ವಿಕ್ಟೋರಿಯಾ ಕೆರೆಯಲ್ಲಿ ಮೀನುಗಳ ಸಾವು

7

ವಿಕ್ಟೋರಿಯಾ ಕೆರೆಯಲ್ಲಿ ಮೀನುಗಳ ಸಾವು

Published:
Updated:

ಡಂಬಳ: ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಮಳೆ ಕೈಕೊಟ್ಟ ಪರಿಣಾಮ ಡಂಬಳದ ವಿಕ್ಟೋರಿಯಾ ಮಹಾರಾಣಿ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿವೆ.ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿರುವ ಈ ಕೆರೆಯು 540 ಎಕರೆ ವಿಸ್ತೀರ್ಣ ಹೊಂದಿದೆ. ಮೂರ‌್ನಾಲ್ಕು ವರ್ಷಗಳಿಂದ ಈ ಕೆರೆಯಲ್ಲಿ ಲಕ್ಷಾಂತರ ಮೀನುಗಳಿದ್ದವು. ಎಂತಹ ಬರ ಸ್ಥಿತಿ ಬಂದರೂ ಈ ಕೆರೆ ಮಾತ್ರ ಬತ್ತಿರಲಿಲ್ಲ. ಆದರೆ ದುರದೃಷ್ಟವೆಂಬಂತೆ ಈ ಸಾರಿ ಮುಕ್ಕಾಲು ಭಾಗ ಬತ್ತಿ ಹೋಗಿ ಮೀನುಗಳು ಮರಣ ಹೊಂದುತ್ತಿವೆ.ಮೀನುಗಳ ರಕ್ಷಣೆಗೆ ಸಣ್ಣ ನೀರಾವರಿ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಈ ಕೆರೆಯಲ್ಲಿ ಲಕ್ಷಗಟ್ಟಲೆ ಮೀನುಗಳಿರುವ ಮಾಹಿತಿ ಇದ್ದರೂ ಕೆರೆಯಲ್ಲಿ ನೀರು ಖಾಲಿಯಾಗುತ್ತಿದ್ದ ಸಂದರ್ಭದಲ್ಲಿ ಮೀನುಗಳ ಸಂರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಅಲ್ಲದೆ ಒಂದು ವಾರದಿಂದ ಮೀನುಗಳು ಸಾಯುತ್ತಿದ್ದರೂ ಇತ್ತ ಕಡೆ ಕಣ್ಣೆತ್ತಿಯೂ ನೋಡಿಲ್ಲ. ಇದೀಗ ಸತ್ತ ಮೀನುಗಳು ಕೊಳೆತು ದುರ್ವಾಸನೆ ಗ್ರಾಮದೆಲ್ಲೆಡೆ ಹರಡಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಗದ್ದೆಗೆ ಹರಿಯುವ ಈ ಕೆರೆಯ ನೀರಿನ ಮೂಲಕವೂ ಮೀನುಗಳು ಹೊರ ಬಂದು ಬಿದ್ದಿವೆ. ಮೀನು ಸಾಯುತ್ತಿರುವುದನ್ನು ಗಮನಿಸಿ ಕೆರೆಯ ನೀರು ಬತ್ತುವ ಮುನ್ನ ಟ್ಯಾಂಕರ್ ಮೂಲಕ ಹತ್ತಿರದ ಮೀನು ಸಾಕಾಣಿಕಾ ಕೆರೆಗಳಿಗೆ ಮೀನುಗಳನ್ನು ಸ್ಥಳಾಂತರಿಸಬೇಕಿತ್ತು. ಅಲ್ಲದೆ ಇದೇ ಕೆರೆಯಲ್ಲಿ ಗುಂಡಿ ತೋಡಿ ನೀರು ಸಂಗ್ರಹಿಸಿ ಮೀನುಗಳನ್ನು ಸಂರಕ್ಷಿಸಬಹುದಿತ್ತು ಎಂದು ಜಿಲ್ಲಾ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗೋಣಿಬಸಪ್ಪ ಕೊರ್ಲಹಳ್ಳಿ ಅಭಿಪ್ರಾಯಪಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry