ವಿಕಿಪಿಡಿಯಾದಲ್ಲಿ ಇರುವುದೆಲ್ಲ ಸತ್ಯವಲ್ಲ...!

7

ವಿಕಿಪಿಡಿಯಾದಲ್ಲಿ ಇರುವುದೆಲ್ಲ ಸತ್ಯವಲ್ಲ...!

Published:
Updated:
ವಿಕಿಪಿಡಿಯಾದಲ್ಲಿ ಇರುವುದೆಲ್ಲ ಸತ್ಯವಲ್ಲ...!

ಲಂಡನ್(ಪಿಟಿಐ): ಪೋರ್ಚುಗೀಸರು ಮತ್ತು ಮರಾಠ ರಾಜರ ನಡುವೆ 17ನೇ ಶತಮಾನದಲ್ಲಿ ಗೋವಾದ `ಬಿಚೋಲಿಮ್' ಎಂಬಲ್ಲಿ ಕದನ ನಡೆದಿತ್ತು ಎಂದು ಅಂತರ್ಜಾಲದ ಪ್ರತಿಷ್ಠಿತ ಜಾಲತಾಣ ವಿಕಿಪಿಡಿಯಾದಲ್ಲಿ ಐದು ವರ್ಷಗಳಿಂದಲೂ ಮಾಹಿತಿ ಹರಿದಾಡುತ್ತಿತ್ತು. ಆದರೆ, ಅದು ಸುಳ್ಳು ಎಂಬ ಕಾರಣಕ್ಕಾಗಿ ಆ ಲೇಖನವನ್ನು ಕೊನೆಗೂ ಜಾಲತಾಣ ತೆಗೆದು ಹಾಕಿದೆ. ಹೀಗಾಗಿ ವಿಕಿಪಿಡಿಯಾದಲ್ಲಿ ಪ್ರಕಟವಾಗುವ ಎಲ್ಲ ಮಾಹಿತಿಗಳು ಸಂಪೂರ್ಣ ಸತ್ಯ ಮತ್ತು ವಿಶ್ವಾಸಾರ್ಹ ಎಂಬ ಜನರ ನಂಬಿಕೆ ಹುಸಿಯಾಗಿದೆ.`ಭಾರತದ ಶಕ್ತಿಶಾಲಿ ಸಾಮ್ರಾಜ್ಯ ಎಂದು ಮನೆಮಾತಾಗಿದ್ದ ಮರಾಠರೊಂದಿಗೆ ವಸಾಹತುಶಾಹಿ ಪೋರ್ಚುಗೀಸರು ಯುದ್ಧ ಮಾಡಲು ಹೇಗೆ ಸಾಧ್ಯ' ಎಂಬ ಸಂಶಯವನ್ನು ಮಿಸ್ಸೌರಿಯ ಓದುಗರೊಬ್ಬರು ವ್ಯಕ್ತಪಡಿಸಿದ ಬೆನ್ನಲ್ಲೇ ಲೇಖನವನ್ನು ಕೈಬಿಡಲಾಗಿದೆ.ತನ್ನಿಂದ ಆದ ಈ ಪ್ರಮಾದದ ಅರಿವಾಗುತ್ತಲೇ 4,500 ಶಬ್ದಗಳ `ಕದನ ಲೇಖನ'ವನ್ನು ವಿಕಿಪಿಡಿಯಾ ತೆಗೆದುಹಾಕಿದೆ. `ಪೋರ್ಚುಗೀಸರು ಮತ್ತು ಮರಾಠರ ನಡುವೆ ನಡೆದಿದೆ ಎನ್ನಲಾದ ಬಿಚೋಲಿಮ್ ಕದನ ಕೇವಲ ಕಾಲ್ಪನಿಕ. ವಾಸ್ತವದಲ್ಲಿ ಈ ಯುದ್ಧ ನಡೆದೇ ಇಲ್ಲ' ಎಂಬ ಆ ಓದುಗನ ಅಭಿಪ್ರಾಯವನ್ನು ವಿಕಿಪಿಡಿಯಾ ಒಪ್ಪಿದೆ.ಇನ್ನೂ ವಿಶೇಷವೆಂದರೆ, ಜುಲೈ 2007ರಲ್ಲಿ ವಿಕಿಪಿಡಿಯಾದಲ್ಲಿ ಪ್ರಥಮ ಬಾರಿಗೆ ಪ್ರಕಟವಾದ `ಬಿಚೋಲಿಮ್ ಕದನ'ಕ್ಕೆ ಸಂಬಂಧಿಸಿದ ಲೇಖನವನ್ನು ಜಾಲತಾಣದ ಸಂಪಾದಕರು ಕೂಡಾ ಬಹುವಾಗಿ ಮೆಚ್ಚಿಕೊಂಡಿದ್ದರು. ಜತೆಗೆ `ಉತ್ತಮ ಲೇಖನ' ಎಂದೂ ಹೆಸರಿಸಿದ್ದರು. ಗೋಲ್ಡ್‌ಸ್ಟಾರ್ `ವಿಶೇಷ ತನಿಖಾ ಲೇಖನ'ಕ್ಕಾಗಿಯೂ ಈ ಲೇಖನ ನಾಮನಿರ್ದೇಶನಗೊಂಡಿತ್ತು. ಆದರೆ, ಇದನ್ನು ಯಾರು ಬರೆದಿದ್ದಾರೆ ಎಂಬ ಮಾಹಿತಿ ಇರಲಿಲ್ಲ. `ವ್ಯಾಪಾರಕ್ಕಾಗಿ ಭಾರತದ ಗೋವಾಕ್ಕೆ ಬಂದಿದ್ದ ಪೋರ್ಚುಗೀಸರು ಅಲ್ಲಿ ಆಡಳಿತ ನಡೆಸುತ್ತಿದ್ದ ಮರಾಠ ದೊರೆಗಳ ಜತೆ ಹಗೆತನಕ್ಕೆ ಬಿದ್ದಿದ್ದರು. ಗೋವಾದ ಬಿಚೋಲಿಮ್ ಎಂಬಲ್ಲಿ 1640-1641ರ ಅವಧಿಯಲ್ಲಿ ಇಬ್ಬರ ನಡುವೆ ಭಾರಿ ಕದನ ನಡೆದಿತ್ತು. ಕೊನೆಗೆ ಶಾಂತಿ ಒಪ್ಪಂದದ ಪ್ರಕಾರ ಯುದ್ಧ ಕೊನೆಗೊಂಡಿತ್ತು.ಇದರ ಫಲವಾಗಿಯೇ ಗೋವಾ ಸ್ವತಂತ್ರ ರಾಜ್ಯವಾಗಿ ಅಸ್ತಿತ್ವ ಪಡೆಯಿತು'. ಹೀಗೆ ಈ ಲೇಖನ ಮುಂದುವರೆಯುತ್ತದೆ. ಕಾಲ್ಪನಿಕ ಯುದ್ಧದ ಕುರಿತು ಅನಾಮಿಕ ಲೇಖಕ 17 ಆಕರ ಗ್ರಂಥಗಳ ಮಾಹಿತಿ ಮತ್ತು ಮುಂದಿನ ಓದಿಗಾಗಿ ಮೂರು ಉಚಿತ ಸಲಹೆಯನ್ನೂ ನೀಡ್ದ್ದಿದ.`ಬಿಚೋಲಿಮ್ ಕದನ ಅತ್ಯಂತ ಕಿರು ಅವಧಿಗೆ ನಡೆದ ಸಣ್ಣ ಯುದ್ಧವಾಗಿತ್ತು. ಸಾವು, ನೋವು ಮತ್ತು ಹಾನಿ ಪ್ರಮಾಣವೂ ಕಡಿಮೆ ಇತ್ತು. ಯುದ್ಧದ ಪರಿಣಾಮ ಅಷ್ಟೇನೂ ಭೀಕರವಾಗಿರದ ಕಾರಣ ಇದು ಚರ್ಚೆಯ ವಸ್ತುವಾಗಲಿಲ್ಲ. ಲೇಖಕರು ಮತ್ತು ಚಲನಚಿತ್ರ ನಿರ್ಮಾಪಕರು, ನಿರ್ದೇಶಕರ ಗಮನ ಸೆಳೆಯಲಿಲ್ಲ' ಎಂಬ ತಳಬುಡವಿಲ್ಲದ ವಾದ ಸರಣಿ ಹೀಗೆಯೇ ಮುಂದುವರಿದಿತ್ತು.ಯಾವುದೇ ಮಾಹಿತಿಗೆ `ವಿಕಿಪಿಡಿಯಾ'ದ ಮೊರೆ ಹೋಗುತ್ತಿದ್ದವರಿಗೆ ಇದು ಆಘಾತ ಉಂಟು ಮಾಡಬಹುದು. ಇಲ್ಲಿನ ಮಾಹಿತಿ ವಿಶ್ವಾಸಾರ್ಹ ಎಂಬ ಸಾರ್ವತ್ರಿಕ ನಂಬಿಕೆಯ ಬುಡವನ್ನೇ ಇದು ಅಲ್ಲಾಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry