ಸೋಮವಾರ, ಏಪ್ರಿಲ್ 12, 2021
22 °C

ವಿಂಡ್ಸರ್ ಮ್ಯಾನರ್ ಹೋಟೆಲ್ ತೆರವು: ಸಂಧಾನಕ್ಕೆ ಹೈಕೋರ್ಟ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕ್ಫ್ ಮಂಡಳಿಯ ಆಸ್ತಿಯಲ್ಲಿರುವ ವಿಂಡ್ಸರ್ ಮ್ಯಾನರ್ ಹೋಟೆಲ್ ತೆರವು ಮಾಡುವ ವಿಷಯಕ್ಕೆ ಸಂಬಂಧಿಸಿದ ವಿವಾದವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ, ತಿಳಿಸುವಂತೆ ಹೈಕೋರ್ಟ್ ಸೋಮವಾರ ಐಟಿಸಿ ಸಮೂಹ ಮತ್ತು ವಕ್ಫ್ ಮಂಡಳಿಗೆ ಆದೇಶಿಸಿದೆ.ಸದರಿ ಕಟ್ಟಡದಿಂದ ಹೋಟೆಲ್ ತೆರವುಗೊಳಿಸಲು ವಕ್ಫ್ ಮಂಡಳಿಗೆ ಅವಕಾಶ ನೀಡಿರುವ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಐಟಿಸಿ ಸಮೂಹ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ವಿಭಾಗೀಯ ಪೀಠ ನಡೆಸಿತು. ರಾಜಿ ಸಂಧಾನದ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ವಾದಿ ಮತ್ತು ಪ್ರತಿವಾದಿಗಳಿಗೆ ಈ ಸಂದರ್ಭದಲ್ಲಿ ನ್ಯಾಯಾಲಯ ನಿರ್ದೇಶನ ನೀಡಿತು.ಕಟ್ಟಡದ ಗುತ್ತಿಗೆಗೆ ಸಂಬಂಧಿಸಿದಂತೆ ಮೂರು ಒಪ್ಪಂದಗಳು ನಡೆದಿವೆ. ಈಗ ಎರಡನೇ ಒಪ್ಪಂದ ಚಾಲ್ತಿಯಲ್ಲಿದೆ. ಅದು ಅಂತ್ಯಗೊಳ್ಳುವುದೇ 2023ಕ್ಕೆ. ಮೂರನೇ ಒಪ್ಪಂದದ ಪ್ರಕಾರ 2063ರವರೆಗೆ ಕಟ್ಟಡದ ಗುತ್ತಿಗೆಯನ್ನು ಐಟಿಸಿ ಸಮೂಹಕ್ಕೆ ನೀಡಲಾಗಿದೆ. ಅಲ್ಲದೇ ಅಲ್ಲಿರುವ ಆಸ್ತಿಯಷ್ಟೇ ವಕ್ಫ್ ಮಂಡಳಿಯದ್ದು. ಕಟ್ಟಡ ಐಟಿಸಿ ಸಮೂಹಕ್ಕೆ ಸೇರಿದ್ದು  ತೆರವು ಮಾಡುವುದು ಕಾನೂನುಬಾಹಿರ ಆಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.ಸಾರ್ವಜನಿಕ ಸ್ಥಳಗಳ ಕಾಯ್ದೆ 1974ಕ್ಕೆ ರಾಷ್ಟ್ರಪತಿಯವರ ಅಂಕಿತ ಪಡೆದು ಜಾರಿ ಮಾಡಲಾಗಿತ್ತು. 1995ರ ತಿದ್ದುಪಡಿ ಕಾಯ್ದೆಗೆ ರಾಜ್ಯಪಾಲರ ಅಂಕಿತ ಮಾತ್ರ ಪಡೆಯಲಾಗಿದೆ. ಆದ್ದರಿಂದ ಮೊದಲ ಕಾಯ್ದೆಗೆ ಈಗಲೂ ಮಾನ್ಯತೆ ಇದೆ.ಆದ್ದರಿಂದ ವಿಂಡ್ಸರ್ ಮ್ಯಾನರ್ ಹೋಟೆಲ್ ಸಾರ್ವಜನಿಕ ಸ್ಥಳಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ. 1995ರ ಕಾಯ್ದೆಯ ಅಡಿಯಲ್ಲಿ ಏಕಸದಸ್ಯ ಪೀಠ ನೀಡಿರುವ ತೀರ್ಪು ಸರಿಯಲ್ಲ ಎಂದರು.ರಾಜಿ ಸಾಧ್ಯವೇ?:ಆಗ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಕೇಹರ್, ‘ಇದು ಒಂದು ದೊಡ್ಡ ವಿಷಯ. ಎರಡೂ ಕಡೆಯವರು ರಾಜಿ ಸಂಧಾನದ ಮೂಲಕ ವಿವಾದವನ್ನು ಪರಿಹರಿಸಿಕೊಳ್ಳಲು ಸಾಧ್ಯವೇ?’ ಎಂದು ಪ್ರಶ್ನಿಸಿದರು. ಆದರೆ ಈ ಬಗ್ಗೆ ತಕ್ಷಣವೇ ಉತ್ತರ ನೀಡಲು ಎರಡೂ ಕಡೆಯವರಿಗೆ ಸಾಧ್ಯವಾಗಲಿಲ್ಲ.ಬಳಿಕ ರಾಜಿ ಸಂಧಾನದ ಸಾಧ್ಯತೆ ಕುರಿತು ಹೇಳಿಕೆ ನೀಡಲು ವಾದಿ ಮತ್ತು ಪ್ರತಿವಾದಿಗಳಿಗೆ ಒಂದು ವಾರ ಕಾಲಾವಕಾಶ ನೀಡಿದರು. ರಾಜಿ ಸಂಧಾನಕ್ಕೆ ಒಪ್ಪಿಗೆ ಇಲ್ಲದಿದ್ದರೆ ಮಾರ್ಚ್ 28ರಿಂದ ನಿತ್ಯ ಮಧ್ಯಾಹ್ನ 2.30ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಪ್ರಕಟಿಸಿದರು.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.