ವಿಕಾಸ ಹೆಸರಿನಲ್ಲಿ ವಿನಾಶ: ಮೇಧಾ ಆಕ್ರೋಶ

6

ವಿಕಾಸ ಹೆಸರಿನಲ್ಲಿ ವಿನಾಶ: ಮೇಧಾ ಆಕ್ರೋಶ

Published:
Updated:
ವಿಕಾಸ ಹೆಸರಿನಲ್ಲಿ ವಿನಾಶ: ಮೇಧಾ ಆಕ್ರೋಶ

 


ಬೆಂಗಳೂರು: `ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯುವುದು ಒಂದು ರಾಷ್ಟ್ರೀಯ ವ್ಯಾಧಿಯಾಗಿದ್ದು, ವಿಕಾಸದ ಹೆಸರಿನಲ್ಲಿ ಬಡವರ ವಿನಾಶ ಮಾಡಲಾಗುತ್ತಿದೆ' ಎಂದು ಹಿರಿಯ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಆಕ್ರೋಶ ವ್ಯಕ್ತಪಡಿಸಿದರು.

 

ರಾಷ್ಟ್ರೀಯ ಜನಾಂದೋಲನ ಸಮಿತಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಏರ್ಪಡಿಸಿದ್ದ ನೈಸ್ ಕಂಪೆನಿ ವಿರುದ್ಧದ ಹೋರಾಟ ಸಭೆಯಲ್ಲಿ ಅವರು ಮಾತನಾಡಿದರು. 

 

`ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಗೆ ಭೂಮಿ ಕಳೆದುಕೊಂಡ ಮೂರು ಹಳ್ಳಿಗಳಿಗೆ ನಾನು ಬೆಳಿಗ್ಗೆ ಭೇಟಿ ನೀಡಿದ್ದೆ. ಅಲ್ಲಿಯ ಜನರ ಬದುಕು ಮೂರಾಬಟ್ಟೆಯಾಗಿದ್ದು, ಉಳುವ ಭೂಮಿ, ಉಳಿಯುವ ಮನೆ ಎರಡನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ' ಎಂದು ವಿಷಾದದಿಂದ ಹೇಳಿದರು.

 

`ದಲಿತರು ಮತ್ತು ರೈತರನ್ನು ರಕ್ಷಿಸಬೇಕಾದ ಸರ್ಕಾರ, ಕಾರ್ಪೋರೇಟ್ ಸಂಸ್ಕೃತಿಯನ್ನು ಪೋಷಿಸುತ್ತಿದೆ. ಎಲ್ಲ ಪಕ್ಷಗಳ ನೇತಾರರು ಹಾಗೂ ಬಿಎಂಐಸಿ ಯೋಜನೆ ಅವಧಿಯಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳು ಒಟ್ಟಾಗಿ ಮುಂದೆ ನಿಂತು ಮಣ್ಣಿನ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ' ಎಂದು ದೂರಿದರು.

 

`ಭೂಮಿಯನ್ನು ಒಳಗೊಂಡ ಭ್ರಷ್ಟಾಚಾರ ಮಿಕ್ಕೆಲ್ಲ ಅವ್ಯವಹಾರಕ್ಕಿಂತ ಹೆಚ್ಚು ಅಪಾಯಕಾರಿ' ಎಂದು ಮೇಧಾ ವಿಶ್ಲೇಷಿಸಿದರು. `ಮೂಲ ಯೋಜನೆಯಂತೆ ರಸ್ತೆ ನಿರ್ಮಿಸದೆ ಮಾರ್ಗ ಬದಲಾಯಿಸಲು ನೈಸ್ ಕಂಪೆನಿಗೆ ಅಧಿಕಾರ ಕೊಟ್ಟವರು ಯಾರು' ಎಂದು ಕೇಳಿದ ಅವರು, `ಶ್ರೀಮಂತರ ಆಸ್ತಿ ಉಳಿಸಲು ಬಡವರ ಸಮಾಧಿ ಮೇಲೆ ರಸ್ತೆ ನಿರ್ಮಿಸಲಾಗಿದೆ' ಎಂದು ಆಕ್ರೋಶ ಹೊರ ಹಾಕಿದರು.

 

`ತಾವು ಕಳೆದುಕೊಂಡ ಭೂಮಿಯಲ್ಲಿ ನಿರ್ಮಾಣವಾದ ರಸ್ತೆಯಲ್ಲಿ ರೈತರೇ ಓಡಾಡದಂತೆ ತಡೆಯಲು ನೈಸ್ ಕಂಪೆನಿ ಭದ್ರತಾ ಸಿಬ್ಬಂದಿ ಇಟ್ಟಿದೆ. ಹಳ್ಳಿಗರನ್ನು ಅವರ ನೆಲದಲ್ಲೇ ಸರ್ಕಾರ ಪರಾವಲಂಬಿ ಮಾಡಲು ಹೊರಟಿದೆ. ಈ ಹುನ್ನಾರದ ವಿರುದ್ಧ ನಡೆದಿರುವ ಜನಾಂದೋಲನ ಅದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಗುಡುಗಿದರು. 

 

`ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆಯೇ ನೈಸ್ ಅಧಿಕಾರಿಯೊಬ್ಬರು ನನ್ನನ್ನು ಭೇಟಿ ಮಾಡಿದ್ದರು. ಏನೇನೋ ದಾಖಲೆ ಕೊಟ್ಟರು. ಅವರ ದಾಖಲೆಗಳು ಏನು ಹೇಳುತ್ತವೆ ಎಂಬುದನ್ನು ನಾನು ಬಲ್ಲೆ. ಶ್ರಮಿಕ ವರ್ಗಕ್ಕೆ ಅವರಿಂದ ಅನ್ಯಾಯ ಆಗಿರುವುದು ಪ್ರತಿ ಹಳ್ಳಿಗಳಲ್ಲಿ ಎದ್ದು ಕಾಣುತ್ತದೆ' ಎಂದರು. 

 

`ಕಸಿದುಕೊಂಡ ಭೂಮಿಯನ್ನು ವಾಪಸು ನೀಡುವವರೆಗೆ ಕಾನೂನು ಸಮರದ ಜೊತೆಗೆ ಬೀದಿಗೆ ಇಳಿದು ಹೋರಾಟ ನಡೆಸದೆ ಬಿಡುವುದಿಲ್ಲ' ಎಂದು ಘೋಷಿಸಿದರು. `20 ಸಾವಿರಕ್ಕೂ ಅಧಿಕ ಎಕರೆ ಹೆಚ್ಚುವರಿ ಭೂಮಿ ವಶಪಡಿಸಿಕೊಂಡ ನೈಸ್ ಕಂಪೆನಿ, ಹಣಕ್ಕಾಗಿ ಅದನ್ನು ಬ್ಯಾಂಕಿಗೆ ಅಡವಿಟ್ಟಿದೆ' ಎಂದು ಹರಿಹಾಯ್ದರು.

 

ಚಿಕ್ಕತೋಗೂರಿನ ಮುನಿರಾಜು ಮಾತನಾಡಿ, `ನಮ್ಮೂರಿನಲ್ಲಿ 25 ದಲಿತ ಕುಟುಂಬಗಳಿದ್ದು, 5 ಎಕರೆ 30 ಗುಂಟೆ ಭೂಮಿಯಲ್ಲಿ ಎಲ್ಲರೂ ವ್ಯವಸಾಯ ಮಾಡಿಕೊಂಡಿದ್ದೆವು. ಅದರಲ್ಲಿ ಎರಡೂವರೆ ಎಕರೆ ಜಮೀನನ್ನು ನೈಸ್ ಕಂಪೆನಿ ಕಸಿದುಕೊಂಡಿದೆ. ಎಲ್ಲ ಕುಟುಂಬಗಳು ಬದುಕಿನ ಆಧಾರವನ್ನೇ ಕಳೆದುಕೊಂಡಿವೆ' ಎಂದು ಹೇಳಿದರು.  

 

`ನೈಸ್ ಕಂಪೆನಿ ತಾನು ವಶಕ್ಕೆ ಪಡೆದ ಜಾಗದಲ್ಲಿದ್ದ ಬೆಸ್ಕಾಂ ಕಂಬಗಳನ್ನು ತೆಗೆದಿದ್ದರಿಂದ ಮನೆಗೆ ವಿದ್ಯುತ್ ಸೌಲಭ್ಯ ಇಲ್ಲ. ನನ್ನ ಮನೆಯಲ್ಲಿ ಮಕ್ಕಳು ಬುಡ್ಡಿ ದೀಪದ ಬೆಳಕಲ್ಲೇ ಓದಬೇಕಾಗಿದೆ' ಎಂದು ನೋವು ತೋಡಿಕೊಂಡರು. `ನಮ್ಮ ಊರಿನಲ್ಲಿ ನಾವು ರಾಜ-ರಾಣಿಯಾಗಿ ಇರುತ್ತೇವೆ. ಭೂಗಳ್ಳರಿಗೆ ಜಾಗ ನೀಡಿ, ಮುಸುರೆ ಪಾತ್ರೆ ತಿಕ್ಕುವುದಕ್ಕಾಗಿ ಬೆಂಗಳೂರಿಗೆ ಬರಲು ನಾವು ಸಿದ್ಧರಿಲ್ಲ' ಎಂದು ಕಮಲಾ ನಾರಾಯಣ ಹೇಳಿದರು. 

 

`ರೈತರಿಗೆ ಭೂಮಿ ವಾಪಸು ನೀಡದಿದ್ದರೆ ರಾಜ್ಯದ ತುಂಬಾ ಹೋರಾಟ ರೂಪಿಸಲಾಗುವುದು' ಎಂದು ಭಾರತೀಯ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಮದಾಸ್ ಅಠವಳೆ ಘೋಷಿಸಿದರು. ಟಿ.ಜೆ. ಅಬ್ರಹಾಂ, ಲಿಯೊ ಸಲ್ಡಾನಾ, ಫಟಾಫಟ್ ನಾಗರಾಜ್, ಆರ್.ಮೋಹನರಾಜ್, ಜಿ. ನಾಗರಾಜ್ ಮತ್ತಿತರ ಮುಖಂಡರು ಮಾತನಾಡಿದರು. ಮೇಧಾ ಆಗಾಗ `ಬೇಕೇ ಬೇಕು ನ್ಯಾಯ ಬೇಕು' ಎನ್ನುವ ಘೋಷಣೆ ಹಾಕುವ ಮೂಲಕ ಹೋರಾಟಗಾರರಲ್ಲಿ ಹುರುಪು ತುಂಬುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry