ವಿಐಎಸ್‌ಎಲ್ ಕಾರ್ಖಾನೆ ಗಣಿ ವಿಚಾರ

7

ವಿಐಎಸ್‌ಎಲ್ ಕಾರ್ಖಾನೆ ಗಣಿ ವಿಚಾರ

Published:
Updated:ಭದ್ರಾವತಿ: ‘ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆಗೆ ಗಣಿ ಮಂಜೂರು ಮಾಡಲು ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಒತ್ತಾಯಿಸಿದರು.

ಕಾರ್ಖಾನೆ ಮುಂಭಾಗದಲ್ಲಿ ಗುರುವಾರ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದ ನೇತೃತ್ವ ವಹಿಸಿ ಅವರು ಮಾತನಾಡಿದರು.ಕಮಿಷನ್ ಆಸೆಗೆ ಬಲಿಯಾದ ರಾಜ್ಯ ಸರ್ಕಾರ ಖಾಸಗಿ ಕಂಪೆನಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಗಣಿ ಮಂಜೂರು ಮಾಡಿದೆ. ಆದರೆ, ಸರ್ಕಾರಿ ಸ್ವಾಮ್ಯದ ವಿಐಎಸ್‌ಎಲ್ ಕುರಿತು ಮಾತ್ರ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಖಂಡನೀಯ ಎಂದು ಅವರು ದೂರಿದರು.ಎಲ್ಲಾ ರಂಗದಲ್ಲೂ ಭ್ರಷ್ಟತೆ ಅನುಸರಿಸಿರುವ ರಾಜ್ಯದ ಬಿಜೆಪಿ ಸರ್ಕಾರ ಇಲ್ಲಿನ ಕಾರ್ಮಿಕರ ಬದುಕಿನ ಜತೆ ಸಹ ನಾಟಕ ಆಡುತ್ತಿದೆ. ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಕಾರ್ಖಾನೆ ಉಳಿಸುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಖಾಸಗಿ ಗಣಿ ಮಾಲೀಕರ ಒತ್ತಡಕ್ಕೆ ಮಣಿದಿದ್ದಾರೆ ಎಂದು ಆರೋಪಿಸಿದರು. ಹಾಲಿ ಸಂಡೂರು ತಾಲ್ಲೂಕು ರಮಣದುರ್ಗ ಪ್ರದೇಶದ 245.20 ಹೆಕ್ಟೇರ್ ಜಾಗದ ಅದಿರನ್ನು ನೀಡುವಂತೆ ಕಾರ್ಖಾನೆ ಆಡಳಿತ ಮಂಡಳಿ ಮನವಿ ಸಲ್ಲಿಸಿ ವರ್ಷಗಳು ಕಳೆದಿದೆ. ಆದರೆ, ಶಿಫಾರಸು ಮಾಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಹಾಗಾಗಿ, ಅದೇ ಗಣಿಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಈ ಹೋರಾಟ ನಡೆದಿದೆ ಎಂದು ವಿವರಣೆ ನೀಡಿದರು.ಎನ್. ಕೃಷ್ಣಮೂರ್ತಿ, ಎಐಟಿಯುಸಿ ಮುಖಂಡ ಡಿ.ಸಿ. ಮಾಯಣ್ಣ, ಅಭಿವೃದ್ಧಿ ವೇದಿಕೆ ಅಧ್ಯಕ್ಷ ಎಚ್. ನರಸಿಂಹಯ್ಯ, ಎಂಪಿಎಂ ಕಾರ್ಮಿಕ ಸಂಘದ ಅಧ್ಯಕ್ಷ ಬಿ.ಜೆ. ಸದಾಶಿವಲಿಂಗೇಗೌಡ, ಕಾಂಗ್ರೆಸ್ ಮುಖಂಡರಾದ ಅಣ್ಣೋಜಿರಾವ್, ಬಾಲಕೃಷ್ಣ, ರೇಣುಕಮ್ಮ, ಮಂಗಳಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇವರೊಂದಿಗೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಎಸ್.ಎಸ್. ಭೈರಪ್ಪ, ಮುಕುಂದಪ್ಪ, ರವಿಕುಮಾರ್, ರಾಮಚಂದ್ರ ಮುಂತಾದವರು ಹಾಜರಿದ್ದರು.ಬೆಳಿಗ್ಗೆಯಿಂದ ಸಂಜೆ ತನಕ ಜರುಗಿದ 12 ಗಂಟೆಯ ಉಪವಾಸ ನಂತರ, ಶಾಸಕರು ಗಣಿ ಮಂಜೂರಾತಿಗೆ ಒತ್ತಾಯಿಸುವ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಎರಡು ಬಾರಿ ಸಭೆ ನಡೆಸಿದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸತ್ಯಾಗ್ರಹಕ್ಕೆ ವಿಐಎಸ್‌ಎಲ್ ಕಾರ್ಮಿಕ ಸಂಘದ ಯಾವೊಬ್ಬ ಪದಾಧಿಕಾರಿಯೂ ಸಹ ಬೆಂಬಲ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry