ಗುರುವಾರ , ಆಗಸ್ಟ್ 22, 2019
26 °C
ಹಿನ್ನಡೆ ಸ್ಥಿತಿಗೆ ತಲುಪಿದ ಕಾರ್ಖಾನೆ, ಬಿಕೊ ಎನ್ನುವ ವಾತಾವರಣ

ವಿಐಎಸ್‌ಎಲ್ ಅವಘಡಕ್ಕೆ ಹತ್ತು ವರ್ಷ

Published:
Updated:

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯ ಅವಘಡಕ್ಕೆ ಹತ್ತು ವರ್ಷ ತುಂಬಿದೆ. ಆದರೆ, ಅದರ ಸ್ಥಿತಿ-ಗತಿಗಳಲ್ಲಿ ಯಾವುದೇ ಹೊಸತನವಿಲ್ಲದೇ ಮತ್ತಷ್ಟು ಹದಗೆಟ್ಟ ಸ್ಥಿತಿಯಲ್ಲಿಯೇ ಕುಂಟುತ್ತಾ ಸಾಗಿದೆ!2003ರ ಜುಲೈ 30ರ ಬೆಳಗಿನ ಜಾವ ಸಂಭವಿಸಿದ ಭಾರಿ ಸ್ಫೋಟ ಎಂಟು ಮಂದಿಯನ್ನು ಬಲಿ ತೆಗದುಕೊಂಡಿತು. ಸತ್ತವರಲ್ಲಿ ಏಳು ಮಂದಿ ಕಾಯಂ ನೌಕರರು, ಒಬ್ಬರು ಗುತ್ತಿಗೆ ಕಾರ್ಮಿಕ.ಕಾರ್ಖಾನೆ ಊದು ಕುಲುಮೆ ಪರಿವರ್ತಕ ಸಿಡಿದ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಈ ಅಹಿತಕರ ಘಟನೆ ನಡೆದು ಇತಿಹಾಸ ಸೇರಿತು. ಆದರೆ, ಇದರಲ್ಲಿ ನೊಂದಿದ್ದ ಗುತ್ತಿಗೆ ಕಾರ್ಮಿಕ ಜಾಫರ್ ಬದುಕು ಮಾತ್ರ ಹಸನಾಗಿಲ್ಲ.ಮೃತ ಕಾರ್ಮಿಕರ ಮನೆಗೆ ಅಂದು ಭೇಟಿ ನೀಡಿದ್ದ ಕೇಂದ್ರದ ಮಂತ್ರಿಗಳು, ರಾಜ್ಯದ ಸಚಿವರು ಹೇಳಿದಂತೆ ಅವರೆಲ್ಲರಿಗೂ ಹಣ, ಕುಟುಂಬ ಸದಸ್ಯರಿಗೆ ಕೆಲಸದ ಭರವಸೆ ಈಡೇರಿದೆ. ಆದರೆ, ಕಾರ್ಮಿಕರ ಸ್ಥಿತಿಗತಿಯಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ.

ನೆನಗುದಿಯಲ್ಲಿ ಗಣಿ:  ಈ ಘಟನೆ ನಡೆದ ಒಂದು ವರ್ಷದಲ್ಲೇ ಕಾರ್ಖಾನೆ ಕೆಮ್ಮಣ್ಣುಗುಂಡಿ ಅದಿರನ್ನು ಕಳೆದುಕೊಂಡಿತು. ಇದರ ಪರಿಣಾಮ ಖಾಸಗಿ ಗಣಿಯಿಂದ ಅದಿರು ಖರೀದಿ ನಡೆದು ಉತ್ಪಾದನಾ ವೆಚ್ಚ ಹೆಚ್ಚಲು ಆರಂಭಿಸಿತು.ಸದ್ಯಕ್ಕೆ ರಾಜ್ಯ ಸರ್ಕಾರ ಸೊಂಡುರು ಬಳಿ ಗಣಿ ಪ್ರದೇಶ ಗುರುತು ಮಾಡಿ ಶಿಫಾರಸು ಮಾಡಿದ್ದರೂ ಸಹ ಅದಕ್ಕೆ ಕೇಂದ್ರ ಸರ್ಕಾರದ ಅನುಮತಿ ದೊರೆಯಬೇಕಿದೆ. ಸದ್ಯಕ್ಕೆ ಉಕ್ಕಿಗೆ ಉತ್ತಮ ಮಾರುಕಟ್ಟೆ ಇಲ್ಲದ ಕಾರಣ ಬೇಡಿಕೆ ಸಹ ಕುಂಠಿತವಾಗಿದೆ.ಕೆಲಸ ಇಲ್ಲ: ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿಗೆ ಕೆಲಸ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಹೆಚ್ಚು ಕಡಿಮೆ ಶೇ 50ರಷ್ಟು ಮಂದಿಗೆ ಕೆಲಸ ಕಡಿತ ಮಾಡಲಾಗಿದೆ. ಇದರಿಂದಾಗಿ ವಲಸೆ ಸಂಖ್ಯೆ ಹೆಚ್ಚಿದೆ.

ಒಂದೆಡೆ ಉತ್ಪಾದನೆ ಕಡಿತ, ಮತ್ತೊಂದೆಡೆ ಗಣಿ ಬಿಸಿ ಕಾರಣ ಹೆಚ್ಚು ಕಡಿಮೆ ಗುತ್ತಿಗೆ ಕಾರ್ಮಿಕರ ಶ್ರಮದಿಂದಲ್ಲೇ ನಡೆಯುತ್ತಿದ್ದ ಕಾರ್ಖಾನೆಯಲ್ಲಿ ಈಗ ಬಿಕೋ ವಾತಾವರಣ ಸೃಷ್ಟಿಯಾಗಿದೆ.ಅವಘಡ ನಡೆದ ಸಂದರ್ಭದಲ್ಲಿ ಕಾಯಂ ಕಾರ್ಮಿಕರ ಸಂಖ್ಯೆ 2,060ಕ್ಕೂ ಅಧಿಕವಾಗಿತ್ತು. ಕಳೆದ ಒಂದು ದಶಕದಲ್ಲಿ ಇದರ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಉಂಟಾಗಿದ್ದು, ಈಗ ಸರಾಸರಿ ಅಧಿಕಾರಿಗಳು ಸೇರಿ 800ಕ್ಕೆ ಇಳಿದಿದೆ.

ದಿನದಿಂದ ದಿನಕ್ಕೆ ನಿವೃತ್ತಿ ಪ್ರಮಾಣ ಹೆಚ್ಚುತ್ತಿದೆ. ಅದಕ್ಕೆ ತಕ್ಕಷ್ಟು ಉದ್ಯೋಗ ಪ್ರಮಾಣ ಸೃಷ್ಟಿಯಾಗಲು ಸಾಧ್ಯವಾಗಿಲ್ಲ. ಹೀಗಾಗಿ ವಲಸೆ ಪ್ರಮಾಣ ಗಣನೀಯವಾಗಿ ವೃದ್ಧಿಸಿದೆ. ಇವೆಲ್ಲದರ ನಡುವೆ ಈಗಲೂ ಗುತ್ತಿಗೆ ಕಾರ್ಮಿಕರು ಅಸುರಕ್ಷಿತ ಸ್ಥಿತಿಯಲ್ಲೇ ಕೆಲಸ ಮಾಡುವ ಪರಿಸ್ಥಿತಿ ಇದೆ.ದಶಕದ ಹಿಂದಿನ ಕಹಿ ಘಟನೆಯ ನೆನಪಿನ ಸಂದರ್ಭದಲ್ಲಿ ಕಾರ್ಖಾನೆ ಮತ್ತಷ್ಟು ಹಿನ್ನಡೆ ಸ್ಥಿತಿಗೆ ತಲುಪಿರುವುದು ಮಾತ್ರ ಇಲ್ಲಿನ ಜನರ ಪಾಲಿಗೆ ಅಶುಭದಾಯಕ ಅಂಶ ಎಂದರೆ ತಪ್ಪಾಗಲಾದರು.

 

Post Comments (+)