ಗುರುವಾರ , ಮೇ 19, 2022
20 °C

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೆನರಿಕ್ ಔಷಧಿ ಮಳಿಗೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕಳೆದ ಹತ್ತು ತಿಂಗಳಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸುಮಾರು 42 ಕೋಟಿ ರೂಪಾಯಿಗಳನ್ನು ಸಾರ್ವಜನಿಕರ ವೈದ್ಯಕೀಯ ವೆಚ್ಚಕ್ಕಾಗಿ ನೀಡಲಾಗಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯು ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನತಾ ಬಜಾರ್ ಜೆನರಿಕ್ ಔಷಧಿ ಮಳಿಗೆ ಹಾಗೂ ವಾಣಿ ವಿಲಾಸ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ಎನ್.ಐ.ಸಿ.ಯು, ವಿಕ್ಟೋರಿಯಾ ಆಸ್ಪತ್ರೆಯ ಎಂ.ಆರ್.ಐ. ಕ್ಷ-ಕಿರಣ ವಿಭಾಗವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.`ಪ್ರತಿ ದಿನ ಜನತಾದರ್ಶನಕ್ಕೆ ಬರುವ ಸಾರ್ವಜನಿಕರಲ್ಲಿ ಶೇ 50 ರಷ್ಟು ಮಂದಿ ವೈದ್ಯಕೀಯ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸುವಂತೆ ಮನವಿ ಮಾಡುತ್ತಾರೆ. ಸಾಮಾನ್ಯ ಜನರ ಆರೋಗ್ಯ ಸುರಕ್ಷತೆ ಕಾಪಾಡಲು ಸರ್ಕಾರ ಬದ್ಧವಾಗಿದೆ~ ಎಂದರು.`ಖಾಸಗಿ ಆಸ್ಪತ್ರೆಗಳಂತೆ ಸರ್ಕಾರಿ ಆಸ್ಪತ್ರೆಗಳಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಜಯದೇವ, ಸಂಜಯಗಾಂಧಿ, ವಿಕ್ಟೋರಿಯಾ, ಕಿದ್ವಾಯಿ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಗಳು ಗುಣಮಟ್ಟದ ಸೇವೆ ನೀಡುವಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುತ್ತಿವೆ~ ಎಂದು ಮುಖ್ಯಮಂತ್ರಿಗಳು ನುಡಿದರು.ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, `ಪ್ರಮುಖ ಕಾಯಿಲೆಗಳಿಗೆ ಸಂಬಂಧಪಟ್ಟ ಮಾತ್ರೆಗಳ ದರದಲ್ಲಿ ಶೇ 50 ರಿಂದ 80ರಷ್ಟು ರಿಯಾಯಿತಿ ನೀಡಲಾಗಿದೆ. ಇದರಿಂದ ದೊಡ್ಡ ಮಟ್ಟದ ಔಷಧ ಕಂಪೆನಿಗಳು ಸರ್ಕಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದು, ಇದನ್ನು ಸಮರ್ಥವಾಗಿ ಎದುರಿಸಲಿದ್ದೇವೆ~ ಎಂದು ಹೇಳಿದರು.`ಖಾಸಗಿ ಆಸ್ಪತ್ರೆಗಳು ಕೂಡ ಜೆನರಿಕ್ ಔಷಧಿಯನ್ನೇ ನೀಡಬೇಕು. ಈ ಸಂಬಂಧ ಸದ್ಯದಲ್ಲೇ ನಿಯಮ ಜಾರಿಗೆ ತರಲು ಸರ್ಕಾರ ಚಿಂತಿಸಿದೆ~ ಎಂದು ಹೇಳಿದರು.ಶೇ 80ರಷ್ಟು ರಿಯಾಯಿತಿ:ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಹೊರ ರೋಗಿ ಕಟ್ಟಡದಲ್ಲಿ ಜೆನರಿಕ್ ಔಷಧಿ ಮಳಿಗೆ ಗುರುವಾರ ಉದ್ಘಾಟನೆಯಾಯಿತು. ಎಲ್ಲ ಕಾಯಿಲೆಗಳಿಗೆ ಸಂಬಂಧಿಸಿದ ಮಾತ್ರೆಗಳ ಮೇಲೆ ಶೇ 50 (ಬ್ರಾಂಡೆಡ್) ಮತ್ತು ಶೇ 80 (ಜೆನರಿಕ್) ರಷ್ಟು ರಿಯಾಯಿತಿ ದರದಲ್ಲಿ ದೊರೆಯುತ್ತವೆ.ಮುಂದಿನ ತಿಂಗಳೊಳಗೆ ರಾಜ್ಯದ 19 ಭಾಗಗಳಲ್ಲಿ  ಜೆನರಿಕ್ ಔಷಧಿಯ ಮಳಿಗೆಗಳನ್ನು ತೆರೆಯಲು ಸರ್ಕಾರ ಚಿಂತಿಸಿದೆ. ಸಿಪ್ಲಾ, ಟೊರೋಂಟೋ, ಇಂಟಾಸ್ ಕಂಪೆನಿಗಳ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. 24 ಗಂಟೆಗಳ ಕಾಲ ಸೇವೆ ದೊರೆಯಲಿದೆ.ನರ್ಸ್ ಹುದ್ದೆ ಭರ್ತಿ: `ಖಾಲಿ ಇರುವ ವೈದ್ಯಕೀಯೇತರ ಸಿಬ್ಬಂದಿ ಹಾಗೂ  ನರ್ಸ್ ಹುದ್ದೆಗಳನ್ನು ಜುಲೈ ತಿಂಗಳಿನಲ್ಲಿ ಭರ್ತಿ ಮಾಡಲಾಗುವುದು~ ಎಂದು ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.`ಮುಂದಿನ ತಿಂಗಳಲ್ಲಿ ಮಂಡನೆಯಾಗುವ ಪೂರಕ ಬಜೆಟ್‌ನಲ್ಲಿ ವೈದ್ಯಕೀಯೇತರ ಸಿಬ್ಬಂದಿಗಳ ವೇತನ ಹಾಗೂ ಇತರೆ ಖರ್ಚು ವೆಚ್ಚಗಳ ಬಗ್ಗೆ ಅನುಮೋದನೆ ಪಡೆಯಲಾಗುವುದು. ಈಗಾಗಲೇ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಕಾಯಂಗೊಳಿಸುವ ಬಗ್ಗೆ ಪ್ರಯತ್ನಿಸಲಾಗುವುದು~ ಎಂದು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.