ಭಾನುವಾರ, ಮಾರ್ಚ್ 7, 2021
29 °C

ವಿಂಬಲ್ಡನ್ ಟೆನಿಸ್: ಸೆಮಿಫೈನಲ್‌ಗೆ ಫೆಡರರ್, ಜೊಕೊವಿಚ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಂಬಲ್ಡನ್ ಟೆನಿಸ್: ಸೆಮಿಫೈನಲ್‌ಗೆ ಫೆಡರರ್, ಜೊಕೊವಿಚ್

ಲಂಡನ್ (ಪಿಟಿಐ): ಇಲ್ಲಿಯೇ 2010, 2011ರಲ್ಲಿ ಕ್ವಾರ್ಟರ್ ಫೈನಲ್‌ನಲ್ಲಿಯೇ ಸೋತು ನಿರಾಸೆ ಅನುಭವಿಸಿದ್ದ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಈ ಬಾರಿ ಅಂತಹ ಆಘಾತಕ್ಕೆ ಅವಕಾಶ ನೀಡಲಿಲ್ಲ. ಇವರು ಹದಿನಾರು ಸಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ಅನುಭವಿ ತಾನೆ.ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಫೆಡರರ್ ಎರಡು ವರ್ಷಗಳ ಬಳಿಕ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಅವರು 6-1, 6-2, 6-2ರಲ್ಲಿ ರಷ್ಯಾದ ಮಿಖಾಯಿಲ್ ಯೋಜ್ನಿ ಅವರನ್ನು ಪರಾಭವಗೊಳಿಸಿದರು. ಇವರ ಪಾಲಿಗಿದು 32ನೇ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಪ್ರವೇಶ ಕೂಡ.25 ವಿನ್ನರ್‌ಗಳನ್ನು ಹಾಕಿದ ಮೂರನೇ ಶ್ರೇಯಾಂಕದ ಫೆಡರರ್ ಮೂರೂ ಸೆಟ್‌ಗಳಲ್ಲಿ ಎದುರಾಳಿ ಆಟಗಾರನ ಮೇಲೆ ಪೂರ್ಣ ಪಾರಮ್ಯ ಮೆರೆದರು. ಮಿಖಾಯಿಲ್ ಮೂರೂ ಸೆಟ್‌ಗಳಿಂದ ಸೇರಿ ಗೆದ್ದಿದ್ದು ಕೇವಲ ಐದು ಗೇಮ್. ಹಾಗಾಗಿ ಈ ಪಂದ್ಯ ಬಹುತೇಕ ಏಕಪಕ್ಷೀಯವಾಗಿತ್ತು. ಬೆನ್ನು ನೋವಿಗೆ ಒಳಗಾಗಿದ್ದರೂ ಫೆಡರರ್ ಆಕರ್ಷಕ ಏಸ್‌ಗಳನ್ನು ಹಾಕಿ ಮಿಖಾಯಿಲ್ ಅವರ ಮೇಲೆ ಒತ್ತಡ ಹೇರಿದರು.ರೋಜರ್ ಈಗ ವಿಂಬಲ್ಡನ್‌ನಲ್ಲಿ ವಿಶ್ವ ದಾಖಲೆ ಸರಿಗಟ್ಟುವ ಏಳನೇ ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಮೇಲೆ ಕಣ್ಣಿಟ್ಟಿದ್ದಾರೆ. ಅಮೆರಿಕದ ಪೀಟ್ ಸಾಂಪ್ರಾಸ್ ಮಾತ್ರ ಏಳು ಬಾರಿ ಸಿಂಗಲ್ಸ್ ಪ್ರಶಸ್ತಿ ಗೆದ್ದ ಸಾಧನೆ ಹೊಂದಿದ್ದಾರೆ.ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸರ್ಬಿಯಾದ ಜೊಕೊವಿಚ್ 6-4, 6-1, 6-4ರಲ್ಲಿ ಜರ್ಮನಿಯ ಫ್ಲೊರಿಯನ್ ಮೇಯರ್ ಎದುರು ಗೆದ್ದು ನಾಲ್ಕರ ಘಟ್ಟದಲ್ಲಿ ಆಡಲು ಅರ್ಹತೆ ಪಡೆದರು. ಅಗ್ರ ಶ್ರೇಯಾಂಕದ ಆಟಗಾರನಿಗೆ ಈ ಪಂದ್ಯದಲ್ಲಿ ಅಂತಹ ಸವಾಲೇನೂ ಎದುರಾಗಲಿಲ್ಲ.`ರೋಜರ್ ಎದುರು ಆಡುವುದೇ ಒಂದು ರೀತಿಯ ಖುಷಿ. ಆ ಹೋರಾಟಕ್ಕೆ ನಾನು ಎದುರು ನೋಡುತ್ತಿದ್ದೇನೆ~ ಎಂದು ಜೊಕೊವಿಚ್ ಪ್ರತಿಕ್ರಿಯಿಸಿದ್ದಾರೆ. `ಫೆಡರರ್ ಇಲ್ಲಿ ಆರು ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಅವರಿಗೆ ಮತ್ತೊಂದು ಪ್ರಶಸ್ತಿ ಜಯಿಸಲು ಎದುರು ನೋಡುತ್ತಿದ್ದಾರೆ. ಉತ್ತಮ ಪ್ರದರ್ಶನ ನೀಡಿದವರು ಗೆಲ್ಲುತ್ತಾರೆ~ ಎಂದೂ ಅವರು ಹೇಳಿದರು. ಉಭಯ ಆಟಗಾರರು ತಮ್ಮ ನಡುವಿನ 27ನೇ ಹಣಾಹಣಿಗೆ ಸಜ್ಜಾಗಿದ್ದಾರೆ.ಅಜರೆಂಕಾ, ಕರ್ಬರ್‌ಗೆ ಜಯ: ಜರ್ಮನಿಯ ಆ್ಯಂಜಲಿಕ ಕರ್ಬರ್ ಹಾಗೂ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ಬರ್ 6-3, 7-9, 7-5ರಲ್ಲಿ ಜರ್ಮನಿಯ ಸಬಿನ್ ಲಿಸಿಕಿ ಎದುರೂ, ಅಜರೆಂಕಾ 6-3, 7-6ರಲ್ಲಿ ಆಸ್ಟ್ರಿಯದ ತಮಿರಾ ಪಜೆಕ್ ವಿರುದ್ಧವೂ ಗೆದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.