ. ಗುರುವಾರದ ನಡೆಯುವುದು ‘ಮಾಡು ಇಲ್ಲವೇ ಮಡಿ’ ಪಂದ್ಯ. ಅವರಿಗೆ ಆಸ್ಟ್ರೇಲಿಯವನ್ನು ಸೋಲಿಸಬಹುದು ಎಂಬ ವಿಶ್ವಾಸ ಮನದಲ್ಲಿ ಮೂಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.